ಸಂಕ್ರಾಂತಿ ಹಬ್ಬಕ್ಕೆ ಎಳ್ಳು ಬೀರುವುದೇಕೆ?

By Kannadaprabha News  |  First Published Jan 14, 2025, 12:18 PM IST

ಸಂಕ್ರಾಂತಿಯಂದು ಎಳ್ಳು ಬೀರುವುದು ಒಂದು ಸತ್ಸಂಪ್ರದಾಯ. ಧಾರ್ಮಿಕವಾಗಷ್ಟೇ ಅಲ್ಲದೆ ವೈಜ್ಞಾನಿಕವಾಗಿಯೂ ಇದೊಂದು ಆರೋಗ್ಯವರ್ಧಕ ಹಬ್ಬವಾಗಿದೆ. ಬಿಸಿಲಿನ ತಾಪಕ್ಕೆ ಉಂಟಾಗುವ ಚರ್ಮ ರೋಗಗಳಿಗೆ ಎಳ್ಳು ಚಮತ್ಕಾರದ ಔಷಧ. ಎಳ್ಳು ವಾತಾ ಪರಿಹಾರವಾದರೆ, ಇದರೊಡನೆ ಬೆರೆಸಿ ಬೀರುವ ಬೆಲ್ಲ ಕಫ ನಿವಾರಕ.


ಬನ್ನೂರು ಕೆ.ರಾಜು ಸಾಹಿತಿ-ಪತ್ರಕರ್ತ

ಬೆಂಗಳೂರು(ಜ.14):  ಭಾರತದ ಹಬ್ಬಗಳ ಸಾಲಿನಲ್ಲಿ 'ಸಂಕ್ರಾಂತಿ'ಯೂ ಪ್ರಮುಖವಾದುದು. ವಿಶೇಷವಾಗಿ ರೈತಾಪಿ ಬಂಧುಗಳಿಗೆ ಇದು ತುಂಬಾ ಮಹತ್ವದ ಹಬ್ಬ, ಹೊಲ-ಗದ್ದೆಗಳ ಬೆಳೆ ಫಸಲಾಗಿ, ದವಸ-ಧಾನ್ಯಗಳು ಮನೆ ಸೇರಿ ಸುಗ್ಗಿಯ ಸಡಗರದಲ್ಲಿ ಹರ್ಷೋಲ್ಲಾಸ ಗರಿಗೆದರಿ ನಲಿವೇರಿ ನರ್ತಿಸುವ ಸಂಭ್ರಮದ ಹಬ್ಬವೇ ಸಂಕ್ರಾಂತಿ, ಮಕರ ಸಂಕ್ರಾಂತಿಯ ಆಚರಣೆಯ ಸುಸಂದರ್ಭದಲ್ಲಿ ಸಂಕ್ಷಿಪ್ತವಾಗಿ ಅದರ ಹಿನ್ನೆಲೆ ನೋಡೋಣ. 

Tap to resize

Latest Videos

'ಶಬ್ದಕಲದ್ರುಮ'ದಲ್ಲಿ ಹೇಳಲಾಗಿರುವಂತೆ ಗ್ರಹಗಳು ರಾಶಿಯಿಂದ ರಾಶಿಗೆ ಹೋಗಿ ಸೇರುವುದಕ್ಕೆ 'ಸಂಕ್ರಾಂತಿ' ಎಂದು ಹೆಸರು. ಹಾಗೆಯೇ ಸೂರ್ಯನು ಮೇಷ, ವೃಷಭ ಮುಂತಾದ ಹನ್ನೆರಡು ರಾಶಿಗಳಲ್ಲಿ ಸಂಚರಿಸುವ ಹನ್ನೆರಡು ತಿಂಗಳುಗಳು ಸಂಕ್ರಾಂತಿಯೆನಿಸುತ್ತವೆ. ಸೂರ್ಯನು ಪ್ರತಿ ತಿಂಗಳೂ ಬೇರೆ ಬೇರೆ ರಾಶಿಯನ್ನು ಪ್ರವೇಶಿಸುವುದರಿಂದ ಆಯಾಯ ತಿಂಗಳನ್ನು ಸಂಕ್ರಾಂತಿ ಎಂದು ಕರೆಯುತ್ತಾರೆ. ಸೂರ್ಯನು ಬೇರೆ ರಾಶಿಯನ್ನು ಪ್ರವೇಶಿಸುವ ಕಾಲವನ್ನು 'ಸಂಕ್ರಮಣಕಾಲ' ಎಂದಿದ್ದಾರೆ. 

