ಮಳೆ ಸರಿಯಾಗಿ ಆಗಲೆಂದು ಜನರು ಕಪ್ಪೆಗಳಿಗೆ ಅಥವಾ ಕತ್ತೆಗಳಿಗೆ ಮದುವೆ ಮಾಡಿಸಿದ ಸಾಕಷ್ಟು ಪ್ರಕರಣಗಳನ್ನು ಕೇಳಿದ್ದೇವೆ, ನೋಡಿದ್ದೇವೆ. ಆದರೆ, ಮಳೆಗಾಗಿ ಮಹಿಳೆಯರ ನಡುವೆ ಮದುವೆ ಮಾಡಿಸೋದನ್ನು ನೋಡಿದ್ದೀರಾ..?
ವರದಿ: ಭರತ್‌ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣ ನ್ಯೂಸ್
ಉತ್ತರ ಕನ್ನಡ (ಆ.01): ಮಳೆ ಸರಿಯಾಗಿ ಆಗಲೆಂದು ಜನರು ಕಪ್ಪೆಗಳಿಗೆ ಅಥವಾ ಕತ್ತೆಗಳಿಗೆ ಮದುವೆ ಮಾಡಿಸಿದ ಸಾಕಷ್ಟು ಪ್ರಕರಣಗಳನ್ನು ಕೇಳಿದ್ದೇವೆ, ನೋಡಿದ್ದೇವೆ. ಆದರೆ, ಮಳೆಗಾಗಿ ಮಹಿಳೆಯರ ನಡುವೆ ಮದುವೆ ಮಾಡಿಸೋದನ್ನು ನೋಡಿದ್ದೀರಾ..? ಈ ವಿಶಿಷ್ಟ ಹಾಗೂ ಅಪರೂಪದ ಆಚರಣೆಯನ್ನು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಹುಳಸೆಕೇರಿ ಹಾಲಕ್ಕಿ ಒಕ್ಕಲಿಗರು ದಶಕಗಳಿಂದಲೂ ನಡೆಸಿಕೊಂಡು ಬರುತ್ತಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಭರ್ಜರಿ ಮಳೆಯಾಗಿದ್ದು, ಹಲವೆಡೆ ನೆರೆ ಕಾಟ ಉಂಟಾಗಿ ಜನರ ಜೀವನವೇ ಅಧೋಗತಿಯಾಗಿತ್ತು.
undefined
ಆದರೆ, ಈ ಬಾರಿ ಜೂನ್ ಪ್ರಾರಂಭದ ಎರಡು ವಾರಗಳ ಕಾಲ ರಕ್ಕಸ ಮಳೆ ಕಾಣಿಸಿಕೊಂಡಿದ್ರೂ, ನಂತರದ ದಿನಗಳಲ್ಲಿ ಇದು ಮಳೆಗಾಲವೇ..? ಎಂಬ ಪ್ರಶ್ನೆ ಮೂಡುವಂತಾಗಿದೆ. ಯಾಕಂದ್ರೆ, ಹಲವು ದಿನಗಳಿಂದ ಜಿಲ್ಲೆಯಲ್ಲಿ ಉತ್ತಮ ಮಳೆ ಕಾಣದೆ ರೈತರು, ಮೀನುಗಾರರು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈ ಕಾರಣದಿಂದ ಹಾಲಕ್ಕಿ ಒಕ್ಕಲಿಗರಿಂದ ಗೋಕರ್ಣದ ಕೇತಕಿ ವಿನಾಯಕ ಮತ್ತು ಕರಿ ದೇವರ ಸನ್ನಿಧಿಯಲ್ಲಿ ದಾದುಮ್ಮನ ಮದುವೆ ವಿಜೃಂಭಣೆಯಿಂದ ನಡೆಯಿತು. ಆಧುನಿಕತೆಯ ವಾದ್ಯ ಘೋಷ, ಡಿಜೆ ಹಾಡು, ಜಾನಪದೀಯ ಹಾಡು ಹೀಗೇ ಆಧುನಿಕ ಸ್ಪರ್ಶದಲ್ಲಿ ಸಾಂಪ್ರದಾಯಿಕ ಮೆರಗು ಮುಗಿಲು ಮುಟ್ಟಿತ್ತು.
