ಅಕ್ಟೋಬರ್‌ನಲ್ಲಿ ಈ ವರ್ಷದ ಹಬ್ಬದ ಸೀಸನ್‌ಗೆ ಚಾಲನೆ ಸಿಗಲಿದೆ. ಮಾರಾಟ ಹೆಚ್ಚಿಸಿಕೊಳ್ಳುವ ಗುರಿಯೊಂದಿಗೆ ಮಾರುತಿ ಸುಜುಕಿ, ಕಿಯಾ, ನಿಸ್ಸಾನ್, ಬಿವೈಡಿ ಸೇರಿದಂತೆ ಹಲವು ಕಂಪನಿಗಳು ತಮ್ಮ ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಲು ಸಿದ್ಧವಾಗಿವೆ. ಜೊತೆಗೆ ಈಗಾಗಲೇ ಮಾರುಕಟ್ಟೆಯಲ್ಲಿರುವ ಕಾರುಗಳ ಮಾಡೆಲ್ ಮೇಲೆ ಆಕರ್ಷಕ ರಿಯಾಯಿತಿಗಳನ್ನು ನೀಡಲಿವೆ. 2024ರ ಅಕ್ಟೋಬರ್‌ನಲ್ಲಿ ಶೋರೂಮ್‌ಗಳಿಗೆ ಬರಲಿರುವ ಕಾರುಗಳ ಪ್ರಮುಖ ವಿವರಗಳನ್ನು ನೋಡೋಣ.
ಅಕ್ಟೋಬರ್ 3ಕ್ಕೆ ಬರಲಿದೆ ಹೊಸ ಕಿಯಾ ಕಾರ್ನಿವಲ್: ದಕ್ಷಿಣ ಕೊರಿಯಾದ ವಾಹನ ತಯಾರಕ ಕಂಪನಿಯಾದ ಕಿಯಾ, ಹೊಸ ಕಿಯಾ ಕಾರ್ನಿವಲ್ (ನಾಲ್ಕನೇ ತಲೆಮಾರಿನ ಫೇಸ್‌ಲಿಫ್ಟ್) ಮತ್ತು ಇವಿ9 ಎಲೆಕ್ಟ್ರಿಕ್ ಎಸ್‌ಯುವಿಯ ಬೆಲೆಯನ್ನು 2024ರ ಅಕ್ಟೋಬರ್ 3 ರಂದು ಪ್ರಕಟಿಸಲಿದೆ. ಕಾರ್ನಿವನ್‌ನ ಒಳಾಂಗನ ಹಾಗೂ ಹೊರಾಂಗಣದಲ್ಲಿ ದೊಡ್ಡ ಬದಲಾವಣೆಗಳು ಇರಲಿದೆ. ಆದರೆ, ಎಂಜಿನ್ ಸೆಟಪ್‌ನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಲಿಮೋಸಿನ್ ಮತ್ತು ಲಿಮೋಸಿನ್ ಪ್ಲಸ್ ಎಂಬ ಎರಡು ರೂಪಾಂತರಗಳಲ್ಲಿ ಇದು ಲಭ್ಯವಿರುತ್ತದೆ. 50 ಲಕ್ಷ ರೂಪಾಯಿ ಬೆಲೆ ಇರಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಈ ಅಪ್‌ಡೇಟ್‌ನೊಂದಿಗೆ 7 ಆಸನ ಸಂರಚನೆಯಲ್ಲಿ ಮಾತ್ರ ಎಂಪಿವಿ ಲಭ್ಯವಿರುತ್ತದೆ. ಮಧ್ಯದ ಸಾಲಿನಲ್ಲಿ ಕ್ಯಾಪ್ಟನ್ ಸೀಟುಗಳು ಮತ್ತು ಮೂರನೇ ಸಾಲಿನಲ್ಲಿ ಬೆಂಚ್-ಟೈಪ್ ವ್ಯವಸ್ಥೆ ಇರುತ್ತದೆ. 193 bhp ಪವರ್ ಮತ್ತು 441 Nm ಟಾರ್ಕ್ ಉತ್ಪಾದಿಸುವ 2.2L, 4-ಸಿಲಿಂಡರ್ ಡೀಸೆಲ್ ಎಂಜಿನ್ ಅನ್ನು ಹೊಸ ಕಾರ್ನಿವಲ್‌ನಲ್ಲಿಯೂ ನೀಡಲಾಗುತ್ತದೆ.
