ನವರಾತ್ರಿಯ ಮೊದಲನೇ ದಿನ ಶೈಲಪುತ್ರಿಯನ್ನು ಪೂಜಿಸಿದರೆ, ಎರಡನೇ ದಿನ ಬ್ರಹ್ಮಚಾರಿಣಿಯನ್ನು ಪೂಜಿಸಲಾಗುತ್ತದೆ. ತಪಸ್ವಿನಿಯಾದ ಈಕೆಯನ್ನು ಆರಾಧಿಸಿದರೆ ಬಹುಕಾಲದಿಂದ ಆಗದ ನಿಮ್ಮ ಕೆಲಸಗಳು ಈಡೇರುತ್ತವೆ.
ಬ್ರಹ್ಮಚಾರಿಣಿಯ ಕತೆ
ನವರಾತ್ರಿಯ(Navratri) ಎರಡನೇ ದಿನ ದೇವಿಯನ್ನು ಬ್ರಹ್ಮಚಾರಿಣಿಯ ರೂಪದಲ್ಲಿ ಪೂಜಿಸಲಾಗುತ್ತದೆ. ಬ್ರಹ್ಮಚಾರಿಣಿಯೆಂದರೆ ಇನ್ನೂ ಮದುವೆಯಾಗದಿರುವ ಯುವತಿ ಎಂದರ್ಥ ಸೌಮ್ಯಳೂ, ಶಾಂತ ಸ್ವಭಾವವನ್ನು ಧರಿಸಿರುವ ಬ್ರಹ್ಮಚಾರಿಣಿಯು ಮನಸ್ಸನ್ನು ಪ್ರಶಾಂತಗೊಳಿಸಿ, ಆತ್ಮವಿಶ್ವಾಸವನ್ನು(Confidence) ಹೆಚ್ಚಿಸುತ್ತಾಳೆ. ಕೈಯಲ್ಲಿ ಗುಲಾಬಿ ಧರಿಸಿರುವ ಈಕೆಯು ಒಂದು ಕೈಯಲ್ಲಿ ಜಪಮಾಲೆ ಹಾಗೂ ಇನ್ನೊಂದು ಕೈಯಲ್ಲಿ ಕಮಂಡಲವನ್ನು ಹಿಡಿದುಕೊಂಡಿರುತ್ತಾಳೆ. ಶ್ವೇತವಸ್ತ್ರಧಾರಿಣಿಯಾಗಿರುವ ಬ್ರಹ್ಮಚಾರಿಣಿಯು ತನ್ನ ಭಕ್ತರಿಗೆ ಸಂತೋಷ ಹಾಗೂ ಜ್ಞಾನವನ್ನು (Knowledge)ನೀಡುವವಳೂ ಆಗಿದ್ದಾಳೆ.
ಪಾರ್ವತಿಯಾಗಿ, ಹಿಮಾಲಯನ ಪುತ್ರಿಯಾಗಿ ಜನಿಸಿದ ದೇವಿಯು ಶಿವನನ್ನು ಪತಿಯಾಗಿ ಪಡೆಯಲು ನಾರದರ ಉಪದೇಶದಂತೆ ಕಠಿಣ ತಪಸ್ಸನ್ನು ಮಾಡುತ್ತಾಳೆ. ಬಹಳ ಕಠಿಣವಾದ ತಪಸ್ಸು ಮಾಡಿದ ಕಾರಣದಿಂದ ದೇವಿಗೆ ತಪಶ್ಚಾರಿಣೀ ಅರ್ಥಾತ್ ಬ್ರಹ್ಮಚಾರಿಣೀ ಎನ್ನುವ ಹೆಸರು ಬಂತು. ತಪಸ್ಸು ಮಾಡುತ್ತಿರುವ ಕಾಲದಲ್ಲಿ ಬರೀ ಹೂವು, ಹಣ್ಣುಗಳನ್ನು ಹಾಗೂ ಎಲೆಗಳನ್ನು ಮಾತ್ರ ಒಂದು ಕಾಲದವರೆಗೂ ಸೇವಿಸುತ್ತಿದ್ದಳು, ನಂತರದಲ್ಲಿ ಎಲೆಯ ಸೇವನೆಯನ್ನೂ ನಿಲ್ಲಿಸಿದಳು, ಪರ್ಣವೆಂದರೆ ಎಲೆ. ಹಾಗಾಗಿ ಈಕೆಯನ್ನು ಅಪರ್ಣಾ ಎಂದೂ ಕರೆಯುತ್ತಾರೆ.
Navratri: ಒಂಭತ್ತು ದಿನಗಳ ಹಬ್ಬದ ಆಚರಣೆಯ ಹಿಂದಿನ ಇತಿಹಾಸ ತಿಳಿಯಿರಿ
ನಂತರ ಶಿವನೇ ಒಬ್ಬ ಸನ್ಯಾಸಿಯ ರೂಪವನ್ನು ತಾಳಿ ಬಂದು, ಶಿವನಲ್ಲಿ ಈಕೆಗೆ ಇರುವ ನಿಷ್ಠೆಯನ್ನು ಪರೀಕ್ಷಿಸಿದನು. ಶಿವನು ಬೂದಿಬಡುಕ, ಸ್ಮಶಾನವಾಸಿ, ಬಡವ, ಭಿಕ್ಷುಕ. ಅಂಥವನನ್ನು ಯಾಕೆ ಬಯಸುತ್ತಿದ್ದೀ ಎಂದೆಲ್ಲ ಆಕ್ಷೇಪಿಸಿದ. ಆದರೆ ಪಾರ್ವತಿ ಅದಕ್ಕೆಲ್ಲ ಕಿವಿಗೊಡಲಿಲ್ಲ. ಪಾರ್ವತಿಯ ಅಖಂಡ ನಿಷ್ಠೆಗೆ ಮೆಚ್ಚಿದ ಶಿವ ಆಕೆಗೆ ಒಲಿದ.
