ಈ ನೂತನ ಸಂವತ್ಸರದ ಹೆಸರು ಕ್ರೋಧಿ ಸಂವತ್ಸರ ಇದೇ ಎಪ್ರೀಲ್ 9 ರಿಂದ ಆರಂಭವಾಗುತ್ತಿದೆ. ಯುಗಾದಿ ಬಂತೆಂದರೆ ಎಲ್ಲೆಡೆ ಸಡಗರ ಸಂಭ್ರಮ
ಶಾರದಾ ಮೂರ್ತಿ
ಯುಗಾದಿ , ಯುಗಾದಿ
ತರಲಿ ಹೊಸ ಹರುಷ ಇರಲಿ ಪ್ರತಿ ನಿಮಿಷ.
ಮಾವಿನ ಚಿಗುರಲಿ, ಬೇವಿನ ಕಹಿಯಲಿ,
ಬೆಲ್ಲದ ಸಿಹಿಯಲಿ, ಒಲವಿನ ಸವಿಯಲಿ,
ಒಲುಮೆಯ ತೋರಣವ ಕಟ್ಟುತ,
ಗೆಲುವಿನ ಸಿಹಿ ಹೂರಣವ ಸವಿಯುತ,
ಕಟ್ಟುತ, ಮೆಲ್ಲುತ,
ಬೇವು ಬೆಲ್ಲದ ಸಮಪಾಲಲಿ ಸಾಗುತ,
ಹಳೆಯ ನೋವ ತೊಳೆಯುತ,
ಹೊಸತು ಸವಿಯ ಅಪ್ಪುತ,
ಎಲ್ಲರನರಿತು ಬೆರೆವ, ಬಾಳುತ
ಒಲುಮೆಯ ಜೀವನ ಅನವರತಹೊಟ್ಟೆಪಾಡಿಗಾಗಿ ಕರಾವಳಿಯಿಂದ ಘಟ್ಟದ ಮೇಲೆ ಬಂದ ಅಮ್ಮ ಅಪ್ಪ; ಅವರು ಆಚರಿಸುತ್ತಿದ್ದ ಸೌರಮಾನ ಯುಗಾದಿಯ ಆಚರಣೆಯನ್ನು ಚಾಂದ್ರಮಾನ ಯುಗಾದಿಗೆ ಬದಲಾಯಿಸಿಕೊಳ್ಳಲು ಮಾನಸಿಕವಾಗಿ ಬಹಳ ಒದ್ದಾಡಿರಬೇಕು. ಹಾಗಾಗಿ ಎರಡೂ ಯುಗಾದಿಯನ್ನು ಆಚರಿಸುವ ನಿರ್ಧಾರ ಮಾಡಿರಬಹುದು. ನಾವು ಬೆಳೆದಂತೆ ಚಾಂದ್ರಮಾನ, ಸೌರಮಾನ ಎರಡೂ ಹಬ್ಬಗಳನ್ನು ಸಾಂಪ್ರದಾಯಿಕವಾಗಿ ಆಚರಿಸುವಾಗ ನಮಗೆ ಆಚರಣೆಗಳ ಸಂಭ್ರಮ, ಖುಷಿ.
ಚಾಂದ್ರಮಾನ ಯುಗಾದಿಯಂದು ಮಾವಿನ, ಬೇವಿನ ಸೊಪ್ಪಿನ ತೋರಣ ಮನೆ ಬಾಗಿಲಿಗೆ ಕಟ್ಟುವ ಉತ್ಸಾಹ, ಖುಷಿ. ಎಣ್ಣೆ ಸ್ನಾನವಂತೂ ಕಡ್ಡಾಯ. ಮಧ್ಯಾಹ್ನ ವಿಶೇಷ ಊಟಕ್ಕಿಂತ ಸಂಜೆ ಕಂಡೂ ಕಾಣದಂತೆ ದರ್ಶನ ನೀಡಿ ಮಾಯವಾಗುವ ಬೆಳ್ಳಿಗೆರೆಯ ಪಾಡ್ಯದ ಚಂದಿರನ ನೋಡುವ ಸಂಭ್ರಮವೇ ಹೆಚ್ಚು. ಆ ಸಂಜೆ ಹೊಸ ಬಟ್ಟೆ ಧರಿಸಿ ಪುಟ್ಟ ಪೇಟೆಯಂತಿದ್ದ ನಮ್ಮ ಮನೆಯ ರಸ್ತೆಗೆ ಸಮಸ್ತ ಹಳ್ಳಿಯ ಜನರು ಸೇರಿ ಚಂದಿರನ ಹುಡುಕುವಾಗ ಅಮೂಲ್ಯ ನಿಧಿ ಶೋಧದಲ್ಲಿ ತೊಡಗಿದ್ದಾರೇನೋ ಎನಿಸುವಷ್ಟು ಗಂಭೀರವಾಗಿ ಎಲ್ಲರ ಮುಖಗಳು ಆಕಾಶದತ್ತ.
