ವೈದ್ಯಕೀಯ ಪಠ್ಯಕ್ರಮದಲ್ಲಿ ಧಾರ್ಮಿಕ ಸಂಪ್ರದಾಯ ಅಳವಡಿಕೆಗೆ ಚಿಂತನೆ: ಸಚಿವ ಮಾಂಡವೀಯ

First Published Oct 11, 2021, 8:42 AM IST

ಬೆಂಗಳೂರು(ಅ.11):  ದೇಶದ ಹಬ್ಬಗಳು, ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮ, ಪ್ರಾರ್ಥನೆ ಮತ್ತು ಆರತಿ ಈ ಎಲ್ಲ ಸಂಪ್ರದಾಯಗಳು ಮಾನಸಿಕ ಸಮಸ್ಯೆಗಳಿಗೆ ಚಿಕಿತ್ಸೆ ನೀಡುತ್ತಿದ್ದು, ಇದನ್ನು ವೈದ್ಯಕೀಯ ಪಠ್ಯಕ್ರಮದಲ್ಲಿ ಅಳವಡಿಸುವ ಚಿಂತನೆ ಇದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಾಂಡವೀಯ ತಿಳಿಸಿದ್ದಾರೆ. 

ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಯ (ನಿಮ್ಹಾನ್ಸ್‌) 25ನೇ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದ ಅವರು, ಮಾನಸಿಕ ಸಮಸ್ಯೆಗಳನ್ನು ಗುಣಪಡಿಸುವ ಸಾಂಪ್ರದಾಯಿಕ ವಿಧಾನವನ್ನು ನಾವು ಅರ್ಥಮಾಡಿಕೊಳ್ಳಬೇಕು. ಉತ್ತಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ನಮ್ಮ ಸಂಪ್ರದಾಯಗಳ ಪಾತ್ರವನ್ನು ನಮ್ಮ ಪಠ್ಯಕ್ರಮದಲ್ಲಿ ಸೇರಿಸಿಕೊಳ್ಳುವ ಬಗ್ಗೆ ಯೋಚಿಸಲಾಗುತ್ತಿದೆ ಎಂದು ಹೇಳಿದ ಮನ್ಸುಖ್‌ ಮಾಂಡವೀಯ

ಮಾನಸಿಕ ಆರೋಗ್ಯ ಸಮಸ್ಯೆ ಸಹ ಮಧುಮೇಹದಂತೆ ಸದ್ದಿಲ್ಲದೆ ಸಾವು ತರುವ ಕಾಯಿಲೆಯಾಗಿದೆ. ಮಧುಮೇಹವು ಕೆಲವೊಮ್ಮೆ ಪತ್ತೆಯಾಗದ ಕಾರಣ ಮಾರಕವಾದರೆ, ಮಾನಸಿಕ ಆರೋಗ್ಯ ಸಮಸ್ಯೆ ಹೊಂದಿರುವ ಜನರು ಸಾಮಾಜಿಕ ಕಳಂಕದ ಭಯದಿಂದ ಚಿಕಿತ್ಸೆಗೆ ಮುಂದೆ ಬರುವುದಿಲ್ಲ. ಇದರಿಂದ ಹೆಚ್ಚು ತೊಂದರೆ ಅನುಭವಿಸುತ್ತಾರೆ ಎಂದ ಕೇಂದ್ರ ಸಚಿವ ಮನ್ಸುಖ್‌ ಮಾಂಡವೀಯ 

ಮಾನಸಿಕ ಆರೋಗ್ಯ ಸಮಸ್ಯೆಯ ಪ್ರಕರಣಗಳ ಸಂಖ್ಯೆ ಇತ್ತೀಚೆಗೆ ಹೆಚ್ಚಾಗುತ್ತಿದೆ. ಜೀವನಶೈಲಿ ಮತ್ತು ಕೌಟುಂಬಿಕ ರಚನೆಯಲ್ಲಿನ ಬದಲಾವಣೆ ಇದಕ್ಕೆ ಪ್ರಮುಖ ಕಾರಣವಾಗಿದೆ. ಕುಟುಂಬ ಸದಸ್ಯರಲ್ಲಿ ಸಮಸ್ಯೆ ಆರಂಭದಲ್ಲಿದ್ದಾಗಲೇ ಗುರುತಿಸಿ ವೈದ್ಯರ ನೆರವು ಪಡೆಯಬೇಕು. ಅದೇ ರೀತಿ ಶಿಕ್ಷಕರು ವಿದ್ಯಾರ್ಥಿಗಳ ನಡವಳಿಕೆಯಲ್ಲಿ ಬದಲಾವಣೆ ಉಂಟಾದಾಗ ಪರಿಹಾರ ಕಲ್ಪಿಸಬೇಕು. ಸಮಸ್ಯೆಯನ್ನು ಮೊಳಕೆಯಲ್ಲೇ ಚಿವುಟಿ ಹಾಕಬೇಕು ಎಂದು ಕರೆ ನೀಡಿದರು.

