ಶುಕ್ರವಾರ ನವದೆಹಲಿಯ ಭಾರತ ಮಂಟಪದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮೊದಲ ರಾಷ್ಟ್ರೀಯ ಕ್ರಿಯೇಟರ್ ಅವಾರ್ಡ್‌ಗಳನ್ನು ನೀಡಿದರು. ಜಾಹ್ನ್ವಿ ಸಿಂಗ್ ಅವರಿಗೆ 'ಹೆರಿಟೇಜ್ ಫ್ಯಾಶನ್ ಐಕಾನ್ ಅವಾರ್ಡ್' ಪ್ರದಾನ ಮಾಡುವಾಗ, ಮೋದಿ ಅವರು ಫ್ಯಾಷನ್ ಜಗತ್ತಿನಲ್ಲಿ ಭಾರತವು ಹಿಂದಿನಿಂದಲೂ ಮುಂಚೂಣಿಯಲ್ಲಿದೆ ಎಂದರು.
ಇಂದು ಜನರು ಮಿನಿ ಸ್ಕರ್ಟ್ ಆಧುನಿಕತೆಯ ಸಂಕೇತವೆಂದು ಭಾವಿಸುತ್ತಾರೆ, ಅಥವಾ ಪರ್ಸ್ ಹಿಡಿದಿರುವ ಮಹಿಳೆಯರು ಮಾಡರ್ನ್ ಎಂದುಕೊಳ್ಳುತ್ತಾರೆ. ನೀವು ಕೋನಾರ್ಕ್‌ಗೆ ಹೋದರೆ ನೂರಾರು ವರ್ಷಗಳಷ್ಟು ಹಳೆಯದಾದ ದೇವಾಲಯದಲ್ಲಿ ಅನೇಕ ಪ್ರತಿಮೆಗಳಿವೆ. ಒಂದು ಪ್ರತಿಮೆಯು ಮಿನಿ ಸ್ಕರ್ಟ್ ಧರಿಸಿ ಮತ್ತು ಕೈಲಿ ಪರ್ಸ್ ಹಿಡಿದ ಹುಡುಗಿಯ ಪ್ರತಿಮೆಯಾಗಿದೆ. ಇದರರ್ಥ ನೂರಾರು ವರ್ಷಗಳ ಹಿಂದೆ, ನಮ್ಮ ದೇಶದಲ್ಲಿ ಒಬ್ಬ ಶಿಲ್ಪಿ ಕೂಡ ಫ್ಯಾಷನ್ ಜ್ಞಾನವನ್ನು ಹೊಂದಿದ್ದರು ಎಂದಿದ್ದಾರೆ.
ಫ್ಯಾಷನ್ ಎಂಬುದು ಭಾರತದಲ್ಲಿ ಪಾಶ್ಚಿಮಾತ್ಯರು ಪರಿಚಯಿಸಿದ ವಿಷಯ ಎಂದು ನಾವು ನಂಬುವಂತೆ ಹೇಳಲಾಗುತ್ತದೆ. ಆದರೆ, ಭಾರತದ ಪ್ರತಿ ಕಲ್ಲುಗಳೂ ಇಲ್ಲಿನ ಫ್ಯಾಶನ್ ಸೆನ್ಸ್ ಬಗ್ಗೆ ಒತ್ತಿ ಹೇಳುತ್ತವೆ.
ಸಾವಿರಾರು ವರ್ಷಗಳ ಹಿಂದೆ ಭಾರತದಲ್ಲಿದ್ದ ಫ್ಯಾಶನ್‌ನ್ನು ಒಮ್ಮೆ ಶಿಲಾಬಾಲಿಕೆಯರ ಮುಖೇನ ನೋಡಿ ಬರೋಣ. ಇದೋ ನೋಡಿ, ಕೊನಾರ್ಕ್‌ನಲ್ಲಿರುವ ಶಿಲೆ- ಇಲ್ಲಿ ಮಹಿಳೆ ಆದಲೇ ಸೀ ತ್ರೂ ಟೈಟ್ ಸ್ಕರ್ಟ್(ಪಾರದರ್ಶಕ ಬಿಗಿಯಾದ ಸ್ಕರ್ಟ್) ಧರಿಸಿದ್ದಾಳೆ.
