ಸಣ್ಣ ಸೈಕಲ್‌ನಿಂದ ಬ್ರಹ್ಮೋಸ್ ಕ್ಷಿಪಣಿಯವರೆಗೆ...; ಜಾಗತಿಕ ಮಾರುಕಟ್ಟೆಯಲ್ಲಿ ಮೇಡ್ ಇನ್ ಇಂಡಿಯಾ ವಸ್ತುಗಳದ್ದೇ ಹವಾ.!

First Published | Jul 17, 2024, 8:07 PM IST

ಭಾರತವು ಅಭಿವೃದ್ಧಿ ಹೊಂದಿದ ದೇಶವಾಗಲು ಅತ್ಯಂತ ವೇಗವಾಗಿ ಮುಂದೆ ಸಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಸ್ವಾವಲಂಬನೆ ಸಾಧಿಸುವ ಮೂಲಕ ಜಗತ್ತಿನ ದೇಶಗಳಲ್ಲಿ ತನ್ನ ಅಸ್ತಿತ್ವವನ್ನು ತೋರಿಸುತ್ತಿದೆ. ಮೇಡ್ ಇಂಡಿಯಾ (Made in India) ಮೂಲಕ ಸೈಕಲ್‌ ಉತ್ಪಾದನೆಯಿಂದ ಹಿಡಿದು ರಾಷ್ಟ್ರ ರಕ್ಷಣೆಗೆ ಪ್ರಬಲ ಅಸ್ರವಾಗಿರುವ ಯುದ್ಧವಿಮಾನ ತಯಾರಿಕೆಯವರೆಗೆ ಜಾಗತಿಕ ಮಾರುಕಟ್ಟೆಯಲ್ಲಿ ಭಾರತ ಪ್ರಾಬಲ್ಯ ಸಾಧಿಸುತ್ತಿದೆ.  ಮೇಕ್ ಇಂಡಿಯಾ ಸಾಗಿಬಂದ ಯಶೋಗಾಥೆಯ ಒಂದು ಝಲಕ್ ಇಲ್ಲಿದೆ ನೋಡಿ.. 

ಈಗಾಗಲೇ ವಿಶ್ವದ ಅತಿ ದೊಡ್ಡ ಆರ್ಥಿಕ ರಾಷ್ಟ್ರಗಳ ಸಾಲಿಗೆ ಸೇರಿರುವ ಭಾರತ, ಸಣ್ಣ ಉತ್ಪಾದನೆಯಿಂದ ಹಿಡಿದು ಬಾಹ್ಯಾಕಾಶ ಯಾನದವರೆಗೆ ಎಲ್ಲ ಕ್ಷೇತ್ರಗಳಲ್ಲಿ ತನ್ನ ಶಕ್ತಿ ಪ್ರದರ್ಶಿಸುತ್ತಿದೆ. ಮೇಡ್ ಇನ್ ಇಂಡಿಯಾ ಕಾರ್ಯಕ್ರಮದ ಮೂಲಕ, ಭಾರತ ಮೇಡ್ ಇನ್ ಇಂಡಿಯಾ (Made in India) ಉತ್ಪನ್ನ ತಯಾರಿಸುವಲ್ಲಿ ಅಸಾಧಾರಣ ಯಶಸ್ಸನ್ನು ಸಾಧಿಸುತ್ತಿದೆ. 

