ಯುಗಾದಿ: ಸುಖ ದುಃಖ ಸಮಾನವಾಗಿ ಸ್ವೀಕರಿಸಲು ಕಲಿಸುವ ಹಬ್ಬ

By Suvarna News  |  First Published Mar 22, 2023, 9:47 AM IST

ಇಂದು ಯುಗಾದಿ ಹಬ್ಬ
ಸಡಗರ ತರುವ ಹೊಸ ವರ್ಷದ ಆರಂಭೋತ್ಸವ
ವಸಂತ ಋತು ಆರಂಭ
ಎಲ್ಲೆಲ್ಲಿ ಹೇಗೆಲ್ಲ ಆಚರಿಸುತ್ತಾರೆ ?


ಎಚ್‌.ಮಲ್ಲಿಕಾರ್ಜುನ ಹರಪನಹಳ್ಳಿ

ಯುಗಾದಿ ಚೈತ್ರ ಮಾಸದ ಮೊದಲ ದಿನ. ಯುಗಾದಿಯ ಅರ್ಥ ಯುಗದ ಆದಿ. ಸಂಸ್ಕೃತದ ಯುಗ ಮತ್ತು ಆದಿ ಎಂಬ ಎರಡು ಶಬ್ದಗಳಿಂದ ಕೂಡಿದೆ. ಯುಗವೆಂದರೆ ಸೃಷ್ಟಿಯ ಕಾಲಮಾನ. ಆದಿ ಎಂದರೆ ಆರಂಭ ಎಂಬ ಅರ್ಥ. ಯುಗಾದಿಯನ್ನು ಬಡವ-ಬಲ್ಲಿದರೆಂಬ ತಾರತಮ್ಯವಿಲ್ಲದೆ ಎಲ್ಲಾ ಹಿಂದೂಗಳೂ ಆಚರಿಸುತ್ತಾರೆ. ರೈತರು ಎತ್ತುಗಳನ್ನು ಶೃಂಗರಿಸಿ ಸಂಭ್ರಮದಿಂದ ಹಬ್ಬವನ್ನು ಆಚರಿಸಿದರೆ, ವ್ಯಾಪಾರಿಗಳು ಅಂದಿನ ದಿನವೇ ಶುಭ ಕಾರ್ಯವನ್ನು ಮಾಡುತ್ತಾರೆ. ವರ್ಷದ ಆರಂಭದ ಶುಭ ದಿನವಾದ ಯುಗಾದಿ ಹಿಂದೂ ಪಂಚಾಂಗದ ಪ್ರಥಮ ದಿವಸ. ಹೊಸ ವರ್ಷದ ಆರಂಭೋತ್ಸವ ಮನೆ ಮನೆಗಳಲ್ಲಿ ಸಡಗರ ಸಂಭ್ರಮವನ್ನು ತುಂಬಿಸುತ್ತದೆ. ಹಸಿರು ತೋರಣಗಳ ಅಲಂಕಾರ, ಬೇವು ಬೆಲ್ಲ ಮಿಶ್ರಣವನ್ನು ಹಂಚಿ ಸವಿಯುವ ಸಂಪ್ರದಾಯವಿದೆ. ಮುಂದೆ ಬರುವ ಸುಖ-ದುಃಖಗಳನ್ನು ಸಮಾನಾಗಿ ಸ್ವೀಕರಿಸುತ್ತೇವೆ ಎಂಬ ವಾಗ್ದಾನವನ್ನು ಜನರು ತಮಗೆ ತಾವೇ ಕೊಟ್ಟುಕೊಳ್ಳುತ್ತಾರೆ.

Tap to resize

Latest Videos

ಈ ಹಬ್ಬವನ್ನು ಭಾರತದಲ್ಲಿ ಬೇರೆ-ಬೇರೆ ಹೆಸರಿನಿಂದ ಆಚರಿಸುತ್ತಾರೆ. ಕರ್ನಾಟಕದಲ್ಲಿ ‘ಯುಗಾದಿ’, ಮಹಾರಾಷ್ಟ್ರದಲ್ಲಿ ‘ಗುಢಿಪಾಡವಾ’, ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ ‘ಹೊಸ ವರ್ಷದ ಹಬ್ಬ’ವೆಂದು, ಉತ್ತರ ಭಾರತದಲ್ಲಿ ‘ಬೈಸಾಕಿ’ ಎಂದು ಇದು ಆಚರಿಸಲ್ಪಡುತ್ತದೆ.

