ಮೂರನೇ ವಿಶ್ವಯುದ್ಧ ನಡೆಯುತ್ತಾ? ಈ ಯುದ್ಧ ಯಾವಾಗ ಮುಗಿಯತ್ತೆ? ಎಲ್ಲವೂ ಪುಟಿನ್ರ ಜಾತಕ ಫಲದ ಮೇಲೂ - ತತ್ಕಾಲ ಗೋಚಾರ ಗತಿಯ ಮೇಲೂ ಅವಲಂಬಿಸಿದೆ.
ಸದ್ಯ ಗೋಚಾರ ಕುಜನ ವರ್ಷ ಏಪ್ರಿಲ್ 2 , 2022ರವರೆಗೂ ಇದ್ದು - ರಾಜತ್ವ ಪಾಪಾಧಿಕನಾದ ಕುಜ(Mars)ನದ್ದೇ ಕಾರುಬಾರು ಇಡಿಯ ವರ್ಷ ನೋಡುತ್ತಿದ್ದೇವೆ. ಮರಣ, ಮಾರಣ, ದಂಡ, ದುಂದುಗಾರಿಕೆ, ಉಗ್ರ ಅಟ್ಟಹಾಸ ತುಂಬಿದ ವರ್ಷದ ಪ್ಲವ ಸಂವತ್ಸರದ ಕೊನೆಯ ಮಾಸದಲ್ಲಿ ನಾವಿದ್ದೀವಿ.
ಈಗ ಇಂಥ ಕುಜನು ಶತ್ರುಗತನಾಗಿ ಮಕರದಲ್ಲಿ ಉಚ್ಚನಾಗಿ ಶನಿ(Lord Shani)ಯ ಬೆರೆತ ಮಾಸವೂ ಆಗಿದೆ. ಶನಿ ಕುಜರ ಉಭಯ ಮಹಾಪುರಷ ಯೋಗಗಳೂ ಒಟ್ಟಿಗೇ ನಡೆಯುತ್ತಿದೆ. ಇದೂ ಅಪರೂಪವೇ.
ಶುಭನಾದ ಶುಕ್ರ - ಬುಧರೂ ಅಲ್ಲೇ ಸೇರಿರುವ ಕಾರಣ - ಅಣ್ವಸ್ತ್ರ ಮಹಾಯುದ್ಧಕೆ ತಡೆಯಾಗುವುದು. ಇದೊಂದು ಸಮಾಧಾನದ ಸಂಗತಿ.
ಏಪ್ರಿಲ್(April) ಪರ್ಯಂತ ರಷ್ಯಾ(Russia), ಯುರೋಪ್, ಅಮೆರಿಕ(America) ಅಟಾಟೋಪವೇ ನಡೆಯುವುದು. ಪುಟಿನ್ ಕೂಡಾ ವ್ಯಾವಹಾರಿಕ ಒಪ್ಪಂದಗಳಿಗೆ ಸಮ್ಮತಿಸಿ ಸಹಜ ಸ್ಥಿತಿಗೆ ತರುವಲ್ಲಿ ಆಸಕ್ತಿ ಇರುವ ವ್ಯಕ್ತಿಯೇ. ಸಂಶಯವಿಲ್ಲ. ಆದರೆ, ಸಂಶಯವೆಲ್ಲ ಇರೋದು - ರಾಹು ಶನಿ ಕಾರಕತ್ವ ಉಳ್ಳ ಯುರೋಪಿಯನ್ನರು ಹಾಗೂ ಅಮೆರಿಕನ್ನರ ಮೇಲೆಯೇ. ಇವರ ಅಟಾಟೋಪ ಸಂಚುಗಳ ಫಲವೇ ಪುಟಿನ್ ಹೀಗೆ ತಿರುಗಿ ಬೀಳಲು ಏಕಮೇವ ಕಾರಣ.
ಆದರೆ ದೋಷಿಯಾಗಿ ನೋಡುತ್ತಿರುವುದು ಪುಟಿನ್ರನ್ನು. ಅದಕ್ಕೂ ಆತನ ಜಾತಕ ಫಲವೇ ಕಾರಣ.
ಪುಟಿನ್ ಜಾತಕ(Putin's Horoscope)
ರಷ್ಯಾ ಅಧ್ಯಕ್ಷ ವ್ಲ್ಯಾಡಿಮಿರ್ ಪುಟಿನ್ ಅವರ ಜಾತಕ, ಜಾತಕದ ಈಗಿನ ಗ್ರಹಚಾರ ಮುಖ್ಯ ಅಂಶಗಳು ಹೀಗಿದೆ.
ಕೃತ್ತಿಕಾ ನಕ್ಷತ್ರ - ತುಲಾ ಲಗ್ನಜಾತ ಪುಟಿನ್ ಮಹಾ ಭಾಗ್ಯಶಾಲಿ ಜಾತಾ ಸಮರ್ಥ. ಯುದ್ಧ ಹಿಂಸೆ ಅಂತ ತಾನೇ ಮುಂದಡಿ ಇಡದವನೂ -ಅನ್ಯರು ಇಟ್ಟರೆ ತಲೆ ತೆಗೆಯದೇ ಬಿಡದವನೂ ಆಗಿರುವ ಯೋಗವಂತ.
