ಬರೋಬ್ಬರಿ 7 ವರ್ಷಗಳ ಬಳಿಕ ಅಹಮದಾಬಾದ್‌ನ ಮೊಟೇರಾ ಸ್ಟೇಡಿಯಂನಲ್ಲಿ ಫೆಬ್ರವರಿ 24ರಂದು ಮೊದಲ ಅಂತಾರಾಷ್ಟ್ರೀಯ ಪಂದ್ಯ ನಡೆಯಲಿದೆ. ಈ ಮೊದಲು 2014ರಲ್ಲಿ ಭಾರತ ತಂಡ ಕೊನೆಯ ಬಾರಿಗೆ ಇಲ್ಲಿ ಅಂತಾರಾಷ್ಟ್ರೀಯ ಪಂದ್ಯವನ್ನಾಡಿತ್ತು.
2014ರಲ್ಲಿ ಶ್ರೀಲಂಕಾ ವಿರುದ್ದ ನಡೆದ ಏಕದಿನ ಪಂದ್ಯದಲ್ಲಿ ಅಂಬಟಿ ರಾಯುಡು ಬಾರಿಸಿದ ಆಕರ್ಷಕ ಶತಕದ ನೆರವಿನಿಂದ ಟೀಂ ಇಂಡಿಯಾ 6 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತ್ತು.
ಇದಾದ ಬಳಿಕ ಗುಜರಾತ್ ಕ್ರಿಕೆಟ್ ಸಂಸ್ಥೆ ಮೊಟೇರಾ ಕ್ರಿಕೆಟ್ ಸ್ಟೇಡಿಯಂ ಅನ್ನು ಪುನರ್ ನಿರ್ಮಾಣ ಮಾಡಲು ಮುಂದಾಯಿತು. ಈ ಮೊದಲು 54 ಸಾವಿರ ಪ್ರೇಕ್ಷಕರು ಏಕಕಾಲದಲ್ಲಿ ಪಂದ್ಯವನ್ನು ವೀಕ್ಷಿಸಬಹುದಾಗಿತ್ತು.
ಹೊಸದಾಗಿ ನಿರ್ಮಾಣ ಸ್ಟೇಡಿಯಂನಲ್ಲಿ ಒಟ್ಟು 11 ಪಿಚ್‌ಗಳನ್ನು ನಿರ್ಮಾಣ ಮಾಡಲಾಗಿದ್ದು, ಕೆಂಪು ಹಾಗೂ ಕಪ್ಪು ಮಣ್ಣಿನಿಂದ ನಿರ್ಮಿಸಲಾಗಿದೆ.
ಸ್ಟೇಡಿಯಂನಲ್ಲಿ ಎರಡು ವಿಶ್ವದರ್ಜೆಯ ಡ್ರೈನೇಜ್ ಸಿಸ್ಟಂ ಅಳವಡಿಸಲಾಗಿದ್ದು, ಎಷ್ಟೇ ದೊಡ್ಡ ಮಳೆ ಬಂದರೂ ಸಹಾ ಕ್ಷಣಾರ್ಧದಲ್ಲಿ ಔಟ್‌ಫೀಲ್ಡ್ ಒಣಗಿ ಪಂದ್ಯಾಟಕ್ಕೆ ಸಜ್ಜಾಗಲಿದೆ.
ಇದೀಗ ಹೊಸದಾಗಿ ನಿರ್ಮಾಣವಾದ ಮೊಟೇರಾ ಸ್ಟೇಡಿಯಂನಲ್ಲಿ 1,10,000 ಪ್ರೇಕ್ಷಕರು ಏಕಕಾಲದಲ್ಲಿ ಕುಳಿತು ಪಂದ್ಯವನ್ನು ವೀಕ್ಷಿಸಬಹುದಾಗಿದೆ. ದುರಾದೃಷ್ಟವಶಾತ್ ಕೋವಿಡ್ 19 ಕಾರಣದಿಂದಾಗಿ ಶೇ.50% ಪ್ರೇಕ್ಷಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಹೊಸ ಸ್ಟೇಡಿಯಂ ನಿರ್ಮಾಣಕ್ಕೂ ಮೊದಲು 2011ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ-ಆಸ್ಟ್ರೇಲಿಯಾ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯಕ್ಕೆ ಮೊಟೇರಾ ಸ್ಟೇಡಿಯಂ ಆತಿಥ್ಯವನ್ನು ವಹಿಸಿತ್ತು.
ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ 10000 ಟೆಸ್ಟ್ ರನ್ ಹಾಗೂ ಸಚಿನ್ ತೆಂಡುಲ್ಕರ್ 30000 ಅಂತಾರಾಷ್ಟ್ರೀಯ ರನ್‌ಗಳನ್ನು ಇದೇ ಸ್ಟೇಡಿಯಂನಲ್ಲಿ ಪೂರ್ಣಗೊಳಿಸಿದ್ದರು.
ಸಚಿನ್ ತೆಂಡುಲ್ಕರ್ ತಮ್ಮ ವೃತ್ತಿಜೀವನದ ಮೊದಲ ಟೆಸ್ಟ್ ದ್ವಿಶತಕ ಬಾರಿಸಿದ್ದು ಸಹಾ ಇದೇ ಮೊಟೇರಾ ಸ್ಟೇಡಿಯಂನಲ್ಲಿ.
ಮೊಟೇರಾ ಸ್ಟೇಡಿಯಂನಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್ ದೇವ್, ಸರ್ ರಿಚರ್ಡ್ ಹ್ಯಾಡ್ಲಿ(432 ಟೆಸ್ಟ್ ವಿಕೆಟ್) ಹೆಸರಿನಲ್ಲಿದ್ದ ಗರಿಷ್ಠ ವಿಕೆಟ್ ದಾಖಲೆಯನ್ನು ಅಳಿಸಿ ಹಾಕಿದ್ದರು.