ಯಾರಿಗೆ ಮೊದಲು ಚಂದ್ರ ಕಾಣಿಸುತ್ತಾನೆ ಎಂಬ ಹುಡುಕಾಟ ಸಂಜೆ ನಾಲ್ಕು ಗಂಟೆಯಿಂದಲೇ ಪ್ರಾರಂಭವಾಗುತ್ತಿತ್ತು. ಆರು ಗಂಟೆ ಸುಮಾರಿಗೆ ಸಣ್ಣಗೆ ಕಾಣುತ್ತಿದ್ದ ಚಂದಿರ. ಮೊದಲು ಚಂದ್ರನನ್ನು ನೋಡಿದವರ ಸಂಭ್ರಮ, ಸಡಗರ ಹೇಳತೀರದು. ಸಾಮಾನ್ಯವಾಗಿ ನನ್ನ ಅಮ್ಮನಿಗೇ ಅದು ಮೊದಲು ಕಾಣುತ್ತಿದ್ದದು. ಈಗಲೂ ಊರಿನವರೆಲ್ಲ ಅದನ್ನು ನೆನಪಿಸಿಕೊಳ್ಳುತ್ತಾರೆ. ಅಲ್ಲಿ, ಇಲ್ಲಿ, ಮರದ ಸಂದಿ, ನೇರ ನೋಡಿ ಈ ಕಡೆಯಿಂದ ತಿರುಗಿ ನೋಡಿ, ಆ ತೆಂಗಿನ ಮರದ ತುದಿಯ ನೇರಕ್ಕೆ ನೋಡಿ, ಎಲೆಕ್ಟ್ರಿಕ್ ವಯರ್‌ನ ಮೇಲೆ ನೋಡಿ …ಹೀಗೆಲ್ಲಾ ಒಬ್ಬರಿಗೊಬ್ಬರು ತೋರಿಸುವಾಟ.
ನಾವು ಮಕ್ಕಳೆಲ್ಲಾ ಕಾಯುತ್ತಿದ್ದುದು ಚಂದ್ರನನ್ನು ನೋಡಿ ಹಿರಿಯರಿಗೆ ನಮಸ್ಕರಿಸಿ ನಂತರ ಹಂಚುತ್ತಿದ್ದ ಪಂಚಕಜ್ಜಾಯ ಅಥವಾ ಕಡಲೆ ಹಿಟ್ಟು ತಿನ್ನಲು. ಹುರಿಗಡಲೆ, ಬೆಲ್ಲ, ಬೇವಿನ ಹೂ, ಬೇವಿನ ಚಿಗುರು, ಕೊಬ್ಬರಿ, ಏಲಕ್ಕಿ ಎಲ್ಲ ಸೇರಿಸಿ ಬೀಸುವ ಕಲ್ಲಿನಲ್ಲಿ ಪುಡಿ ಮಾಡಿದ ಪಂಚಕಜ್ಜಾಯ ಬಲು ರುಚಿ. ಅವರ ಮನೆಯದು ಹೇಗಿದೆ, ಇವರ ಮನೆಯದು ಹೇಗಿದೆ, ಎಂದು ರುಚಿ ನೋಡುವುದು.. ಬಾಯಲ್ಲಿ ಕಡ್ಲೆಹಿಟ್ಟು ತುಂಬಿಕೊಂಡು ಎದುರಿಗಿದ್ದವರ ಮುಖದ ಮುಂದೆ ‘ಬೂದಿ ಬುಧವಾರ’ ಎಂದು ಹೇಳಿ ಅವರ ಮುಖದ ತುಂಬೆಲ್ಲ ಪಂಚಕಜ್ಜಾಯದ ಸಿಂಪಡಣೆ ಆದಾಗ ಮಜಾ ತೆಗೆದುಕೊಳ್ಳುವುದು. ಈ ಎಲ್ಲಾ ಸಂಭ್ರಮದಿಂದ ಕೂಡಿದ್ದ ಯುಗಾದಿ ಈಗಲೂ ಹಬ್ಬದ ದಿನ ನನ್ನ ನೆನಪಿನಲ್ಲಿ ರಿಂಗಣಿಸುತ್ತದೆ.
