ರಾಮನ ವಂಶದವರು ಮಹಾಭಾರತ ಕಾಲದಲ್ಲೂ ಇದ್ದರು ಹಾಗು ಕುರುಕ್ಷೇತ್ರ ಯುದ್ಧದಲ್ಲಿ ಭಾಗವಹಿಸಿದ್ದರು ಎಂಬ ಅಂಶ ಕುತೂಹಲ ಮೂಡಿಸುತ್ತದೆ ಅಲ್ಲವೇ?
ರಾಮಾಯಣ ಹಾಗೂ ಮಹಾಭಾರತ, ಭಾರತದ ಎರಡು ಮಹಾಕಾವ್ಯಗಳು. ಹಾಗೂ ಇವನ್ನು ಅಂದಿನ ಇತಿಹಾಸ ಎಂದೂ ಹೇಳಲಾಗುತ್ತದೆ. ಮೊದಲು ತ್ರೇತಾಯುಗದಲ್ಲಿ ರಾಮಾಯಣ ನಡೆಯಿತು, ನಂತರ ದ್ವಾಪರ ಯುಗದಲ್ಲಿ ಮಹಾಭಾರತ ಯುದ್ಧ ನಡೆಯಿತು ಎಂದು ನಂಬಿಕೆ. ಇದಕ್ಕೆ ಪೂರಕ ಎನಿಸುವಂತೆ ರಾಮಾಯಣದ ಹಲವು ಪಾತ್ರಗಳು ಮಹಾಭಾರತದಲ್ಲೂ ಬರುತ್ತವೆ. ಹಾಗೇ ರಾಮಾಯಣದ ಕತೆಗಳನ್ನೂ ಮಹಾಭಾರತದಲ್ಲಿ ಕೆಲವು ಪಾತ್ರಗಳು ಹೇಳುತ್ತವೆ. ಇವೆರಡೂ ನಿಜವಾಗಿಯೂ ನಡೆದ ಘಟನೆಗಳು ಎಂದು ಹಲವು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಇದಕ್ಕೆ ಪೂರಕವಾದ ದಾಖಲೆಗಳೂ ಸಿಕ್ಕಿವೆ. ಹಾಗಿದ್ದರೆ ಮಹಾಭಾರತದಲ್ಲಿ ನಡೆದ ಕುರುಕ್ಷೇತ್ರ ಮಹಾಯುದ್ಧದಲ್ಲಿ ಶ್ರೀರಾಮನ ವಂಶಸ್ಥರು ಭಾಗವಹಿಸಿದ್ದರೇ? ಇದ್ದರೆ ಕುರುಕ್ಷೇತ್ರ ಯುದ್ಧದಲ್ಲಿ ಯಾರ ಪರವಾಗಿ ಹೋರಾಡಿದ್ದರು ಎಂಬ ಕುತೂಹಲ ಮೂಡುತ್ತದೆ.
ರಾಮಾಯಣದಲ್ಲಿನ ಅವತಾರ ಪುರುಷ ರಾಮನ ಸೂರ್ಯ ವಂಶ ಅಥವಾ ಇಕ್ಷ್ವಾಕು ವಂಶಕ್ಕೆ ಸೇರಿದವರು ಮಹಾಭಾರತದ ಕಾಲದಲ್ಲೂ ಇದ್ದರೆಂದು ತಿಳಿಯುತ್ತದೆ. ಶ್ರೀರಾಮನಿಗೆ ಮೂವರು ಸಹೋದರರು. ಈ ಪೈಕಿ ಭರತ ತಕ್ಷಶಿಲೆ ನಗರಿಯನ್ನು ನಿರ್ಮಿಸಿದ, ಅದೇ ಮುಂದೆ ತಕ್ಷಶಿಲಾ ವಿಶ್ವವಿದ್ಯಾನಿಲಯ ಎಂದು ಪ್ರಸಿದ್ಧಿ ಪಡೆದು ಇಂದು ಪಾಕಿಸ್ತಾನ ಪ್ರಾಂತ್ಯದಲ್ಲಿರುವ ತಕ್ಸಿಲಾ ನಗರ ಎಂದು ಕರೆಯಲ್ಪಡುತ್ತಿದೆ. ಲಕ್ಷ್ಮಣ ನಿರ್ಮಿಸಿದ್ದ ಲಕ್ಷ್ಮಣ ಪುರಿ ಎಂಬ ನಗರವನ್ನು ಇಂದು ಲಖನೌ ಎಂದು ಕರೆಯುತ್ತಿದ್ದೇವೆ. ಇನ್ನು ರಾಮನ ಮತ್ತೋರ್ವ ಸಹೋದರ ಶತ್ರುಘ್ನ ನಿರ್ಮಿಸಿದ್ದ ಮಧುವನ ಮಥುರಾ ನಗರವಾಗಿದ್ದು ಮಹಾಭಾರತದಲ್ಲಿ ವಿಷ್ಣುವಿನ ಅವತಾರವಾಗಿದ್ದ ಶ್ರೀಕೃಷ್ಣ ಜನಿಸಿದ ಪ್ರದೇಶವಾಗಿದೆ.
