Chikkamagaluru: ಹಸಿರು ಪರ್ವತಕ್ಕೆ ನೀಲಿ ಹೊದಿಕೆ; ಪ್ರವಾಸಿಗರನ್ನು ಮಂತ್ರಮುಗ್ಧಗೊಳಿಸಿದ ಕುರಂಜಿ ಹೂ

First Published | Sep 26, 2022, 12:30 PM IST

ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತ ಸಾಲಿನಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ನೀಲ ಕುರಂಜಿ ಹೂವಿನ ಸೊಬಗು ಕಾಣಿಸಿಕೊಂಡಿದೆ. 12 ವರ್ಷಗಳಿಗೊಮ್ಮೆ ಘಟಿಸುವ ನಿಸರ್ಗದ ವಿಸ್ಮಯವನ್ನು ಪ್ರವಾಸಿಗರು ಕಣ್ತುಂಬಿಕೊಳ್ಳುತ್ತಿದ್ದಾರೆ. 

12 ವರ್ಷಗಳಿಗೊಮ್ಮೆ ಘಟಿಸುತ್ತದೆ ಎನ್ನಲಾಗುವು ನಿಸರ್ಗದ ವಿಸ್ಮಯ ಸಸ್ಯಶಾಸ್ತ್ರದ ವಿಜ್ಞಾನಿಗಳು, ಸಂಶೋಧಕರು,ವಿದ್ಯಾರ್ಥಿಗಳಿಗೆ ಅತ್ಯಂತ ಆಸಕ್ತಿದಾಯಕ ವಿಷಯವಾಗಿದೆ. ಪ್ರವಾಸಿಗರ ಪಾಲಿಗೆ ಇದೊಂದು ಕೌತುಕವಾಗಿರುವ ಹಿನ್ನೆಲೆಯಲ್ಲಿ ಈಗಾಗಲೇ ಗಿರಿ ತಪ್ಪಲಿಗೆ ನೂರಾರು ಉಪನ್ಯಾಸಕರು, ಸಂಶೋಧಕರು ಹಾಗೂ ಸಸ್ಯಶಾಸ್ತ್ರದ ವಿದ್ಯಾರ್ಥಿಗಳು ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಭೇಟಿ ನೀಡಿ ಪ್ರಕೃತಿಯಲ್ಲಡಗಿರುವ ನಿಗೂಢತೆಯುನ್ನು ಅರಿಯುವ ಪ್ರಯತ್ನ ಮಾಡಿದ್ದಾರೆ.

ನೀಲ ಕುರಂಜಿ ಜಿಲ್ಲೆಯ ಪ್ರವಾಸೋದ್ಯಮವನ್ನು ಚೇತರಿಸಿಕೊಳ್ಳುವಂತೆ ಮಾಡಿದೆ. ಆದರೂ, ನಿಯಂತ್ರಣವಿಲ್ಲದ ಪ್ರವಾಸಿಗರ ಚಟುವಟಿಕೆಯಿಂದಾಗಿ ಕುರಂಜಿ ಪ್ರಬೇಧಕ್ಕೆ ಧಕ್ಕೆ ಉಂಟಾಗುವ ಸಾಧ್ಯತೆ ಇದೆ ಎನ್ನುವ ಆತಂಕವೂ ಎದುರಾಗಿದೆ. ಕುರಂಜಿ ಸೌಂದರ್ಯವನ್ನು ಆಸ್ವಾಧಿಸುವ ಸಲುವಾಗಿ ಭೇಟಿ ನೀಡುತ್ತಿರುವ ಪ್ರವಾಸಿಗರು ಶೋಲಾ ಅರಣ್ಯದಲ್ಲಿ, ವಿಶಾಲವಾಗಿ ಮೈಚಾಚಿಕೊಂಡಿರುವ ಬೆಟ್ಟ ಪ್ರದೇಶದಲ್ಲಿ ಕುರಂಜಿ ಗುಚ್ಛಗಳ ಮೇಲೆ ಮಲಗಿ, ಕುಳಿತು ಫೋಟೋ, ವೀಡಿಯೋ ತೆಗೆಸಿಕೊಳ್ಳುವುದು, ದೊಡ್ಡ ಪ್ರಮಾಣದಲ್ಲಿ ಗುಚ್ಛಗಳನ್ನು ಕಿತ್ತು ಸಾಗಿಸುವುದು ನಡೆಯುತ್ತಿದ್ದು, ಇದರಿಂದ ಕುರಂಜಿ ಪ್ರಬೇಧ ಪ್ರತಿಕೂಲ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಪರಿಸರ ಪ್ರೇಮಿಗಳು, ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