ಆ ನೆನಪು ಬಿಡಲಾಗದೆ ಪಂಚಕಜ್ಜಾಯ ತಯಾರಿಸಿದರೆ, ಪಟ್ಟಣದ ನಾಲ್ಕು ಗೋಡೆಯ ಮಧ್ಯೆ ಎರಡು ಬೆರಳಲ್ಲಿ ಚಿಟಿಕೆ ಪಂಚಕಜ್ಜಾಯ ತಿಂದ ಶಾಸ್ತ್ರ ಮಾಡುವ ವಾಸ್ತವಕ್ಕೆ ಹೊಂದಿಕೊಂಡು ಬಾಳುವ ಜೀವನವಿದು. ಇದುವೇ ಹೊಂದಾಣಿಕೆಯ ಜೀವನ .
ಕರಾವಳಿ ಭಾಗದ ಸೌರಮಾನ ಯುಗಾದಿಯಂದು ರಾತ್ರಿಯೇ ಅಣಿ ಮಾಡಿಟ್ಟ ಕಲಶ ಅಕ್ಕಿ ತರಕಾರಿ ಕನ್ನಡಿಯಿಂದ ಕೂಡಿದ ‘ಕಣಿ’ ಯನ್ನು ಬೆಳಗ್ಗೆ ಎದ್ದ ಕೂಡಲೇ ಆ ಕನ್ನಡಿಯಲ್ಲಿ ಮುಖ ನೋಡುವ ಸಂಪ್ರದಾಯ. ಮತ್ತೆ ಅಭ್ಯಂಜನ ಸ್ನಾನ, ಸಿಹಿ ಊಟ.
ಬ್ರಹ್ಮನು ವಿಶ್ವವನ್ನು ಸೃಷ್ಟಿ ಮಾಡಿದ ದಿನ ‘ಯುಗಾದಿ’ ಎಂಬ ಪ್ರತೀತಿ ನಮ್ಮ ಹಿಂದೂ ಧರ್ಮದ ಆಚರಣೆಯಲ್ಲಿದೆ. ಹೀಗೆ ಸೃಷ್ಟಿ ಮಾಡುವಾಗ ವಾರ, ದಿನ, ಮಾಸ, ತಿಥಿ ಇವುಗಳ ಹುಟ್ಟೂ ಸಹಾ ಸೃಷ್ಟಿ ಆಯಿತು. ಮೊದಲನೇ ಪರ್ವದ ಆದಿಯ ತಿಥಿಯು ಪ್ರಾರಂಭ ವಾಗುವುದು ಯುಗಾದಿಯಂದು. ಕುಂಡಲಿಯ ಪ್ರಕಾರ ಚಂದ್ರನಿಗೆ ಮೊದಲ ಪ್ರಾಶಸ್ತ್ಯ. ಆದ್ದರಿಂದ ಯುಗಾದಿಯ ಈ ಶುಭದಿನದಂದು ‘ಚಂದ್ರ ದರ್ಶನ’ ಅತ್ಯಮೂಲ್ಯ ಸ್ಥಾನ ಪಡೆದಿದೆ.
