ಕಾಪಾಡಿ ಎಂದ ಫೋರ್ಡ್ ಕಂಪನಿ ಕರೆಗೆ ಓಗೊಟ್ಟ ರತನ್ ಟಾಟಾ, ನಷ್ಟದಲ್ಲಿದ್ದ ಜಾಗ್ವಾರ್, ಲ್ಯಾಂಡ್ ರೋವರ್ ಕಾರು ವಿಭಾಗ ಖರೀದಿ: 2008ರಲ್ಲಿ ಅಮೆರಿಕ ಸೇರಿದಂತೆ ಜಗತ್ತಿನಾದ್ಯಂತ ಆರ್ಥಿಕ ಹಿಂಜರಿಕೆಯಾಗಿ ದೊಡ್ಡ ದೊಡ್ಡ ಕಂಪನಿಗಳೆಲ್ಲಾ ನೆಲೆಕಚ್ಚುತ್ತಿದ್ದವು. ಫೋರ್ಡ್ ಕಂಪನಿಯು ಇದೇ ಹಾದಿಯಲ್ಲಿ ದಿವಾಳಿಯಾಗಿತ್ತು. ಅದರ ಐಷಾರಾಮಿ ಕಾರುಗಳ ಕಂಪನಿ ಜಾಗ್ವಾರ್ ಮತ್ತು ಲ್ಯಾಂಡ್ ರೋವರ್ ಸಂಪೂರ್ಣ ನಷ್ಟದಲ್ಲಿತ್ತು. 1989ರಲ್ಲಿ ಜಾಗ್ವಾರ್ ಕಂಪನಿಯನ್ನು ಫೋರ್ಡ್ ಕಂಪನಿ 2.5 ಶತಕೋಟಿ ಡಾಲರ್ ಕೊಟ್ಟು ಖರೀದಿ ಮಾಡಿತ್ತು, 2000 ಇಸವಿಯಲ್ಲಿ 2.7 ಶತಕೋಟಿ ಡಾಲರ್ ಕೊಟ್ಟು ಲ್ಯಾಂಡ್ ರೋವರ್‌ನನ್ನು ಸಹ ಫೋರ್ಡ್ ಖರೀದಿಸಿತ್ತು. ಆದರೆ, ಈ ಎರಡೂ ಕಂಪನಿಗಳು ಫೋರ್ಡ್‌ನ ಯೋಜನೆಯಂತೆ ನಡೆಯುತ್ತಿರಲಿಲ್ಲ. ಫೋರ್ಡ್‌ಗೆ ಇವು ಬಿಳಿ ಆನೆ ಸಾಕಿದಂತೆ ಆಗಿತ್ತು.