ಪರಿಸರಸ್ನೇಹಿ ಊಟಕ್ಕೆ 10 ಉಪಾಯಗಳು!

Kannadaprabha News   | Asianet News
Published : Jun 05, 2020, 09:39 AM ISTUpdated : Jun 05, 2020, 10:17 AM IST
ಪರಿಸರಸ್ನೇಹಿ ಊಟಕ್ಕೆ 10 ಉಪಾಯಗಳು!

ಸಾರಾಂಶ

ನಾವೀಗ ದೇಹಕ್ಕೆ ಬೇಕಾದ ಆಹಾರದ ಬೆನ್ನು ಹತ್ತೋದು ಬಿಟ್ಟು ರುಚಿಯ ಹಿಂದೆ ಬಿದ್ದಿದ್ದೇವೆ. ಹಾಗಿದ್ದರೆ ಊಟದ ವಿಚಾರದಲ್ಲಿ ನಾವು ಏನೆಲ್ಲ ತಪ್ಪು ಮಾಡುತ್ತಿದ್ದೇವೆ? ದೇಹದ ಆರೋಗ್ಯಕ್ಕೆ ಹಾಗೂ ಪರಿಸರದ ಆರೋಗ್ಯಕ್ಕೆ ಪೂರಕವಾದ ಊಟ ಹೇಗಿರಬೇಕು?

- ಕೆ.ಸಿ.ರಘು, ಆಹಾರ ತಜ್ಞ

ಪಾಲಿಶ್‌ ಮಾಡದ ಅಕ್ಕಿ ತಿನ್ನಿ

1. ನಾವು ದಕ್ಷಿಣ ಭಾರತೀಯರು ಪಾಲಿಶ್‌ ಮಾಡಿರೋ ಬಿಳಿ ಅಕ್ಕಿಗೆ ಜೋತು ಬಿದ್ದಿದ್ದೀವಿ. ಅಕ್ಕಿ ತಗೊಂಡು ಮಿಲ್ಲಿಗೆ ಹಾಕೋದು, ಅಲ್ಲಿ ತೌಡು ತೆಗೆಯೋದು. ಆ ತೌಡನ್ನು ಎಣ್ಣೆ ಮಿಲ್‌ಗೆ ಹಾಕೋದು. ಅಲ್ಲಿ ಎಣ್ಣೆ ತೆಗೆಯೋದು. ಎಣ್ಣೆ ಕುದಿಸಿ ಅದರಲ್ಲಿ ವಿಟಮಿನ್‌ ಇ ಹೊರತೆಗೆಯೋದು. ಆ ವಿಟಮಿನ್‌ ಇ ಯನ್ನು ಔಷಧಿ ಕಂಪನಿಗೆ ಮಾರೋದು. ಇಲ್ಲಿ ಬಿಳಿ ಅಕ್ಕಿ ಅನ್ನ ತಿಂದವನಿಗೆ ಡಯಾಬಿಟೀಸ್‌ ಬರುತ್ತೆ. ಬೊಜ್ಜು ಬೆಳೀತದೆ. ಇದಕ್ಕೆ ಆ ಕಂಪನಿಯಿಂದ ಔಷಧಿ ಬರುತ್ತೆ. ಇದರ ಬಲದಾಗಿ ಪಾಲಿಶ್‌ ಮಾಡದ ಅಕ್ಕಿಯ ಅನ್ನ ಮಾಡಿ ತಿನ್ನೋದು ಬೆಟರ್‌ ಅಲ್ವಾ?

ಬಣ್ಣಬಣ್ಣದ ಬೇಳೆ ಕಾಳು, ಕಪ್ಪಕ್ಕಿ

2. ಬಿಳಿಯ ಗುಲಾಮಗಿರಿ ಹೋದರೆ ನಮಗೆ ಬಣ್ಣಗಳೆಲ್ಲಾ ಇಷ್ಟಆಗ್ತಾ ಹೋಗುತ್ತವೆ. ರಾಗಿ, ಗೋಧಿ, ಕಾಳುಗಳು ಹೀಗೆ ಅನೇಕ ಬಗೆಯ ಆಹಾರಗಳ ಸೇವನೆ ಹೆಚ್ಚಾಗುತ್ತದೆ. ಈ ಸಹಜ ಬಣ್ಣದ ಕಾಳು, ಬೇಳೆ, ಧಾನ್ಯಗಳು ಪೌಷ್ಟಿಕಾಂಶದ ಕಣಜಗಳು. ಕಪ್ಪಕ್ಕಿಯಂತೂ ಬಹಳ ಉತ್ತಮ.