ಪ್ರಯಾಗ್‌ರಾಜ್‌: ಮಹಾಕುಂಭಮೇಳದ ವಿಶೇಷತೆ ಏನು: ರೋಚಕ ಇತಿಹಾಸ ಗೊತ್ತಾ?

ಹನ್ನೆರಡು ಸಂಕ್ರಮಣಗಳು ವರ್ಷದಲ್ಲಿವೆ. ದಕ್ಷಿಣಾಯಣ, ಉತ್ತರಾಯಣಗಳಿಗೆ ಅನುಸಾರವಾಗಿ ಒಂದೊಂದು ಆಯನಕ್ಕೆ ಆರು ಸಂಕ್ರಮಣಗಳನ್ನು ಹಂಚಿದ್ದಾರೆ. ಹೀಗೆ ಮಕರದಿಂದ ಹಿಡಿದು ಮಿಥುನದವರೆಗಿನ ಆರು ಸಂಕ್ರಾಂತಿಗಳು ಉತ್ತರಾಯಣದಲ್ಲಿ ಬರುತ್ತವೆ. ಕಟಕದಿಂದ ಹಿಡಿದು ಧನಸ್ಸಿನವರೆಗೆ ಆರು ಸಂಕ್ರಾಂತಿಗಳು ದಕ್ಷಿಣಾಯಣದಲ್ಲಿ ಬರುತ್ತವೆ. 

ಉತ್ತರಾಯಣದ ಆರಂಭ 

ಸೂರ್ಯನು ಬೇರೆ ರಾಶಿಯನ್ನು ಪ್ರವೇಶಿಸುವುದರ ಜೊತೆಗೆ ಅವನ ಗತಿಯೂ ಬದಲಾಗುವುದು ಮಕರ ಹಾಗೂ ಕಟಕ ರಾಶಿಗಳಲ್ಲಿ, ಕಟಕ ರಾಶಿ ಪ್ರವೇಶಿಸಿದಾಗ ಸೂರ್ಯನು ದಕ್ಷಿಣ ದಿಕ್ಕಿನಲ್ಲಿ ಸಂಚರಿಸಲು ಆರಂಭಿಸುತ್ತಾನೆ. ಅದೇ ಮಕರ ರಾಶಿ ಪ್ರವೇಶಿಸಿದಾಗ ಅವನಗತಿ ಉತ್ತರಕ್ಕೆ ಸಂಚರಿಸುವುದು. ಹೀಗಾಗಿ ಈ ಎರಡು ಕಾಲಗಳನ್ನು ಪುಣ್ಯಕಾಲಗಳೆಂದು ಕರೆಯುತ್ತಾರೆ.  ಕಟಕದಿಂದ ಧನಸ್ತಿನವರೆಗೆ ಸೂರ್ಯನು ದಕ್ಷಿಣ ದಿಕ್ಕಿಗೆ ಸಂಚರಿಸುವುದು ದಕ್ಷಿಣಾಯಣ. ಇದನ್ನು ಪಿತೃಯಾನ ಎನ್ನುತ್ತಾರೆ. ದಕ್ಷಿಣಾಯಣದಲ್ಲಿ ಪಿತೃಗಳಿಗೆ ಪ್ರಾಧಾನ್ಯತೆ. ಅದೇ ಸೂರ್ಯನು ಮಕರದಿಂದ ಮಿಥುನದವರೆಗೆ ಉತ್ತರ ದಿಕ್ಕಿಗೆ ಸಂಚರಿಸುವಾಗ ಉತ್ತರಾಯಣ. ಇದನ್ನು ದೇವಯಾನ ಎನ್ನುತ್ತಾರೆ. ಉತ್ತರಾಯಣದಲ್ಲಿ ದೇವತೆಗಳಿಗೆ ಪ್ರಾಧಾನ್ಯತೆ.

