ಈ 10 ದಾರಿ ನಿಮಗೆ ತಿಳಿದಿದ್ದರೆ, ಶ್ರೀಮಂತಿಕೆಯ ಮಾರ್ಗದಲ್ಲಿ ನೀವು ನಡೆಯಬಹುದು!

First Published | Nov 8, 2024, 10:40 PM IST

ಹಣಕಾಸಿನ ಅರಿವು ಮತ್ತು ಸರಿಯಾದ ಹೂಡಿಕೆ ನಿರ್ಧಾರಗಳು ಶ್ರೀಮಂತಿಕೆಗೆ ದಾರಿ. ಈ 10 ಮಾರ್ಗಗಳ ಮೂಲಕ ಹಣ ಗಳಿಸುವುದು ಮತ್ತು ಸಂಪತ್ತನ್ನು ನಿರ್ಮಿಸುವುದು ಹೇಗೆಂದು ತಿಳಿಯಿರಿ.

ಹಣಕಾಸಿನ ಅರಿವು ನಿಮ್ಮಲ್ಲಿದ್ದರೆ, ಅದರ ಕೌಶಲವನ್ನು ನೀವು ಕರಗತ ಮಾಡಿಕೊಂಡಿದ್ದರೆ ಹಣ ಗಳಿಸುವುದು ಕಷ್ಟದ ಕೆಲಸವೇನಲ್ಲ. ಆದರೆ, ಸರಿಯಾದ ನಿರ್ಧಶರಗಳು ಇಲ್ಲಿ ಮುಖ್ಯ. ಹಣವನ್ನು ಕೂಡಿಟ್ಟರೆ ಶ್ರೀಮಂತರಾಗೋದಿಲ್ಲ. ಹಣವನ್ನು ಹೂಡಿಟ್ಟರೆ ಮಾತ್ರ ಶ್ರೀಮಂತಿಕೆ ಒಲಿಯುತ್ತದೆ ಅನ್ನೋ ಮಾತು ನೆನಪಲ್ಲಿ ಇರಲಿ. ಹಾಗಾಗಿ ನೀವು ಈ 10 ಮಾರ್ಗ ತಿಳಿದಿದ್ದರೆ, ಶ್ರೀಮಂತರಾಗೋದು ಕಷ್ಟವೇನಲ್ಲ.
 

ಮಾರುಕಟ್ಟೆ ಸಮಯ ನಿರ್ಧರಿಸಿ ಈಕ್ವಿಟಿ ಹೂಡಿಕೆದಾರರಾಗಬೇಡಿ

ಈಕ್ವಿಟಿ ಹೂಡಿಕೆಗೆ ಈ ಸಮಯ ಒಳ್ಳೆಯದಾ? ಆ ಸಮಯ ಒಳ್ಳೆಯದಾ ಅನ್ನೋದೇ ಹೂಡಿಕೆದಾರರಿಗೆ ಅಪಾಯಕಾರಿ ತಂತ್ರ ಎಂದು ರಿಯಲ್ ಎಸ್ಟೇಟ್ ಮತ್ತು ಫಂಡ್ ಮ್ಯಾನೇಜ್‌ಮೆಂಟ್ ಸಂಪನ್ಮೂಲ ತಜ್ಞ ಸಿದ್ಧಾರ್ಥ್ ಮೌರ್ಯ ಹೇಳುತ್ತಾರೆ. ಮಾರುಕಟ್ಟೆ ಸಮಯಕ್ಕೆ ಯೋಚನೆ ಮಾಡುವ ಬದಲು, ದೀರ್ಘಕಾಲದ ಹಣಕಾಸಿನ ಗುರಿಗಳು, ರಿಸ್ಕ್‌ ಮೇಲೆ ಹೂಡಿಕೆಯನ್ನು ಮಾಡುವುದು ಉತ್ತಮ.
 