ಸಕ್ಕರೆ ಕಮ್ಮಿ ತಿನ್ನೋಣ

3. ಸಕ್ಕರೆಯನ್ನು ಅತ್ಯಂತ ಹೆಚ್ಚು ಬಳಸುತ್ತೇವೆ. ಅದಕ್ಕಾಗಿ ನಮ್ಮ ದೇಶ ಡಯಾಬಿಟೀಸ್‌ ಕ್ಯಾಪಿಟಲ್‌ ಆಗಿದೆ. ವಿಶ್ವ ಆರೋಗ್ಯ ಸಂಸ್ಥೆ ದಿನಕ್ಕೆ ಒಬ್ಬ ವ್ಯಕ್ತಿಗೆ 25 ಗ್ರಾಮ್‌ಗಿಂತ ಹೆಚ್ಚು ಸಕ್ಕರೆ ಬಳಸಬೇಡಿ ಅನ್ನುತ್ತೆ. ಆದರೆ ನಾವು ದಿನಕ್ಕೆ ನೂರರಿಂದ ನೂರಿಪ್ಪತ್ತು ಗ್ರಾಮ್‌ ಬಳಕೆ ಮಾಡ್ತಿದ್ದೇವೆ. ಈ ಅತಿ ಸಕ್ಕರೆ ಬಳಕೆಗಾಗಿ ಅತಿಯಾದ ಕಬ್ಬು ಬೆಳೆಯುತ್ತೇವೆ. ಇದಕ್ಕೆ ಹೆಚ್ಚು ಸಂಪನ್ಮೂಲ, ಹಣದ ಬಳಕೆಯಾಗುತ್ತೆ. ಕಬ್ಬಿನ ಉತ್ಪನ್ನವಾದ ಸಕ್ಕರೆ ಡಯಾಬಿಟೀಸ್‌ ತಂದರೆ, ಉಪ ಉತ್ಪನ್ನ ಸರಾಯಿ ಲಿವರ್‌ ಡ್ಯಾಮೇಜ್‌ ಮಾಡುತ್ತೆ.

ಶ್ರುತಿ ನಾಯ್ಡು ವಿಚಾರಗಳು: ಮಕ್ಕಳಿಗೆ ವಿದೇಶದ ಬದಲು ಕಾಡು ತೋರಿಸೋಣ!

ತಟ್ಟೆತುಂಬಾ ತರಕಾರಿ - ಟಿಟಿಟಿ

4. ಟಿಟಿಟಿ ಅನ್ನೋದನ್ನು ನಾವು ಪಾಲಿಸಲೇಬೇಕು. ಟಿಟಿಟಿ ಅಂದರೆ ತಟ್ಟೆತುಂಬ ತರಕಾರಿ ಅಂತ. ತರಕಾರಿ, ಹಣ್ಣುಗಳ ಬಗ್ಗೆ ನಮಗೆ ಅವಜ್ಞೆ ಹೆಚ್ಚು. ನಾವು ಹಣ್ಣು ಅಂದರೆ ಪಚ್ಚೆ ಬಾಳೆ ಹಣ್ಣು ತಿಂತೀವಿ. ಹಣ್ಣುಗಳ ವೆರೈಟಿ ನಮಗೆ ಗೊತ್ತಿಲ್ಲ. ನಮ್ಮ ನ್ಯೂಟ್ರಿಷನಿಸ್ಟ್‌ಗಳಿಗೆ ಫ್ಯಾಶನ್‌ ಫ್ರುಟ್‌ ತೋರಿಸಿದರೆ ಇದು ತಿನ್ನೋದಾ ಅಂತ ಕೇಳ್ತಾರೆ. ಆ ಮಟ್ಟಿನ ಅಜ್ಞಾನ ಇದೆ.

ಬೇಯಿಸದ ಆಹಾರ ಒಳ್ಳೇದು

5. ನಿರಜ್ಞಿ ಅರ್ಥಾತ್‌ ಬೇಯಿಸದ ಆಹಾರದ ಬಳಕೆ ಮಾಡೋದು ಅತ್ಯಗತ್ಯ. ಸನ್‌ ಕುಕ್‌್ಡ ಅಂತೀವಿ. ವಿ ಕುಕ್‌್ಡ ಅವರ್‌ ವೆಜಿಟೇಬಲ್ಸ್‌ ಟು ಡೆತ್‌ ಅನ್ನೋ ಮಾತಿದೆ. ಬೇಯಿಸಿ ಅದರಲ್ಲಿರೋ ಸಾರ ಎಲ್ಲ ತೆಗೆದು ಹೊರಗೆ ಹಾಕ್ತೀವಿ. ಬದಲಾಗಿ ಬೇಯಿಸದ ಆಹಾರ ತಿಂದು ಡೆತ್‌ನಿಂದ ಲೈಫ್‌ ಕಡೆ ಹೋಗೋಣ.