ಸೂರ್ಯನಿಗೆ ಅಗ್ರಪೂಜೆ 

ಸಂಕ್ರಾಂತಿ ಹಬ್ಬಕ್ಕೆ ಸೂರ್ಯದೇವನೇ ಕೇಂದ್ರ ಬಿಂದು. ಜಗತ್ತಿನ ಮೊದಲ ಮಹಾಮಾತೆ ಅದಿತಿಯ ಸುಪುತ್ರನಾಗಿ ಹುಟ್ಟಿ ಸೂರ್ಯ ಬ್ರಹ್ಮಾಂಡದ ಮೊದಲಿಗನಾದುದರಿಂದ ಆತ 'ಆದಿತ್ಯ'. ಚರಾ ಚರ ಜಗತ್ತಿನ ಪಾಲಿಗೆ ಕಾಲವನ್ನು ಆಳೆಯುವ ಒಂದು ಖಗೋಳ ಗಡಿಯಾರವೇ ಸೂರ್ಯ, ಸೂರ್ಯನ ಚಲನೆಯೇ ಕಾಲದ ಗಣನೆಗೆ ಬಹುಮುಖ ಆಧಾರ, ಸೌರವ್ಯೂಹದಲ್ಲಿ ಬದುಕಿರುವ ಎಲ್ಲ ಜೀವಿಗಳ ಆಯುಷ್ಕವನ್ನು ನಿಯಂತ್ರಿಸುವವನೂ ಸೂರ್ಯನೇ. ಈ ಸೌರಮಂಡಲದಲ್ಲಿ ಸೂರ್ಯನೇ ಸರ್ವ ಸಕ್ತಿಯ ಮೂಲ. 

ಈ ಬ್ರಹ್ಮಾಂಡ ನಿರ್ಮಾಣವಾಗಿರುವುದು ಪಂಚಭೂತಗಳಿಂದ. ಆದ್ದರಿಂದಲೇ ನಾವು ಜೀವಿಸುತ್ತಿರುವ ಈ ಭೂಗೋಳಕ್ಕೆ ಪ್ರಪಂಚ ಎಂಬ ಹೆಸರು. ಈ ಪಂಚಭೂತಗಳಲ್ಲಿ ಅಗ್ನಿಯೇ ಪ್ರಧಾನ. ಅದೇ ಈ ಬ್ರಹ್ಮಾಂಡದ ಶಕ್ತಿಯ ಮೂಲ. ಅಂತಹ ಅಮೋಘ, ಅಪೂರ್ವ, ಅದ್ವಿತೀಯ ಶಕ್ತಿಯ ಮೂಲವೇ ಚಕ್ಷುಗೋಚರನಾದ ಸೂರ್ಯ ಭಗವಾನ್, ಹಾಗಾಗಿ ಸಂಕ್ರಾಂತಿಯಂದು ಸೂರ್ಯ ದೇವನಿಗೆ ಅಗ್ರಪೂಜೆ ಸಲ್ಲುತ್ತದೆ. ಇದು ಸಂಕ್ರಾಂತಿಯ ಸಂದರ್ಭಕ್ಕೆ ಸೂರ್ಯೋಪಾಸನೆಯ ಮೂಲಕ ಭವ್ಯ ಭಾಸ್ಕರನಿಗೆ ಮಾನವ ಸಲ್ಲಿಸುವ ಕೃತಜ್ಞತೆಯ ಸಂಕೇತ. 

ಸಂಕ್ರಾಂತಿಗೆ ಎಳ್ಳು ಬೀರುವುದೇಕೆ? 

ಸಂಕ್ರಾಂತಿ ಕುರಿತಂತೆ ಒಂದು ಪುರಾಣ ಕಥೆ ಹೀಗಿದೆ. ಬ್ರಹ್ಮನ ವರಬಲದಿಂದ ಉನ್ನತ್ತನಾಗಿ ಲೋಕ ಕಂಟಕನಾಗಿದ್ದ ತಿಲಾಸುರನೆಂಬ ರಾಕ್ಷಸನ ಪೀಡೆಯನ್ನು ತಾಳಲಾರದೆ ಎಲ್ಲರೂ ಸೂರ್ಯ ದೇವನಲ್ಲಿ ಮೊರೆ ಇಡುತ್ತಾರೆ, ಆಗ ಸೂರ್ಯನು ಕರ್ಕ ದೇವಿ ಹಾಗೂ ಮಕರ ದೇವಿಎಂಬ ಇಬ್ಬರು ಮಹಿಳೆಯರನ್ನು ಜೊತೆಗೆ ಅವರ ಸಹಾಯಕ್ಕಾಗಿ ಪರಿವಾರವನ್ನು ಸೃಷ್ಟಿಸಿ ಕಳುಹಿಸುತ್ತಾನೆ. 

