ಮಕ್ಕಳಿಗೆ ಅಡಿಗೆ ಕಲಿಸೋದ್ರಿಂದ ಎಷ್ಟೆಲ್ಲ ಲಾಭಗಳಿವೆ ಗೊತ್ತಾ....

By Suvarna News  |  First Published Apr 4, 2020, 4:50 PM IST

ಈ ಕೊರೋನಾ ಕ್ವಾರಂಟೈನ್ ಸಮಯದಲ್ಲಿ ಮನೆ ತುಂಬಾ ಗಿಜಿಗಿಜಿಗುಟ್ಟೋ ಮಕ್ಕಳನ್ನು ಎಂಗೇಜ್ ಮಾಡುವುದೇ ದೊಡ್ಡ ಸವಾಲಾಗಿದೆ ಅನ್ನೋರು ಅವರನ್ನು ಕಿಚನ್‌ಗೆ ಕರೆದುಕೊಂಡು ಹೋಗಿ. 


ಲಾಕ್‌ಡೌನ್‌ನಿಂದಾಗಿ ದೇಶಕ್ಕೇ ದೇಶವೇ ಮನೆಯೊಳಗೆ ಬಂಧಿಯಾಗಿದೆ. ಮೊದಲೇ ಮನೆಗೆಲಸ, ವರ್ಕ್ ಫ್ರಂ ಹೋಂ ಎಂದು ಬ್ಯುಸಿಯಾಗಿರುವ ಪೋಷಕರಿಗೆ ಶಾಲೆಯೂ ಇಲ್ಲದೆ ಮನೆಯಲ್ಲೇ ಕುಳಿತ ಮಕ್ಕಳನ್ನು ಎಂಗೇಜ್ ಮಾಡಿಡುವುದು ದೊಡ್ಡ ಸವಾಲೇ ಸರಿ. ಅಪ್ಪಾ ಬೋರು, ಅಮ್ಮಾ ಬೋರು ಎಂದು ರಾಗವೆಳೆವ ಮಕ್ಕಳು ಮನೆಯಾಚೆ ಕಾಲಿಡಲಾಗದೆ, ಗೆಳೆಯರು ಸಿಗದೆ ಏನು ಮಾಡುವುದು ತಿಳಿಯದೆ ಟಿವಿ, ಫೋನ್ ಎದುರು ಪ್ರತಿಷ್ಠಾಪಿತರಾಗುತ್ತಿದ್ದಾರೆ. ಆದರೆ, ಅದು ಒಳ್ಳೆಯದಲ್ಲ ಎಂಬ ಟೆನ್ಷನ್ ಪೋಷಕರದು. ಇಂಥ ಸಂದರ್ಭದಲ್ಲಿ ಏನು ಮಾಡಬಹುದು? ಮನೆಯ ಎಲ್ಲ ಕೆಲಸಗಳಲ್ಲಿ ಮಕ್ಕಳನ್ನೂ ಭಾಗಿಯಾಗಿಸಿಕೊಳ್ಳುವುದು ಅತ್ಯುತ್ತಮ ದಾರಿ. ಬೇರೆ ಸಂದರ್ಭದಲ್ಲಾದರೆ ರಜೆಯೆಂದರೆ ಆಡಲು ಓಡುವ ಮಕ್ಕಳನ್ನು ಮನೆಯಲ್ಲೇ ಕೂರಿಸಿ ಏನಾದರೂ ಕೆಲಸ ಕಲಿಸುವುದು ಕಷ್ಟಸಾಧ್ಯ. ಆದರೆ, ಈಗ ಸರಿಯಾದ ಸಮಯ ಸಿಕ್ಕಿದೆ. 