ಭಾರತೀಯ ಸೈಕಲ್‌ಗಳಿಂದ ಡಿಜಿಟಲ್ ಪಾವತಿಯವರೆಗೆ, ಭಾರತವು ತನ್ನ ಉತ್ಪನ್ನಗಳಿಂದ ಜಗತ್ತನ್ನು ಆಕರ್ಷಿಸುತ್ತಿದೆ. ಭಾರತದಲ್ಲಿ ತಯಾರಾಗುವ ಸೈಕಲ್‌ಗಳು ಇಂಗ್ಲೆಂಡ್ (ಯುಕೆ), ಜರ್ಮನಿ ಮತ್ತು ನೆದರ್ಲೆಂಡ್ಸ್‌ಗೆ ಹೆಚ್ಚಾಗಿ ರಫ್ತಾಗುತ್ತಿವೆ. ನಮ್ಮ ದೇಶದಲ್ಲಿ ತಯಾರಾಗುವ ಸೈಕಲ್‌ಗಳು ಜಾಗತಿಕ ಮಟ್ಟದಲ್ಲಿ ಹೆಚ್ಚು ಬೇಡಿಕೆಯನ್ನು ಗಿಟ್ಟಿಸುತ್ತಿವೆ. ಆರೋಗ್ಯ ಮತ್ತು ಪರಿಸರದ ಬಗ್ಗೆ ಕಾಳಜಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೈಕಲ್‌ಗಳ ಪ್ರಾಮುಖ್ಯತೆ ಹೆಚ್ಚುತ್ತಿದೆ. ಅದರಲ್ಲೂ ಭಾರತದಲ್ಲಿ ತಯಾರಾಗುವ ಸೈಕಲ್ ಗಳಿಗೆ ದೇಶವಷ್ಟೇ ಅಲ್ಲ, ಬ್ರಿಟನ್, ಜರ್ಮನಿ ಜತೆಗೆ ವಿಶ್ವದ ಸೈಕಲ್ ರಾಜಧಾನಿ ಎಂದೇ ಹೆಸರಾಗಿರುವ ನೆದರ್ ಲ್ಯಾಂಡ್ ನಲ್ಲೂ ಬೇಡಿಕೆ ಹೆಚ್ಚಿದೆ. ಮೊಜಾಂಬಿಕ್ ಮತ್ತು ಚಾಡ್‌ನಂತಹ ಅಭಿವೃದ್ಧಿಶೀಲ ರಾಷ್ಟ್ರಗಳೂ ಕೂಡ ಭಾರತದಿಂದ ಸೈಕಲ್‌ಗಳನ್ನು ತರಿಸಿಕೊಳ್ಳಲು ಆರ್ಡರ್ ನೀಡುತ್ತಿವೆ. ಭಾರತ 2023ನೇ ಸಾಲಿನಲ್ಲಿ 46.5 ಮಿಲಿಯನ್‌ ಡಾಲರ್‌ ಮೌಲ್ಯದ ಸೈಕಲ್ ರಫ್ತು ಮಾಡಿತ್ತು. ಈ ವರ್ಷ ತನ್ನ ರಫ್ತು ಮಾಡುವ ಸಾಮರ್ಥ್ಯವನ್ನು ಶೇ.16.95ರಷ್ಟು ಹೆಚ್ಚಳ ಮಾಡಿಕೊಂಡಿದೆ. ಅಂದರೆ ಸದರಿ 2024ನೇ ಸಾಲಿನಲ್ಲಿ 54.38 ಮಿಲಿಯನ್‌ ಡಾಲರ್ ಮೌಲ್ಯದಷ್ಟು ಸೈಕಲ್‌ಗಳನ್ನು ವಿವಿಧ ರಾಷ್ಟ್ರಗಳಿಗೆ ರವಾನೆ ಮಾಡಲು ಸಿದ್ಧತೆ ಮಾಡಿಕೊಂಡಿದೆ.