ನಿಸರ್ಗದ ಚೆಲುವಿನ ಸಿಂಗಾರ
ಯುಗಾದಿ ಬಂದಿತೆಂದರೆ ಎಲ್ಲೆಡೆಯಲ್ಲಿ ಸಂತೋಷ, ಸಂಭ್ರಮ ತುಂಬಿ ತುಳುಕುತ್ತಿರುತ್ತದೆ. ಚೈತ್ರ ಮಾಸದಿಂದ ವಸಂತ ಋತು ಶುರುವಾಗುತ್ತದೆ. ವನಗಳೆಲ್ಲ ಚಿಗುರಿ ಹೂ ಬಿಟ್ಟು ಯುಗಾದಿಯ ಹರ್ಷವನ್ನು ಬೀರುತ್ತವೆ. ಎಲ್ಲಿ ನೋಡಿದರೂ ಮರಗಿಡಬಳ್ಳಿಗಳು ಹಸಿರಾಗಿ ನಳನಳಿಸುತ್ತವೆ.

Ugadi Yearly Horoscope; ಶುಭ ಫಲ ತರುವುದೇ ಶೋಭಾಕೃತ್ ಸಂವತ್ಸರ?

ಯುಗಾದಿಯ ದಿನ ಮುಂಜಾನೆ ಬೇವು ಮಿಶ್ರಿತ ನೀರಿನಿಂದ ಸ್ನಾನ ಮಾಡಿ, ಹೊಸ ಬಟ್ಟೆ ಧರಿಸಿ, ತಂತಮ್ಮ ದೇವರನ್ನು ಪೂಜಿಸಿ, ಬೇವು ಬೆಲ್ಲವನ್ನು ಸೇವನೆ ಮಾಡುತ್ತಾರೆ. ಬೇವು-ಬೆಲ್ಲವು ಸುಖ-ದುಃಖ, ರಾತ್ರಿ-ಹಗಲು ಇವುಗಳ ಸಂಕೇತಗಳಾಗಿವೆ. ಮಾನವರ ಬದುಕಿನಲ್ಲಿ ಸುಖ-ದುಃಖಗಳು ಅವಿಭಾಜ್ಯ ಅಂಶಗಳು. ಇವೆಲ್ಲವುಗಳೊಂದಿಗೆ ಸಮತೋಲನ ಕಾಯ್ದುಕೊಂಡೇ ಮನುಷ್ಯ ಬದುಕಬೇಕು. ಜೀವನ ಕಷ್ಟ-ಸುಖ, ನೋವು ನಲಿವುಗಳ ಸಮ್ಮಿಶ್ರಣವಾಗಿದೆ. ಇವೆರಡೂ ಒಟ್ಟಿಗೇ ಇರುವವು. ಎರಡನ್ನೂ ಸಮದೃಷ್ಟಿಯಿಂದ ಸವಿಯುವುದನ್ನು ಕಲಿಯಲೆಂದೇ ಯುಗಾದಿಯಂದು ಬೇವು-ಬೆಲ್ಲವನ್ನು ತಿನ್ನಿಸುವರು. ನೋವು ನಲಿವು ಎರಡಕ್ಕೂ ನಾವು ಸ್ವಾಗತ ನೀಡಬೇಕು. ನಾವು ಬೇವಿನ ಸಮಾನವಾದ ದುಃಖ, ಅಶಾಂತಿಯ ಪ್ರಪಂಚದಲ್ಲಿದ್ದರೂ ಬೆಲ್ಲದ ಸಮಾನವಾದ ಶಾಂತಿ, ಅತೀಂದ್ರಿಯ ಸುಖ, ಆತ್ಮೀಯತೆ, ಸ್ನೇಹ, ಮಧುರತೆಯ ಅನುಭವ ಪಡೆಯಬೇಕು ಎಂಬ ಸಂದೇಶ ಇದರಲ್ಲಿ ಅಡಗಿದೆ.

ಯುಗಾದಿ ವರ್ಷ ಭವಿಷ್ಯ; ದ್ವಾದಶ ರಾಶಿಗಳ ಈ ವರ್ಷದ ಫಲವೇನಿದೆ?