ಅಕ್ಟೋಬರ್ 3ಕ್ಕೆ ಬರಲಿದೆ ಕಿಯಾ EV9: ಕಿಯಾ EV9 ಭಾರತದಲ್ಲಿ ಕಿಯಾದ ಅತ್ಯಂತ ದುಬಾರಿ ಕಾರು ಆಗಿರುತ್ತದೆ. ಇದು ಟಾಪ್-ಎಂಡ್ GT-ಲೈನ್ AWD, 6-ಆಸನಗಳ ರೂಪಾಂತರದಲ್ಲಿ ಮಾತ್ರ ಲಭ್ಯವಿರುತ್ತದೆ. ಇದು 384 bhp ಪವರ್ ಮತ್ತು 700 Nm ಟಾರ್ಕ್ ಉತ್ಪಾದಿಸುವ 99.8 kWh ಬ್ಯಾಟರಿ ಪ್ಯಾಕ್ ಮತ್ತು ಡ್ಯುಯಲ್ ಎಲೆಕ್ಟ್ರಿಕ್ ಮೋಟಾರ್‌ಗಳನ್ನು ಹೊಂದಿರುತ್ತದೆ. AWD ಸೆಟಪ್‌ನೊಂದಿಗೆ ಬರುವ ಈ ಎಸ್‌ಯುವಿ, ಒಂದು ಬಾರಿ ಚಾರ್ಜ್ ಮಾಡಿದರೆ 561 ಕಿ.ಮೀ ARAI ಪ್ರಮಾಣೀಕೃತ ರೇಂಜ್ ನೀಡುತ್ತದೆ ಎಂದು ಹೇಳಲಾಗುತ್ತದೆ. DC ಫಾಸ್ಟ್ ಚಾರ್ಜರ್ ಬಳಸಿ ಇದರ ಬ್ಯಾಟರಿಯನ್ನು 24 ನಿಮಿಷಗಳಲ್ಲಿ 10% ರಿಂದ 80% ವರೆಗೆ ಚಾರ್ಜ್ ಮಾಡಬಹುದು. ವೈಶಿಷ್ಟ್ಯಗಳ ವಿಷಯದಲ್ಲಿ, ಡ್ಯುಯಲ್-ಡಿಸ್ಪ್ಲೇ ಸೆಟಪ್, HUD, ಡ್ಯುಯಲ್ ಎಲೆಕ್ಟ್ರಿಕ್ ಸನ್‌ರೂಫ್‌ಗಳು, 14-ಸ್ಪೀಕರ್ ಮೆರಿಡಿಯನ್ ಆಡಿಯೊ ಸಿಸ್ಟಮ್, 10 ಏರ್‌ಬ್ಯಾಗ್‌ಗಳು, VSM, ಲೆವೆಲ್ 2 ADAS ಮುಂತಾದ ವೈಶಿಷ್ಟ್ಯಗಳನ್ನು ಇದು ಹೊಂದಿದೆ.
