ಅಡುಗೆ (Cooking) ವಿಷಯದಲ್ಲಿ ಆದಷ್ಟು ಪ್ರಯೋಗ, ಸಂಶೋಧನೆಗಳು ಬಹುಶಃ ಬೇರೆ ಯಾವುದರಲ್ಲೂ ಆದ ಹಾಗಿಲ್ಲ. ಮನುಷ್ಯ ಬದಲಾದಂತೆ ಅವನ ಬಾಯಿ ರುಚಿ (Taste)ಯೂ ಬದಲಾಗಿದೆ. ಆದರೆ, ಶಿವಮೊಗ್ಗದ ಮೀನಾಕ್ಷಿ ಭವನ (Meenakshi Bhavana) ಎಂಬ ಹೊಟೇಲ್‌ನಲ್ಲಿ ಮಾತ್ರ ಅಂದಿಗೂ, ಇಂದಿಗೂ, ಎಂದೆಂದಿಗೂ ಸಿಗೋದು ಅದೇ ದೋಸೆ, ಇಡ್ಲಿ-ವಡೆ, ಪಡ್ಡು, ಸ್ಟ್ರಾಂಗ್ ಫಿಲ್ಟರ್ ಕಾಫಿ. ಆದರೂ, ಹೊಟೇಲ್‌ನೊಂದಿಗಿನ ಜನರ ಬಾಂಧವ್ಯ ಮಾತ್ರ ಶತಮಾನ ಕಳೆದರೂ ಬದಲಾಗಿಲ್ಲ.
-ವಿನಯ್ ಶಿವಮೊಗ್ಗ
ಇವತ್ತಿದ್ದದ್ದು ನಾಳೆಗೆ ಇರಲ್ಲ ಅನ್ನೋ ಈ ಕಾಲದಲ್ಲಿ ಏನಾದ್ರು ಶಾಶ್ವತವಾಗಿದೆ ಅಂದ್ರೆ ಅದು ಬದಲಾವಣೆ ಮಾತ್ರ. ಆದ್ರೂ ಕಾಲದ ಲೆಕ್ಕಾಚಾರದಿಂದ ಕೆಲವು ವಿಷಯಗಳು ಹೇಗೋ ತಪ್ಪಿಸಿಕೊಂಡು ಕಾಲತೀತವಾಗಿ ಉಳಿದು ಬಿಡತ್ತೆ. ಮನುಷ್ಯ ಏನ್ ಹತ್ತ್ ಹರದ್ರೂ ಕೊನೆಗ್ ಬಯಸುವುದು ಒಂದು ಘಳಿಗೆ ನೆಮ್ಮದಿ (Peace of Mind). ಈ ನೆಮ್ಮದಿಯ ಜಾಡನ್ನು ಅರೆಸುತ್ತಾ ಹೊರಟರೆ ಅದು ಬಂದು ನಿಲ್ಲೋದು ಕಣ್ತುಂಬ ನಿದ್ರೆ-ಹೊಟ್ಟೆ ತುಂಬಾ ಊಟ ಅನ್ನುವ basic pointಗೇ! ಈ ಬಾಯಿ ರುಚಿಯ ಬೆನ್ನು ಹತ್ತಿದ ಮನುಷ್ಯ ತನಗೇ ಗೊತ್ತಿಲ್ಲದೇ ಒಂದು ಇತಿಹಾಸ (History) ನಿರ್ಮಿಸುತ್ತಾನೆ! ಈಗ ಹೇಳ ಹೊರಟಿರುವುದೂ ಅಂತದ್ದೇ ಒಂದು ಕಥೆ.