ದೊಡ್ಡವರು ಮಾಡುವ ಕೆಲಸವನ್ನು ತಮಗೆ ವಹಿಸಿದಾಗ ಮಕ್ಕಳು ಖುಷಿಯಿಂದಲೇ ಅದೊಂದು ಆಟವೆಂದುಕೊಂಡು ಮಾಡುತ್ತಾರೆ. ಹಾಗಾಗಿ ಅವರನ್ನು ಮನೆ ಕಸ ಗುಡಿಸುವುದು, ಪಾತ್ರೆ ತೊಳೆಯುವುದು, ಒರೆಸುವುದು, ಜೋಡಿಸುವುದು ಇತ್ಯಾದಿ ಕೆಲಸಗಳಲ್ಲಿ ಭಾಗಿಯಾಗಿಸಿಕೊಳ್ಳಿ. ಇವೆಲ್ಲಕ್ಕಿಂತ ಮುಖ್ಯವಾಗಿ ಅಡುಗೆ ಕೆಲಸದಲ್ಲಿ ಸೇರಿಸಿಕೊಳ್ಳಿ. ಹೌದು, ಲಾಕ್‌ಡೌನ್ ಸಮಯ ಮಕ್ಕಳಿಗೆ ಅಡುಗೆ ಕಲಿಸಲು ಸುಸಮಯ. ಇದರಿಂದ ಮಕ್ಕಳು ಎಂಗೇಜ್ ಆಗಿರುವ ಜೊತೆಗೆ, ಹಲವಾರು ಲಾಭಗಳಿವೆ. ಎಲ್ಲ ಮಕ್ಕಳೂ ಅಡುಗೆ ಕಲಿಯಲೇಬೇಕು. ಏಕೆ ಅಂತ ತಿಳ್ಕೊಳೋಕ್ಕೆ ಮುಂದೆ ಓದಿ.

ನಿಮ್ಮ ಮಗು ಜಗಳಗಂಟನೇ? ಈ ವಾರ್ನಿಂಗ್ ಸೈನ್ಸ್ ಗಮನಿಸಿ

ಕುಕಿಂಗ್ ಕೇವಲ ಟೈಂ ಪಾಸ್ ಅಲ್ಲ
ಕುಕಿಂಗ್ ಎಂಬುದು ಕೇವಲ ಸಮಯ ಕಳೆಯೋಕೆ ಅಲ್ಲ. ಅದೊಂದು ಹುಡುಗ ಹುಡುಗಿ ಎನ್ನದೆ ಎಲ್ಲರೂ ಕಲಿತಿರಲೇಬೇಕಾದ ಲೈಫ್ ಸ್ಕಿಲ್. ಈಗಂತೂ ವಿದೇಶದಂತೆ ನಮ್ಮಲ್ಲಿಯೂ ಕೆಲಸದವರ ಮೇಲೆ ಯಾವುದಕ್ಕೂ ಅವಲಂಬಿತರಾಗಲು ಸಾಧ್ಯವಿಲ್ಲ. ಅವರು ಸಿಗುವುದೇ ಸವಾಲು. ಹಾಗಾಗಿ, ಎಲ್ಲ ವಿಷಯಗಳಲ್ಲೂ ಸ್ವಾವಲಂಬಿಗಳಾಗಿ ಮಕ್ಕಳನ್ನು ಬೆಳೆಸುವುದು ಮುಖ್ಯ. ಇನ್ನು ಅಡುಗೆ ಕೇವಲ ಹೆಣ್ಣುಮಕ್ಕಳ ಕೆಲಸ ಎಂಬ ಕಾಲ ಎಂದೋ ಹಿಂದೋಡಿದೆ. ಈಗ ಪತಿಪತ್ನಿ ಇಬ್ಬರೂ ಗೆಳೆಯರಂತೆ ಸಮಾನರು. ಅದೇ ಸಂತೋಷದಲ್ಲಿ ಅವರು ಬದುಕು ಕಳೆಯಲು ಇಬ್ಬರೂ ಎಲ್ಲ ಕೆಲಸಗಳನ್ನೂ ಹಂಚಿಕೊಂಡು ಮಾಡುವುದು ಮುಖ್ಯ. ಅಡುಗೆ ಕೂಡಾ ಇದಕ್ಕೆ ಹೊರತಲ್ಲ. ಗಂಡುಮಕ್ಕಳು ಪರವೂರಿನಲ್ಲಿ ರೂಂ ಮಾಡಿಕೊಂಡು ಇರುವಾಗ ಹೋಟೆಲ್‌ನ ಹಾಳುಮೂಳು ತಿನ್ನುವ ಬದಲು ಅವರೇ ಅಡುಗೆ ಮಾಡಿಕೊಂಡು ತಿನ್ನುವುದು ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು. ಈ ಎಲ್ಲ ಕಾರಣಗಳಿಗಾಗಿ ಲಿಂಗಬೇಧವಿಲ್ಲದೆ ಮಕ್ಕಳಿಗೆ ಅಡಿಗೆ ಕಲಿಸುವುದು ಮುಖ್ಯ. 

