ಏನೇ ಮಾಡಿದ್ರೂ ಹಣ ಉಳಿಸಲು ಸಾಧ್ಯ ಆಗ್ತಿಲ್ವಾ? ಈ ಟ್ರಿಕ್ಸ್ ಟ್ರೈ ಮಾಡಿ

First Published | Sep 18, 2022, 10:20 AM IST

ಬಜೆಟ್ ಸರಿದೂಗಿಸಿಕೊಂಡು ಹೋಗೋದು ಒತ್ತಡದ ಕೆಲಸವೆಂದು ನಿಮಗೆ ಅನಿಸಬಹುದು. ಆದರೆ ನೀವು ಅದರ ಮೇಲೆ ನಿಗಾ ಇಡದ ಅಥವಾ ನಿಮ್ಮ ಬಜೆಟ್‌ಗೆ ಅನುಗುಣವಾಗಿ ಖರ್ಚು ಮಾಡದಿದ್ದರೆ, ನೀವು ಹಣದ ಬಿಕ್ಕಟ್ಟನ್ನು ಎದುರಿಸಬೇಕಾಗಿ ಬರೋದು ಖಂಡಿತ. ನೀವು ನಿಮ್ಮ ಬಜೆಟ್ ಅನ್ನು ನಿರ್ವಹಿಸಲು ಮತ್ತು ಆರ್ಥಿಕ ಹೊಡೆತ ಬೀಳಬಾರದು ಎಂದು ಬಯಸಿದರೆ ಈ ಐದು ಸುಲಭ ಮಾರ್ಗಗಳನ್ನು ಪ್ರಯತ್ನಿಸಬಹುದು. ಆ ಐದು ಮಾರ್ಗಗಳು ಯಾವುವು ನೋಡೋಣ.

ನಮ್ಮ ತಾಯಂದಿರು ತಿಂಗಳ ಖರ್ಚಿನ ಬಗ್ಗೆ ಸಂಪೂರ್ಣ ನಿಗಾ ಇಡುವುದನ್ನು ನಾವೆಲ್ಲರೂ ನೋಡಿದ್ದೇವೆ. ಅದನ್ನು ತುಂಬಾ ನೀರಸ ಮತ್ತು ಬೇಸರದ ಕೆಲಸವೆಂದು ನಾವು ದೂರಿದ್ದೂ ಇದೆ. ಸತ್ಯವೆಂದರೆ, ಇದು ನಾವೆಲ್ಲರೂ ಬೆಳೆಸಿಕೊಳ್ಳಬೇಕಾದ ಕೌಶಲ್ಯ! ಇತ್ತೀಚಿಗೆ ಅನೇಕ ಯುವಕರು ‘urban poor’ ಜೀವನವನ್ನು ನಡೆಸುತ್ತಿದ್ದಾರೆ - ಈ ಪದವನ್ನು ತಮ್ಮ ಬಜೆಟ್ ಅನ್ನು ಮೀರಿ ಐಷಾರಾಮಿ ಜೀವನ ನಡೆಸಿ ಅಭ್ಯಾಸವಿರುವ ಯುವ ಜನರಿಗೆ ನೀಡಲಾಗಿದೆ. ಹಾಸಿಗೆ ಇದ್ದಷ್ಟು ಕಾಲು ಚಾಚಬೇಕೆಂಬ ನಮ್ಮ ಪೂರ್ವಿಕರ ಮಾತಿಗೆ ಯಾರೂ ಬೆಲೆ ಕೊಡುತ್ತಿಲ್ಲ.

ಸರಳವಾಗಿ ಹೇಳುವುದಾದರೆ, 'urban poor’ ಎಂದರೆ ತಮ್ಮ ಸಾಮರ್ಥ್ಯಕ್ಕಿಂತ ಹೆಚ್ಚು ಹಣ ಖರ್ಚು ಮಾಡುವವರು, ಮತ್ತು ಈ ಪ್ರಕ್ರಿಯೆಯಲ್ಲಿ, ತಮ್ಮ ಬಜೆಟ್ ಅನ್ನು 10 ಪಟ್ಟು ಹೆಚ್ಚು ಖರ್ಚು ಮಾಡುವವರು. ಅಂದರೆ ಸಾವಿರ ರೂಪಾಯಿಗೆ ದುಡಿದರೆ ಎರಡು ಸಾವಿರ ರೂಪಾಯಿ ಖರ್ಚು ಮಾಡೋರು ಎಂದು. ಇಂತವರನ್ನು ನಾವು ಇಂದಿನ ಸಾಕಷ್ಟು ಯುವ ಜನತೆಯಲ್ಲಿ ಕಾಣುತ್ತೇವೆ.
 