ಅಕ್ಟೋಬರ್ 4ಕ್ಕೆ ಬರಲಿದೆ ನಿಸ್ಸಾನ್ ಮ್ಯಾಗ್ನೈಟ್ ಫೇಸ್‌ಲಿಫ್ಟ್: ಜಪಾನಿನ ಬ್ರಾಂಡ್ ನಿಸ್ಸಾನ್ ಇಂಡಿಯಾ 2024ರ ಅಕ್ಟೋಬರ್ 4 ರಂದು ಮ್ಯಾಗ್ನೈಟ್ ಫೇಸ್‌ಲಿಫ್ಟ್‌ನ ಬೆಲೆಯನ್ನು ಬಹಿರಂಗಪಡಿಸಲಿದೆ. ಫೇಸ್‌ಲಿಫ್ಟ್ ಜೊತೆಗೆ, ಕಾರು ತಯಾರಕ ಕಂಪನಿಯು ತನ್ನ LHD (ಎಡಗೈ ಡ್ರೈವ್) ಆವೃತ್ತಿಯನ್ನು ತಯಾರಿಸಲು ಮತ್ತು ರಫ್ತು ಮಾಡಲು ಪ್ರಾರಂಭಿಸುತ್ತದೆ. RHD (ಬಲಗೈ ಡ್ರೈವ್) ಮ್ಯಾಗ್ನೈಟ್ ಅನ್ನು ಈಗಾಗಲೇ ತಯಾರಿಸಲಾಗುತ್ತಿದೆ ಮತ್ತು ರಫ್ತು ಮಾಡಲಾಗುತ್ತಿದೆ. ಒಳಾಂಗಣ ಮತ್ತೊ ಹೊರಾಂಗಣದಲ್ಲಿ ಬದಲಾವಣೆಗಳನ್ನು ನಿರೀಕ್ಷಿಸಲಾಗಿದೆ. ಸ್ವಲ್ಪ ಪರಿಷ್ಕೃತವಾದ ಮುಂಭಾಗದ ಗ್ರಿಲ್, ಹೊಸ ಎಲೆಕ್ಟ್ರಾನಿಕ್ ಡಿಆರ್‌ಎಲ್‌ಗಳು, ಸಣ್ಣ ಬದಲಾವಣೆ ಮಾಡಿದ ಹೆಡ್‌ಲ್ಯಾಂಪ್‌ಗಳು ಮತ್ತು ಹೊಸ ಡೈಮಂಡ್-ಕಟ್ ಅಲಾಯ್ ವೀಲ್‌ಗಳನ್ನು ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಯಲ್ಲಿ ನೀಡಲಾಗುತ್ತದೆ. ಒಳಭಾಗದಲ್ಲಿ, ಹೊಸ ಟ್ರಿಮ್‌ಗಳು ಮತ್ತು ಸೀಟ್ ಅಪ್‌ಹೋಲ್‌ಸ್ಟರಿ ಮತ್ತು ಕೆಲವು ಹೆಚ್ಚುವರಿ ವೈಶಿಷ್ಟ್ಯಗಳು ಇರಬಹುದು. ನವೀಕರಿಸಿದ ಮ್ಯಾಗ್ನೈಟ್ 72 bhp, 1.0L NA ಎಂಜಿನ್ ಮತ್ತು 100 bhp, 1.0L ಟರ್ಬೊ ಪೆಟ್ರೋಲ್ ಎಂಜಿನ್‌ನಿಂದ ಶಕ್ತಿ ಪಡೆಯುತ್ತದೆ.
ಅಕ್ಟೋಬರ್ 8ಕ್ಕೆ ಬರಲಿದೆ ಬಿವೈಡಿ eMax 7: e6 ಎಲೆಕ್ಟ್ರಿಕ್ ಎಂಪಿವಿಯ ಹೆಚ್ಚು ನವೀಕರಿಸಿದ ಆವೃತ್ತಿಯಾದ BYD eMax 7, 2024ರ ಅಕ್ಟೋಬರ್ 8 ರಂದು ಬಿಡುಗಡೆಯಾಗಲಿದೆ. ಈ ಮಾಡೆಲ್ ಮೂರು-ಸಾಲು ಸೀಟಿಂಗ್ ಲೇಔಟ್ ಮತ್ತು ಹೆಚ್ಚು ಸುಧಾರಿತ ತಂತ್ರಜ್ಞಾನದೊಂದಿಗೆ ಬರುತ್ತದೆ. ADAS ಸೂಟ್, ಫಿಕ್ಸೆಡ್ ಪನೋರಮಿಕ್ ಗ್ಲಾಸ್ ರೂಫ್, ಹೆಚ್ಚು ಪ್ರೀಮಿಯಂ ಸ್ವಿಚ್‌ಗಿಯರ್, ಸಾಫ್ಟ್-ಟಚ್ ಮೆಟೀರಿಯಲ್‌ಗಳು, ಫಾಕ್ಸ್ ವುಡ್ ಮತ್ತು ಅಲ್ಯೂಮಿನಿಯಂ ಇನ್ಸರ್ಟ್‌ಗಳೊಂದಿಗೆ ನವೀಕರಿಸಿದ ಸೆಂಟರ್ ಕನ್ಸೋಲ್ ಅನ್ನು ಇದು ಹೊಂದಿರುತ್ತದೆ. ಜಾಗತಿಕವಾಗಿ, eMax 7 55.4kWh ಮತ್ತು 71.8kWh ಬ್ಯಾಟರಿ ಆಯ್ಕೆಗಳಲ್ಲಿ ಲಭ್ಯವಿದೆ. ಕ್ರಮವಾಗಿ 420 ಕಿ.