Latest Videos


ಒಂದೇ ಬಾಸ್ಕಟ್‌ನಲ್ಲಿ ಎಲ್ಲಾ ಮೊಟ್ಟೆಗಳು ಬೇಡ, ಹೂಡಿಕೆಯಲ್ಲಿ ವಿವಿಧತೆ

ಮಾರುಕಟ್ಟೆಯ ಒಂದು ಪ್ರಸಿದ್ಧ ಮಾತು. ಒಂದೇ ಬಾಸ್ಕೆಟ್‌ನಲ್ಲಿ ಎಲ್ಲಾ ಮೊಟ್ಟೆಗಳನ್ನು ಇಡುವುದು ಮೂರ್ಖತನ. ಹೂಡಿಕೆಯಲ್ಲಿ ವಿವಿಧತೆ ಇದ್ದರೆ ಮಾತ್ರವೇ ಯಶಸ್ಸು ಸಾಧ್ಯ. ಈಕ್ವಿಟಿ ಕ್ವಿಕ್‌ ಆಗಿ ಹಣ ನೀಡಬಹುದು ಎನ್ನುವ ಕಾರಣಕ್ಕೆ ಎಲ್ಲಾ ಹಣವನ್ನು ಅಲ್ಲಿಯೇ ಹೂಡಿಕೆ ಮಾಡೋದು ಒಳ್ಳೆಯದಲ್ಲ. ಈಕ್ವಿಟಿಯೊಂದಿಗೆ ರಿಯಲ್‌ ಎಸ್ಟೇಟ್‌, ಚಿನ್ನ ಮತ್ತು ಬೆಳ್ಳಿಗಳ ಮೇಲೂ ಹೂಡಿಕೆ ಮಾಡಬೇಕು. ಈಕ್ವಿಟಿ-ಡೆಟ್‌ ಪೋರ್ಟ್‌ಪೋಲಿಯೋ ನಿಮ್ಮದಾಗಿರಬೇಕು.

ತುರ್ತು ಅವಶ್ಯಕತೆಗಾಗಿ ಲಿಕ್ವಿಡ್‌ ಫಂಡ್ಸ್‌

ತುರ್ತು ಅಥವಾ ಆಕಸ್ಮಿಕ ನಿಧಿಯು ನಿಮ್ಮ ಒಟ್ಟಾರೆ ಹಣಕಾಸಿನ ಅವಿಭಾಜ್ಯ ಅಂಗವಾಗಿರಬೇಕು. ನಿಮ್ಮ ದೀರ್ಘಕಾಲೀನ ಅಗತ್ಯಗಳಿಗಾಗಿ ಪ್ರಧಾನವಾಗಿ ಮೀಸಲಿಟ್ಟಿರುವ ನಿಮ್ಮ ಹೂಡಿಕೆಗಳಿಗೆ ಅಡ್ಡಿಯಾಗದಂತೆ ಯಾವುದೇ ಹಣಕಾಸಿನ ತುರ್ತುಸ್ಥಿತಿಯನ್ನು ನೋಡಿಕೊಳ್ಳಲು ಇದು ನಿಮಗೆ ಸಹಾಯ ಮಾಡುತ್ತದೆ. ಲಿಕ್ವಿಡ್ ಫಂಡ್‌ಗಳು ಅಲ್ಪಾವಧಿಯ ಸಾಲ ಭದ್ರತೆಗಳಾದ ಟ್ರೆಶರಿ ಬಿಲ್ಸ್‌, ಕಾರ್ಪೋರೇಟ್‌ & ಸರ್ಕಾರಿ ಬಾಂಡ್ಸ್‌ ಮತ್ತು ಠೇವಣಿ ಪ್ರಮಾಣಪತ್ರಗಳಲ್ಲಿ ಹೂಡಿಕೆ ಮಾಡುತ್ತವೆ.ಈ ನಿಧಿಗಳಿಂದ ಉತ್ಪತ್ತಿಯಾಗುವ ಆದಾಯವು ಸಾಮಾನ್ಯವಾಗಿ ಸಾಂಪ್ರದಾಯಿಕ ಉಳಿತಾಯ ಖಾತೆಗಳು ಅಥವಾ ಸ್ಥಿರ ಠೇವಣಿಗಳಿಗಿಂತ ಹೆಚ್ಚಾಗಿರುತ್ತದೆ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ, ಲಿಕ್ವಿಡ್ ಫಂಡ್‌ಗಳಿಂದ ನಿಮ್ಮ ಹೂಡಿಕೆಯನ್ನು ನೀವು ಸುಲಭವಾಗಿ ಹಿಂಪಡೆಯಬಹುದು.
 

