ಪಾಕಿಸ್ತಾನದಲ್ಲೂ ಸಂಭ್ರಮದ ಶಿವರಾತ್ರಿ, ಇಲ್ಲಿವೆ ನೋಡಿ ಪಾಕ್‌ನ ಐದು ಪ್ರಸಿದ್ಧ ಶಿವ ದೇವಸ್ಥಾನ!

First Published Feb 18, 2023, 8:11 PM IST

ಮಹಾಶಿವರಾತ್ರಿ ಹಬ್ಬವನ್ನು ಭಾರತದಲ್ಲಿ ಎಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತದೆ. ಪಕ್ಕಾ ಮುಸ್ಲಿಂ ದೇಶ ಪಾಕಿಸ್ತಾನದಲ್ಲಿ ಕೂಡ ಶಿವರಾತ್ರಿಯ ದಿನ 'ಬೋಲೇನಾಥ'ನ ಸಂಭ್ರಮ ಕಾಣುತ್ತಿದೆ. ಪಾಕಿಸ್ತಾನದಲ್ಲಿ ನೆಲೆಸಿರುವ ಕೆಲವೇ ಕೆಲವು ಹಿಂದುಗಳು ಈ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ದೇಶದಲ್ಲಿ ಇರುವ ಕೆಲವೇ ಕೆಲವು ಶಿವ ದೇವಸ್ಥಾನಗಳಲ್ಲಿ ದರ್ಶನ ಹಾಗೂ ಜಲಾಭಿಷೇಕವನ್ನೂ ಮಾಡುತ್ತಾರೆ. ಇನ್ನೂ ಕೆಲವೊಂದು ಶಿವ ದೇವಸ್ಥಾನಗಳು ಶಿವರಾತ್ರಿಯಂದು ಮಾತ್ರವೇ ತೆರೆಯುತ್ತವೆ. ಬೇರೆ ದಿನ ತೆರೆಯಲು ಅಲ್ಲಿ ಅನುಮತಿಯಿಲ್ಲ.  ಹಾಗೂ ಪ್ರತಿನಿತ್ಯದ ಪೂಜೆ ಮಾಡಲು ಪೂಜಾರಿಗಳೂ ಹೆದರುತ್ತಾರೆ. ಇಲ್ಲಿವೆ ನೋಡಿ ಪಾಕ್‌ನ ಪ್ರಸಿದ್ಧ ಐದು ಐತಿಹಾಸಿಕ ಶಿವ ದೇವಸ್ಥಾನಗಳು.

ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಉಮರ್‌ಕೋಟ್‌ನಲ್ಲಿ 1000 ವರ್ಷಗಳಷ್ಟು ಹಳೆಯದಾದ ವಿಶ್ವ ಪ್ರಸಿದ್ಧ ಶಿವ ದೇವಾಲಯವಿದೆ. ಐತಿಹಾಸಿಕ ಮೂಲಗಳ ಪ್ರಕಾರ, ಈ ದೇವಾಲಯವನ್ನು 10 ನೇ ಶತಮಾನದಲ್ಲಿ ನಿರ್ಮಿಸಲಾಯಿತು, ಇದೇ ಸಮಯದಲ್ಲಿ ಭಾರತದಲ್ಲಿ ಖಜುರಾಹೊದ ಪ್ರಸಿದ್ಧ ದೇವಾಲಯವನ್ನು ನಿರ್ಮಿಸಲಾಯಿತು. ಪಾಕಿಸ್ತಾನದಲ್ಲಿರುವ ತೇಜ ಸಿಂಗ್ ದೇವಾಲಯದ ವಾಸ್ತುಶಿಲ್ಪ ಮತ್ತು ಕೆತ್ತನೆಗಳು ಭಾರತೀಯ ವಾಸ್ತುಶಿಲ್ಪದ ಪ್ರಭಾವಗಳೊಂದಿಗೆ ಅದರ ಸುವರ್ಣ ಗತಕಾಲವನ್ನು ಪ್ರತಿಬಿಂಬಿಸುತ್ತವೆ. ವಿಭಜನೆಯ ನಂತರ, ಪಾಕಿಸ್ತಾನದ ಮೂಲಭೂತವಾದಿಗಳು ಸ್ಪೋಟಕ ಬಳಸಿ ದೇವಾಲಯಕ್ಕೆ ಸಾಕಷ್ಟು ಹಾನಿಯನ್ನುಂಟುಮಾಡಿದ್ದರು.

