ಜೀವಜಗತ್ತು ಬದುಕಿರಲು ಸಸ್ಯಗಳ ದ್ಯುತಿಸಂಶ್ಲೇಷಣೆ ಪ್ರಕ್ರಿಯೆ ಬೇಕೇಬೇಕು. ಈ ಕ್ರಿಯೆ ಸುಗಮವಾಗಿ ನಡೆಯಲು ಸೂರ್ಯನ ಬೆಳಕು ಬೇಕೇ ಬೇಕು. ಸೌರಶಕ್ತಿಯಿಲ್ಲದೆ ಆಮ್ಲಜನಕ ಬಿಡುಗಡೆಯಾಗುವುದಿಲ್ಲ. ನಮ್ಮ ಆಹಾರದ ಮೂಲವೂ ದ್ಯುತಿಸಂಶ್ಲೇಷಣೆ ಕ್ರಿಯೆಯೇ ಆಗಿದೆ. ಇದೀಗ, ಸೂರ್ಯನ ಬೆಳಕಿಲ್ಲದೆ ಕತ್ತಲೆಯಲ್ಲಿ ಕೃತಕವಾಗಿ ಈ ಕ್ರಿಯೆಯನ್ನು ಸಾಧ್ಯವಾಗಿಸಿದೆ ವಿಜ್ಞಾನಿಗಳ ತಂಡ.
ಸೂರ್ಯನ (Sun) ಬೆಳಕಿಲ್ಲದೆ ಬದುಕಿಲ್ಲ. ಪ್ರತಿ ಜೀವಜಂತುಗಳಿಗೂ ಸೂರ್ಯನ ಬೆಳಕೇ (Sunlight) ಬದುಕಿನ ಮೂಲ. ಸಸ್ಯಗಳಿಗೂ ಸೌರಶಕ್ತಿ ಬೇಕೇ ಬೇಕು. ದ್ಯುತಿಸಂಶ್ಲೇಷಣೆ (Photosynthesis) ಪ್ರಕ್ರಿಯೆ ಸೂರ್ಯನ ಬೆಳಕಿಲ್ಲದೆ ಜರುಗುವುದಿಲ್ಲ. ಹೀಗಾಗಿಯೇ, ಬಿಸಿಲು ಪ್ರದೇಶದಲ್ಲಿ ಸಸ್ಯಪ್ರಭೇದ ಹೆಚ್ಚು. ಹಾಗೆಯೇ, ಬಿಸಿಲುನಾಡಿನಲ್ಲಿ ಪ್ರಪಂಚಕ್ಕಾಗುವಷ್ಟು ಆಹಾರ ಧಾನ್ಯಗಳನ್ನು ಬೆಳೆಯಲಾಗುತ್ತದೆ. ಶೀತ (Cold) ಪ್ರದೇಶದಲ್ಲಿ ಹಸಿರು ಕೃಷಿ ಎನ್ನುವುದೇ ಇರುವುದಿಲ್ಲ. ಆದರೆ, ಒಂದು ವೇಳೆ ಸೂರ್ಯನ ಶಕ್ತಿ ಮಬ್ಬಾಯಿತು ಎಂದಿಟ್ಟುಕೊಂಡರೆ ಆಹಾರ ಧಾನ್ಯಗಳನ್ನು ಬೆಳೆಯುವುದು ಹೇಗೆ? ಅಥವಾ ಸೂರ್ಯನ ಬೆಳಕು ಬೀಳದ ಯಾವುದಾದರೂ ಪ್ರದೇಶದಲ್ಲಿ ಆಹಾರ ಬೆಳೆಯುವುದು ಹೇಗೆ?