ಒಂದು ದಿನ ಇವರಿಗೂ ತಿಲಾಸುರ ರಾಕಸನಿಗೂ ಭಯಂಕರ ಯುದ್ಧವಾಗಿ ಕೊನೆಗೆ ಮಕರದೇವಿ ತನ್ನ ಭರ್ಜಿಯಿಂದ ತಿಲಾಸುರನ ಹೊಟ್ಟೆಗೆ ತಿವಿಯಲು ಅವನ ಹೊಟ್ಟೆಯಲ್ಲಿದ್ದ ಎಳ್ಳಿನ ಸಂಗ್ರಹವು ಕಂಡು ಬರುತ್ತದೆ. ಆ ಎಳ್ಳನ್ನು ಹೊರತೆಗೆದಾಗ ತಿಲಾಸುರ ರಾಕ್ಷಸನ ಪ್ರಾಣ ಹೋಗಿ ಪೀಡೆ ತೊಲಗುತ್ತದೆ. ಆಗ ಸೂರ್ಯ ದೇವನು ಸಂತುಷ್ಟನಾಗಿ 'ಮಕರ ದೇವಿ, ನಿನ್ನನ್ನು ಭಕ್ತಿಯಿಂದ ಪೂಜಿಸಿದವರಿಗೆ ಸರ್ವಾಭೀಷ್ಟ ಸಿದ್ಧಿಸಲಿ. ನೀನು ಶೋಧಿಸಿದ ಎಳ್ಳು ಅಮೃತದಂತೆ ಸವಿಯಾಗಿರಲಿ, ಆರೋಗಕಾರಕವಾಗಿರಲಿ, ನಾನಿರುವತನಕ ನಿನ್ನ ಕೀರ್ತಿ ಉಳಿಯಲಿ' ಎಂದು ಹರಸಿದಂದಿನಿಂದ ಪೀಡಾಪರಿಹಾರಕ್ಕಾಗಿ ಎಳ್ಳು ಹಂಚುವ ಪರಿಪಾಠ ಬೆಳೆದು ಬಂತಂತೆ. 

ಅಂತೆ, ಕಂತೆ ಪುರಾಣ ಏನೇ ಇರಲಿ ಸಂಕ್ರಾಂತಿಯಂದು ಎಳು ಬೀರುವುದು ಒಂದು ಸಂಪ್ರದಾಯ, ಧಾರ್ಮಿಕವಾಗಷ್ಟೇ ಅಲ್ಲದೆ ವೈಜ್ಞಾನಿಕವಾಗಿಯೂ ಇದೊಂದು ಆರೋಗ್ಯವರ್ಧಕ ಹಬ್ಬವಾಗಿದೆ. ಬಿಸಿಲಿನ ತಾಪಕ್ಕೆ ಉಂಟಾಗುವ ಚರ್ಮ ರೋಗಗಳಿಗೆ ಎಳ್ಳು ಚಮತ್ಕಾರದ ಔಷಧ, ಎಳ್ಳು ವಾತಾ ಪರಿಹಾರವಾದರೆ, ಇದರೊಡನೆ ಬೆರೆಸಿ ಬೀರುವ ಬೆಲ್ಲ ಕಥ ನಿವಾರಕ. ಮಕರ ಸಂಕ್ರಾಂತಿ ದಿನದಿಂದ ಉತ್ತರಾಯಣವು ಆರಂಭವಾಗುವುದರಿಂದ ದಕ್ಷಿಣಾಯಣದಲ್ಲಿ ಹೆಚ್ಚಿಗೆ ವಿಸರ್ಜಿಸಲ್ಪಟ್ಟಿರುವ ದೇಹದ ಉಷ್ಣದ ಕೊರತೆಯನ್ನು ನಿವಾರಿಸಲು ಉಣ್ಣೆ ಪದಾರ್ಥಗಳನ್ನು ತೆಗೆದು ಕೊಳ್ಳಬೇಕಾಗುತ್ತದೆ. ಹೀಗಾಗಿ ಎಳ್ಳಿನ ಸೇವನೆ ಹೆಚ್ಚು ಸೂಕ್ತ. ವೈದ್ಯಶಾಸ್ತ್ರ ಮತ್ತು ಆಹಾರಶಾಸ್ತ್ರಗಳ ಪ್ರಕಾರ ದೇಹದ ಚರ್ಮ, ಕಣ್ಣು ಮತ್ತು ಎಲುಬು ಇವುಗಳ ಬೆಳವಣಿಗೆಗೆ ಹಾಗೂ ಇವುಗಳು ಸರಿಯಾದ ಸ್ಥಿತಿಯಲ್ಲಿರುವುದಕ್ಕೆ 'ಎ' ಮತ್ತು 'ಬಿ' ಅನ್ನಾಂಗಗಳು ಅತ್ಯವಶ್ಯಕ. ಎಣ್ಣೆ ಅಂಶವುಳ್ಳ ಧಾನ್ಯವಾದ ಎಳ್ಳಿನಲ್ಲಿ ಈ ಅಂಶಗಳು ಹೇರಳವಾಗಿವೆ. ಆಯುರ್ವೇದದ ಪ್ರಕಾರ ಎಳ್ಳು ಉಷ್ಣ ಗುಣವುಳ್ಳದ್ದು. ವಾತ, ಪ್ರಣ ಮತ್ತು ಚರ್ಮರೋಗಗಳನ್ನು ಗುಣಪಡಿಸುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ರಕ್ತವೃದ್ಧಿ ಮಾಡುತ್ತದೆ. ಈ ಕಾರಣಕ್ಕಾಗಿಯೇ ಹೆಣ್ಣು ಮಕ್ಕಳು ಋತುಮತಿಯರಾದಾಗ ಎಳ್ಳನ ಚಿಗಳಿ ಕೊಡಲಾಗುತ್ತದೆ. ಎಳ್ಳು ಎಣ್ಣೆಯ ಅಂಶದಿಂದ ಚರ್ಮದ ನಾವೀನ್ಯತೆ ಹೆಚ್ಚುತ್ತದೆ. ಕೋಮಲತೆಯನ್ನು ಕಾಪಾಡುತ್ತದೆ. ಎಳ್ಳಿನೊಡನೆ ಸೇರಿ ಬೀರುವ ಕಡಲೆ ಬೀಜ, ಕೊಬ್ಬರಿ ಚೂರುಗಳಲ್ಲೂ ಎಣ್ಣೆಯ ಎಳೆ ಜಿಡ್ಡಿನ ಅಂಶ ಇದೇ ಇರುತ್ತದೆ. ಹೀಗಿರುವಾಗ ಎಳು ಬೆಲ್ಲ ಬೀರಲು ಬಂದವರು ಹೇಳುವಂತೆ ಇದನ್ನು ತಿಂದವರಿಗೆ ಒಳ್ಳೆಯದಾಗೇ ಆಗುತ್ತದೆ.