ಸದ್ಯ ಶನಿ ದಶ ಅಂತ್ಯ ಕಾಲ ಗುರು ಭುಕ್ತಿ ಇದ್ದು - ಕನ್ಯಾ ಶನಿ ವ್ಯಯಸ್ಥಾನದಲ್ಲಿ ತುಲಾ ಲಗ್ನ ಉಚ್ಚ ವೀಕ್ಷಣೆ ಇರುವ ಯೋಗವಿದೆ. ಅನ್ಯರಿಗೆ ಶರಣ್ಯ ಅಂದರೆ ಅಭಯ ನೀಡುವ ಯೋಗವಿದು ಹೊರತು - ಅನ್ಯರ ಆಶ್ರಯದ ಅವಯೋಗ ಅಲ್ಲ.
ಯುದ್ಧದ ಮನಸ್ಸಿಲ್ಲ ಪುಟಿನ್ಗೆ
ವ್ಯಯದ ಶನಿಯ ಕಾರಣ ಮತ್ತು ಈ ಶನಿಗೆ ಗುರು ದೃಷ್ಟಿ ಇಲ್ಲದ ಕಾರಣವೂ, ಸದ್ಯ ಗುರು ಅಸ್ತನೂ ಇರಲು, ರವಿಯು ಕೃತ್ತಿಕೇಶನೂ ಆಗಿ , ಕರ್ಮಗತನಾಗಿ ಕುಂಭದಲ್ಲಿ ಇರಲು, ಶನಿ ಕುಜರ ಮಕರ ಮಹಾಯೋಗವೂ ನಡೆಯುತ್ತಿರಲು, ರಾಹು ಮೇಷದ ಕಡೆ ಇನ್ನೇನು ವಾಲುತ್ತ ಸಾಗಿರಲು - ಸಾಲದಕ್ಕೆ , ಏಪ್ರಿಲ್ನಿಂದ ಯುಗಾದಿಯು ಶನಿಯ ರಾಜತ್ವಕ್ಕೆ ಪೂರ್ಣ ಪಾಪವಾಗಿ ಬದಲಾಗಲಿದೆ.
ಯುದ್ಧ ಬೇಡ ಅಂತ ನಿಶ್ಚಿತ ಮನಸಿದೆ ಪುಟಿನ್ಗೆ. ಆದರೆ - ಪಾಪಗತಿ ಉಳ್ಳ ರಾಹು - ಕುಜ ಶನಿಗಳ ಭಾರೀ ಉಪಟಳ ಪುಟಿನ್ನಿಗೆ ಒತ್ತಾಯದಿಂದ ಯುದ್ಧ(war) ಸಾರಲೇಬೇಕಾಗಿ ಬಂದಿದೆ. ಇದನ್ನೇ ಗ್ರಹಚಾರ ಅನ್ನೋದು.
ಈ ಗ್ರಹಚಾರ ಪೀಡೆ 2022 ಕೊನೆವರೆಗೂ ಪುಟಿನ್ನ ರಷ್ಯಾವನ್ನು ಕಾಡಲಿದೆ. ಅದರ ದುಷ್ಪರಿಣಾಮ ಯುರೋಪ್ ಸಹಿತ ಸಮಸ್ತ ಪ್ರಪಂಚಕ್ಕೂ ಬಾಧೆ ಮುಂದುವರೆಯುತ್ತದೆ.
2023 ರಿಂದ ಪುಟಿನ್ಗೆ ಉಚ್ಚ ಬುಧನ ದೆಸೆ ಇದ್ದು - ವ್ಯಯ ಶನಿಯ ಬಾಧೆ ದೂರಾಗಿ - ಅಖಂಡ ರಷ್ಯಾವನ್ನು ಕಟ್ಟುವತ್ತ ಸಾಗುವನು. 70 ರ ಏರು ವೃದ್ಧ ಪ್ರಾಯದಲ್ಲಿ ಅತ್ಯಂತ ದುರ್ಬರವಾದ ಕಾಲ ಈ ಶನಿಯ ದೆಸೆಯ ಕೊನೆಯಲ್ಲಿ ಅನುಭವಕೆ ಬರುತ್ತಿದೆ. ಅದಕ್ಕೇ ಶನಿ ಎಂದರೆ ಎಲ್ಲರೂ ತರತರ ನಡುಗುವುದು.
ಇನ್ನು ಒಂದು ವರ್ಷ ಈತನಿಗೆ ವಕ್ರೀಗುರುವಿನ ಭುಕ್ತಿಯಲ್ಲಿ - ಅತ್ಯಧಿಕ ಒತ್ತಡವಾಗಿ ಆರೋಗ್ಯ ಏರುಪೇರು ಆದೀತು. ಅದೇ ಗುರುವಿನ ಮೀನದ ಏಕಾದಶ ಫಲ - ಶಾಂತಿ ಸಮಾಧಾನದತ್ತ ಒಯ್ಯುವುದು.
ಹಾಗೇ ಆಗಲಿ ಅಂತ ಸಜ್ಜನ ಪುಣ್ಯವಂತರೆಲ್ಲ ಶ್ರೀಹರಿ ವಾಯುಗುರುಗಳ ಪ್ರಾರ್ಥನೆ ಮಾಡುತ್ತಿರಬೇಕು.
ದೈವಜ್ಞ ಹರೀಶ್ ಕಾಶ್ಯಪ