ಮೀ ಮತ್ತು 530 ಕಿ.ಮೀ ರೇಂಜ್ ನೀಡುತ್ತದೆ ಎಂದು ಹೇಳಲಾಗುತ್ತದೆ. ಮೊದಲ ಬ್ಯಾಟರಿ 163 bhp ಪವರ್ ಮತ್ತು 310 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎರಡನೆಯದು 204 bhp ಪವರ್ ಮತ್ತು 310 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಅಕ್ಟೋಬರ್ 9ಕ್ಕೆ ಮರ್ಸಿಡಿಸ್ ಇ-ಕ್ಲಾಸ್ LWB: ಮರ್ಸಿಡಿಸ್ ಇ-ಕ್ಲಾಸ್ LWB ಯ ಮಾರುಕಟ್ಟೆ ಬಿಡುಗಡೆಯು 2024ರ ಅಕ್ಟೋಬರ್ 9 ರಂದು ನಡೆಯಲಿದೆ. ಇದರ ಹಿಂದಿನ ಮಾದರಿಗೆ ಹೋಲಿಸಿದರೆ, ಹೊಸ ತಲೆಮಾರಿನ ಮಾಡೆಲ್ 14 mm ಉದ್ದ, 13 mm ಎತ್ತರ ಮತ್ತು 15 mm ಉದ್ದದ ವೀಲ್‌ಬೇಸ್ ಅನ್ನು ಹೊಂದಿರುತ್ತದೆ. ವಾಹನವು ಸಮಗ್ರ ಕಾಸ್ಮೆಟಿಕ್ ಬದಲಾವಣೆಗಳಿಗೆ ಒಳಗಾಗಲಿದೆ. ಒಳಭಾಗದಲ್ಲಿರುವ ಪ್ರಮುಖ ಆಕರ್ಷಣೆಯೆಂದರೆ 14.4-ಇಂಚಿನ ಸೆಂಟ್ರಲ್ ಟಚ್‌ಸ್ಕ್ರೀನ್, 12.3-ಇಂಚಿನ ಪ್ಯಾಸೆಂಜರ್ ಟಚ್‌ಸ್ಕ್ರೀನ್ ಮತ್ತು ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಒಳಗೊಂಡಿರುವ ಮರ್ಸಿಡಿಸ್‌ನ ಸೂಪರ್‌ಸ್ಕ್ರೀನ್ ಆಗಿದೆ. ಸ್ಟ್ಯಾಂಡರ್ಡ್ ಬ್ಲ್ಯಾಕ್ ಡ್ಯಾಶ್‌ಬೋರ್ಡ್‌ನೊಂದಿಗೆ ಮೂರು ಒಳಾಂಗಣ ಬಣ್ಣ ಆಯ್ಕೆಗಳು ಖರೀದಿದಾರರಿಗೆ ಲಭ್ಯವಿರುತ್ತವೆ. ಬರ್ಮೆಸ್ಟರ್‌ನ 4D ಸರೌಂಡ್ ಸೌಂಡ್ ಸಿಸ್ಟಮ್, ಮೆಮೊರಿ ಕಾರ್ಯದೊಂದಿಗೆ ಡ್ರೈವರ್ ಸೀಟ್ ಮತ್ತು 26 ರಿಂದ 36 ಡಿಗ್ರಿಗಳವರೆಗೆ ಹಿಂದಕ್ಕೆ ಒರಗಬಹುದಾದ ಬ್ಯಾಕ್‌ರೆಸ್ಟ್ ಪ್ರಮುಖ ವೈಶಿಷ್ಟ್ಯಗಳಾಗಿವೆ. ಎಂಜಿನ್ ಶ್ರೇಣಿಯು 204 bhp, 2.0L ಟರ್ಬೊ ಪೆಟ್ರೋಲ್ ಎಂಜಿನ್ ಮತ್ತು 197 bhp, 2.0L ಟರ್ಬೊ ಡೀಸೆಲ್ ಎಂಜಿನ್ ಅನ್ನು ಒಳಗೊಂಡಿದೆ, ಎರಡೂ 48V ಮೈಲ್ಡ್ ಹೈಬ್ರಿಡ್ ಸಿಸ್ಟಮ್‌ನೊಂದಿಗೆ 23 bhp ಪವರ್ ಮತ್ತು 205 Nm ಟಾರ್ಕ್ ಅನ್ನು ನೀಡುತ್ತದೆ. 9-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಇರಲಿದೆ.