ಸಾಮಾನ್ಯವಾಗಿ ಪೋಷಕರು ಮಕ್ಕಳು ಟೀನೇಜ್ ಕಳೆದ ಬಳಿಕ ಅಡುಗೆ ಕಲಿಯುವಂತೆ ಹೇಳುವುದುಂಟು. ಆದರೆ ಬಾಲ್ಯದಿಂದಲೇ ಅಡುಗೆಯನ್ನು ಕಲಿಸುವುದು ಈ ವಿದ್ಯೆಯನ್ನು ಸುಲಭವಾಗಿಸುತ್ತದೆ. ಕೇವಲ ಎಲ್ಲ ಆಹಾರ ಪದಾರ್ಥಗಳನ್ನು ಮಿಕ್ಸ್ ಮಾಡುವುದು, ಸಲಾಡ್ ತಯಾರಿಸುವುದರಂಥ ಸಣ್ಣಪುಟ್ಟ ಕೆಲಸಗಳೂ ಬಹಳಷ್ಟನ್ನು ಕಲಿಸುತ್ತವೆ. 

ಕೌಶಲ್ಯ ಕಲಿಕೆ
ಮಕ್ಕಳು ಅಡುಗೆ ಕಲಿಯುವುದರಿಂದ ಆಹಾರವನ್ನು ಕೇವಲ ತಿನ್ನುವ ವಸ್ತು ಎಂದು ನೋಡದೆ ಗೌರವದಿಂದ ಕಾಣಲಾರಂಭಿಸುತ್ತಾರೆ. ಜೊತೆಗೆ, ಮನೆಯಲ್ಲಿ ತಾವೇ ತಯಾರಿಸಿದ ಆಹಾರದ ಜೊತೆ ಹೆಚ್ಚು ಕನೆಕ್ಟೆಡ್ ಭಾವ ಹೊಂದುತ್ತಾರೆ. ತಾನು ಮಾಡಿದ್ದು ಎಂಬ ಕಾರಣಕ್ಕೆ ಹಟವಿಲ್ಲದೆ ತಿನ್ನುತ್ತಾರೆ. ಜೊತೆಗೆ, ಅಮ್ಮಅಪ್ಪ ಅಡುಗೆ ಮಾಡಲು ಎಷ್ಟೆಲ್ಲ ಶ್ರಮ ವಹಿಸಿರುತ್ತಾರೆ ಎಂಬ ಅರಿವು ಅವರಲ್ಲಿ ಮೂಡುವುದರಿಂದ ಆಹಾರವನ್ನು ವ್ಯರ್ಥ ಮಾಡಲು ಹಿಂಜರಿಯುತ್ತಾರೆ. 

ಪೋಷಕರಾಗಿ ನೀವು ಮಕ್ಕಳನ್ನು ಕಿಚನ್‌ನಲ್ಲಿ ಸೇರಿಸಿಕೊಂಡಾಗ ಕುಕಿಂಗನ್ನು ಶಿಕ್ಷಣವಾಗಿ ಬದಲಾಯಿಸಬಹುದು. ಅಂದರೆ, ಒಂದೊಂದು ಆಹಾರ ಪದಾರ್ಥವನ್ನು ಬಳಸುವಾಗಲೂ ಅದು ಎಲ್ಲಿಂದ ಬಂತು, ಹೇಗೆ ಬೆಳೆಯುತ್ತಾರೆ, ಅದರಿಂದ ಏನೆಲ್ಲ ಮಾಡಬಹುದು, ಅದರ ಆರೋಗ್ಯ ಲಾಭಗಳೇನು ಎಲ್ಲವನ್ನೂ ತಿಳಿಸುವ ಅಭ್ಯಾಸ ಮಾಡಿಕೊಳ್ಳಿ. ಮಕ್ಕಳಲ್ಲಿ ಕುತೂಹಲ ಹೆಚ್ಚು. ಅದನ್ನು ಬಳಸಿಕೊಂಡು ಅಡುಗೆಯನ್ನೇ ಆಟವಾಗಿಸಿ. 