ಬೆಂಗಳೂರಿನ ವಿದ್ಯಾರ್ಥಿ ಭವನ, ಮೈಸೂರಿನ ಮೈಲಾರಿ ಹೋಟೆಲ್ ತರಾನೇ ಶಿವಮೊಗ್ಗದ ಮೀನಾಕ್ಷಿ ಭವನ ಹೋಟೆಲ್ ಶಿವಮೊಗ್ಗದ ಗುರುತಿನೊಂದಿಗೆ ಬೆರೆತು ಹೋಗಿರುವ ಸರಿ ಸುಮಾರು ನೂರು ವರ್ಷದ ಈ ಹೋಟೆಲ್ ಎಂಬ ಗುಡಿಯಲ್ಲಿ ಅನ್ನಪೂರ್ಣೆಯ ಆರಾಧನೆಯಲ್ಲಿ ಹಸಿವಿನ ಹರಕೆ ತೀರಿಸುವ ಭಕ್ತರ ದಂಡಿಗೇನೂ ಕೊರತೆ ಇಲ್ಲ. ಇಲ್ಲಿ ಎಂದೂ ನಿಲ್ಲದ ನಿತ್ಯ ಸಂತರ್ಪಣೆ, ನಿತ್ಯ ಸವಿಯುವ ಸಡಗರ.
ಆನ್‌ಲೈನ್‌ನಲ್ಲಿ Onion Rings ಬುಕ್ ಮಾಡಿದವನಿಗೆ ಏನ್ ಬಂತು ನೋಡಿ
'ಊರಿಗೆ ಬಂದವರು ನೀರಿಗೆ ಬಾರರೆ' ಗಾದೆಯನ್ನು ತುಸು ತೀಡಿದರೆ ಶಿವಮೊಗ್ಗಕ್ಕೆ ಬಂದವರು ಮೀನಾಕ್ಷಿ ಭವನಕ್ಕೆ ಬಾರರೇ!!! ಎಂದು ಬದಲಾಯಿಸಬಹುದೇನೋ?! ಕವಿ ಕಲಾವಿದರಿರಬಹುದು, ರಾಜಕಾರಣಿಗಳ ದಂಡಿರಬಹುದು, ಕಾರಿನಲ್ಲಿ ಬರುವವರೋ , ಕಾಲಿನಲ್ಲಿ ಬರುವವರೋ ಒಟ್ಚಿನಲ್ಲಿ ಮೀನಾಕ್ಷಿ ಭವನದಲ್ಲಿ (Meenakshi Bhavana) ಅರ್ಧ ಲೋಟ ಕಾಫಿಗಾದರೂ ಓಡೋಡಿ ಹೋಗಲು ಮನಸ್ಸು ಸದಾ ಅಣಿಯಾಗಿರುತ್ತದೆ.
ಸಿಗೋದು ಅದೇ ದೋಸೆ, ಇಡ್ಲಿ-ವಡೆ, ಪಡ್ಡು:
ಬಾಯಿ ರುಚಿಗೆ ನಡೆಯಪವಷ್ಟು ಸಂಶೋಧನೆಗಳು ಪ್ರಯೋಗಗಳು mostly ಬೇರೆ ಯಾವ್ದು ಇಲ್ಲ ಅಂತ ಅನ್ಸುತ್ತೆ. ಮನುಷ್ಯ ನಿರಂತರ ಹುಡುಕಾಟದ ಕುರುಹು ಅವನು ತಿನ್ನುವ ಆಹಾರ ವೈವಿಧ್ಯವೇ ಸಾಕ್ಷಿ. ಆದರೆ ಈ ಮೀನಾಕ್ಷಿ ಭವನದಲ್ಲಿ ಆ ಧಾವಂತವಿಲ್ಲ. ಓಡುವ ಕಾಲ ನಿಂತ ಹಾಗೆ. ಮಸಾಲೆ ದೋಸೆ, ಪಡ್ಡು, ಇಡ್ಲಿ-ವಡೆ (Idly Vade), ಅವಲಕ್ಕಿ ಮೊಸರಿನ ಮುಂದೆ ಹೋಗಲೇ ಇಲ್ಲ! ಹೊಸದನ್ನು ತಿಂದು ಸಾಕಾದ ಮನಸ್ಸು ಮೀನಾಕ್ಷಿ ಭವನಕ್ಕೆ ಬಂದರೆ ಬಯಸುವುದು ಅದೇ ದೋಸೆ, ಪಡ್ಡುಗಳನ್ನು. ಹಾರಿ ಹೋದ ಹಕ್ಕಿಗಳು ಮರಳಿ ಗೂಡಿಗೆ ಬಂದ ಬೆಚ್ಚಗಿನ ಅನುಭವ.