undefined
ಶಂಖದ ಮಹಿಮೆಯಿಂದ ನಿಮ್ಮ ಮನೆಯಾಗಬಹುದು ಲಕ್ಷ್ಮೀ ನಿವಾಸ!
ಇವಿಷ್ಟು ರಾಮನ ಸಹೋದರರ ಬಗೆಗಿನ ಮಾಹಿತಿ. ಎಲ್ಲರಿಗೂ ತಿಳಿದಿರುವಂತೆಯೇ ರಾಮನಿಗೆ ಲವ-ಕುಶ ಎಂಬ ಇಬ್ಬರು ಮಕ್ಕಳು. ಅವರು ಹುಟ್ಟಿದ್ದು ಇಂದಿನ ಅಮೃತಸರವಾಗಿರುವ ಅಂದಿನ ರಾಮತೀರ್ಥ ಎಂಬ ಪ್ರದೇಶದಲ್ಲಿದ್ದ ವಾಲ್ಮೀಕಿ ಋಷಿಗಳ ಆಶ್ರಮದಲ್ಲಿ. ವಾಲ್ಮೀಕಿಗಳು ಜೀವಿಸಿದ್ದರೆಂಬ ಪ್ರದೇಶದಲ್ಲಿ ರಾಮತೀರ್ಥ ದೇವಾಲಯವಿದ್ದು, ಸಣ್ಣ ಗುಡಿಸಲನ್ನು ನಿರ್ಮಿಸಲಾಗಿದೆ.
ಇಂದಿನ ಲಾಹೋರ್ ಅನ್ನು ರಾಮನ ಮಗ ಲವ ನಿರ್ಮಿಸಿದ್ದೆಂಬ ಪ್ರತೀತಿ ಇದೆ. ಶ್ರೀರಾಮನ ನಂತರ ಲವ-ಕುಶರು ಆಯೋಧ್ಯೆಯ ಉತ್ತರ ಭಾಗವನ್ನು ಹಾಗೂ ಅಲ್ಲಿಂದ ಕೋಸಲದ ಪೂರ್ವಭಾಗವನ್ನು ಆಳುತ್ತಿದ್ದರು. ಇದೇ ಪ್ರದೇಶ ಅಂದರೆ ಕೋಸಲ ಸಾಮ್ರಾಜ್ಯ ಮಹಾಭಾರತದ ಕಾಲದ ವೇಳೆಗೆ 5 ಭಾಗಗಳಾಗಿತ್ತು. ಅವೇ ಉತ್ತರ, ದಕ್ಷಿಣ, ಪೂರ್ವ ಹಾಗೂ ಮಧ್ಯ ಕೋಸಲಗಳು, ಮಧ್ಯ ಕೋಸಲ ಹಾಗೂ ದಕ್ಷಿಣ ಕೋಸಲದ ನಡುವಿನ ಒಂದಷ್ಟು ಭಾಗವನ್ನು ಆಳುತ್ತಿದ್ದವರೇ ರಾಮನ ವಂಶಸ್ಥರೆಂಬ ಪ್ರತೀತಿ ಇದೆ.
