ತಿಂದಷ್ಟು ಮತ್ತೆ ಮತ್ತೆ ತಿನ್ನಬೇಕೆನ್ನಿಸುವ ಆಹಾರದಲ್ಲಿ ಸಂಸ್ಕರಿಸಿದ ಆಹಾರ ಕೂಡ ಸೇರಿದೆ. ಸಕ್ಕರೆ, ಉಪ್ಪು ಮಿಶ್ರಿತ ಈ ಆಹಾರ ಬಾಯಿಗೆ ರುಚಿ. ದಿನದ ಆಹಾರದಲ್ಲಿ ಇದೊಂದು ಇರ್ಲೇಬೇಕು ಅನ್ನೋರು ನೀವಾಗಿದ್ರೆ ಇಂದೇ ಎಚ್ಚೆತ್ತುಕೊಳ್ಳಿ
ಬದಲಾದ ಜೀವನ ಶೈಲಿಯ ಜೊತೆ ಆಹಾರ ಪದ್ಧತಿಗಳೂ ಕೂಡ ಬದಲಾಗಿವೆ. ಒಬ್ಬ ವ್ಯಕ್ತಿ, ಮನೆಗೆ ಬೇಕಾಗುವಂತಹ ಸಾಮಾನುಗಳನ್ನು ತರಲು ಮಾರುಕಟ್ಟೆಗೆ ಹೋದರೆ ಅವನು ಖರೀದಿಸುವ ಶೇಕಡಾ 70 ರಷ್ಟು ವಸ್ತುಗಳು ಸಂಸ್ಕರಿಸ್ಪಟ್ಟ ಆಹಾರವೇ ಆಗಿರುತ್ತೆ. ದಿನದಿಂದ ದಿನಕ್ಕೆ ಜನರು ಪ್ರೊಸೆಸ್ಡ್ ಫುಡ್ ಗಳಿಗೆ ಹೆಚ್ಚು ಮಾರುಹೋಗುತ್ತಿದ್ದಾರೆ.
ಸಂಸ್ಕರಿಸಿದ (Processed) ಆಹಾರ ಅಂದ್ರೇನು ಗೊತ್ತಾ? : ಕೆಲವು ಆಹಾರ (Food) ಗಳನ್ನು ನೈಸರ್ಗಿಕ ಸ್ಥಿತಿಯನ್ನು ಬದಲಾಯಿಸಿ ವಿವಿಧ ವಿಧಾನಗಳ ಮೂಲಕ ಅದನ್ನು ಸಂಸ್ಕರಿಸಿ ಹಲವು ದಿನಗಳ ಕಾಲ ಅದು ಕೆಡದಂತೆ ಇಡಲಾಗುತ್ತದೆ. ಸಂಸ್ಕರಣೆಯ ಸಂದರ್ಭದಲ್ಲಿ ಅನೇಕ ರಾಸಾಯನಿಕಗಳು, ಕೃತಕ ಬಣ್ಣ (Color) ಹಾಗೂ ರುಚಿಗಳನ್ನು ಸೇರಿಸಲಾಗುತ್ತದೆ. ಮುಚ್ಚಿದ ಪಾತ್ರೆ, ಟಿನ್, ಬಾಟಲಿಯಲ್ಲಿರುವ ಎಲ್ಲ ಆಹಾರಗಳು ಸಂಸ್ಕರಿಸಿದ ಆಹಾರ ಎನ್ನುತ್ತಾರೆ ಕೆಲ ತಜ್ಞರು.
ಸಂಸ್ಕರಿಸಿದ ಆಹಾರ ಸೇವನೆ ಮಾಡಿದ್ರೆ ಅಪಾಯ ಗ್ಯಾರಂಟಿ : ನೋಡಲು ಆಕರ್ಷಕವಾಗಿರುವ, ಒಳ್ಳೆಯ ಪರಿಮಳ ಬೀರುವ ಸಂಸ್ಕರಿತ ಆಹಾರಗಳೇ ಈಗ ಎಲ್ಲರ ಅಚ್ಚುಮೆಚ್ಚು. ಇಂತಹ ಸಂಸ್ಕರಿಸಿದ ಆಹಾರದಲ್ಲಿ ಅಗತ್ಯಕ್ಕೂ ಹೆಚ್ಚಿನ ಉಪ್ಪು, ಕೊಬ್ಬು ಮತ್ತು ಸಕ್ಕರೆಯ ಅಂಶವಿರುತ್ತದೆ. ರುಚಿ (Taste) ನೀಡುವ ಈ ಆಹಾರಗಳು ದೇಹಕ್ಕೆ ದೊಡ್ಡ ಮಟ್ಟದಲ್ಲಿ ಹಾನಿಯುಂಟು ಮಾಡುತ್ತವೆ.