ಪಾಕಿಸ್ತಾನದ ಚಿಟ್ಟಿ ಗಟ್ಟಿ ಪ್ರದೇಶದಲ್ಲಿ ಶಿವನ ದೇವಾಲಯವಿದೆ. ಈ ದೇವಾಲಯವು ಹಿಂದೂಗಳ ಅಸ್ತಿತ್ವದ ಸಂಕೇತ ಮಾತ್ರವಲ್ಲ, ಐತಿಹಾಸಿಕ ಮಹತ್ವವನ್ನೂ ಹೊಂದಿದೆ. ಈ ದೇವಾಲಯದ ಗರ್ಭಗುಡಿಯಲ್ಲಿರುವ ಶಿವಲಿಂಗವು ಸುಮಾರು 2000 ವರ್ಷಗಳಷ್ಟು ಹಳೆಯದು ಎನ್ನಲಾಗಿದೆ. ಇಲ್ಲಿ ಮಹಾಶಿವರಾತ್ರಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಇಲ್ಲಿ ಪ್ರತಿನಿತ್ಯ ಪೂಜೆ ನಡೆಯುವುದಿಲ್ಲ ಆದರೆ ಶಿವರಾತ್ರಿಯಂದು ಭಕ್ತರ ದಂಡೇ ಇರುತ್ತದೆ. ದೇವಾಲಯದಲ್ಲಿ ಶಿವಲಿಂಗದ ಹೊರತಾಗಿ, ಗಣೇಶ, ಶಿವ-ಪಾರ್ವತಿ ಮತ್ತು ಕಾಳಿ ಇತ್ಯಾದಿಗಳ ವಿಗ್ರಹಗಳನ್ನು ಸ್ಥಾಪಿಸಲಾಗಿದೆ. ಈ ದೇವಾಲಯದಲ್ಲಿ ದುರ್ಗಾ ದೇವಿಯ ಗುಹೆಯೂ ಇದೆ.

Latest Videos


ಪಾಕಿಸ್ತಾನದ ಪಂಜಾಬ್‌ನಲ್ಲಿರುವ ಶಿವ ಕಟಾಸ್‌ರಾಜ್ ದೇವಾಲಯವನ್ನು ಹಿಂದೂಗಳ ತೀರ್ಥಯಾತ್ರಾ ಸ್ಥಳವೆಂದು ಪರಿಗಣಿಸಲಾಗಿದೆ. ಪುರಾಣಗಳ ಪ್ರಕಾರ, ಪಾರ್ವತಿ ಮಾತೆ ಸತಿಯಾದ ಸಮಯದಲ್ಲಿ ಭಗವಾನ್‌ ಶಿವನಿಂದ ಎರಡು ಹನಿ ಕಣ್ಣೀರು ಬಿದ್ದಿತ್ತು. ಒಂದು ಕಣ್ಣೀರು ಸರೋವರ ಅಮೃತ್ ಕುಂಡ್ ಎಂದು ಪ್ರಸಿದ್ಧವಾದ ಕಟಾಸ್‌ನಲ್ಲಿ ಮತ್ತು ಇನ್ನೊಂದು ಪುಷ್ಕರ್ ರಾಜ್ ತೀರ್ಥಯಾತ್ರೆಯನ್ನು ನಿರ್ಮಿಸಿದ ಅಜ್ಮೀರ್‌ನಲ್ಲಿ ತೊಟ್ಟಿಕ್ಕಿತು. ನಿರ್ವಹಣೆ ಇಲ್ಲದ ಕಾರಣ ಈಗ ಕಟಾಸ್ ದೇವಸ್ಥಾನದಲ್ಲಿರುವ ಕೆರೆ ಬತ್ತಿ ಹೋಗಿದೆ. ಈ ಶಿವ ದೇವಾಲಯವು ಸುಮಾರು 900 ವರ್ಷಗಳಷ್ಟು ಹಳೆಯದು ಎಂದು ನಂಬಲಾಗಿದೆ.