Latest Videos


ಬಜೆಟ್‌ನಲ್ಲಿ ಜೀವನ ನಡೆಸುವುದು ಸವಾಲಿನದ್ದಾಗಿರಬಹುದು, ಆದರೆ ಅದು ಅಸಾಧ್ಯವೇ? ಇಲ್ಲ! ನೀವು ಮಾಡಬೇಕಾಗಿರುವುದು ನಿಮ್ಮ ಆದಾಯ ಮತ್ತು ವೆಚ್ಚಗಳನ್ನು ಒಂದು ರೀತಿಯಲ್ಲಿ ನಿರ್ವಹಿಸಲು ಸ್ಮಾರ್ಟ್ ಆಗಿ ಕೆಲಸ (Smart Work)  ಮಾಡೋದು. ನಿಮ್ಮ ಆಸೆಗಳು ಮತ್ತು ಜೀವನಶೈಲಿಯಲ್ಲಿ ರಾಜಿ ಮಾಡಿಕೊಳ್ಳದೆ, ಬಜೆಟ್ ನಲ್ಲಿ ನಿಮ್ಮ ಜೀವನವನ್ನು ನಡೆಸಲು ಐದು ಮಾರ್ಗಗಳು ಇಲ್ಲಿವೆ.

ನಿಮ್ಮ ಆದಾಯ ತಿಳಿದುಕೊಳ್ಳಿ (know your income) :

ನಿಮ್ಮ ಆದಾಯದ ಮೂಲಗಳನ್ನು ತಿಳಿದುಕೊಳ್ಳುವುದು ಮತ್ತು ಅದರ ಸರಿಯಾದ ಟ್ರ್ಯಾಕ್ ಅನ್ನು ಇಟ್ಟುಕೊಳ್ಳುವುದು ಬಹಳ ಮುಖ್ಯ. ಆದಾಯ ಟೆಂಪರರಿ ಉದ್ಯೋಗ ಅಥವಾ ಮಾಸಿಕ ಭತ್ಯೆಯಿಂದ ಬಂದಿದ್ದರೆ, ಅದು ಎಲ್ಲಿಂದ ಬರುತ್ತಿದೆ ಎಂದು ತಿಳಿದುಕೊಳ್ಳುವುದು ನಿಮ್ಮ ಖರ್ಚಿನ ಮೇಲೆ ನಿಗಾ ಇಡಲು ಸಹಾಯ ಮಾಡುತ್ತದೆ. ನಿಮ್ಮ ಆದಾಯವನ್ನು ವಿಭಜಿಸಲು ನಿಮ್ಮ ಫೋನಿನಲ್ಲಿ ಪ್ಲ್ಯಾನರ್ ಇಟ್ಟುಕೊಳ್ಳುವುದು ಅಥವಾ ಪ್ರತ್ಯೇಕ ಪುಸ್ತಕವನ್ನು ನಿರ್ವಹಿಸುವುದು ಒಳ್ಳೆಯದು. ಇದು ನಿಮ್ಮ ಬಜೆಟ್ ಅನ್ನು ಯೋಜಿಸಲು ಸಹಾಯ ಮಾಡುತ್ತೆ.

ಗಳಿಕೆಯ 30% ಸೇವಿಂಗ್ಸ್ ಮಾಡಿ (save 30% of income):

ನಿಮ್ಮ ಆದಾಯ ಏನೇ ಇರಲಿ, ನಿಮ್ಮ ಒಟ್ಟು ಆದಾಯದ 30 ಪ್ರತಿಶತವನ್ನು ಉಳಿತಾಯಕ್ಕಾಗಿ ಎತ್ತಿಡೋದನ್ನು ಯಾವಾಗಲೂ ಮಾಡಿ. ಉಳಿದ 70 ಪ್ರತಿಶತವನ್ನು ನೀವು ಖರ್ಚು ಮಾಡಲು ಪಡೆಯುತ್ತೀರಿ. ಇದರಿಂದ ನೀವು ಬಜೆಟ್ ಹೊಂದಾಣಿಕೆ ಮಾಡಲು ಸಾಧ್ಯವಾಗುತ್ತೆ.
 