ಖಚಿತವಾಗಿ ರಿಟರ್ನ್‌ ಬರುವ ಹೂಡಿಕೆ ಪೋರ್ಟ್‌ಫೋಲಿಯೋದಲ್ಲಿರಲಿ

ಈಕ್ವಿಟಿಗಳಲ್ಲಿ ಹೂಡಿಕೆ ಮಾಡುವ ಉದ್ದೇಶ ಹೆಚ್ಚಿನ ಆದಾಯ ಪಡೆಯುವುದಾಗಿರಬೇಕು. ಸಾರ್ವಜನಿಕ ಭವಿಷ್ಯ ನಿಧಿ (PPF), ಬ್ಯಾಂಕ್ ಸ್ಥಿರ ಠೇವಣಿ (FD ಗಳು), ಹಿರಿಯ ನಾಗರಿಕ ಉಳಿತಾಯ ಯೋಜನೆ (SCSS), ಪೋಸ್ಟ್ ಆಫೀಸ್ ರಾಷ್ಟ್ರೀಯ ಉಳಿತಾಯ ಮಾಸಿಕ ಆದಾಯ ಖಾತೆ (POMIS), ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳು (NSC), ಸುಕನ್ಯಾ ಸಮೃದ್ಧಿ ಮುಂತಾದ ಸ್ಥಿರ-ಆದಾಯ ಹೂಡಿಕೆಗಳು ನಿಮ್ಮ ಪೋರ್ಟ್‌ಫೋಲಿಯೋದಲ್ಲಿರಬೇಕು. ಇವುಗಳು ಖಚಿತ ರಿಟರ್ನ್‌ ನೀಡುವ ಆಯ್ಕೆಗಳು. ಇದರಿಂದಾಗಿ ಅಪಾಯ ಮತ್ತು ಆದಾಯವನ್ನು ನೀವು ಸಮತೋಲನ ಮಾಡಬಹುದು.
 

ಇಪಿಎಫ್‌ನಲ್ಲಿ ಹೂಡಿಕೆ ಮಾಡಿ

ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಭಾರತ ಸರ್ಕಾರದಿಂದ ನಿರ್ವಹಿಸಲ್ಪಡುವ ನಿವೃತ್ತಿ ಉಳಿತಾಯ ಭದ್ರತೆ. PF ಯೋಜನೆಯನ್ನು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ನಿರ್ವಹಿಸುತ್ತದೆ. ಇದಕ್ಕೆ ನೀಡುವ ಬಡ್ಡಿಗೆ ಭಾರತ ಸರ್ಕಾರವೇ ಗ್ಯಾರಂಟಿ ಆಗಿರುವುದರಿಂದ ಅತ್ಯಂತ ಸೇಫ್‌ ಆದ ಹೂಡಿಕೆ ಇದು.
 

ಲೈಫ್‌ & ಟರ್ಮ್‌ ಇನ್ಶುರೆನ್ಸ್‌

ಬದುಕಿನ ಅನಿಶ್ಚಿತತೆ ಹೇಳೋಕೆ ಆಗಲ್ಲ. ಯಾವಾಗ ಏನು ಬೇಕಾದರೂ ಆಗಬಹುದು. ನಾವು ಇಲ್ಲದ ನಂತರವೂ ಕುಟುಂಬ ಸೇಫ್‌ ಆಗಿರಬೇಕಾದಲ್ಲಿ ಜೀವ ವಿಮೆ ಹಾಗೂ ಟರ್ಮ್‌ ಇನ್ಶುರೆನ್ಸ್‌ ಅವಶ್ಯಕ. ಲೈಫ್‌ ಇನ್ಶುರೆನ್ಸ್‌ ಇದ್ದಲ್ಲಿ ಟರ್ಮ್‌ ಇನ್ಶುರೆನ್ಸ್‌ ಇದ್ದಲ್ಲಿ ಜೀವನದಲ್ಲಿ ಮುಂದೇನಾಗುತ್ತದೆ ಅನ್ನೋ ಚಿಂತೆಯೇ ನಿಮಗೆ ಅಗತ್ಯವಿಲ್ಲ.

ಹಣಕಾಸಿನ ವೆಚ್ಚ ನಿರ್ವಹಿಸಿ

ವೈಯಕ್ತಿಕ ಯಶಸ್ಸಿನ ಬಗ್ಗೆ ಎಷ್ಟು ಜಾಗ್ರತೆ ವಹಿಸುತ್ತೀರೋ ಹಣಕಾಸು ಯಶಸ್ಸಿನ ಬಗ್ಗೆ ಅಷ್ಟೇ ಜಾಗ್ರತೆ ಇರಬೇಕು. ನೀವು ಎಲ್ಲಿ ತಪ್ಪುಗಳನ್ನು ಮಾಡಿದ್ದೀರಿ ಮತ್ತು ಹೆಚ್ಚು ಹಣವನ್ನು ಗಳಿಸುವ, ಹೆಚ್ಚು ಹಣವನ್ನು ಉಳಿಸುವ ಮತ್ತು ಭವಿಷ್ಯದಲ್ಲಿ ಹೆಚ್ಚಿನ ಹೂಡಿಕೆಗಳನ್ನು ಮಾಡುವ ನಿಮ್ಮ ಸಾಮರ್ಥ್ಯಕ್ಕೆ ಇನ್ನೂ ಹಾನಿಯುಂಟುಮಾಡುವ ಆಯ್ಕೆಗಳನ್ನು ನೋಡಲು ಇದು ನಿಮಗೆ ಸುಲಭವಾಗುತ್ತದೆ. 