ಪಾಕಿಸ್ತಾನದ ಜೋಹಿಯಲ್ಲಿ ಸುಮಾರು 200 ವರ್ಷಗಳಷ್ಟು ಹಳೆಯದಾದ ಶಿವ ದೇವಾಲಯವಿದೆ. ಇಲ್ಲಿನ ಜನರು ಶಿವನನ್ನು ಮುಖ್ಯ ದೇವತೆಯಾಗಿ ಪೂಜಿಸುತ್ತಾರೆ. ಮೂಲಭೂತವಾದಿಗಳಿಂದ ಈ ದೇವಸ್ಥಾನಕ್ಕೆ ಬಹಳಷ್ಟು ಹಾನಿಯಾಗಿದೆ. ಈಗ ಒಡೆದ ವಿಗ್ರಹಗಳ ಅವಶೇಷಗಳು ಇಲ್ಲಿ ಉಳಿದಿವೆ. ಈಗ ಚಂಡಿಯೋ ಕುಲಕ್ಕೆ ಸೇರಿದ ಕುಟುಂಬವೊಂದು ಇಲ್ಲಿ ನೆಲೆಸಿದೆ. ಕೆಲವರು ಇದು ಜೈನ ದೇವಾಲಯ ಎಂದು ನಂಬುತ್ತಾರೆ ಆದರೆ ಭಗ್ನಗೊಂಡ ದೇವತೆಗಳ ವಿಗ್ರಹಗಳನ್ನು ನೋಡಿದರೆ ಅದು ಶಿವ ದೇವಾಲಯ ಎಂದು ತಿಳಿಯುತ್ತದೆ. ಇಂದಿನ ದಾದು ಜಿಲ್ಲೆಯಾಗಿರುವ ಪ್ರದೇಶದಲ್ಲಿ ಶಿವಾರಾಧಕರು ವಾಸಿಸುತ್ತಿದ್ದರು ಎಂಬುದಕ್ಕೆ ಇತಿಹಾಸವೂ ಸಾಕ್ಷಿಯಾಗಿದೆ. ಈ ದೇವಾಲಯವು ಭಾರತ ಮತ್ತು ನೇಪಾಳದ ಶಿವ ದೇವಾಲಯಗಳನ್ನು ಹೋಲುತ್ತದೆ.

ಪಾಕಿಸ್ತಾನದ ಕರಾಚಿ ನಗರದಲ್ಲಿ 150 ವರ್ಷಗಳಷ್ಟು ಹಳೆಯದಾದ ಭಗವಾನ್ ಶಿವನ ದೇವಾಲಯವಿದೆ. ಇದನ್ನು ರತ್ನೇಶ್ವರ ಮಹಾದೇವ ದೇವಸ್ಥಾನ ಎಂದು ಕರೆಯಲಾಗುತ್ತದೆ. ಈ ದೇವಾಲಯದಲ್ಲಿ ಎಲ್ಲಾ ದೇವರು ಮತ್ತು ದೇವತೆಗಳ ವಿಗ್ರಹಗಳನ್ನು ಸ್ಥಾಪಿಸಲಾಗಿದೆ ಮತ್ತು ಪ್ರತಿ ಭಾನುವಾರ ಇಲ್ಲಿ ಬೃಹತ್ ಭಂಡಾರವನ್ನು ನಡೆಸಲಾಗುತ್ತದೆ. ಈ ದೇವಾಲಯವನ್ನು ಮೂಲಭೂತವಾದಿಗಳು ಕೆಟ್ಟ ಪ್ರಮಾಣದಲ್ಲಿ ಹಾನಿ ಮಾಡಿದ್ದಾರೆ. 2014 ರಲ್ಲಿ, ಪಾಕಿಸ್ತಾನಿ ಹಿಂದೂಗಳು ಈ ದೇವಾಲಯವನ್ನು ಉಳಿಸಲು ಅಭಿಯಾನವನ್ನು ಪ್ರಾರಂಭಿಸಿದರು.

click me!