ಊಟ ಆದ್ಮೇಲೆ ಹೀಗ್ ಮಾಡ್ಬೇಡಿ ಅಂತ ಅಪ್ಪ ಅಮ್ಮ ಹೇಳಿದ್ದು ಸುಮ್ಮನೆಯಲ್ಲ...

By Suvarna News  |  First Published Feb 26, 2020, 3:59 PM IST

ಊಟ ಅನ್ನೋದೊಂದು ಧ್ಯಾನ. ಅದನ್ನು ಮಾಡೋಕೊಂದು ವಿಧಾನವಿದೆ. ಮಾಡುವ ಮುನ್ನ, ಹಾಗೂ ಮಾಡಿದ ನಂತರ ಮಾಡಬೇಕಾದ, ಮಾಡಬಾರದ ಕೆಲವು ಆಚರಣೆಗಳಿವೆ. ಅವೆಲ್ಲವೂ ನಮ್ಮ ಆರೋಗ್ಯದ ದೃಷ್ಟಿಯಿಂದಲೇ ರೂಪುಗೊಂಡಿವೆ. 


ಊಟ ಆದ್ಮೇಲೆ ಸ್ನಾನ ಮಾಡ್ಬಾರ್ದು, ಟೀ ಕುಡೀಬಾರ್ದು, ಹೊರಗೆ ಸುತ್ತಬಾರ್ದು ಇತ್ಯಾದಿ ಇತ್ಯಾದಿ ನಿಷೇಧಗಳನ್ನು ಪೋಷಕರು ಬಾಲ್ಯದಿಂದಲೂ ಮಕ್ಕಳ ಮೇಲೆ ಹೇರಿಕೊಂಡು ಬಂದಿರುತ್ತಾರೆ. ಆದರೆ, ಯಾಕೆ ಹಾಗೆ ಮಾಡಬಾರದು ಕೇಳಿದರೆ ಅವರಿಗೆ ನಿಖರ ಉತ್ತರ ಗೊತ್ತಿಲ್ಲ. ಇಷ್ಟಕ್ಕೂ ಊಟ ಆದ ಮೇಲೆ ಮಾಡಬಾರದ ಹಲವು ಸಂಗತಿಗಳಿವೆ. ಯಾಕೆ, ಏನು ಅಂತ ತಿಳ್ಕೊಳಕ್ಕೆ ಮುಂದೆ ಓದಿ...

'ಊಟದ ಬಳಿಕ ಸಿಗರೇಟ್ ಸೇದೋ ಬಗ್ಗೆ ಯೋಚ್ನೆ ಕೂಡಾ ಮಾಡ್ಬೇಡಿ'
ಸ್ಮೋಕಿಂಗ್ ಅನ್ನೋದೇ ಕೆಟ್ಟದ್ದು. ಅದು ಊಟಕ್ಕೂ ಮುಂಚೆಯಾದರೂ ಅಷ್ಟೆ, ಊಟದ ನಂತರವಾದರೂ ಅಷ್ಟೇ, ಆಫೀಸ್ ಸಮಯದಲ್ಲಾದರೂ ಸರಿ, ಮಲಗುವ ಸಮಯದಲ್ಲಾದರೂ ಸರಿ. ಹೌದ್ರೀ ಸ್ವಾಮಿ, ಸಿಗರೇಟ್‌ನಲ್ಲಿ ಏನಿಲ್ಲವೆಂದರೂ 60 ರೀತಿಯ ಕ್ಯಾನ್ಸರ್‌ಕಾರಕ ವಸ್ತುಗಳಿರುತ್ತವೆ. ಆದರಲ್ಲೂ ಊಟದ ನಂತರದಲ್ಲಿ ಅದರ ಕೆಟ್ಟತನ ಹತ್ತು ಪಟ್ಟು ಹೆಚ್ಚಾಗುತ್ತದೆ. ಇದರಲ್ಲಿರುವ ನಿಕೋಟಿನ್ ರಕ್ತದಲ್ಲಿರುವ ಆಮ್ಲಜನಕದ ಜೊತೆ ಸೇರಿಕೊಳ್ಳುತ್ತದೆ. ಊಟ ಜೀರ್ಣವಾಗುವ ಸಮಯದಲ್ಲಿ ಈ ನಿಕೋಟಿನ್ ಇಡೀ ದೇಹದಲ್ಲಿ ಸುಲಭವಾಗಿ ಹೀರಿಕೊಂಡು ಬಿಡುತ್ತದೆ. ಹಾಗಾಗಿ, ಬೊವೆಲ್ ಕ್ಯಾನ್ಸರ್ ಹಾಗೂ ಲಂಗ್ ಕ್ಯಾನ್ಸರ್ ಅಪಾಯ ಹೆಚ್ಚಾಗುತ್ತದೆ. ಆಗ, ಈಗ ಅಂತ ಬೇಡ. ಕೆಟ್ಟದ್ದನ್ನು ಸಂಪೂರ್ಣ ದೂರವಾಗಿಟ್ಟರೆ ತಲೆಬಿಸಿಯೇ ಇಲ್ಲವಲ್ಲ.. 