ಹಣಕಾಸಿನ ಟಾರ್ಗೆಟ್‌ ರೂಪಿಸಿ

ಪ್ರತಿಯೊಬ್ಬರೂ ಹೂಡಿಕೆ ಮಾಡುವ ರೀತಿಗಳು ಭಿನ್ನ. ಹೂಡಿಕೆ ಮಾಡುವುದು ಹೇಗೆ, ನಿಮ್ಮ ಹಣವನ್ನು ಎಲ್ಲಿ ಇರಿಸಬೇಕು ಮತ್ತು ಎಷ್ಟು ಹೂಡಿಕೆ ಮಾಡಬೇಕು ಎಂಬುದರ ಕುರಿತು ಇನ್ನಷ್ಟು ತಿಳಿದುಕೊಳ್ಳಲು ನೀವು ವೃತ್ತಿಪರರನ್ನು ಸಂಪರ್ಕ ಮಾಡುವುದು ಅಗತ್ಯ.
 

ಆರ್ಥಿಕವಾಗಿ ಸ್ವತಂತ್ರವಾಗುವ ಹಂಬಲವಿರಲಿ..

ಆರ್ಥಿಕವಾಗಿ ಸ್ವತಂತ್ರವಾಗಬೇಕು ಎನ್ನುವ ಹಂಬಲ ಮಾತ್ರವೇ ಹೆಚ್ಚಿನ ಆದಾಯ ಗಳಿಸಲು ನಿಮಗೆ ಕಾರಣವಾಗುತ್ತದೆ. ನೀವು ವ್ಯರ್ಥ ಮಾಡುವ ಪ್ರತಿ ರೂಪಾಯಿಗೂ ನೀವೇ ಜವಾಬ್ದಾರರಾಗಿರುತ್ತೀರಿ. ಅಗತ್ಯವಿಲ್ಲದ ಸಾಲಗಳನ್ನು ಮಾಡಲು ಹೋಗುವುದೇ ಬೇಡ. ಸಾಲಗಳನ್ನು ಆದಷ್ಟು ಬೇಗ ತೀರಿಸಿಕೊಳ್ಳುವ ಪ್ಲ್ಯಾನ್‌ ನಿಮ್ಮದಾಗಿರಲಿ.

ನಷ್ಟವಾಗುವ ಹೆದರಿಕೆ ಬೇಡ

ಕೆರೆಗೆ ಇಳಿದ ಮೇಲೆ ಈಜಲೇಬೇಕು ಎನ್ನುವಂತೆ, ಹೂಡಿಕೆ ಎಂದರೆ ಲಾಭ ನಷ್ಟಗಳು ಇದ್ದೇ ಇರುತ್ತದೆ. ಅನಗತ್ಯ ಖರ್ಚುಗಳು, ನಷ್ಟವಾಗುವ ವಿಚಾರಗಳ ಮೇಲೆ ಹಣ ಹೂಡಬೇಡಿ. ಲಯಾಬಿಲಿಟಿ ಅಂದರೆ, ಸಾಲಗಳು, ಕಾರ್‌, ಬೈಕ್‌, ಐಷಾರಾಮಿ ಗೂಡ್ಸ್‌ಗಳು ಇವುಗಳ ಖರೀದಿಯಲ್ಲಿ ಮಿತಿ ಇರಿಲಿ. ಇಎಂಐಗಳಲ್ಲಿ ಕೊಂಡುಕೊಳ್ಳುವ ಸಾಹಸ ಬೇಡ. ಅನಗತ್ಯ ಪ್ರಚೋದನೆಗಳು ನೀವು ಹಣವನ್ನು ಖರ್ಚು ಮಾಡುವ ಅಗತ್ಯವಿಲ್ಲದ ಸರಕುಗಳನ್ನು ಖರೀದಿಸಲು ಕಾರಣವಾಗಬಹುದು ಇದರ ಬಗ್ಗೆ ಎಚ್ಚರಿಕೆ ಇರಲಿ.
 

click me!