ಅಂತರ್ಮುಖಿ ಮಗುವಿನ ಪೋಷಕರಿಗಿಷ್ಟು ಟಿಪ್ಸ್

Tap to resize

Latest Videos


ಅಡುಗೆಯಲ್ಲಿ ವಿಜ್ಞಾನ, ಗಣಿತವಿದೆ..
ಮಕ್ಕಳಿಗೆ ಪ್ರಾಯೋಗಿಕವಾಗಿ ಗಣಿತ, ವಿಜ್ಞಾನಗಳನ್ನು ಕಲಿಸಲೂ ಸಹ ಅಡುಗೆಯನ್ನು ಬಳಸಿಕೊಳ್ಳಬಹುದು. ಅಂದರೆ, ಯಾವುದಕ್ಕೆ ಎಷ್ಟು ಆಹಾರ ಪದಾರ್ಥ ಬಳಸಬೇಕು, ಎಷ್ಟು ಜನಕ್ಕೆ ಸಾಕಾಗುತ್ತದೆ, ಮನೆಯಲ್ಲಿ ಯಾವ ದಿನಸಿ ಎಷ್ಟಿದೆ, ಎಷ್ಟು ದಿನಕ್ಕಾಗಬಹುದು ಎಲ್ಲವನ್ನೂ ಲೆಕ್ಕ ಹಾಕಲು ಕಲಿಯುತ್ತಾರೆ. ಯಾವ ಎರಡು ಪದಾರ್ಥಗಳನ್ನು ಮಿಕ್ಸ್ ಮಾಡಬಹುದು, ಯಾವುದನ್ನು ಮಾಡಬಾರದು(ಉದಾಹರಣೆಗೆ, ಎಣ್ಣೆ ಹಾಗೂ ನೀರು) ಎಂಬುದೆಲ್ಲ ವಿಜ್ಞಾನವಲ್ಲವೇ?

ತಾಳ್ಮೆ
ಮಕ್ಕಳು ಅಡುಗೆ ಮಾಡುವಾಗ ಅಡುಗೆಕೋಣೆ ರಂಪವಾಗಬಹುದು. ಅಡುಗೆ ರುಚಿ ಕೆಡಬಹುದು. ಚಾಕು ಮಗುವಿನ ಬೆರಳಿಗೆ ಗಾಯ ಮಾಡಬಹುದು. ಆದರೆ, ಅದಕ್ಕಾಗಿ ಅವರನ್ನು ಕಿಚನ್‌ನಿಂದ ದೂರವಿಡುವ ಬದಲು ಸೂಪರ್‌ವಿಶನ್ ಮಾಡಿ. ಸ್ವಲ್ಪ ದೊಡ್ಡ ಮಕ್ಕಳಾದರೆ ಅವರ ಬಳಿಯೇ ಕ್ಲೀನ್ ಮಾಡಿಸಿ. ಅಡುಗೆಗೆ ತಯಾರಿ, ಮುಗಿದ ಮೇಲೆ ಮಾಡುವ ಸ್ವಚ್ಛತೆ, ಪಾತ್ರೆ ತೊಳೆಯುವುದು ಎಲ್ಲವೂ ಮಕ್ಕಳಲ್ಲಿ ತಾಳ್ಮೆ ಕಲಿಸುತ್ತವೆ. ಅಡುಗೆ ರುಚಿ ಕೆಟ್ಟರೆ ಸರಿಯಾಗಿ ಮಾಡುವುದನ್ನು ಕಲಿಯಲು ಮಕ್ಕಳಿಗೆ ಅವಕಾಶ ಸಿಕ್ಕಿದಂತಾಗುತ್ತದೆ. ಜೊತೆಗೆ, ವಿಮರ್ಶೆಯನ್ನೂ ಸ್ವೀಕರಿಸಲು ಅವರು ಕಲಿಯುತ್ತಾರೆ. ಹಾಗೆಯೇ ಮತ್ತೊಬ್ಬರು ಮಾಡಿದ ಅಡುಗೆಯಲ್ಲಿ ಹುಳುಕು ಹುಡುಕುವ ಅಭ್ಯಾಸ ತಾನಾಗಿಯೇ ಬಿಟ್ಟು ಹೋಗುತ್ತದೆ. 

ಇಷ್ಟೆಲ್ಲ ಕಲಿಸುವಾಗ ಬೆಂಕಿಯ ಬಳಿ, ಚಾಕುವಿನೊಂದಿಗೆ, ಕಾದ ಎಣ್ಣೆಯ ಹತ್ತಿರ, ಸಿಲಿಂಡರ್ ಬಳಿ ಹೇಗೆಲ್ಲ ನಡೆದುಕೊಳ್ಳಬೇಕೆಂದು ಎಚ್ಚರಿಕೆ ಹೇಳಿಕೊಡುವುದು ಮರೆಯಬೇಡಿ. ಅಷ್ಟಾದರೆ, ಯಂಗ್ ಶೆಫ್ ಒಬ್ಬರು ಮನೆಯಲ್ಲಿ ಸಿದ್ಧರಾದರೆಂದೇ ಅರಿಯಿರಿ. 

click me!