ಸೂರ್ಯನ ಬೆಳಕಿಲ್ಲದೆಯೂ ಆಹಾರ ಧಾನ್ಯಗಳನ್ನು (Food Grains) ಬೆಳೆಯಲು ಸಾಧ್ಯವೇ ಎನ್ನುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದ ವಿಜ್ಞಾನಿಗಳಿಗೆ (Scientists) ಇದೀಗ ಪ್ರತಿಫಲ ದೊರೆತಿದೆ. ಕೃತಕ ಫೋಟೊಸಿಂಥೆಸಿಸ್ ಪ್ರಕ್ರಿಯೆ ಮೂಲಕ ಆಹಾರ ಧಾನ್ಯ ಬೆಳೆಯಲು ಅವರು ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ಬಾಹ್ಯಾಕಾಶದಲ್ಲಿ ಚೀನಾದಿಂದ ಸೌರ ವಿದ್ಯುತ್ ಸ್ಥಾವರ? 2028ಕ್ಕೆ ವಿದ್ಯುತ್ ಉತ್ಪಾದನೆ
ಫೋಟೊಸಿಂಥೆಸಿಸ್ ಕ್ರಿಯೆ ಸೂರ್ಯನ ಬೆಳಕನ್ನು ಶಕ್ತಿ(Energy)ಯನ್ನಾಗಿ ಪರಿವರ್ತಿಸುತ್ತದೆ. ದ್ಯುತಿಸಂಶ್ಲೇಷಣೆ ಕ್ರಿಯೆಯಿಂದ ಸಸ್ಯಗಳು ಕಾರ್ಬನ್ ಡೈ ಆಕ್ಸೈಡ್ (Carbon Dioxide) ಹೀರಿಕೊಂಡು ಆಮ್ಲಜನಕವನ್ನು (Oxygen) ಬಿಡುಗಡೆ ಮಾಡುತ್ತವೆ ಎನ್ನುವುದು ಎಲ್ಲರಿಗೂ ಗೊತ್ತು. ಆದರೆ, ಸೂರ್ಯನ ಬೆಳಕಿಲ್ಲದೆಯೂ ಈ ಕ್ರಿಯೆ ನಡೆಯುವಂತೆ ವಿಜ್ಞಾನಿಗಳು ಮಾಡಿದ್ದಾರೆ. ನೇಚರ್ ಫುಡ್ (Nature Food) ಎನ್ನುವ ನಿಯತಕಾಲಿಕದಲ್ಲಿ ಈ ಕುರಿತು ಲೇಖನ ಪ್ರಕಟವಾಗಿದ್ದು, ಹೊಸ ಕೃಷಿ (Agriculture) ಸಾಧ್ಯತೆ ಕುರಿತು ಚರ್ಚೆಗೆ ಆಸ್ಪದ ನೀಡಿದೆ.
ಇಲೆಕ್ಟ್ರೊಕ್ಯಾಟಲಿಟಿಕ್ ಪ್ರಕ್ರಿಯೆ ಮೂಲಕ ಕಾರ್ಬನ್ ಡೈ ಆಕ್ಸೈಡ್ ಸೃಷ್ಟಿಸಿ, ನೀರು ಹಾಗೂ ವಿನೆಗರ್ ಬಳಸುವ ಮೂಲಕ ಈ ಅಧ್ಯಯನ ನಡೆಸಲಾಗಿತ್ತು. ಪ್ರಯೋಗಾಲಯದಲ್ಲಿ ನಡೆದ ಈ ಮಾದರಿ ಸಾಂಪ್ರದಾಯಿಕ ಮಾರ್ಗಕ್ಕಿಂತ 18 ಪಟ್ಟು ಹೆಚ್ಚು ದೃಢವಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಕಪ್ಪು ಕತ್ತಲೆಯಲ್ಲೇ ಈ ಪ್ರಯೋಗ ನಡೆದಿರುವುದು ವಿಶೇಷ. ಸಸ್ಯ ಬೆಳೆಯಲು ಬೇಕಾಗುವ ಜೈವಿಕ ಅಂಶಗಳ ಪೂರಕ ವ್ಯವಸ್ಥೆ ಸೃಷ್ಟಿಸಲಾಗಿತ್ತು. “ಜೈವಿಕ ಫೋಟೊಸಿಂಥೆಸಿಸ್ ಪ್ರಕ್ರಿಯೆಯ ಮಿತಿಯನ್ನು ಮೀರಿ ಹೊಸ ಮಾದರಿಯ ಆಹಾರ ಬೆಳೆಯುವ ಮಾರ್ಗವನ್ನು ಗುರುತಿಸಲಾಗಿದೆʼ ಎಂದು ಈ ಅಧ್ಯಯನದಲ್ಲಿ ಭಾಗವಹಿಸಿದ್ದ ರಾಬರ್ಟ್ ಜಿಂಕರ್ಸನ್ ಹೇಳಿದ್ದಾರೆ.