ರಷ್ಯಾ ಸೇನೆಗೆ ಮೇಡ್ ಇನ್ ಬಿಹಾರ ಬೂಟುಗಳು:
ಭಾರತದ ಬಿಹಾರದಲ್ಲಿ ತಯಾರಾಗುವ ‘ಮೇಡ್ ಇನ್ ಬಿಹಾರ’ ಶೂಗಳಿಗೆ ಭಾರಿ ಬೇಡಿಕೆ ಬಂದಿದೆ. ಉಕ್ರೇನ್‌ನೊಂದಿಗಿನ ಯುದ್ಧದ ಸಮಯದಲ್ಲಿ ಭಾರತೀಯ ಬೂಟುಗಳು ರಷ್ಯಾದ ಸೈನ್ಯದ ಪ್ರಮುಖ ಅಗತ್ಯವನ್ನು ಪೂರೈಸಿವೆ. ಇದು ಭಾರತೀಯ ಉತ್ಪನ್ನಗಳ ಅನಿರೀಕ್ಷಿತ ಜಾಗತಿಕ ವ್ಯಾಪ್ತಿಯ ಬೆಳವಣಿಗೆಯನ್ನು ಪ್ರದರ್ಶಿಸುತ್ತದೆ. ಈ ಮೈಲಿಗಲ್ಲು ಅಂತಾರಾಷ್ಟ್ರೀಯ ರಕ್ಷಣಾ ಮಾರುಕಟ್ಟೆಗಳಲ್ಲಿ ಭಾರತದ ಪ್ರಾಬಲ್ಯ, ಪರಿಣಾಮಕಾರಿತ್ವ ಮತ್ತು ಉತ್ಪಾದನಾ ಸಾಮರ್ಥ್ಯದ ಗುಣಮಟ್ಟವನ್ನು ಪ್ರತಿಬಿಂಬಿಸುತ್ತದೆ. ಕಳೆದ ವರ್ಷ ಬಿಹಾರದಿಂದ ರಷ್ಯಾಕ್ಕೆ 100 ಕೋಟಿ ರೂ. ಮೌಲ್ಯದ 15 ಲಕ್ಷ ಜೋಡಿ ಬೂಟುಗಳನ್ನು ರಫ್ತು ಮಾಡಲಾಗಿದೆ. ಮುಂದಿನ ವರ್ಷ ಇದನ್ನು ಶೇ.50ರಷ್ಟು ಹೆಚ್ಚಿಸುವ ಗುರಿ ಹೊಂದಲಾಗಿದೆ.

Tap to resize

ವಿಶ್ವಕಪ್ ವೇಳೆ ಕಾಶ್ಮೀರ ಬ್ಯಾಟ್‌ಗಳಿಗೆ ಹೆಚ್ಚಿನ ಬೇಡಿಕೆ:
ವಿಶ್ವಕಪ್ ಸಮೀಪಿಸುತ್ತಿದ್ದಂತೆ ಕಾಶ್ಮೀರ ಬ್ಯಾಟ್‌ಗಳಿಗೆ ಭಾರಿ ಬೇಡಿಕೆ ಬರುತ್ತದೆ. ಈ ಬ್ಯಾಟ್‌ಗಳು ಭಾರತದ ಅತ್ಯುತ್ತಮ ಕರಕುಶಲತೆಯನ್ನು ಪ್ರತಿಬಿಂಬಿಸುತ್ತವೆ. ಜೊತೆಗೆ ಅಂತರಾಷ್ಟ್ರೀಯ ಕ್ರಿಕೆಟ್ ರಂಗದ ಮೇಲೆ ಗಮನಾರ್ಹ ಪರಿಣಾಮವನ್ನು ಬೀರುತ್ತವೆ. ಅಧಿಕೃತ ಅಂಕಿಅಂಶಗಳ ಪ್ರಕಾರ, ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಶ್ಮೀರದಲ್ಲಿ 400ಕ್ಕೂ ಹೆಚ್ಚು ಕ್ರಿಕೆಟ್ ಬ್ಯಾಟ್ ತಯಾರಿಕಾ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಕಾಶ್ಮೀರ ವಿಲೋ ಬ್ಯಾಟ್‌ಗಳಿಗೆ ಭೌಗೋಳಿಕ ಗುರುತನ್ನು (ಜಿಐ) ಪಡೆಯಲು ಸರ್ಕಾರ ಕೆಲಸ ಮಾಡುತ್ತಿದೆ. ಇದೇ ವೇಳೆ ಕಾಶ್ಮೀರ ವಿಲೋ ಬ್ಯಾಟ್ ಬೆಲೆ ಸುಮಾರು 3,500 ರೂ. ಇದೆ. ಅದೇ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಪ್ರತಿ ಬ್ಯಾಟ್‌ನ ಮೌಲ್ಯವು ಸುಮಾರು 220 ಡಾಲರ್‌ಗಳಿಂದ 450 ಡಾಲರ್‌ಗಳಷ್ಟಿರುತ್ತದೆ. ಅಂದರೆ ಸುಮಾರು 16 ಸಾವಿರದಿಂದ 33 ಸಾವಿರ ರೂ. ಆಗಿರುತ್ತದೆ.