HEALTHY FOOD : ಖಾರವಾಗಿದ್ರೂ ಆರೋಗ್ಯಕ್ಕೆ ಒಳ್ಳೆಯದು ಈ ಫುಡ್
ಹೆಚ್ಚುತ್ತೆ ಇನ್ಸುಲಿನ್ ಪ್ರಮಾಣ : ಸಂಸ್ಕರಿಸಿದ ಆಹಾರ ಸೇವನೆಯಿಂದ ಶರೀರದಲ್ಲಿ ಇನ್ಸುಲಿನ್ ಪ್ರಮಾಣ ಹೆಚ್ಚಾಗುತ್ತದೆ. ಈ ಹಾರ್ಮೋನ್ ನಿಂದ ದೇಹದಲ್ಲಿ ಕೊಬ್ಬಿನ ಅಂಶ ಏರುತ್ತದೆ. ದೇಹದಲ್ಲಿ ಕೊಬ್ಬು ಶೇಖರಣೆಯಾದಾಗ ತೂಕ ಹೆಚ್ಚುತ್ತದೆ. ಇನ್ಸುಲಿನ್ ಪ್ರಮಾಣ ಹೆಚ್ಚಿದ್ರೆ ನೀವು ತೂಕ ಇಳಿಸೋದು ಕಷ್ಟ.
ಅನೇಕ ರೋಗಕ್ಕೆ ಮೂಲ : ಮೊದಲೇ ಹೇಳಿದಂತೆ ಈ ಆಹಾರ ತೂಕ ಹೆಚ್ಚಲು ಕಾರಣವಾಗುತ್ತದೆ. ತೂಕ ಹೆಚ್ಚಾದಾಗ ನಮ್ಮ ಶರೀರದಲ್ಲಿ ಅಡಿಪೋಸ್ ಕೋಶಗಳು ಉಂಟಾಗುತ್ತವೆ. ಇವು ಕೊಬ್ಬನ್ನು ಶೇಖರಿಸುವ ಕೋಶಗಳಾಗಿವೆ. ಇದರಿಂದ ಉರಿಯೂತ, ಚಯಾಪಚಯದ ಖಾಯಿಲೆಗಳು ಆರಂಭವಾಗುತ್ತವೆ. ತೂಕ ಹೆಚ್ಚಾದಂತೆ ಹೃದಯ ರೋಗ, ಮಧುಮೇಹ ಮತ್ತು ಪಾರ್ಶ್ವವಾಯುವಿನ ಸಮಸ್ಯೆ ಕೂಡ ತಲೆದೋರುತ್ತದೆ.
ಕರುಳಿನ ಆರೋಗ್ಯಕ್ಕೆ ಹಾನಿಕರ : ಸಂಸ್ಕರಿತ ಆಹಾರಗಳು ಕರುಳಿನಲ್ಲಿ ಕೆಟ್ಟ ಬ್ಯಾಕ್ಟೀರಿಯಾಗಳನ್ನು ಹೆಚ್ಚಿಸುತ್ತವೆ. ಇದು ಕರುಳಿನ ಸಮಸ್ಯೆ ಮತ್ತು ಕರುಳಿನ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹಾಳುಮಾಡುತ್ತದೆ.
