ದಕ್ಷಿಣ ಭಾರತದಲ್ಲಿ ಸಿನಿಮಾ ತಾರೆಯರು ಅವರಿಗಾಗಿ ಗಂಟೆಗಟ್ಟಲೆ ಕಾಯುವ ಅಭಿಮಾನಿಗಳಿದ್ದಾರೆ. ಆದರೆ, ಉತ್ತರ ಭಾರತದ ಬಿಹಾರದಲ್ಲಿ ಈ ಪರಿಸ್ಥಿತಿಯಿಲ್ಲ.
ಭೋಜಪುರಿ ನಟಿ ಹಾಗೂ ಗಾಯಕಿ ಅಕ್ಷರಾ ಸಿಂಗ್‌ಗೆ ಅಪಾರ ಅಭಿಮಾನಿಗಳಿದ್ದಾರೆ. ಸೋಶಿಯಲ್ ಮೀಡಿಯದಲ್ಲೂ ಅವರು ದೊಡ್ಡ ಪ್ರಮಾಣದ ಅಭಿಮಾನಿ ವರ್ಗವನ್ನು ಹೊಂದಿದ್ದಾರೆ.
ಇತ್ತೀಚೆಗೆ ನಟಿ ಹಾಗೂ ಗಾಯಕಿ ಅಕ್ಷರಾ ಸಿಂಗ್ ಬಿಹಾರದಲ್ಲಿ ಒಂದು ಕಾರ್ಯಕ್ರಮ ನೀಡಬೇಕಿತ್ತು. ಆದರೆ, ಕಾರ್ಯಕ್ರಮಕ್ಕೆ ತಡವಾಗಿ ಬಂದ ನಟಿಯ ವಿರುದ್ಧ ಅವರ ಅಭಿಮಾನಿಗಳೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಹಾರದ ಜೌರಂಗಾಬಾದ್ ಜಿಲ್ಲೆಯಲ್ಲಿ ಜನವರಿ 17 ರಂದು ಮಳಿಗೆಯೊಂದರ ಉದ್ಘಾಟನೆಗೆ ಅಕ್ಷರಾ ಸಿಂಗ್ ಬರಬೇಕಿತ್ತು. ಅಕ್ಷರಾರನ್ನು ನೋಡುವ ಉದ್ದೇಶದ ದೊಡ್ಡ ಪ್ರಮಾಣದ ಜನಸ್ತೋಮ ಸೇರಿತ್ತು.
ಆದರೆ ಕಾರ್ಯಕ್ರಮಕ್ಕೆ ಬರೋಬ್ಬರಿ 18 ಗಂಟೆ ತಡವಾಗಿ ಅಕ್ಷರಾ ಸಿಂಗ್ ಆಗಮಿಸಿದ್ದರು. ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು.
ಬೆಳಗ್ಗೆ ಬರಬೇಕಾಗಿದ್ದ ಅಕ್ಷರಾ ಸಿಂಗ್ ರಾತ್ರಿಯ ವೇಳೆ ಸ್ಥಳಕ್ಕೆ ಆಗಮಿಸಿದ್ದರು. ಆದರೆ, ಆಕೆಯನ್ನು ನೋಡುವ ಸಲುವಾಗಿ ಚಳಿಯಲ್ಲಿ ನಡುಗುತ್ತಾ ನಿಂತಿದ್ದ ಅಭಿಮಾನಿಗಳ ಸಿಟ್ಟು ಅದಾಗಲೇ ನೆತ್ತಿಗೇರಿತ್ತು.
ಸ್ಥಳಕ್ಕೆ ಬಂದು ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಲು ಹಾಗೂ ಹಾಡು ಹೇಳಲು ಆರಂಭ ಮಾಡುತ್ತಿದ್ದಂತೆ ಆಕೆಯ ಮೇಲೆ ಕಲ್ಲು ತೂರಾಟ ಮಾಡಲಾಗಿದೆ.
ಕೆಲವು ಮೂಲಗಳ ಪ್ರಕಾರ ಕೆಲವು ಅಭಿಮಾನಿಗಳ ನಡುವೆ ಮಾತಿನ ಚಕಮಕಿ ನಡೆದಿತ್ತು. ಇದನ್ನು ನೋಡಿದ ಪೊಲೀಸರು ಸಣ್ಣ ಲಾಠಿಚಾರ್ಜ್ ಮಾಡಿದ್ದಾರೆ.
ಲಾಠಿರುಚಿ ಬೀಳುತ್ತಿದ್ದಂತೆ ಸಿಟ್ಟಾದ ಅಭಿಮಾನಿಗಳು ಕಲ್ಲು ತೂರಾಟ ಮಾಡಲು ಆರಂಭಿಸಿದ್ದಾರೆ. ಇದರ ಬೆನ್ನಲ್ಲಿಯೇ ಅಕ್ಷರಾ ಸಿಂಗ್ ಅವರನ್ನು ಸುರಕ್ಷಿತವಾಗಿ ಹೊರಗಡೆ ಕಳುಹಿಸಲು ಯತ್ನಿಸಿದ್ದೂ ಕೂಡ ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿದೆ.
ಭಕ್ರುವಾನ್ ಟಾಪ್ ಇನ್ ಚಾರ್ಜ್ ನವಲ್ ಕಿಶೋರ್ ಮಂಡಲ್ ಅವರು 200 ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಪೊಲೀಸರು ಅಕ್ಷರಾ ಸಿಂಗ್ ಅವರನ್ನು ಸ್ಥಳದಿಂದ ಹೊರಕಳಿಸುತ್ತಿದ್ದಾಗ ಕೋಪಗೊಂಡ ಜನರು ಹತ್ತಿರ ಬರಲು ಪ್ರಯತ್ನಿಸಿದರು ಎಂದು ಹೆಚ್ಚುವರಿ ಪೊಲೀಸ್ ಠಾಣೆಯ ಮುಖ್ಯಸ್ಥ ಸುನೀಲ್ ಕುಮಾರ್ ಹೇಳಿದ್ದಾರೆ.
ಕಾರ್ಯಕ್ರಮಕ್ಕೆ ಆಗಮಿಸಿದ ಅಕ್ಷರಾ ಸಿಂಗ್ ಅವರು ಕೆಲವು ಹಾಡುಗಳನ್ನು ಹಾಡುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು ಎಂದು ಹೇಳಲಾಗುತ್ತಿದೆ, ಆದರೆ ಸ್ವಲ್ಪ ಸಮಯದ ನಂತರ ನಟಿಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸುವಾಗ ಅವರ ಅಭಿಮಾನಿಗಳಲ್ಲಿ ಮಾತಿನ ಚಕಮಕಿ ನಡೆಯಿತು.