FIFA World Cup: ವಿಶ್ವ ನಂ.2 ಬಲಿಷ್ಠ ಬೆಲ್ಜಿಯಂ ಔಟ್, ಮೊರಾಕ್ಕೊ ಇನ್..!

By Kannadaprabha News  |  First Published Dec 2, 2022, 9:40 AM IST

ಫಿಫಾ ವಿಶ್ವಕಪ್ ಟೂರ್ನಿಯಿಂದ ಬಲಿಷ್ಠ ಬೆಲ್ಜಿಯಂ ತಂಡ ಗ್ರೂಪ್ ಹಂತದಲ್ಲೇ ಔಟ್
ಕ್ರೊವೇಷಿಯಾ ಎದುರು ಡ್ರಾಗೆ ತೃಪ್ತಿಪಟ್ಟ ವಿಶ್ವದ ನಂ.2 ಶ್ರೇಯಾಂಕಿತ ಬೆಲ್ಜಿಯಂ
ಮೊರಾಕ್ಕೊ, ಕ್ರೊವೇಷಿಯಾ ಪ್ರೀ ಕ್ವಾರ್ಟರ್ ಫೈನಲ್‌ಗೆ ಲಗ್ಗೆ


ಅಲ್‌ ರಯ್ಯನ್‌(ಡಿ.02): ವಿಶ್ವ ನಂ.2 ಬೆಲ್ಜಿಯಂ ವಿಶ್ವಕಪ್‌ನ ಗುಂಪು ಹಂತದಲ್ಲೇ ಹೊರಬಿದ್ದಿದೆ. ಗುರುವಾರ ನಡೆದ ಕ್ರೊವೇಷಿಯಾ ವಿರುದ್ಧದ ಪಂದ್ಯದಲ್ಲಿ ಗೋಲು ರಹಿತ ಡ್ರಾಗೆ ತೃಪ್ತಿಪಟ್ಟಬೆಲ್ಜಿಯಂ ನಿರಾಸೆ ಅನುಭವಿಸಿತು. ಹಿರಿಯ ಆಟಗಾರ ರೊಮೆಲು ಲುಕಾಕು 3 ಬಾರಿ ಸುಲಭವಾಗಿ ಗೋಲು ಬಾರಿಸುವ ಅವಕಾಶಗಳನ್ನು ಕೈಚೆಲ್ಲಿದ್ದು, ಬೆಲ್ಜಿಯಂಗೆ ದುಬಾರಿಯಾಯಿತು. ಕಳೆದ ಆವೃತ್ತಿಯ ರನ್ನರ್‌-ಅಪ್‌ ಕ್ರೊವೇಷಿಯಾ 5 ಅಂಕಗಳೊಂದಿಗೆ ‘ಎಫ್‌’ ಗುಂಪಿನಲ್ಲಿ 2ನೇ ಸ್ಥಾನ ಪಡೆದು ನಾಕೌಟ್‌ ಹಂತಕ್ಕೇರಿತು.