ಬ್ರಹ್ಮಚಾರಿಣಿ ಎಂದರೆ ಆನಂದ ಮತ್ತು ಶಾಂತ ಶಕ್ತಿಯನ್ನು ಹೊಂದಿರುವ ರೂಪ. ಕಠಿಣತೆಯನ್ನು ಅಭ್ಯಾಸ ಮಾಡುವ ತಾಯಿ. ಮೋಕ್ಷವನ್ನು ಪಡೆಯಲು ಬಯಸಿದರೆ ಅಥವಾ ಕಾರ್ಯಗಳ ವಿಮೋಚನೆಗೆ ಬಯಸಿದರೆ ದೇವಿಯ ಈ ಅವತಾರಕ್ಕೆ ಪೂಜೆ ಸಲ್ಲಿಸಿದರೆ ದೇವಿ ಅನುಗ್ರಹ ಮತ್ತು ಸಮೃದ್ಧಿಯನ್ನು ಕೊಡುವಳು. ಹಾಗಾಗಿ ಎರಡನೇ ದಿನ ಧರಿಸಬೇಕಾದ ಬಣ್ಣ ಎಂದರೆ ಶುದ್ಧತೆಯ ಸಂಕೇತವಾದ ಬಿಳಿಬಣ್ಣ
ಬ್ರಹ್ಮಚಾರಿಣಿಯ ಮಹತ್ವ
ಬ್ರಹ್ಮಚಾರಿಣಿಯು ಮಂಗಳ ಗ್ರಹದ ಅಧಿಪತಿ. ತನ್ನ ಭಕ್ತರಿಗೆ ಅದೃಷ್ಟವನ್ನು ನೀಡುವವಳು ಹಾಗೂ ಮಾನಸಿಕ ಕ್ಷೋಭೆಯನ್ನು ಪರಿಹರಿಸಿ ನೆಮ್ಮದಿಯನ್ನು ದಯಪಾಲಿಸುವವಳೂ ಬ್ರಹ್ಮಚಾರಿಣಿ. ಜನ್ಮ ಕುಂಡಲಿಯಲ್ಲಿ ಮಂಗಳ ಗ್ರಹವು ಕೆಟ್ಟ ಸ್ಥಾನದಲ್ಲಿದ್ದರೆ ಹಾಗೂ ಮಂಗಳ ದೋಷವಿದ್ದರೆ ಬ್ರಹ್ಮಚಾರಿಣಿಯನ್ನು ಪೂಜಿಸುವುದು ಒಳ್ಳೆಯದು.
ಬ್ರಹ್ಮಚಾರಿಣಿಗೆ ಬಹಳ ಇಷ್ಟವಾದ ಹೂವು ಮಲ್ಲಿಗೆ. ಹಾಗಾಗಿ ನವರಾತ್ರಿಯ ಎರಡನೇ ದಿನ ಮಲ್ಲಿಗೆಯಿಂದ ಈಕೆಯನ್ನು ಅಲಂಕರಿಸಿ. ಪೂಜಿಸಿ, ಮಾತೆಯ ಆಶೀರ್ವಾದವನ್ನು ಪಡೆದುಕೊಳ್ಳಿ. ಬ್ರಹ್ಮಚಾರಿಣಿಯ ಪೂಜೆಯನ್ನು ಮಾಡುವಾಗ 16 ವಿಧದ ಅರ್ಪಣೆಗಳನ್ನು ಮಾಡಿ, ಆರತಿಯೊಂದಿಗೆ ಪೂಜೆಯನ್ನು ಅಂತ್ಯಗೊಳಿಸಿ.
ಮನಸ್ಸನ್ನು ತಿಳಿಯಾಗಿಸುವ ಶೈಲಪುತ್ರಿ: ನವರಾತ್ರಿಯ ಮೊದಲ ದಿನದ ದೇವಿ ಆರಾಧನೆ
ಬ್ರಹ್ಮಚಾರಿಣಿಯ ಆರಾಧನೆಯು ತಪಸ್ಸಿಗೆ ಸಮವಾಗಿರುತ್ತದೆ. ಭಕ್ತರಲ್ಲಿರುವ ದುರ್ಗುಣಗಳು ಕಳೆದು ಉದಾತ್ತತೆ, ಸದ್ಗುಣಗಳು ಬೆಳೆಯುತ್ತದೆ. ಯಶಸ್ಸಿಗೆ ಅಡ್ಡಲಾಗಿರುವ ಎಲ್ಲಾ ತೊಡಕುಗಳೂ ಸರಿದು ಮನಸ್ಸಿಗೆ ಶಾಂತಿ ಹಾಗೂ ಮಾಡುವ ಎಲ್ಲಾ ಕೆಲಸದಲ್ಲೂ ನೆಮ್ಮದಿ ದೊರೆಯುವುದು.
ಬ್ರಹ್ಮಚಾರಿಣಿ ಅರ್ಚನೆಯ ಮಂತ್ರ
ಓಂ ದೇವಿ ಬ್ರಹ್ಮಚಾರಿಣಿಯೇ ನಮಃ
ಓಂ ದೇವಿ ಬ್ರಹ್ಮಚಾರಿಣಿಯೇ ನಮಃ
ದಾಧನಾ ಕರ್ ಪದ್ಮಭಯಮಕ್ಷಾಮಾಲಾ ಕಮಂಡಲೋ
ದೇವೀ ಪ್ರಸಾದಿತು ಮಯಿ ಬ್ರಹ್ಮಚಾರಿಣಿಯನುತ್ತಮ