ಸೋಡಿಯಂ ಮಟ್ಟ ಹೆಚ್ಚಳ : ಪ್ರೊಸೆಸ್ಡ್ ಫುಡ್ ಗಳು ಅವುಗಳ ಮೂಲ ಅವಸ್ಥೆಗೆ ಹೋಲಿಸಿದಲ್ಲಿ ಸುಲಭವಾಗಿ ಜೀರ್ಣವಾಗುತ್ತವೆ. ಇದರಿಂದ ಶರೀರದಲ್ಲಿ ಕಡಿಮೆ ಕ್ಯಾಲೊರಿಗಳು ಬಳಕೆಯಾಗಿ ಅಧಿಕ ರಕ್ತದೊತ್ತಡ, ಹೃದಯರೋಗ ಮತ್ತು ಕ್ಯಾನ್ಸರ್ ನಂತಹ ಖಾಯಿಲೆಗಳು ಬರುತ್ತವೆ. ಸಂಸ್ಕರಿಸಿದ ಆಹಾರದಲ್ಲಿ ಅಧಿಕ ಉಪ್ಪಿನಂಶ ಇರುವುದರಿಂದ ಇದು ರಕ್ತದಲ್ಲಿ ಸೋಡಿಯಂ ಮಟ್ಟವನ್ನು ಹೆಚ್ಚಿಸುತ್ತದೆ.
ನಾವು ಸಂಸ್ಕರಿಸಿದ ಆಹಾರ ಇಷ್ಟಪಡಲು ಕಾರಣವೇನು ಗೊತ್ತಾ? : ಎಷ್ಟೇ ಬಾಯಿ ಕಟ್ಟಿದ್ರೂ ಸಂಸ್ಕರಿಸಿದ ಆಹಾರ ನೋಡ್ತಿದ್ದಂತೆ ಬಾಯಲ್ಲಿ ನೀರು ಬರುತ್ತದೆ. ಜಂಕ್ ಫುಡ್ ತಿಂದಾಗಲೆಲ್ಲ ಅದು ನಮ್ಮ ಮೆದುಳಿಗೆ ಡೋಪಾಮೈನ್ ಅನ್ನು ಪ್ರೇರೇಪಿಸುತ್ತದೆ. ಇದರಿಂದ ವ್ಯಕ್ತಿ ಬಹಳ ಖುಷಿಯಾಗುತ್ತಾನೆ. ಆತನಲ್ಲಿ ಫುಡ್ ಕ್ರೇವಿಂಗ್ ಹೆಚ್ಚುತ್ತದೆ. ಸಂಸ್ಕರಿಸಿದ ಆಹಾರಗಳು ದೇಹದಲ್ಲಿನ ಕಾರ್ಬೋಹೈಡ್ರೇಟ್ ಗಳನ್ನು ಗ್ಲೂಕೋಸ್ ಆಗಿ ಪರಿವರ್ತಿಸುತ್ತದೆ ಮತ್ತು ಸಂಗ್ರಹಿಸುತ್ತದೆ. ಇದರಿಂದ ಹಸಿವು ಹೆಚ್ಚಾಗುತ್ತದೆ. ಜಂಕ್ ಫುಡ್ ಸೇವನೆ ಹೆಚ್ಚಾಗುತ್ತದೆ.
Evening Snacks: ಸಂಜೆಯ ಹಸಿವು ನೀಗಿಸಲು ಈ ಹೆಲ್ದಿ ಆಹಾರ ಸೇವಿಸಿ
ಸಂಸ್ಕರಿಸಿದ ಆಹಾರದಲ್ಲಿ ಆಹಾರದ ನೈಜತೆಗಿಂತ ಹೆಚ್ಚು ರಾಸಾಯನಿಕ ಮತ್ತು ಕೃತಕ ವಸ್ತುಗಳ ಬಳಕೆಯಾಗಿರುತ್ತದೆ. ಹಾಗಾಗಿ ಇವುಗಳ ಸೇವನೆಯಿಂದ ದೇಹಕ್ಕೆ ಪೋಷಕಾಂಶ, ಜೀವಸತ್ವ, ಖನಿಜಾಂಶ, ನಾರಿನಂಶಗಳ ಕೊರತೆ ಉಂಟಾಗುತ್ತದೆ. ಆರೋಗ್ಯವಾಗಿರಬೇಕೆಂದ್ರೆ ಸಂಸ್ಕರಿಸಿದ ಆಹಾರಕ್ಕೆ ಸಂಪೂರ್ಣ ಗುಡ್ ಬೈ ಹೇಳೋದು ಒಳ್ಳೆಯದು.