ಬಾದಾಮಿ: ಬನಶಂಕರಿ ದೇವಿಯ ಅದ್ಧೂರಿ ರಥೋತ್ಸವ, ತಾಯಿಯ ಆಶೀರ್ವಾದ ಪಡೆದ ಭಕ್ತರು!

ಗೋಪೂಜೆ-ಕಿಚ್ಚು ಹಾಯಿಸುವ ಸಡಗರ 

ಹೇಳಿ ಕೇಳಿ ಸಂಕ್ರಾಂತಿ ಸುಗ್ಗಿಹಬ್ಬ, ರೈತಾಪಿಗಳ ಹಿಗ್ಗಿನ ಹಬ್ಬ, ಇಂಥ ಸುಗ್ಗಿಗೆ-ಹಿಗ್ಗಿಗೆ ಆತ ಆಶ್ರಯಿಸಿರುವ ಜಾನುವಾರುಗಳೇ ಮೂಲ ಕಾರಣ, ಹಾಗಾಗಿ ಹೊಲ-ಗದ್ದೆಗಳಲ್ಲಿ ಬೆಳೆ ಬೆಳೆದು ಫಸಲೆಲ್ಲಾ ಮನೆ ತುಂಬಿ ತುಳುಕುವಾಗ ತನ್ನ ಸಮಕ್ಕೂ ದುಡಿದ ಮೂಕಪ್ರಾಣಿಗಳಾದ ಜಾನುವಾರುಗಳನ್ನು ಅಂದು ವಿಶೇಷವಾಗಿ ಬಹಳ ಕಾಳಜಿಯಿಂದ, ಪ್ರೀತಿಯಿಂದ ಕಾಣುವುದು ಸಂಕ್ರಾಂತಿ ಕೊಟ್ಟ ಉಡುಗೊರೆಯಾಗಿದೆ. ಅಂದು ವಿಶೇಷವಾಗಿ ಹಳ್ಳಿಗಾಡುಗಳಲ್ಲಿ ಗೋಪೂಜೆ ಮಾಡಿ ಸಂಭ್ರಮಿಸುತ್ತಾರೆ. ಅಂದು ಮುಂಜಾನೆಯೇ ಅವುಗಳನ್ನೆಲ್ಲಾ ಕೆರೆಕಟ್ಟೆಗಳಲ್ಲಿ ಮೀಯಿಸಿ, ಚೆನ್ನಾಗಿ ತೊಳೆಯುತ್ತಾರೆ. ನಂತರ ಮೈಗೆಲ್ಲಾ ಅರಿಶಿಣ ಬಳಿಯುತ್ತಾರೆ. ಕೊಂಬುಗಳಿಗೆ ಬಣ್ಣ ಬಳಿದು ವಿವಿಧ ರೀತಿಯಿಂದ ಅಲಂಕಾರ ಮಾಡಿ ಊರಿನಲ್ಲೆಲ್ಲಾ ಮೆರವಣಿಗೆ ಮಾಡುತ್ತಾರೆ. ನಂತರ ಬೀದಿಯಲ್ಲಿ ಭತ್ತದ ಹುಲ್ಲನ್ನು ಹರಡಿ ಅದಕ್ಕೆ ಬೆಂಕಿಹಾಕಿ ಹಸು-ಎತ್ತುಗಳನ್ನು ಅದರ ಮೇಲೆ ಹಾರಿಸುತ್ತಾರೆ. ಇದನ್ನೇ ಕಿಚ್ಚುಹಾಯಿಸುವುದು ಎನ್ನವುದು. ಜಾನುವಾರುಗಳಿಗೆ ಹೀಗೆ ಮಾಡುವುದರಿಂದ ಚಳಿಯಲ್ಲಿ ಜಡ್ಡುಗಟ್ಟಿದ ಅವುಗಳು ಕ್ರಿಯಾಶೀಲಗೊಳ್ಳುತ್ತವೆ. ಜೊತೆಗೆ ಅವುಗಳ ಮೈಗಳಲ್ಲಿರುವ ಕ್ರಿಮಿ ಗಳೆಲ್ಲಾ ಕಿಚ್ಚು ಹಾಯುವುದರಿಂದ ಎಲ್ಲವೂ ಬೆಂಕಿಯಲ್ಲಿ ಸುಟ್ಟು ನಾಶ ವಾಗುತ್ತವೆ. ಹೀಗೆ ಸಂಕ್ರಾಂತಿ ಹಿನ್ನೆಲೆಯಲ್ಲಿ ಹಲವಾರು ಆರೋಗ್ಯಕರ ಆಚರಣೆಗಳಿದ್ದು ವಿಶೇವಾಗಿ ರೈತರು ಸಂಭ್ರಮಿಸುತ್ತಾರೆ. ಸಂಕ್ರಾಂತಿ ಕಾಲದಲ್ಲಿ ಸ್ನಾನ, ದಾನ, ತಪಸು, ಹೋಮ, ಪಿತೃತರ್ಪಣ, ದೇವತಾಪೂಜೆ ಇವುಗಳನ್ನು ಆಚರಿಸಿದಲ್ಲಿ ಅದು ಪುಣ್ಯಕರವಾದುದು ಎಂದು ಬ್ರಹ್ಮ ಪುರಾಣದಲ್ಲಿ ಹೇಳಲಾಗಿದೆ. 

ಸಂಭ್ರಮದ ಸಂಕೇತವಾಗಿರುವ ಮಕರ ಸಂಕ್ರಾಂತಿಯನ್ನು ಅರ್ಥಪೂರ್ಣವಾಗಿ ಆಚರಿಸೋಣ. ಜೀವನ ಮೌಲ್ಯಗಳುಳ್ಳ ಪುಣ್ಯರ್ಕಾಯಗಳನ್ನೇ ಮಾಡೋಣ. ಪರಿಶುದ್ಧ ಬದುಕನ್ನು ಬಾಳೋಣ. ಲೋಕವನ್ನು ಬೆಳಕಿನೆಡೆಗೆ ನಡೆಸೋಣ. ಸಾರ್ಥಕ ಜೀವನ ನಡೆಸೋಣ, ಸಂಪದ್ಭರಿತ ಬದುಕನ್ನು ಕಟ್ಟೋಣ. ಸರ್ವರಲ್ಲೂ ಸಹಬಾಳ್ವೆಯನ್ನು ಮೆರೆಯೋಣ.

click me!