Latest Videos

undefined

ಕೆಂಪಿರುವೆ ಚಟ್ನಿ, ಈರುಳ್ಳಿ ಹಲ್ವಾ...ಭಾರತದ ವಿಚಿತ್ರ ತಿನಿಸುಗಳಿವು...

'ಊಟವಾದ್ಮೇಲೆ ಹಣ್ಣು ತಿನ್ಬೇಡಿ!'
ಇದು ಸ್ವಲ್ಪ ಹೊಸತು ಅಲ್ವಾ? ಎಲ್ರೂ ಊಟ ಆದ್ಮೇಲೆ ಹಣ್ಣು ತಿನ್ನೋದು ಒಳ್ಳೆಯದೆಂದೇ ಹೇಳ್ತಾರೆ. ಆದರೆ, ಹಣ್ಣುಗಳನ್ನು ತಿಂಡಿ ಊಟದ ಮಧ್ಯದ ಸಮಯದಲ್ಲಿ ತಿನ್ನುವುದು ಒಳ್ಳೆಯದು. ಹಣ್ಣುಗಳನ್ನು ಜೀರ್ಣಿಸಿಕೊಳ್ಳುವುದು ಸುಲಭ. ಹೊಟ್ಟೆಯಿಂದ ಜೀರ್ಣವಾಗಿ ಕರುಳಿಗೆ ಸೇರಿಕೊಳ್ಳಲು ಹಣ್ಣುಗಳಿಗೆ 20 ನಿಮಿಷ ಸಾಕು. ಅಲ್ಲಿ ಅವು ಸಂಪೂರ್ಣ ಜೀರ್ಣವಾಗುತ್ತವೆ. ಆದರೆ ಊಟವಾದ ನಂತರ ಹಣ್ಣು ತಿಂದರೆ, ಅದು ಊಟದೊಂದಿಗೆ ಬೆರೆತು ಕರುಳಿಗೆ ಹೋಗುವುದು ತಡವಾಗುತ್ತದೆ. ಸಮಯ ಹೆಚ್ಚಿದಂತೆಲ್ಲ ಹಣ್ಣು ಕೆಡುತ್ತದೆ, ಜೊತೆಗೆ ಊಟವನ್ನೂ ಕೆಡಿಸುತ್ತದೆ. 

'ಊಟದ ಬಳಿಕ ಟೀ? ನೋ ನೋ, ಸರಿಯಲ್ಲ'
ಟೀ ಅಥವಾ ಕಾಫಿ-  ಮಿತಿಯಲ್ಲಿದ್ದಾಗ ದೇಹಕ್ಕೆ ಅವುಗಳಿಂದ ಲಾಭವಿದೆ. ಅತಿಯಾದರೆ ಅಮೃತವೂ ವಿಷ ಎಂಬುದು ನಿಮಗೆ ಗೊತ್ತಷ್ಟೇ. ಅಂದ ಹಾಗೆ, ನ್ಯೂಟ್ರಿಶನಿಷ್ಟ್‌ಗಳ ಪ್ರಕಾರ, ಊಟದ ನಂತರ ಟೀ ಕುಡಿಯಲು ಕನಿಷ್ಠ 1 ಗಂಟೆ ಕಾಲ ಗ್ಯಾಪ್ ಕೊಡಬೇಕು. ಏಕೆಂದರೆ ಟೀ ಹಾಗೂ ಕಾಫಿಗಳಲ್ಲಿರುವ ಟ್ಯಾನಿನ್ ಎಂಬ ಕೆಮಿಕಲ್ ಊಟದಲ್ಲಿದ್ದ ಐರನ್ನನ್ನು ದೇಹ ಹೀರಿಕೊಳ್ಳಲು ತಡೆ ಒಡ್ಡುತ್ತದೆ. 