ಶತಮಾನಗಳಷ್ಟು ಹಳೆಯದಾದ ಹಿಂದೂ, ಬೌದ್ಧ ಮತ್ತು ಜೈನ ಧರ್ಮಗ್ರಂಥಗಳು ಭಾರತದಲ್ಲಿ ಪಾದರಕ್ಷೆಗಳ ಬಳಕೆಯನ್ನು 200 BC ಯಷ್ಟು ಹಿಂದೆಯೇ ಗುರುತಿಸುತ್ತವೆ. ತೆಲಂಗಾಣದ ವಾರಂಗಲ್‌ನಲ್ಲಿರುವ ರಾಮಪ್ಪ ದೇವಾಲಯದಲ್ಲಿ ಹೈ ಹೀಲ್ಸ್ ಧರಿಸಿದ ಮಹಿಳೆಯನ್ನು ಕಾಣಬಹುದು.
ಈಕೆ ನೋಡಿ ದರ್ಪಣ ಸುಂದರಿ. ಭಾರತೀಯ ಮಹಿಳೆಯರ ಸೌಂದರ್ಯ ಪ್ರಜ್ಞೆ ಅನಾದಿ ಕಾಲದಿಂದಲೂ ಅದ್ಬುತವಾಗಿದೆ. ಕನ್ನಡಿಯಲ್ಲಿ ತನ್ನ ಸೌಂದರ್ಯ ನೋಡಿಕೊಂಡು, ಕೂದಲು ಸರಿ ಮಾಡಿಕೊಳ್ಳುತ್ತಿರುವ ಮಹಿಳೆ.
ಇಲ್ಲಿ ನಿಂತಾಕೆಯ ಹೇರ್‌ಸ್ಟೈಲ್ ನೋಡಿದ್ರಾ ? ಅದಾಗಲೇ ಬಾಬ್ ಕಟ್ ಮಾಡಿಕೊಂಡು, ಅಗಲವಾಗಿ ಹರಡಿ, ಲೇಯರ್‌ಗಳಲ್ಲಿ ಕರ್ಲ್ಸ್ ಸೆಟ್ ಮಾಡಿಕೊಂಡಿದ್ದಾಳೆ.
ಇದೋ ಈ ಪ್ರತಿಮೆ, ಹೆಂಗಸು ಮಗುವನ್ನು ಅತ್ಯಂತ ಕಾಳಜಿಯಿಂದ ಹಿಡಿದುಕೊಂಡು, ಎಡಗೈಯಲ್ಲಿ ನೇಯ್ದ ಚೀಲವನ್ನು ಹಿಡಿದಿದ್ದಾಳೆ. ಬಹುಷಃ ಮಗುವಿನೊಂದಿಗೆ ಶಾಪಿಂಗ್‌ಗೆ ಹೊರಟಿರಬಹುದೇ?
ಮಧ್ಯಪ್ರದೇಶದ ಖಜುರಾಹೊ ದೇವಸ್ಥಾನದಲ್ಲಿರುವ ಈ ಶಿಲಾಬಾಲಿಕೆಯರ ಸೌಂದರ್ಯ ಪ್ರಜ್ಞೆ ಗಮನಿಸಿ, ಒಬ್ಬ ಮಹಿಳೆ ತನ್ನ ಕಣ್ಣುಗಳಿಗೆ ಮಸ್ಕರಾವನ್ನು ಹಚ್ಚುತ್ತಿದ್ದಾಳೆ. ಹತ್ತಿರದ ಸಣ್ಣ ಪ್ರತಿಮೆಯಲ್ಲಿ, ಮಹಿಳೆ ಸ್ಲಿಂಗ್ ಬ್ಯಾಗ್ ಹಿಡಿದಿದ್ದಾಳೆ. ಅಂದರೆ ಈ ಫ್ಯಾಶನ್ ಸಾವಿರಾರು ವರ್ಷಗಳ ಹಿಂದಿನಿಂದಲೇ ಭಾರತದಲ್ಲಿದೆ.