ಮೊರಾಕ್ಕೊಗೆ 2-1 ಜಯ

Latest Videos

undefined

ದೋಹಾ: ಕೆನಡಾ ವಿರುದ್ಧ 2-1 ಗೋಲುಗಳ ಗೆಲುವು ಸಾಧಿಸಿದ ಮೊರಾಕ್ಕೊ 1986ರ ಬಳಿಕ ಮೊದಲ ಬಾರಿಗೆ ವಿಶ್ವಕಪ್‌ ನಾಕೌಟ್‌ ಹಂತಕ್ಕೇರುವಲ್ಲಿ ಯಶಸ್ವಿಯಾಯಿತು. 4ನೇ ನಿಮಿಷದಲ್ಲೇ ಹಕಿಮ್‌ ಝಿಯೆಚ್‌ ಗೋಲು ಬಾರಿಸಿ ತಂಡಕ್ಕೆ ಆರಂಭಿಕ ಮುನ್ನಡೆ ಒದಗಿಸಿದರು. 23ನೇ ನಿಮಿಷದಲ್ಲಿ ಯೂಸುಫ್‌ ಎನ್‌-ನೆಸ್ರಿ 2ನೇ ಗೋಲು ದಾಖಲಿಸಿದರು. 40ನೇ ನಿಮಿಷದಲ್ಲಿ ನಯೆಫ್‌ ಬಾರಿಸಿದ ಸ್ವಂತ ಗೋಲಿನ ಪರಿಣಾಮ ಕೆನಡಾ ಖಾತೆ ತೆರೆಯಿತು. ಆದರೆ ಮತ್ತೊಂದು ಗೋಲು ದಾಖಲಿಸಿ ಮೊರಾಕ್ಕೊಗೆ ಹಿನ್ನಡೆ ಉಂಟು ಮಾಡಲು ಸಾಧ್ಯವಾಗಲಿಲ್ಲ.

2-1ರಲ್ಲಿ ಗೆದ್ದರೂ ಮೆಕ್ಸಿಕೋ ಮನೆಗೆ!

ಲುಸೈಲ್‌: ಸೌದಿ ಅರೇಬಿಯಾ ವಿರುದ್ಧ 2-1 ಗೋಲುಗಳ ಅಂತರದಲ್ಲಿ ಗೆದ್ದರೂ ಮೆಕ್ಸಿಕೋ ಗೋಲು ವ್ಯತ್ಯಾಸದ ಆಧಾರದಲ್ಲಿ ಪೋಲೆಂಡ್‌ಗೆ ಮಣಿದು ವಿಶ್ವಕಪ್‌ನಿಂದ ಹೊರಬಿತ್ತು. 3 ಪಂದ್ಯಗಳಲ್ಲಿ ಒಟ್ಟು 2 ಗೋಲು ಬಾರಿಸಿದ ಮೆಕ್ಸಿಕೋ, 3 ಗೋಲು ಬಿಟ್ಟುಕೊಟ್ಟಿತು. ಇದರಿಂದಾಗಿ ತಂಡದ ಗೋಲು ವ್ಯತ್ಯಾಸ -1 ಆದರೆ, 2 ಗೋಲು ಬಾರಿಸಿ 2 ಗೋಲು ಬಿಟ್ಟುಕೊಟ್ಟಪೋಲೆಂಡ್‌ನ ಗೋಲು ವ್ಯತ್ಯಾಸ 0. ಹೀಗಾಗಿ ಪೋಲೆಂಡ್‌ ನಾಕೌಟ್‌ ಹಂತಕ್ಕೆ ಮುನ್ನಡೆಯಿತು. ಮೊದಲ ಪಂದ್ಯದಲ್ಲಿ ಅರ್ಜೆಂಟೀನಾವನ್ನು ಸೋಲಿಸಿದ್ದ ಸೌದಿ, ಈ ಪಂದ್ಯದಲ್ಲಿ ಗೆದ್ದಿದ್ದರೆ ನಾಕೌಟ್‌ ಹಂತಕ್ಕೇರುತ್ತಿತ್ತು.

FIFA World Cup: ಸ್ಪೇನ್‌, ಜರ್ಮನಿ, ಬೆಲ್ಜಿಯಂಗೆ ಪ್ರಿ ಕ್ವಾರ್ಟರ್‌ಗೇರುವ ತವಕ

ವಿಶ್ವಕಪ್‌ನಲ್ಲಿ ಟೈ ಬ್ರೇಕರ್‌ ನಿಯಮ ಬಳಕೆ ಹೇಗೆ?