ವಿದೇಶಗಳಲ್ಲೂ ರಾರಾಜಿಸುತ್ತಿರುವ ಅಮುಲ್, ನಂದಿನಿ ಬ್ರ್ಯಾಂಡ್: 
ಗುಜರಾತಿನ ಹಾಲು ಉತ್ಪಾದನಾ ಸಹಕಾರ ಮಂಡಳಿ ಅಮುಲ್ ಭಾರತದ ವಿಶಿಷ್ಟ ರುಚಿಗಳನ್ನು ಜಗತ್ತಿಗೆ ನೀಡುತ್ತಿದೆ. ವಿಶ್ವದ ಸೂಪರ್ ಪವರ್ ಎನಿಸಿಕೊಂಡಿರುವ ಅಮೆರಿಕದಲ್ಲೂ ಅಮುಲ್ ಉತ್ಪನ್ನಗಳ ಮಾರಾಟ ಆಗುತ್ತಿದೆ. ಈ ಅಂತರಾಷ್ಟ್ರೀಯ ವಿಸ್ತರಣೆಯು ಭಾರತೀಯ ಡೈರಿ ಉತ್ಪನ್ನಗಳ ಜಾಗತಿಕ ಆಕರ್ಷಣೆ ಮತ್ತು ಭಾರತದ ಸಿಹಿ ಖಾದ್ಯಗಳ ರುಚಿಯನ್ನು ಜಾಗತಿಕವಾಗಿ ಬೆಳೆಸಲು ಸಹಾಯ ಮಾಡುತ್ತಿದೆ. ಭಾರತವು 1950 ಮತ್ತು 1960ರ ದಶಕಗಳಲ್ಲಿ ಹಾಲಿನ ಉತ್ಪಾದನೆಯಲ್ಲಿ ಕೊರತೆ ಎದುರಿಸಿ ವಿದೇಶಗಳಿಂದ ಹಾಲು ತರಿಸಿಕೊಳ್ಳುತ್ತಿತ್ತು. ಆದರೆ ಈಗ ವಿಶ್ವದ ಹಾಲಿನ ಉತ್ಪಾದನೆಯ ಸುಮಾರು 21 ಪ್ರತಿಶತವನ್ನು ಭಾರತ ಹೊಂದಿದೆ. ವಿಶ್ವದ ಅತಿದೊಡ್ಡ ಭಾರತೀಯ ಡೈರಿ ಬ್ರ್ಯಾಂಡ್ ಅಮುಲ್‌ನ ಉತ್ಪನ್ನಗಳನ್ನು ಪ್ರಪಂಚದಾದ್ಯಂತ 50ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡಲಾಗುತ್ತದೆ. ಇದೇ ಸಾಲಿಗೆ ಕರ್ನಾಕಟದ ನಂದಿನಿ ಹಾಲಿನ ಬ್ರ್ಯಾಂಡ್ ಕೂಡ ಕಾಲಿಟ್ಟಿದ್ದು, ದುಬೈ ಸೇರಿದಂತೆ ವಿವಿಧ ದೇಶಗಳಿಗೆ ನಂದಿನಿ ಬ್ರ್ಯಾಂಡ್‌ನ ಹಲವು ಉತ್ಪನ್ನಗಳು ರಫ್ತು ಆಗುತ್ತಿವೆ.

