ದೇವಿಯ ಪವಾಡಕ್ಕೆ ಬೆಕ್ಕಸ ಬೆರಗಾದರು. ದೇವಿಯ ವಿಗೃಹಕ್ಕೆ ದೃಷ್ಟಿಬೊಟ್ಟು ಇಡುತ್ತಿದ್ದಂತೆ ತನ್ನಷ್ಟಕ್ಕೆ ತಾನೆ ಹಚ್ಚಿಕೊಳ್ಳುವ ಬೆಂಕಿಯನ್ನು ಕಂಡ ಭಕ್ತರು ಭಕ್ತಿಯ ಪರಾಕಾಷ್ಟೆಯಲ್ಲಿ ಕುಣಿದು ಕುಪ್ಪಳಿಸಿದರು. ಸರ್ವಧರ್ಮ ಸಮನ್ವಯತೆ ಸಾರುವ ಮಾರಿಕಾಂಬೆ ಜಾತ್ರಾಮಹೋತ್ಸವಕ್ಕೆ ಸಾವಿರ ಸಾವಿರ ಸಂಖ್ಯೆಯ ಭಕ್ತರು ಸಾಕ್ಷಿಯದರು. ಐದು ವರ್ಷಕ್ಕೋಮ್ಮೆ ನಡೆಯುವ ದೇವಿಯ ಪವಾಡವನ್ನು ಕಣ್ಣಾರೆಕಂಡ ಜನ ಧನ್ಯರಾದ್ರು. ಈ ಪವಾಡಕ್ಕೆ ಸಾಕ್ಷಿಯಾಗಿದ್ದು ಚಿಕ್ಕಮಗಳೂರು ಜಿಲ್ಲೆಯ ಲಕ್ಕವಳ್ಳಿಯ ಶ್ರೀ ಕೋಟೆ ಮಾರಿಕಾಂಬೆ ದೇವಿಯ ಜಾತ್ರೆ.
ಚಿಕ್ಕಮಗಳೂರು ಜಿಲ್ಲೆಯ ಲಕ್ಕವಳ್ಳಿಯ ಶ್ರೀ ಕೋಟೆ ಮಾರಿಕಾಂಬೆ ದೇವಿಯ ಜಾತ್ರೆ ಪವಾಡಕ್ಕೆ ಸಾಕ್ಷಿ ಆಯಿತು. ಐದು ವರ್ಷಗಳಿಗೊಮ್ಮೆ ನಡೆಯುವ ಮಾರಿಕಾಂಬೆ ಜಾತ್ರೆಯಲ್ಲಿ ಈ ದೃಷ್ಟಿಬೊಟ್ಟು ಆಚರಣೆಯೇ ಪ್ರಮುಖ. ಒಂದೇ ಮರದಿಂದ ಕೆತ್ತಿದ ದೇವರ ಸುಂದರ ವಿಗ್ರಹಕ್ಕೆ ದೃಷ್ಟಿಬೊಟ್ಟಿಡುತ್ತಿದ್ದಂತೆ ದೇವಿಯ ಎದುರಿದ್ದ ಹುಲ್ಲಿನ ಬಣವೆಯಲ್ಲಿ ದೇವಿ ಅಗ್ನಿಸ್ವರೂಪಿಯಾಗಿ ಭಕ್ತರಿಗೆ ದರ್ಶನ ನೀಡುತ್ತಾಳೆ. ಧಗ ಧಗಿಸಿ ಉರಿಯುವ ಬೆಂಕಿಯಲ್ಲಿ ಭಕ್ತರ ಕೆಟ್ಟ ಆಲೋಚನೆಗಳನ್ನು ಸುಟ್ಟು, ಶಾಂತಿ ಸಹಭಾಳ್ವೆ ನೆಲೆಸಲಿ ಎಂಬುದರ ಸಂಕೇತ ಇದಾಗಿದೆ ಎಂಬುದು ಭಕ್ತರ ನಂಬಿಕೆಯಾಗಿದೆ. ಸುಂದರವಾದ ದೇವರ ವಿಗ್ರಹದ ಎದುರಾಗಿ 20 ಮೀಟರ್ ದೂರದಲ್ಲಿ ಭತ್ತದ ಹುಲ್ಲಿನಿಂದ ಮುಚ್ಚಿದ ದೇವಿಯ ದೃಷ್ಟಿ ಕಲ್ಲು ಇಡಲಾಗುತ್ತೆ.ಸುತ್ತಲೂ ಆ ಅದ್ಭುತ ಘಳಿಗೆಯನ್ನು ನೋಡಲು ಜನಸಾಗರವೇ ಹರಿದುಬಂದಿತ್ತು. . ಸಾವಿರ ಸಾವಿರ ಭಕ್ತರ ಹರ್ಷೊದ್ಘಾರದ ನಡುವೆ ದೇವರಿಗೆ ಮಹಾ ಮಂಗಳಾರತಿಮಾಡಿ ದೃಷ್ಟಿಬೊಟ್ಟಿಟ್ಟು ಹಾಕಿದ್ದ ಪರದೆಯನ್ನು ತೆರೆಯುತ್ತಿದ್ದಂತೆ ಎದುರಿದ್ದ ಹುಲ್ಲಿನ ಬಣವೆಯಲ್ಲಿ ಧಿಡೀರ್ನೆ ಕಾಣಿಸಿಕೊಂಡ ಬೆಂಕಿ. ಹೀಗೆ ತನ್ನಷ್ಟಕ್ಕೆ ತಾನೆ ಸೃಷ್ಟಿಯಾಗುವ ಅದ್ಬುತವಾದ ಪವಾಡವನ್ನು ನೋಡಿ ಭಕ್ತರು ಭಕ್ತಿಯ ಅಲೆಯಲ್ಲಿ ತೇಲಿದರು.