'ಊಟ ಆದ್ಮೇಲೆ ಸ್ನಾನ ಮಾಡ್ಬಾರ್ದು'
ಅಲ್ಲಾ, ಊಟ ಆದ್ಮೇಲೆ ಸ್ನಾನ ಮಾಡೋ ಅಭ್ಯಾಸ ನಿಮಗಿದೆ ಎಂದ್ರೆ ನೀವು ಸೋಮಾರಿಗಳಂತಲೇ ಅರ್ಥ. ಸೂರ್ಯ ನೆತ್ತಿಗೆ ಬಂದ್ರೂ ಸ್ನಾನ ಮಾಡ್ದೇ ಇರೋದು ಸೋಮಾರಿಗಳಿಂದಷ್ಟೇ ಸಾಧ್ಯ. ಅದು ಬದಿಗಿಟ್ಟು ನೋಡಿದ್ರೂ, ಊಟ ಆದ್ಮೇಲೆ ಸ್ನಾನ ಯಾಕೆ ಮಾಡಬಾರದು ಅಂದ್ರೆ, ಆಹಾರ ಜೀರ್ಣವಾಗಲು ದೇಹದ ಬಹಳಷ್ಟು ಎನರ್ಜಿ ಹಾಗೂ ರಕ್ತಚಲನೆಯನ್ನು ಬೇಡುತ್ತದೆ. ಆದರೆ, ಊಟವಾದ ಕೂಡಲೇ ಸ್ನಾನ ಮಾಡಿದರೆ ರಕ್ತವು ಹೀಟ್ ಹೊರ ಹಾಕಲು ಚರ್ಮದ ಕಡೆಗೆ ನುಗ್ಗುತ್ತದೆ. ಇದರಿಂದ ಜೀರ್ಣಕ್ರಿಯೆ ಕಷ್ಟವಾಗುತ್ತದೆ. 

ದಿನಾ ಶುಂಠಿ ನೀರು ಕುಡಿದ್ರೆ ಎಷ್ಟೆಲ್ಲ ಲಾಭಗಳಿವೆ ಗೊತ್ತಾ?...

'ಊಟವಾದ ಮೇಲೆ ಬೆಲ್ಟ್ ಲೂಸ್ ಮಾಡುವ ಅಭ್ಯಾಸ ಬೇಡ'
ಊಟ ಆದ ಮೇಲೆ ಹೊಟ್ಟೆಗೆ ಬಿರಿಯುತ್ತಿರುವ ಬೆಲ್ಟ್ ಲೂಸ್ ಮಾಡ್ಬೇಡ ಅಂತ ಬಹಳಷ್ಟು ಜನ ಹೇಳೋದನ್ನು ಕೇಳಿರಬಹುದು. ಇದರಿಂದ ಹೊಟ್ಟೆಗಾಗಲೀ, ಕರುಳಿಗಾಗಲೀ ಏನೂ ಸಮಸ್ಯೆ ಇಲ್ಲ. ಆದರೆ, ಬೆಲ್ಟ್ ಲೂಸ್ ಮಾಡಬೇಕೆನಿಸುತ್ತಿದೆ ಎಂದರೆ ನೀವು ಅಗತ್ಯಕ್ಕಿಂತ ಹೆಚ್ಚು ತಿಂದೀದ್ದೀರೆಂದರ್ಥ. ಇದು ಒಳ್ಳೆಯದಲ್ಲ ಅಷ್ಟೇ. 

'ಊಟ ಆದ್ಕೂಡ್ಲೇ ವಾಕ್ ಮಾಡಬಾರದು'
ಮಾಡ್ಲೇಬೇಕು ಅಂತ ಆಸೆ ಇದ್ರೆ ಹೋಗಿ. ಆದ್ರೆ ಅದ್ರಿಂದ ಅಜೀರ್ಣ, ಆ್ಯಸಿಡ್ ರಿಫ್ಲೆಕ್ಸ್ ಆಗಿ ಎದೆ ಒತ್ತಿ ಬರುವುದು ಆದ್ರೆ ಅನುಭವಿಸೋಕೆ ತಯಾರಿರಿ ಅಷ್ಟೇ. ಊಟವಾದ 30 ನಿಮಿಷಗಳ ಬಳಿಕವಷ್ಟೇ ವಾಕ್ ಮಾಡುವುದು ಉತ್ತಮ ಅಭ್ಯಾಸ. 

'ಊಟ ಆದ್ಕೂಡ್ಲೇ ಮಲಗ್ಬೇಡಿ'
ಹೊಟ್ಟೆ ತುಂಬ ತಿಂದು ತಕ್ಷಣ ಮಲಗಿದ್ರೆ ಡೈಜೆಸ್ಟಿವ್ ಜ್ಯೂಸ್ ಎಲ್ಲ ಅನ್ನನಾಳದೊಳಗೆ ವಾಪಸ್ ಹರಿಯಲಾರಂಭಿಸುತ್ತವೆ. ಆಗ ನಿಮಗೆ ಬರ್ನಿಂಗ್ ಸೆನ್ಸೇಶನ್ ಅನುಭವಕ್ಕೆ ಬರಬಹುದು. ಹಾಗಾಗಿ, ಊಟವಾದ ಮುಕ್ಕಾಲು ಗಂಟೆಯ ಬಳಿಕ ಮಲಗುವ ಅಭ್ಯಾಸ ಒಳ್ಳೆಯದು.

click me!