ಹೊಸ ತಲೆಮಾರಿನ ಮಾರುತಿ ಡಿಜೈರ್: ಹೊಸ ತಲೆಮಾರಿನ ಮಾರುತಿ ಡಿಜೈರ್ ಅಕ್ಟೋಬರ್‌ನಲ್ಲಿ ಬಿಡುಗಡೆಯಾಗಲಿದೆ. ಆದರೆ ಬಿಡುಗಡೆ ದಿನಾಂಕ ಇನ್ನೂ ಘೋಷಣೆಯಾಗಿಲ್ಲ. ಕಾಂಪ್ಯಾಕ್ಟ್ ಸೆಡಾನ್‌ನ ವಿನ್ಯಾಸವು ಸ್ವಿಫ್ಟ್ ಹ್ಯಾಚ್‌ಬ್ಯಾಕ್‌ಗಿಂತ ಸಂಪೂರ್ಣವಾಗಿ ಭಿನ್ನವಾಗಿರುತ್ತದೆ. ಎಲೆಕ್ಟ್ರಿಕ್ ಸನ್‌ರೂಫ್ ಸೇರ್ಪಡೆಯು ಕಾರಿನ ಪ್ರಮುಖ ನವೀಕರಣಗಳಲ್ಲಿ ಒಂದಾಗಿದೆ. ಒಂಬತ್ತು ಇಂಚಿನ ಫ್ರೀಸ್ಟ್ಯಾಂಡಿಂಗ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 4.2 ಇಂಚಿನ ಡಿಜಿಟಲ್ MID ಹೊಂದಿರುವ ಅನಲಾಗ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಕ್ಲೈಮೇಟ್ ಕಂಟ್ರೋಲ್ ಸಿಸ್ಟಮ್‌ನಂತಹ ವೈಶಿಷ್ಟ್ಯಗಳೊಂದಿಗೆ ಹೊಸ ಡಿಜೈರ್‌ನ ಹೈಯರ್ ಟ್ರಿಮ್‌ಗಳು ಬರುವ ನಿರೀಕ್ಷೆಯಿದೆ. 82 bhp ಪವರ್ ಮತ್ತು 112 Nm ಟಾರ್ಕ್ ಅನ್ನು ಉತ್ಪಾದಿಸುವ ಸ್ವಿಫ್ಟ್‌ನ 1.2L ಮೂರು-ಸಿಲಿಂಡರ್ K-ಸೀರೀಸ್ ಪೆಟ್ರೋಲ್ ಎಂಜಿನ್ 2024ರ ಮಾರುತಿ ಡಿಜೈರ್‌ಗೆ ಶಕ್ತಿ ನೀಡುತ್ತದೆ. ಮ್ಯಾನ್ಯುವಲ್ ಮತ್ತು AMT ಗೇರ್‌ಬಾಕ್ಸ್‌ಗಳು ಸಹ ಲಭ್ಯವಿರುತ್ತವೆ.