ಅಗತ್ಯವಿದ್ದಷ್ಟೇ ಖರ್ಚು (conscious spending) :

ನಾವು ಉಳಿಸುವುದಕ್ಕಿಂತ ಹೆಚ್ಚು ಹಣ ಖರ್ಚು ಮಾಡುತ್ತೇವೆ. ಯಾಕೆಂದರೆ ನಮಗೆಲ್ಲಾ ಶಾಪಿಂಗ್ ಹುಚ್ಚಿದೆ, ನೋಡಿದ, ಇಷ್ಟಪಟ್ಟ ಎಲ್ಲವೂ ಬೇಕು ಎಂದು ಬಯಸುತ್ತೇವೆ. ಇದರಿಂದ ಖರ್ಚು ವಿಪರೀತವಾಗುತ್ತಾ ಹೋಗುತ್ತೆ. ಶಾಪಿಂಗ್ ಮಾಡೋದೇನೋ ಸರಿ, ಆದರೆ ಅಗತ್ಯ ಇರುವ ವಸ್ತುಗಳನ್ನಷ್ಟೇ ಶಾಪಿಂಗ್ ಮಾಡಿ, ಇಷ್ಟವಾದುದನ್ನೆಲ್ಲಾ ಮಾಡಬೇಡಿ. ಇದರಿಂದ ಹಣ ಉಳಿಯುತ್ತದೆ.

ಗುರಿ ತುಂಬಾ ಮುಖ್ಯ (aim is important):

ಗುರಿ ಹೊಂದುವುದು ಮುಖ್ಯ ಮತ್ತು ಆ ಗುರಿಗಳನ್ನು ಪೂರ್ಣಗೊಳಿಸುವುದು ಹೆಚ್ಚು ಮುಖ್ಯ. ಗುರಿಗಳನ್ನು ಇಟ್ಟುಕೊಳ್ಳುವುದು ನಿಮ್ಮ ಲೈಫ್ ಸ್ಟೈಲ್ ಮೇಲೆ ಗಮನ ಇಡಲು ಸಹಾಯ ಮಾಡುತ್ತದೆ. ಇದು ಬಜೆಟ್ ಅನ್ನು ನಿರ್ವಹಿಸಲು ಸಹಾಯ ಮಾಡುತ್ತೆ. ಉದಾಹರಣೆಗೆ - ಮನೆಯಲ್ಲಿ ತಯಾರಿಸಿದ ಆಹಾರವನ್ನೇ ತಿನ್ನುವ ಗುರಿ ಹೊಂದಿ, ಇದರಿಂದ ಹೊರಗಿನ ಆಹಾರಕ್ಕೆ ಉಂಟಾಗುವ ಖರ್ಚು ಕಡಿಮೆಯಾಗುತ್ತೆ.  

ಸುರಕ್ಷಿತ ಜೀವನ (secured lifestyle):

ನಿಮ್ಮ ಹಣದ ಮೇಲೆ ನಿಯಂತ್ರಣ ಹೊಂದಿರುವುದು ಹೆಚ್ಚು ಆತ್ಮವಿಶ್ವಾಸ ಮತ್ತು ಸ್ವತಂತ್ರವಾಗಿರಲು ಕಾರಣವಾಗಬಹುದು. ಇದು ಅಲ್ಪಾವಧಿಯಲ್ಲಿ ನಿಮಗೆ ಸಹಾಯ ಮಾಡುವುದಲ್ಲದೆ, ನಿಮ್ಮ ಭವಿಷ್ಯದ ಅವಶ್ಯಕತೆಗಳನ್ನು ಪೂರೈಸಲು ಸಹ ಇದು ಸಹಾಯ ಮಾಡುತ್ತದೆ. 

click me!