ಮಹಾಭಾರತದ ಕಾಲಕ್ಕೆ ಪೂರ್ವ ಕೋಸಲವನ್ನು ಮಗಧ ರಾಜ ಜರಾಸಂಧ ವಶಪಡಿಸಿಕೊಂಡರೆ, ರಾಮ ಆಳುತ್ತಿದ್ದ ಮಧ್ಯ ಕೋಸಲವನ್ನು ಧೀರ್ಘಾಯಗ್ನ್ಯಾ ಎಂಬ ರಾಜ ಆಳುತ್ತಿದ್ದ ಹಾಗೂ ಅಯೋಧ್ಯೆಯನ್ನೇ ರಾಜಧಾನಿಯನ್ನಾಗಿರಿಸಿಕೊಂಡಿದ್ದ. ಇನ್ನು ಉತ್ತರ ಕೋಸಲ ಸಾಮ್ರಾಜ್ಯವನ್ನು ಪಾಂಡವ ಸಹೋದರರಾದ ಭೀಮ, ದಕ್ಷಿಣ ಕೋಸಲ ಸಾಮ್ರಾಜ್ಯವನ್ನು ಸಹದೇವ ಸೇನಾ ದಂಡಯಾತ್ರೆಯಲ್ಲಿ ವಶಪಡಿಸಿಕೊಂಡಿದ್ದರು.
ಮಧ್ಯ ಕೋಸಲ ಹಾಗೂ ದಕ್ಷಿಣ ಕೋಸಲದ ನಡುವಿನ ಒಂದಷ್ಟು ಭಾಗವನ್ನು ಆಳುತ್ತಿದ್ದವರು ಕುಶನ ಮುಂದಿನ ಪೀಳಿಗೆಗೆ ಸೇರಿದ ಬೃಹದ್ಬಲ ಎಂಬ ರಾಜ. ರಾಮನ ಮಗ ಕುಶನ ನಂತರ ಬಂದ 28ನೇ ರಾಜನೇ ಈ ಬೃಹದ್ಬಲ ಎಂಬ ನಂಬಿಕೆ ಇದೆ. ಅಚ್ಚರಿಯೆಂದರೆ ಈ ಬೃಹದ್ಬಲ ಕುರುಕ್ಷೇತ್ರದಲ್ಲಿಯೂ ಭಾಗಿಯಾಗಿದ್ದು ಕೌರವರ ಪರವಾಗಿ ಹೋರಾಡಿದ್ದ. ಅದಕ್ಕೆ ಕಾರಣ ಕರ್ಣ. ಪಾಂಡವರು ವನವಾಸದಲ್ಲಿ ಇದ್ದಾಗ ಕರ್ಣ ಒಂದು ವಿಜಯಯಾತ್ರೆ ಮಾಡಿದ್ದು, ಅದರಲ್ಲಿ ಬೃಹದ್ಬಲನನ್ನು ಸೋಲಿಸಿದ್ದ. ಹೀಗಾಗಿ ಬೃಹದ್ಬಲ, ಕೌರವನ ಪರ ಸೇರಿದ್ದ. ಯುದ್ಧದಲ್ಲಿ ಹೋರಾಡುತ್ತಾ, ಹದಿನಾಲ್ಕನೇ ದಿನ, ಅಭಿಮನ್ಯವಿನ ಜೊತೆ ಹೋರಾಡಿ ಅವನ ಬಾಣದ ಹೊಡೆತದಿಂದ ಸತ್ತಹೋದ.
ರಾಮನ ಇಕ್ಷ್ವಾಕು ವಂಶಕ್ಕೆ ಸೇರಿದವರು ನಂದರ ಕಾಲದಲ್ಲಿಯೂ ಇದ್ದರೆಂದೂ ಕೊನೆಯ ರಾಜ ಸುಮಿತ್ರನನ್ನು ಮಹಾಪದ್ಮನಂದ ಸೋಲಿಸಿದನೆಂದೂ ಹೇಳಲಾಗುತ್ತದೆ.