ಬೇವು-ಬೆಲ್ಲ ಸೇವನೆ ಏಕೆ?
ಯುಗಾದಿಯ ದಿನ ಸುಖದ ಸಂಕೇತವಾದ ಬೆಲ್ಲವನ್ನೂ ಮತ್ತು ಕಷ್ಟದ ಸಂಕೇತವಾದ ಬೇವನ್ನೂ ಸಮನಾಗಿ ಸೇವಿಸಲಾಗುತ್ತದೆ. ತಿಂದ ಮೇಲೆ ಬೆಲ್ಲವು ಹೊಟ್ಟೆಯೊಳಗೆ ಉರಿಯ ಅಥವಾ ಶಾಖವನ್ನು ಉಂಟು ಮಾಡಿದರೆ, ಬೇವು ಆ ಉರಿಯ ಶಮನಕಾರಿ. ಬೇವು-ಬೆಲ್ಲದ ಮಿಶ್ರಣವನ್ನು ತಿನ್ನುವಾಗ ಹೇಳುವ ಒಂದು ಶ್ಲೋಕ ಹೀಗಿದೆ: 
ಶತಾಯುಃ ವಜ್ರದೇಹಾಯ ಸರ್ವಸಂಪತ್ಕರಾಯಚ
ಸರ್ವಾರಿಷ್ಟವಿನಾಶಾಯ ನಿಂಬಕದಲ ಭಕ್ಷಣಂ

ಅದರರ್ಥ ಹೀಗಿದೆ - ನೂರು ವರುಷಗಳ ಆಯುಷ್ಯ, ಸದೃಢ ಆರೋಗ್ಯ, ಸಕಲ ಸಂಪತ್ತುಗಳ ಪ್ರಾಪ್ತಿಗಾಗಿಯೂ, ಸಕಲ ಅರಿಷ್ಟ ನಿವಾರಣೆಗಾಗಿಯೂ ಬೇವು ಬೆಲ್ಲ ಸೇವನೆ ಮಾಡುತ್ತೇನೆ. ಬೇವಿನ ಎಲೆಯೂ ಮಾನವನ ಆರೋಗ್ಯಕ್ಕೆ ಸಹಕಾರಿಯಾದುದು.

ವರ್ತಮಾನ ಸಮಯ ಕಲಿಯುಗದ ಕೊನೆಯ ಹಾಗೂ ಸತ್ಯಯುಗದ ಸಂಗಮ ಸಮಯವಾಗಿದೆ. ಹೀಗೆ ಕಲಿಯುಗದ ಅಂಧಕಾರದ ರಾತ್ರಿಯನ್ನು ಸತ್ಯಯುಗದ ಸುಜ್ಞಾನದ ಬೆಳಕನ್ನಾಗಿ ಪರಿವರ್ತಿಸುವ ಉದಯ ಕಾಲವೇ ಯುಗಾದಿ.

ಹಬ್ಬ ಆಚರಣೆಯ ವಿಧಾನ
ಯುಗಾದಿಯ ದಿನ ತಳಿರು ತೋರಣವನ್ನು (ಎಳೆಯ ಹಸಿರು ಮಾವಿನೆಲೆ ಮಧ್ಯೆ ಮಧ್ಯೆ ಬೇವಿನ ಎಲೆ ಹೂಗಳ ಗೊಂಚಲು) ಮನೆಗಳ ಮುಂಬಾಗಿಲಿಗೆ ಮತ್ತು ದೇವರ ಮನೆಯ ಬಾಗಿಲಿಗೆ ಕಟ್ಟಬೇಕು. ಮನೆಯ ಮುಂದೆ ಬಣ್ಣ ಬಣ್ಣದ ರಂಗೋಲಿಯನ್ನಿಡಬೇಕು. ಮುಂಜಾನೆ ಬೇಗನೆದ್ದು ಅಭ್ಯಂಜನ ಮಾಡಿ ಪುಣ್ಯಾಹ ಮಂತ್ರಗಳನ್ನು ಉಚ್ಚರಿಸಿ ಮಾವಿನೆಲೆಯಿಂದ ಮನೆಯ ಎಲ್ಲ ಕಡೆ ಕಲಶದ ನೀರನ್ನು ಸಿಂಪಡಿಸಬೇಕು. ನಂತರ ಹೊಸ ಬಟ್ಟೆಧರಿಸಿ ಪಂಚಾಂಗವನ್ನು ಮನೆಯ ಹಿರಿಯರು ಓದಬೇಕು. ಮತ್ತೆಲ್ಲರೂ ಅದನ್ನು ಕೇಳಬೇಕು. ಇದೇ ಪಂಚಾಂಗ ಶ್ರವಣ. ಹಿಂದೂ ವರ್ಷದ ಹೊಸ ಪಂಚಾಂಗಗಳು ಯುಗಾದಿಯ ದಿನದಿಂದ ಆರಂಭವಾಗುತ್ತವೆ. ಪಂಚಾಂಗವು ದಿನಸೂಚಿಯಷ್ಟೆಅಲ್ಲದೇ ಆ ವರುಷದಲ್ಲಿ ಮಳೆ ಬೆಳೆ ಹೇಗಿದೆ, ರಾಶಿಫಲ, ಮದುವೆ ಉಪನಯನಗಳಿಗೆ ಒಳ್ಳೆಯ ಮುಹೂರ್ತಗಳು, ಒಟ್ಟರೆ ಜನಜೀವನದ ಸ್ಥಿತಿಯನ್ನು ಕೂಡ ಸೂಚಿಸುತ್ತದೆ. ಅಂದು ಹಿರಿಯ ಕಿರಿಯರೆಲ್ಲರೂ ಹೊಸ ಬಟ್ಟೆಗಳನ್ನು ಧರಿಸಿ ಸಂತೋಷದಿಂದ ಹಬ್ಬ ಆಚರಿಸುತ್ತಾರೆ.