ಯಾರ ಸಹಾಯವಿಲ್ಲದೆ ಕೇವಲ ದೇವಿಯ ಶಕ್ತಿಯಿಂದ ನಡೆಯುವ ಇಲ್ಲಿನ ಪವಾಡ ನೋಡಲು ರಾಜ್ಯದ ವಿವಿದ ಭಾಗಗಳಿಂದ ಜನಸಾಗರ ಹರಿದುಬರುತ್ತೆ. ಸರ್ವಧರ್ಮ ಸಮನ್ವಯತೆಸಾರುವ ಮಾರಿಕಾಂಬೆ ದೇವಿಯ ಜಾತ್ರೆ ರಾಜ್ಯದಲ್ಲಿಯೇ ಅತ್ಯಂತ ಜನಪ್ರಿಯತೆಗಳಿಸಿದೆ. ವಿಶ್ವಕರ್ಮ ಸಮುದಾಯದವರು ದೇವಿಯ ಸುಂದರ ಉತ್ಸವ ಮೂರ್ತಿಯನ್ನು ಕೆತ್ತುತ್ತಾರೆ, ವೀರಶೈವ ರೆಡ್ಡಿ, ಬೋವಿ ಜನಾಂಗ ಮತ್ತು ತಮಿಳುಭಾಷಿಕರು ಚಪ್ಪರ ಹಾಕುತ್ತಾರೆ, ಮುಸಲ್ಮಾನರು ವಿಶೇಷ ನಮಾಜ್ ಮಾಡಿದರೆ, ಕ್ರಿಶ್ಚಿಯನ್ನರು ಜಾತ್ರೆಯ ಯಶಸ್ವಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ಹೀಗೆ ಗ್ರಾಮದ ಎಲ್ಲಾ ಸಮುದಾಯದವರೂ ಒಂದೊಂದು ಕೆಲಸ ಹಂಚಿಕೊಂಡು ಜಾತ್ರೆ ಆಚರಿಸುವ ಮೂಲಕ ಇದೊಂದು ಸರ್ವಧರ್ಮದ ಸಮನ್ವಯತೆಯ ಸಂಕೇತವೂ ಆಗಿದೆ. ಇಂತಹ ಪವಾಡವನ್ನು ಕಣ್ತುಂಬಿಕೊಳ್ಳಲು ಜನ ಮರ, ಕಟ್ಟಡದ ಮಲೇರಿ ಪರದಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಇನ್ನು ಪವಾಡ ನೆಡೆಯುವ ಸ್ಥಳದಸುತ್ತ ನೆರೆದಿದ್ದ ಜನಪ್ರವಾಹವನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಮಾಡಬೇಕಾಯಿತು.
ಒಟ್ಟು ಹದಿನೈದು ದಿನ ನಡೆಯುವ ಜಾತ್ರೆಯ ಹಿನ್ನೆಲೆಯಲ್ಲಿ ಏಳು ಜಾತ್ರೆಗಳು ನಡೆಯುತ್ತವೆ. ಅಂತಿಮವಾಗಿ ಈ ದೃಷ್ಟಿಬೊಟ್ಟು ಕಾರ್ಯಕ್ರಮದ ನಂತರ ಜಾತ್ರೆಯ ಪ್ರಮುಖ ಭಾಗ ಮುಕ್ತಾಯವಾಗುತ್ತೆ. ಒಟ್ಟಾರೆ ಜನಮರುಳೋ ಜಾತ್ರೆ ಮರುಳೋ ಎಂಬಂತೆ ಕೋಟೆಮಾರಿಕಾಂಬೆಯ ಪವಾಡನೋಡಲು ಸಾಗರೋಪಾದಿಯಲ್ಲಿ ಬಂದು ಸೇರುತ್ತಾರೆ. ತಮ್ಮ ನಂಬಿಕೆಯಂತೆ ಅಗ್ನಿಸ್ವರೂಪದಲ್ಲಿ ಕಾಣಿಸುವ ಮಾರಿಕಾಂಬೆಯ ದರ್ಶನಪಡೆದು ಧನ್ಯರಾಗುತ್ತಾರೆ.
ವರದಿ : ಆಲ್ದೂರು ಕಿರಣ್