ಡಾಲ್ಡಾ ಬಿಡಿ, ಒರಾಂಗುಟನ್‌ ಉಳಿಸಿ

6. ‘ಡಾಲ್ಡಾ ಕಿಲ್ಸ್‌ ಒರಾನ್‌ಗುಟಾನ್‌’ ಅನ್ನೋ ಮಾತಿದೆ. ಅದು ಹೇಗೆ ಅಂದ್ರೆ ಡಾಲ್ಡಾ ಮಾಡಲಿಕ್ಕೆ ಪಾಮ್‌ ಆಯಿಲ್‌ ಬೇಕು. ಈ ಪಾಮ್‌ ಆಯಿಲ್‌ಗೆ ಇಂಡೊನೇಷ್ಯಾದ ಒಂದು ಜಾಗದಲ್ಲಿ ಕಾಡಿಗೆ ಬೆಂಕಿ ಹಚ್ಚಿ ಪಾಮ್‌ ಬೆಳೀತಾರೆ. ಆ ಕಾಡಲ್ಲಿ ಒರಾನ್‌ಗುಟಾನ್‌ ಇರುತ್ತೆ, ಅದು ಸಾಯುತ್ತೆ. ನಾವು ಇಲ್ಲಿ ಡಾಲ್ಡಾ ಉಪಯೋಗಿಸುವಾಗ ನಮಗೆ ಒರಾನ್‌ಗುಟಾನ್‌ ಸತ್ತಿದೆ ಅನ್ನೋದು ಗೊತ್ತಾಗಲ್ಲ. ನಮ್ಮ ಆಹಾರ ಸರಣಿಯಲ್ಲಿರುವ ಇಂಥಾ ಪರಿಸರ ಸಂಬಂಧಗಳನ್ನು ನಾವು ಅರಿಯಬೇಕಿದೆ.

ಕಿಚನ್‌ ವೇಸ್ಟ್‌ನಲ್ಲಿ ಚಿಕನ್‌

7. ಮೊದಲು ಕಿಚನ್‌ ವೇಸ್ಟ್‌ ಚಿಕನ್‌ಗೆ ಹೋಗ್ತಿತ್ತು. ಚಿಕನ್‌ ಮತ್ತೆ ಆಹಾರವಾಗಿ ಕಿಚನ್‌ಗೆ ಬರುತ್ತಿತ್ತು. ಹೀಗೆ ಮಾಂಸದ ಅವಶ್ಯಕತೆ ಪೂರೈಸುತ್ತಿತ್ತು. ಪ್ರಕೃತಿಗೆ ಇದರಿಂದ ಹಾನಿಯಿಲ್ಲ. ಆದರೆ ಈಗ ರುಚಿಗೋಸ್ಕರ ಮಾಂಸದ ಬಳಕೆ ವಿಪರೀತ ಏರಿದೆ. ಇದಕ್ಕೆ ಪರೋಕ್ಷವಾಗಿ ಅರಣ್ಯ ಬಲಿಯಾಗುತ್ತಿದೆ. ಹೀಗಾಗಿ ಕಿಚನ್‌ ವೇಸ್ಟ್‌ನಲ್ಲಿ ಚಿಕನ್‌ ಬೆಳೆಯೋದಕ್ಕಾಗುತ್ತಾ ಅಂತ ನೋಡಿ.

ಆಧುನಿಕ ಇಕೋ ಫ್ರೆಂಡ್ಲಿ ಐಡಿಯಾಗಳು; ನೀವು ಟ್ರೈ ಮಾಡಿ!