ಇದನ್ನೂ ಓದಿ: ಬಾಹ್ಯಾಕಾಶದಿಂದ ಭೂಮಿಗೆ ಸೌರವಿದ್ಯುತ್: ಚೀನಾ ಸಾಹಸ
ಯುಸಿ ರಿವರ್ ಸೈಡ್ (UC Riverside) ಮತ್ತು ಡೆಲವೇರ್ (Delaware) ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡ ಈ ಸಾಧನೆ ಮಾಡಿದೆ. ಆಹಾರ ಉತ್ಪಾದಿಸುವ ಸೂಕ್ಷ್ಮಾಣುಜೀವಿಗಳನ್ನು ಸೂರ್ಯನ ಬೆಳಕಿಲ್ಲದೆಯೂ ಸೃಷ್ಟಿಸಿರುವುದು ಅವರ ಸಾಧನೆ. ಹಸಿರು ಪಾಚಿ (Green Alae), ಯೀಸ್ಟ್ (Yeast), ಫಂಗಸ್ (Fungus) ಗಳನ್ನು ಸೌರಶಕ್ತಿಯಿಲ್ಲದೆ ಬೆಳೆಸಲಾಗಿದೆ. ಯೀಸ್ಟ್ ಉತ್ಪಾದನೆಗೆ ಹೆಚ್ಚು ಶಕ್ತಿಯ ಅಗತ್ಯವಿಲ್ಲದಿರುವುದು ವಿಶೇಷ.
ಮಾನವ ಬಾಹ್ಯಾಕಾಶದತ್ತ (Space) ಮುಖ ಮಾಡಿದ್ದಾನೆ. ಬೇರೆ ಬೇರೆ ಗ್ರಹಗಳಲ್ಲಿ ಜೀವದ ಇರುವಿಕೆಯನ್ನು ಪತ್ತೆ ಹೆಚ್ಚುವಲ್ಲಿ ಮುಂದುವರಿದ ದೇಶಗಳೆಲ್ಲವೂ ನಿರತವಾಗಿವೆ. ಒಂದೊಮ್ಮೆ ಸೂರ್ಯನ ಬೆಳಕಿಲ್ಲದೆಯೂ ಆಹಾರ ಧಾನ್ಯ ಬೆಳೆಯುವಲ್ಲಿ ಯಶಸ್ವಿಯಾದರೆ, ಇದು ಬಾಹ್ಯಾಕಾಶದ ಅನ್ವೇಷಣೆಗಳಿಗೂ ಭಾರೀ ಪೂರಕವಾಗುವುದು ನಿಶ್ಚಿತ.
ಇದನ್ನೂ ಓದಿ: ಖಾಸಗಿ ಸಂಸ್ಥೆಗೆಂದೇ ಉಪಗ್ರಹ: ಇಸ್ರೋಗೆ ಮತ್ತೊಂದು ಯಶಸ್ಸು
ಇನ್ನೂ ವಿಶೇಷವೆಂದರೆ, ಈ ತಂಡ ನಾಸಾ (Nasa)ದ ಪ್ರಶಸ್ತಿಯನ್ನೂ ಗೆದ್ದುಕೊಂಡಿದೆ. ಡೀಪ್ ಸ್ಪೇಸ್ ಫುಡ್ ಚಾಲೆಂಜ್ (Deep Space Food Challenge) ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಅಂದಾಜಿಸಿ, ಕಡುಕತ್ತಲೆಯಲ್ಲೂ ಟೊಮ್ಯಾಟೋ ಗಿಡಗಳನ್ನು ಬೆಳೆಯಲು ಸಾಧ್ಯವಾದರೆ ಮನುಷ್ಯನ ಮಂಗಳ ಗ್ರಹದ ಪಯಣ ಸುಲಭವಾಗಬಲ್ಲದು. “ಭವಿಷ್ಯದಲ್ಲಿ ಕೃಷಿ ಪದ್ಧತಿಯ ಪರಿಕಲ್ಪನೆಯನ್ನೇ ಬದಲಿಸಲು ಇಂದಿನ ಪ್ರಯೋಗ ಸಾಧ್ಯವಾಗಿಸಬಲ್ಲದುʼ ಎಂದು ಇನ್ನೋರ್ವ ಸಂಶೋಧಕಿ ಮಾರ್ಥಾ ಅಭಿಪ್ರಾಯಪಟ್ಟಿದ್ದಾರೆ.