ಭಾರತದ UPI ವ್ಯವಸ್ಥೆಗೆ ಈಗ ಜಾಗತಿಕವಾಗಿ ಮನ್ನಣೆ:
ಭಾರತದ ಏಕೀಕೃತ ಪಾವತಿಗಳ ಇಂಟರ್ಫೇಸ್ ( Unified Payments Interface- UPI) ವ್ಯವಸ್ಥೆಯು ಈಗ ಜಾಗತಿಕವಾಗಿದೆ. ಭಾರತದ UPI ವ್ಯವಸ್ಥೆಯು ಈಗ ಅನೇಕ ದೇಶಗಳಲ್ಲಿ ತಡೆರಹಿತ ಡಿಜಿಟಲ್ ಪಾವತಿಗಳನ್ನು ಸಕ್ರಿಯಗೊಳಿಸುತ್ತದೆ. ಭೂತಾನ್, ಓಮನ್, ಮಾರಿಷಸ್, ಶ್ರೀಲಂಕಾ, ನೇಪಾಳ, ಫ್ರಾನ್ಸ್ ಮತ್ತು ಯುಎಇಯಲ್ಲಿ UPI ಪಾವತಿಗಳನ್ನು ಮಾಡಬಹುದು. ಅಲ್ಲದೆ, ಆಗ್ನೇಯ ಏಷ್ಯಾದ ರಾಷ್ಟ್ರಗಳಾದ ಮಲೇಷ್ಯಾ, ಥೈಲ್ಯಾಂಡ್, ಫಿಲಿಪೈನ್ಸ್, ವಿಯೆಟ್ನಾಂ, ಸಿಂಗಾಪುರ್, ಕಾಂಬೋಡಿಯಾ, ದಕ್ಷಿಣ ಕೊರಿಯಾ, ಜಪಾನ್, ತೈವಾನ್, ಹಾಂಗ್ ಕಾಂಗ್‌ಗಳಲ್ಲಿ QR ಆಧಾರಿತ UPI ಪಾವತಿಗಳನ್ನು ಪ್ರಾರಂಭಿಸಲು NIPL ಲಿಕ್ವಿಡ್ ಗ್ರೂಪ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.

ಸ್ವದೇಶಿ ನಿರ್ಮಿತ ಬ್ರಹ್ಮೋಸ್ ಕ್ಷಿಪಣಿಗಳು: 
ನಮ್ಮ ದೇಶವು ಇತ್ತೀಚೆಗೆ ರಕ್ಷಣಾ ಕ್ಷೇತ್ರದಲ್ಲಿ  ಉತ್ತಮ ಪ್ರಗತಿ ಸಾಧಿಸುತ್ತಿದೆ. ಭಾರತವೇ ಯುದ್ಧ ವಿಮಾನಗಳು, ಕ್ಷಿಪಣಿಗಳು ಮತ್ತು ರಕ್ಷಣಾ ಸಾಧನಗಳನ್ನು ತಯಾರಿಸುತ್ತದೆ. ಇತ್ತೀಚೆಗಷ್ಟೇ ಭಾರತ ತಯಾರಿಸಿದ ಬ್ರಹ್ಮೋಸ್ ಸೂಪರ್ ಸಾನಿಕ್ ಕ್ಷಿಪಣಿಗಳನನ್ನು ಫಿಲಿಪೈನ್ಸ್ ದೇಶವು ಆಮದು ಮಾಡಿಕೊಂಡಿದೆ. ಭಾರತ-ರಷ್ಯಾ ಜಂಟಿ ಉದ್ಯಮದ ಬ್ರಹ್ಮೋಸ್ ಕ್ಷಿಪಣಿಗಳು ಪ್ರಸ್ತುತ ದಕ್ಷಿಣ ಚೀನಾ ಸಮುದ್ರದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಈ ಬೆಳವಣಿಗೆಯು ಭಾರತದ ಕಾರ್ಯತಂತ್ರದ ರಕ್ಷಣಾ ಸಾಮರ್ಥ್ಯಗಳು ಮತ್ತು ಜಾಗತಿಕ ಭದ್ರತೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ.

Latest Videos

click me!