ಆರೋಗ್ಯ ಸಚಿವ ಡಾ. ಕೆ.ಸುಧಾಕರ್‌ ಮಾತನಾಡಿ, ನಮ್ಮ ಪೂರ್ವಜರಿಂದ ಬಂದಿರುವ ಯೋಗ ಮತ್ತು ಪ್ರಾಣಾಯಾಮ ಮಾಡುವುದರಿಂದ ಒತ್ತಡ ನಿವಾರಿಸಿಕೊಳ್ಳಬಹುದು. ಕೋವಿಡ್‌ ಸಮಯದಲ್ಲಿ ರಾಜ್ಯ ಸರ್ಕಾರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಿತು. ನಿಮ್ಹಾನ್ಸ್‌ ನೆರವಿನಿಂದ ರಾಜ್ಯದ 24 ಲಕ್ಷ ಕೋವಿಡ್‌ ರೋಗಿಗಳಿಗೆ ಸಮಾಲೋಚನೆ ನಡೆಸಲಾಯಿತು ಎಂದು ವಿವರಿಸಿದರು.

ಘಟಿಕೋತ್ಸವದಲ್ಲಿ ಒಟ್ಟು 227 ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವಿವಿಧ ಪದವಿ ಮತ್ತು ಪ್ರಮಾಣ ಪತ್ರಗಳನ್ನು ಪ್ರದಾನ ಮಾಡಲಾಯಿತು. ಇದೇ ಸಂದರ್ಭದಲ್ಲಿ 13 ವಿದ್ಯಾರ್ಥಿಗಳಿಗೆ ಪ್ರಶಂಸನೀಯ ಪುರಸ್ಕಾರ ನೀಡಿ ಗೌರವಿಸಲಾಯಿತು.

ಸಂಸದರಾದ ಪಿ.ಸಿ.ಮೋಹನ್‌, ತೇಜಸ್ವಿಸೂರ್ಯ, ನಿಮ್ಹಾನ್ಸ್‌ ನಿರ್ದೇಶಕಿ ಡಾ.ಪ್ರತಿಮಾ ಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲ ಕಲ್ಪಿಸಲು 6 ತಿಂಗಳೊಳಗೆ ನಿಮ್ಹಾನ್ಸ್‌ಗೆ ಎರಡು ಹಂತಗಳಲ್ಲಿ 100 ವೆಂಟಿಲೇಟರ್‌ ಪೂರೈಸಲಾಗುವುದು. ಗ್ರಾಮೀಣ ಪ್ರದೇಶದ ಬಡವರು, ಹೆಣ್ಣು ಮಕ್ಕಳು ಹಾಗೂ ರೈತರಿಗೆ ನಿಮ್ಹಾನ್ಸ್‌ ಸೇವೆ ತಲುಪಬೇಕು. ಇದಕ್ಕಾಗಿ ಮುಂದಿನ ಆಯವ್ಯಯದಲ್ಲಿ ಮಾನಸಿಕ ಕೇಂದ್ರಗಳ ಸ್ಥಾಪನೆಗೆ ಅನುದಾನ ಮೀಸಲಿರಿಸಲಾಗುವುದು. ಮಾನಸಿಕ ಆರೋಗ್ಯ ಕೇಂದ್ರ ವಿಕೇಂದ್ರೀಕರಣಗೊಂಡು ಸಾಮಾನ್ಯರನ್ನು ತಲುಪಲು ಆಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಒತ್ತಡದಲ್ಲಿರುವ ಗ್ರಾಮೀಣ ಮಹಿಳೆಯರಿಗೆ ಪ್ರತ್ಯೇಕ ಕೋರ್ಸ್‌ ಪ್ರಾರಂಭಿಸುವಂತೆ ಸಲಹೆ ನೀಡಿದರು.

ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಾಂಡವೀಯ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿಮ್ಹಾನ್ಸ್‌ನ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು. ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಮತ್ತಿತರರು ಹಾಜರಿದ್ದರು.

click me!