ವೈವಿಧ್ಯಮಯ ಆಹಾರ ಬೆಳೆಸಿ

8. ಜಗತ್ತಲ್ಲಿ ಶೇ.80ರಷ್ಟುಬೆಳೀತಿರೋದು ಐದೇ ಪದಾರ್ಥ. ಅಕ್ಕಿ, ಗೋಧಿ, ಮೆಕ್ಕೆ ಜೋಳ, ಸೋಯಾಬೀನ್‌, ಕಬ್ಬು. ನಾವು ವೈವಿಧ್ಯಮಯ ಆಹಾರ ಬೆಳಸುತ್ತಿಲ್ಲ, ಬೆಳೆಯುತ್ತಲೂ ಇಲ್ಲ. ಬಳಸುವ ಹಾಗೂ ಬೆಳೆಯುವ ಕ್ರಿಯೆ ಆಗಬೇಕು. ಇದು ಪರಿಸರಕ್ಕೂ ಒಳ್ಳೆಯದು.

ಆಲೂಗಡ್ಡೆ, ಮೈದಾ ಜಾಸ್ತಿ ಬಳಕೆ ಬೇಡ

9. ಆಲೂಗಡ್ಡೆಯನ್ನು ಯುರೋಪಿನವರು ಅಕ್ಕಿಯ ಥರ ಬಳಸುತ್ತಾರೆ. ನಾವು ರೊಟ್ಟಿಮಾಡಿ ಆಲೂಗಡ್ಡೆ ಪಲ್ಯ ಮಾಡುತ್ತೀವಿ. ಅದೆರಡೂ ಸ್ಟಾಚ್‌ರ್‍. ಆಲೂಗಡ್ಡೆಯನ್ನು ನಾವು ತರಕಾರಿ ಅಂತ ಉಪಯೋಗಿಸುತ್ತೀವಿ. 55 ಮಿಲಿಯನ್‌ ಟನ್‌ ಬೆಳೀತೀವಿ. ಆದರೆ ರೋಟಿ ದಾಲ್‌, ಅನ್ನ ಮತ್ತು ಹೆಚ್ಚು ಬೇಳೆ ಹಾಕಿರುವ ಸಾರು ಇವು ಪರಸ್ಪರ ಪೂರಕ. ಒಂದು ಕಾರ್ಬೊಹೈಡ್ರೇಟ್‌ ಇನ್ನೊಂದು ಪ್ರೊಟೀನ್‌. ಆಲೂಗಡ್ಡೆ ಪಲ್ಯ, ಮೈದಾ ಬಳಸಿದ ರೊಟ್ಟಿಪೂರಕ ಆಗಲ್ಲ. ಸ್ಟಾಚ್‌ರ್‍ ಪ್ಲಸ್‌ ಸ್ಟಾಚ್‌ರ್‍ ಒಳ್ಳೆಯದಲ್ಲ.

ಷಡ್‌ರಸಯುಕ್ತ ಭೋಜನ

10. ಊಟ ಮಾಡುವಾಗ ಆರು ರಸಗಳಿರಬೇಕು. ಸಿಹಿ, ಕಹಿ, ಹುಳಿ, ಖಾರ, ಉಪ್ಪು, ಒಗರು ಎಂಬ ಈ ಷಡ್‌ ರಸಗಳು ದಕ್ಕಿದರೆ ಮತ್ತೇನಾದ್ರೂ ತಿನ್ನಬೇಕು ಅಂತ ಆಸೆ ಆಗಲ್ಲ. ಇದರಿಂದ ಮಾನಸಿಕ ತೃಪ್ತಿಯೂ ಸಿಗುತ್ತೆ. ಆರು ರಸಗಳು ರಸಗ್ರಂಥಿಗಳನ್ನು ತಲುಪಿದಾಗ ಓವರ್‌ ಈಟಿಂಗ್‌ ಅನ್ನೋ ಅಭ್ಯಾಸ ಇರೋದಿಲ್ಲ. ಅದು ಪರಿಸರವನ್ನೂ ಉಳಿಸುತ್ತದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಫ್ರಿಡ್ಜ್‌ನಲ್ಲಿಟ್ಟ ಮೊಟ್ಟೆಗಳು ಕೊಳೆಯುತ್ತವೆಯೇ? ಗೃಹಿಣಿಯರು ತಿಳಿದುಕೊಳ್ಳಬೇಕಾದ ವಿಷಯವಿದು!
ಇವನ್ನೆಲ್ಲಾ ಸ್ಟೀಲ್ ಪಾತ್ರೆಯಲ್ಲಿ ಹಾಕಿಡಬೇಡಿ.. ರುಚಿ, ಪರಿಮಳ ಇರಲ್ಲ, ಆರೋಗ್ಯನೂ ಹಾಳಾಗುತ್ತೆ!