ಮಹಾಶಿವರಾತ್ರಿ (Mahashivaratri) ಹಬ್ಬವನ್ನು ಭಾರತದಾದ್ಯಂತ ಬಹಳ ಆಡಂಬರದಿಂದ ಆಚರಿಸಲಾಗುತ್ತದೆ. ಈ ದಿನದ ಬಗ್ಗೆ ಅನೇಕ ಕಥೆಗಳಿವೆ. ಮುಖ್ಯವಾಗಿ ಈ ದಿನದಂದು ಶಿವ ಮತ್ತು ಪಾರ್ವತಿ ದೇವಿಯು ವಿವಾಹವಾದರು ಎಂದು ನಂಬಲಾಗಿದೆ. ಮಹಾಶಿವರಾತ್ರಿಯ ಅಕ್ಷರಶಃ ಅರ್ಥ 'ಶಿವನ ಮಹಾ ರಾತ್ರಿ', ಮಹಾಶಿವರಾತ್ರಿ ಹಬ್ಬವು ಇನ್ನೇನು ಕೆಲವೇ ದಿನಗಳಲ್ಲಿ ಬರಲಿದೆ. ಹಾಗಾಗಿ ಇಂದು ನಾವು ಶಿವನ ಬಗ್ಗೆ ಕೆಲವು ಕುತೂಹಲಕಾರಿ ವಿಷಯಗಳನ್ನು ತಿಳಿಯೋಣ.
ಶಿವನು ಉಳಿದ ದೇವರಿಗಿಂತ ವಿಭಿನ್ನ, ಭಸ್ಮವನ್ನೇ ಮೈಗೆ ಬಳಿದಿರುವ, ತಲೆಯಲ್ಲಿ ಗಂಗೆಯನ್ನೇ ಧರಿಸಿರುವ, ಜೊತೆಗೆ ಚಂದ್ರನನ್ನೆ ಕೂರಿಸಿರುವ, ಮೂರು ಕಣ್ಣುಗಳನ್ನು ಹೊಂದಿರುವ, ಹಾವನ್ನೇ ಹಾರವಾಗಿ ಮಾಡಿಕೊಂಡಿರುವ ದೇವರು ಶಿವ. ಇದೆಲ್ಲಾ ಶಿವನಿಗೆ ಯಾಕೆ ಬಂತು ತಿಳಿಯೋಣ.
ಕುತ್ತಿಗೆಗೆ ಹಾವಿನ ಹಾರ
ಶಿವನು ಕುತ್ತಿಗೆಗೆ ಹೂವುಗಳು ಅಥವಾ ಯಾವುದೇ ಲೋಹದ ಹಾರವನ್ನು ಧರಿಸುವುದಿಲ್ಲ. ಅವರು ತಮ್ಮ ಕುತ್ತಿಗೆಗೆ ವಾಸುಕಿ ಹಾವನ್ನು (snake) ಧರಿಸಿದ್ದಾರೆ. ಇದು ಭೂತ, ವರ್ತಮಾನ ಮತ್ತು ಭವಿಷ್ಯದ ಸೂಚಕ ಎಂದು ಹೇಳಲಾಗುತ್ತದೆ. ಅದೇ ಸಮಯದಲ್ಲಿ, ಎಲ್ಲಾ ತಮೋ ಗುಣಗಳಿರುವ ವಸ್ತುಗಳು ಶಿವನ ಅಧೀನವಾಗಿದೆ ಎನ್ನುವುದನ್ನು ಇದು ಸೂಚಿಸುತ್ತೆ.
ಮೂರನೇ ಕಣ್ಣು
ಕೋಪವು ಉತ್ತುಂಗದಲ್ಲಿದ್ದಾಗ ಶಿವನು ತನ್ನ ಮೂರನೇ ಕಣ್ಣನ್ನು ತೆರೆಯುತ್ತಾನೆ ಎಂದು ನಂಬಲಾಗಿದೆ. ಅವನ ಮೂರನೇ ಕಣ್ಣು (third eye) ಜ್ಞಾನ ಮತ್ತು ಶಕ್ತಿಯನ್ನು ಸಂಕೇತಿಸುತ್ತದೆ, ಆದರೆ ಅದು ವಿನಾಶಕ್ಕೆ ತೆರೆಯುತ್ತದೆ. ಆದಾಗ್ಯೂ, ಕ್ರೋಧ ಮತ್ತು ಕಾಮವು ಮಹಾದೇವನಿಗೆ ಅಧೀನವಾಗಿದೆ.
ತಲೆಯಲ್ಲಿ ಚಂದ್ರ
ಭಗವಾನ್ ಶಂಕರನ ತಲೆ ಮೇಲೆ ಚಂದ್ರನನ್ನು (moon) ಕಿರೀಟದಂತೆ ಅಲಂಕರಿಸಲಾಗಿದೆ, ಈ ಕಾರಣದಿಂದಾಗಿ ಅವನನ್ನು ಸೋಮ ಮತ್ತು ಚಂದ್ರಶೇಖರ ಎಂದೂ ಕರೆಯಲಾಗುತ್ತದೆ. ಅಲ್ಲದೆ, ಚಂದ್ರನನ್ನು ಮನಸ್ಸಿನ ಅಂಶವೆಂದು ಪರಿಗಣಿಸಲಾಗುತ್ತದೆ ಮತ್ತು ಶಿವನ ಮನಸ್ಸು ಅವನ ಅಧೀನವಾಗಿದೆ ಎನ್ನುವುದನ್ನು ಇದು ಸೂಚಿಸುತ್ತೆ.
ಜಟೆಯಲ್ಲಿ ಗಂಗಾ
ಭಗವಾನ್ ಶಂಕರನ ಜಟೆಯಲ್ಲಿ ತಾಯಿ ಗಂಗಾ ಕುಳಿತಿದ್ದಾಳೆ. ಪುರಾಣಗಳ ಪ್ರಕಾರ, ಗಂಗಾ ದೇವಿಯು ಶಿವನ ಜಟೆಯ ಮೂಲಕ ಸ್ವರ್ಗದಿಂದ ಭೂಮಿಗೆ ಇಳಿದಳು. ಗಂಗಾ ಮಾತೆ ಶುದ್ಧತೆ ಮತ್ತು ಯೋಗಕ್ಷೇಮದ ಸಂಕೇತ, ಅವಳ ಸ್ಪರ್ಶದಿಂದ ಎಲ್ಲಾ ಪಾಪಗಳು ನಾಶವಾಗುತ್ತವೆ ಎಂದು ನಂಬಲಾಗಿದೆ.