ಯುಗಾದಿಯ ವಿಶೇಷ ತಿನಿಸುಗಳು
ಒಬ್ಬಟ್ಟು ಅಥವಾ ಹೋಳಿಗೆ ಯುಗಾದಿಯ ವಿಶೇಷ ಸಿಹಿತಿನಿಸು. ತೆಂಗಿನ ಕಾಯಿಯ ಹೂರಣದಲ್ಲಿ ಮಾಡಿದ ಹೋಳಿಗೆ ಬಹಳ ದಿನ ಇರದೇ ಕೆಡುವುದೆಂದು ಕಡಲೆ ಅಥವಾ ತೊಗರಿ ಬೇಳೆಯ ಹೂರಣದಲ್ಲಿ ಹೋಳಿಗೆ ಮಾಡಲಾಗುತ್ತದೆ. ಸಂಜೆಯ ವೇಳೆಯಲ್ಲಿ ಗುರು ಹಿರಿಯರ ಮನೆಗಳಿಗೆ ಹೋಗಿ ಅವರಿಗೆ ಕಾಲುಮುಟ್ಟಿನಮಸ್ಕರಿಸಿ ಅವರ ಆಶೀರ್ವಾದ ಪಡೆಯುವ ಸಂಪ್ರದಾಯವೂ ಇದೆ. ಮನೆಯ ಹೆಂಗಸರು ಹೊಸದಾಗಿ ಬರುವ ಮಾವಿನಕಾಯಿಯಿಂದ ಈ ದಿನ ಉಪ್ಪಿನಕಾಯಿಯನ್ನು ಮಾಡುವರು.

Chaitra Navratri 2023 ದಿನಾಂಕ, ಮುಹೂರ್ತ, 9 ದಿನಗಳ ಆಚರಣೆ ಏನು?

ಯುಗಾದಿಯ ಸಂದೇಶ

ಯುಗಾದಿಯ ಬಗ್ಗೆ ದ.ರಾ.ಬೇಂದ್ರೆಯವರ ಈ ಕವಿತೆ ಸುಪ್ರಸಿದ್ಧವಾದುದು.

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ

ಬದುಕಿನಲ್ಲಿ ಬೇವು ಬೆಲ್ಲದಂತೆ ಸುಖವೂ ಇರುತ್ತದೆ, ದುಃಖವೂ ಇರುತ್ತದೆ. ಸುಖ ಬಂದಾಗ ಹಿಗ್ಗದೆ ದುಃಖ ಬಂದಾಗ ಕುಗ್ಗದೆ ಹಬ್ಬದ ಮಹತ್ವ ಅರಿತು ಸಂತಸದ ಬಾಳ್ವೆ ನಡೆಸೋಣ ಎಂಬುದೇ ಯುಗಾದಿಯ ಸಂದೇಶ.
 

click me!