ಗುಂಪು ಹಂತದಲ್ಲಿ ಎರಡು ತಂಡಗಳು ಅಂಕಗಳಲ್ಲಿ ಸಮಬಲ ಸಾಧಿಸಿದಾಗ ಮೊದಲು ಗೋಲು ವ್ಯತ್ಯಾಸವನ್ನು ಪರಿಗಣಿಸಲಾಗುತ್ತದೆ. ಇದರಲ್ಲೂ ಸಮಬಲ ಸಾಧಿಸಿದರೆ ಆಗ ಮೂರು ಪಂದ್ಯಗಳಲ್ಲಿ ಗಳಿಸಿರುವ ಒಟ್ಟು ಗೋಲುಗಳ ಸಂಖ್ಯೆಯನ್ನು ಲೆಕ್ಕೆಕ್ಕೆ ತೆಗೆದುಕೊಳ್ಳಲಾಗುತ್ತದೆ. ಇದೂ ಸಮಗೊಂಡರೆ ಆಗ ಒಟ್ಟು ಮುಖಾಮುಖಿಯಲ್ಲಿ ಯಾರು ಮೇಲುಗೈ ಸಾಧಿಸಿದ್ದಾರೆ ಎನ್ನುವುದು ಪರಿಗಣನೆಗೆ ಬರಲಿದೆ. ಆ ದಾಖಲೆಯೂ ಒಂದೇ ರೀತಿಯಲ್ಲಿದ್ದರೆ, ಆಗ ಗುಂಪು ಹಂತದಲ್ಲಿ ಆಡಿರುವ ಮೂರು ಪಂದ್ಯಗಳಲ್ಲಿ ಯಾವ ತಂಡ ಕಡಿಮೆ ತಪ್ಪುಗಳನ್ನು ಮಾಡಿ, ಕನಿಷ್ಠ ಹಳದಿ ಕಾರ್ಡ್‌ಗಳನ್ನು ಪಡೆದಿದೆ ಎನ್ನುವುದು ಲೆಕ್ಕಕ್ಕೆ ಬರಲಿದೆ. ಇದರಲ್ಲೂ ಸಮಬಲ ಕಂಡುಬಂದರೆ ಕೊನೆಗೆ ಒಂದು ಪೆಟ್ಟಿಗೆಯೊಳಗೆ ಎರಡೂ ತಂಡಗಳ ಹೆಸರಿರುವ ಚೆಂಡುಗಳನ್ನು ಇರಿಸಿ ಫಿಫಾದ ಆಡಳಿತ ಮಂಡಳಿ ಸದಸ್ಯರೊಬ್ಬರಿಂದ ಒಂದು ಚೆಂಡನ್ನು ಹೊರತೆಗಿಸಲಾಗುತ್ತದೆ. ಲಾಟರಿಯಲ್ಲಿ ಯಾವ ತಂಡದ ಹೆಸರು ಬರುತ್ತದೆಯೋ ಆ ತಂಡ ಮುನ್ನಡೆಯಲಿದೆ.

ಅರ್ಜೆಂಟೀನಾ-ಆಸೀಸ್‌, ಫ್ರಾನ್ಸ್‌-ಪೋಲೆಂಡ್‌ ಫೈಟ್‌

ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ‘ಸಿ’ ಗುಂಪಿನಲ್ಲಿ ಮೊದಲ ಸ್ಥಾನ ಪಡೆದ ಅರ್ಜೆಂಟೀನಾಗೆ ‘ಡಿ’ ಗುಂಪಿನಲ್ಲಿ 2ನೇ ಸ್ಥಾನ ಪಡೆದ ಆಸ್ಪ್ರೇಲಿಯಾ ಎದುರಾಗಲಿದೆ. ಮತ್ತೊಂದು ಪ್ರಿ ಕ್ವಾರ್ಟರ್‌ನಲ್ಲಿ ‘ಡಿ’ ಗುಂಪಿನಲ್ಲಿ ಮೊದಲ ಸ್ಥಾನ ಪಡೆದ ಫ್ರಾನ್ಸ್‌ ಹಾಗೂ ‘ಸಿ’ ಗುಂಪಿನಲ್ಲಿ 2ನೇ ಸ್ಥಾನ ಪಡೆದ ಪೋಲೆಂಡ್‌ ತಂಡಗಳು ಮುಖಾಮುಖಿಯಾಗಲಿವೆ.

click me!