ಚಿಕನ್ ಜೊತೆ ಮೊಸರು ತಿನ್ನೋ ಅಭ್ಯಾಸ ಇದೆಯೇ? ಮತ್ತೊಮ್ಮೆ ಯೋಚ್ನೆ ಮಾಡಿ
ಅದು ಬರೀ ತಿಂಡಿಯ ತುಡಿತವಲ್ಲ, ಅಲ್ಲಿನ ವಾತಾವರಣದಲ್ಲಿರುವ ಸಹಜತೆ. ಕಾಲ ಕಾಲು ಮುರಿದುಕೊಂಡು ಬಿದ್ದ ಹಾಗೆ. ಅಂದ ಹಾಗೆ ಈ ಮೀನಾಕ್ಷಿ ಭವನ ಸಂಸ್ಥಾನದ ಆಸ್ಥಾನ ವಿದ್ವಾಂಸ ಗಾನ ಗಾರುಡಿಗ ಬಾಲಮುರಳಿ ಕೃಷ್ಣ (Bala Murali Krishna)! ಪ್ರತಿ ಬಾರಿ ಮೀನಾಕ್ಷಿ ಭವನದಲ್ಲಿ ನಾನು ಹೊಟ್ಟೆಯ ಪೂಜೆಗೆ ಕುಳಿತಾಗ ಹಿನ್ನೆಲೆಯಲಿ ಮೊಳಗಿದ್ದು ಬಾಲಮುರಳಿಯವರ ಶ್ರೀಮಂತ ಧ್ವನಿಯಲ್ಲಿ ಶಾಸ್ತ್ರೀಯ ಸಂಗೀತದ ಮಟ್ಟುಗಳೇ.
ಮೀನಾಕ್ಷಿ ಭವನಕ್ಕೆ ಬರುವುದು, ಅಲ್ಲಿ ತಿಂಡಿ ತಿನ್ನುವುದು ಶಿವಮೊಗ್ಗವನ್ನು ಪ್ರೀತಿಸುವ ಪ್ರತಿ ಮನಸ್ಸಿಗೂ ಅಚ್ಚುಮೆಚ್ಚು. ಒಂದೊಂದು ತುತ್ತಿಗೂ ಹಳೆಯ ಮಧುರ ನೆನಪುಗಳ ಮೆಲುಕು.
ಮೀನಾಕ್ಷಿ ಭವನದ ಅಡುಗೆ ಮನೆಯ ಕಾವಲಿಯ ಮೇಲೆ ದೋಸೆಗಳು ಹುಟ್ಟುವ ಕ್ಷಣಗಳಿಗೆ ನೋಡ ನೋಡುತ್ತಾ ನೂರು ವರ್ಷಗಳು ತುಂಬಿವೆ. ಇದು ಸಾಮಾನ್ಯದ ಜೀವನದಲ್ಲಿ ಆಸಾಮಾನ್ಯದ ವಿಷಯ ಅಲ್ವಾ?! ಮೊನ್ನೆ ಮೀನಾಕ್ಷಿ ಭವನದಲ್ಲಿ ದೋಸೆ ತಿನ್ನುವಾಗ ಎಣ್ಣೆ ಸಲ್ಪ ಜಾಸ್ತಿ ಅಂತ ಅನ್ಸಿದ್ದು ಸುಳ್ಳಲ್ಲ. ಆದ್ರೂ ಅದು ಬರೀ ರುಚಿಯಲ್ವಲ್ಲಾ? ನಾನು ದೋಸೆ ತಿನ್ನುತ್ತಿದ್ದೆ. ಹಿನ್ನೆಲೆಯಲಿ 'ಏನ ಮಾಡಿದರೇನು ಭವ ಹಿಂಗದು' ಎಂದು ಬಾಲಮುರಳಿ ಹಾಡುತ್ತಿದ್ದರು. ಭವದ ಜೀವನಕ್ಕೆ ಭಾವನೆಗಳು ತತ್ವಾರವಾಗಬಾರದು ಅಲ್ವಾ ?