ಪಂಚಾಂಗ ಶ್ರವಣ, ಬೇವು ಬೆಲ್ಲದ ಸವಿಯೊಂದಿಗೆ, ಹೊಸ ಚಿಗುರಿನ ನವಚೈತನ್ಯದೊಂದಿಗೆ, ಪ್ರಕೃತಿಯ ಆರಾಧನೆಯ ಜೊತೆ ಚಂದ್ರನಿಗೆ ನಮಿಸುವುದು ಸಹಾ ಪದ್ಧತಿಯಾಗಿ ಮೂಡಿಬಂದಿದೆ. ಗಣೇಶ ಚತುರ್ಥಿಯಂದು ತನ್ನ ವಾಹನ ಇಲಿಯನ್ನೇರಿ ಪ್ರಯಾಣಿಸುತ್ತಿರುವಾಗ ಆಯ ತಪ್ಪಿ, ಕೆಳಗೆ ಬಿದ್ದ ಗಣೇಶನನ್ನು ಚಂದ್ರ ನೋಡಿ ಗಹಗಹಿಸಿ ನಗುತ್ತಾನೆ. ಕೋಪಗೊಂಡ ಗಣೇಶ, ಗಣೇಶ ಚತುರ್ಥಿಯಂದು ಚಂದ್ರನನ್ನು ನೋಡಿದರೆ ಅಪವಾದ ಬರಲಿ ಎಂದು ಶಾಪವಿತ್ತ. ಆ ಶಾಪ ವಿಮೋಚನೆಗೆ ಯುಗಾದಿಯ ಚಂದ್ರ ದರ್ಶನದಿಂದ ಪರಿಹಾರ ಎಂಬ ನಂಬಿಕೆಯೂ ಇದೆ.
ಹಿಂದೂ ಹೊಸ ವರ್ಷ 30 ವರ್ಷ ನಂತರ ಶುಭ ಯೋಗದಲ್ಲಿ ಪ್ರಾರಂಭ, ಈ ರಾಶಿಗೆ ಬಯಸಿದ್ದೆಲ್ಲ ಸಿಗತ್ತೆ
ಈ ಯುಗಾದಿಯಂದು ನಮ್ಮ ಬಾಳಲ್ಲಿ ಸಿಹಿಯ ಹೊಸತನ್ನು ಬರಮಾಡಿಕೊಂಡು, ಹಳೆಯ ಕಹಿಯನ್ನು ಮರೆಯೋಣ. ನೋವಿನ ನಿನ್ನೆಯ ಕೊಂದು, ನಲಿವಿನ ನಾಳೆಯನ್ನು ಸ್ವಾಗತಿಸೋಣ. ನಮ್ಮನ್ನು ಹೊಸತಿನೆಡೆಗೆ ಕೊಂಡೊಯ್ಯುವ ಮನ, ಹೊಸತಿನೆಡೆಗೆ ತುಡಿತ, ಹೊಸತನ್ನು ಕಲಿವ ಸಹೃದಯ, ಸುಮನಸಿನ ಸ್ನೇಹವನ್ನು ಯುಗಾದಿಯ ಹೊಸತಿನಿಂದ ಪಡೆಯೋಣ, ನಲಿಯೋಣ. ‘ಚಂದ್ರೋದಯ ಸೂರ್ಯೋದಯ ದೇವರ ವರ ಕಾಣೋ’ ಎಂಬ ಕವಿವಾಣಿಯಂತೆ ದೇವರು ದಯಮಾಡಿ ನೀಡಿದ ಅಮೂಲ್ಯ ಮನುಜ ಜನ್ಮದಿ ಪ್ರಕೃತಿಯ ಎಲ್ಲಾ ಸಂಭ್ರಮವನ್ನು ಖುಷಿಯಿಂದ ಸ್ವಾಗತಿಸೋಣ, ಆನಂದಿಸೋಣ.
‘ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ’ ಎಂಬ ಚೆನ್ನುಡಿಯಂತೆ ಮರಳಿ ಬರುವುದರ ಜೊತೆ, ಹೊಸತನ್ನು, ನವಚೈತನ್ಯವನ್ನೂ, ನಮಗೆ ತಿರುಗಿ ಕೊಡುವ ಪ್ರಕೃತಿ ಮಾತೆಗೆ ನಮ್ಮ ನಮನವನ್ನು ಸಲ್ಲಿಸಲೇ ಬೇಕಲ್ಲವೇ?