Tap to resize

ಜಿಲ್ಲಾಡಳಿತ, ಅರಣ್ಯ ಇಲಾಖೆ ಈ ವಿಚಾರದಲ್ಲಿ ಮುಂಗಾಗ್ರತೆ ವಹಿಸಬೇಕಿತ್ತು. ಕುರಂಜಿ ಹೂಗಳು ಹೆಚ್ಚೆಂದರೆ ಇನ್ನು 15 ದಿನಗಳಷ್ಟೇ ಕಾಣಲು ಸಾಧ್ಯ. ಮುಂದೆ ಸಾಲು ಸಾಲು ರಜೆಗಳು ಇರುವುದರಿಂದ ಬಹಳಷ್ಟು ಪ್ರವಾಸಿಗರು ಇಲ್ಲಿಗೆ ಭೇಟಿ ಕೊಡಲು ಯೋಜನೆ ರೂಪಿಸಿಕೊಂಡಿದ್ದಾರೆ. ಅವರಿಗಾಗಿ ಈ ಪುಷ್ಪರಾಶಿ ಉಳಿಯಬೇಕಾಗುತ್ತದೆ. ಈ ಕಾರಣಕ್ಕೆ ಎಲ್ಲಾ ಪ್ರವಾಸಿಗರೂ ಹೂವನ್ನು, ಸಸ್ಯಗಳನ್ನು ನೋಯಿಸದೆ ಸೊಬಗನ್ನು ಆಸ್ವಾದಿಸಬೇಕು ಎಂದು ಮನವಿ ಮಾಡಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಗಿರಿಶ್ರೇಣಿಯ ಹಸಿರು ಪರ್ವತಗಳಿಗೆ ನೀಲಿ ಹೊದಿಕೆಯನ್ನು ಹಾಸಿರುವ ಕುರಂಜಿ ಹೂಗಳು ಪ್ರವಾಸಿಗರನ್ನು ಮಂತ್ರಮುಗ್ಧಗೊಳಿಸಿದ್ದು, ಪ್ರತಿನಿತ್ಯ ಸಹಸ್ರಾರು ಜನರನ್ನು ಆಕರ್ಷಿಸುತ್ತಿದೆ .ಕಳೆದ ಒಂದೂವರೆ ತಿಂಗಳಿನಿಂದ ಚಂದ್ರದ್ರೋಣ ಪರ್ವತ ಸಾಲನ್ನು ಆವರಿಸಿಕೊಂಡಿರುವ ನೀಲ ಕುರಂಜಿಯ ಸೊಬಗನ್ನು ಕಣ್ತುಂಬಿಕೊಳ್ಳಲು ಸಾಲು ಸಾಲು ಪ್ರವಾಸಿಗರ ದಂಡು ಬೆಟ್ಟ ಪ್ರದೇಶಕ್ಕೆ ದಾಂಗುಡಿ ಇಡುತ್ತಿದೆ.

ಏಷ್ಯಾನೆಟ್ ಸುವರ್ಣ ನ್ಯೂಸ್‌ನೊಂದಿಗೆ ಮಾತಾಡಿದ ಪರಿಸರವಾದಿ ವಿರೇಶ್ ಕುರುಂಜಿ ಗಿಡಗಳು ಡೇಲಿಯಾ ಹೂ ಮಾದರಿಯ ಗೆಡ್ಡೆಯಿಂದ ಬೆಳೆಯುವ ಗಿಡಗಳಾಗಿವೆ. ಈ ಬಗ್ಗೆ ಬಹುತೇಕ ಪ್ರವಾಸಿಗರಿಗೆ ಮಾಹಿತಿ ಇಲ್ಲದೆ ಅದನ್ನು ಮನೆಯಲ್ಲಿ ಬೆಳೆಸುತ್ತೇವೆ ಎಂದು ಗುಚ್ಛಗಳನ್ನೇ ಕಿತ್ತು ಸಾಗಿಸುತ್ತಿದ್ದಾರೆ. ಇದು ತಪ್ಪು, ಇದರಿಂದ ಮುಂದಿನ ಹನ್ನೆರಡು ವರ್ಷಗಳಿಗೆ ಗೆಡ್ಡೆಗಳು ಹಾನಿಗೀಡಾಗಿ ಗಿಡಗಳೇ ಬೆಳೆಯದಿರುವ ಸಾಧ್ಯತೆ ಇರುತ್ತದೆ ಈ ಕಾರಣಕ್ಕೆ ಪ್ರವಾಸಿಗರು ಗಿಡಗಳನ್ನು ಯಾವುದೇ ಕಾರಣಕ್ಕೆ ಕಿತ್ತು ಸಾಗಿಸಬಾರದು ಎಂದು ಹೇಳಿದರು.
 

ಹಲವು ದಶಕಗಳ ನಂತರ, ಗಿರಿಶ್ರೇಣಿ, ಮಲೆನಾಡು ಅಪಾರ ಮಳೆಯನ್ನು ಕಂಡಿದೆ. ಇದರ ನಡುವೆಯೇ ಗಿರಿತಪ್ಪಲು ಕುರಂಜಿಯಿಂದಾಗಿ ನೀಲಮಯವಾಗಿದೆ.  ಇದರ ಬೆನ್ನಲ್ಲೇ ಮಳೆ ನಿಂತು ಸರಣಿ ರಜೆಗಳು ಆರಂಭವಾಗಿರುವುದರಿಂದ ಗಿರಿ ತಪ್ಪಲು ಪ್ರತಿದಿನ ಪ್ರವಾಸಿಗರಿಂದ ತುಂಬಿ ತುಳುಕಲಾರಂಭಿಸಿದೆ. ಗಂಟೆ ಗಂಟೆಗೂ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ.

ವರದಿ: ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
 

Latest Videos

click me!