ಅತ್ತ ಕಾರವಾರದಲ್ಲಿ ಆಸ್ಪತ್ರೆಗಾಗಿ ಮೋದಿಗೆ ರಕ್ತ ಪತ್ರ, ಇತ್ತ ಆಸ್ಪತ್ರೆಯ ಸುಳಿವು ಕೊಟ್ಟ ಸಚಿವ
ಅಂದಹಾಗೆ, ಈ ಮದುವೆ ಸಂಪೂರ್ಣ ಮಹಿಳೆಯರೇ ನೆರವೇರಿಸುವುದು ಮತ್ತೊಂದು ವಿಶೇಷ. ಮದುವೆಯನ್ನು ಮಳೆ ದೇವರಾದ ದೇವೇಂದ್ರನನ್ನು ಮೆಚ್ಚಿಸಲು ಹಾಲಕ್ಕಿ ಸಮುದಾಯದವರು ಈ ಸಂಪ್ರದಾಯವನ್ನು ನಡೆಸುತ್ತಾ ಬಂದಿದ್ದಾರೆ. ದೇವೇಂದ್ರ ಉತ್ತಮವಾಗಿ ಮಳೆ ಸುರಿಸಿ ಒಳ್ಳೆಯ ಫಸಲು ಜನರ ಕೈ ಸೇರಲಿ ಎಂದು ಪ್ರಾರ್ಥಿಸುವುದು ಈ ಆಚರಣೆಯ ಉದ್ದೇಶ. ಆಧುನಿಕತೆಯ ಒತ್ತಡದ ನಡುವೆಯೂ ಉತ್ತರ ಕನ್ನಡದ ಬಹು ವಿಶಿಷ್ಠ ಬುಡಕಟ್ಟು ಜನಾಂಗಕ್ಕೆ ಸೇರಿದ ಹಾಲಕ್ಕಿಗಳು ಇಂದಿಗೂ ತಮ್ಮ ಸಾಂಪ್ರದಾಯಕ ಮತ್ತು ಜಾನಪದೀಯ ಆಚರಣೆಯನ್ನು ತಪ್ಪದೇ ಮೂಲ ರೂಪದಲ್ಲಿ ನಡೆಸಿಕೊಂಡು ಬರುತ್ತಿರುವುದು ಅವರ ಸಾಂಪ್ರದಾಯಿಕ ಹಿರಿಮೆಗೆ ಸಾಕ್ಷಿಯಾಗಿದೆ.
ಇನ್ನು ಈ ಮದುವೆಯಲ್ಲಿ ವರನ ಸ್ಥಾನದಲ್ಲೂ ಹೆಣ್ಣು ಇರುವುದೇ ಈ ವಿವಾಹದ ಮತ್ತೊಂದು ವೈಶಿಷ್ಠ್ಯ. ಇಬ್ಬರು ಮುತ್ತೈದೆಯರು ವಧು ಮತ್ತು ವರನಾಗಿರುತ್ತಾರೆ. ಈ ಸಂಪ್ರದಾಯದ ಪ್ರಕಾರ ಪ್ರತೀ ವರ್ಷ ಬೇರೆ, ಬೇರೆ ಸುಮಂಗಲಿಯರು ವಧು-ವರರಾಗುತ್ತಾರೆ. ಈ ಮದುವೆ ಸಂಬಂಧದ ನಿಶ್ಚಿತಾರ್ಥ ಕಾರ್ಯಕ್ರಮ ಆಷಾಢ ಬಹುಳ ಏಕಾದಶಿಯಂದು ನಡೆದು ಯಾರು ವಧು-ವರರು ಎಂಬ ತೀರ್ಮಾನವನ್ನು ಮಹಿಳೆಯರೇ ಪ್ರಕಟಿಸುತ್ತಾರೆ. ಈ ವಿವಾಹದ ವಿಧಾನದಲ್ಲಿ ಸಂಪೂರ್ಣವಾಗಿ ಮಹಿಳೆಯರು ಮಾತ್ರ ಭಾಗವಹಿಸಿ ಆಚರಣೆಯನ್ನು ಪೂರ್ಣಗೊಳಿಸುತ್ತಾರೆ.
ಹುಳಸೇಕೇರಿ ಹಾಲಕ್ಕಿ ಸಮುದಾಯದ ಪ್ರತೀ ಮನೆಯ ಮಹಿಳೆ ಭಾಗವಹಿಸಿ ಸಂಪ್ರದಾಯವನ್ನು ಪರಿಪೂರ್ಣ ಮಾಡುತ್ತಾರೆ. ಆಷಾಢ ಅಮಾವಾಸ್ಯೆಯ ಸಂಧ್ಯಾ ಕಾಲದಲ್ಲಿ ಈ ಛಾಯಾ ವಿವಾಹ ಕೇತಕಿ ವಿನಾಯಕ ಮಂದಿರ ಮತ್ತು ಕರಿದೇವರ ಸಾನಿಧ್ಯದಲ್ಲಿ ಏರ್ಪಾಟಾಗುತ್ತದೆ. ಅಲ್ಲಿ ಹರಿಯುತ್ತಿರುವ ಸ್ವಚ್ಛಂದ ನೀರು, ಸುಂದರ ಪರಿಸರದಲ್ಲಿ ಆಚೆ-ಈಚೆ ವಧು ಮತ್ತು ವರರ ಕಡೆಯವರು ನಿಂತು ಹೆಣ್ಣು ಕೇಳುವ ಶಾಸ್ತ್ರವನ್ನು ಪೂರೈಸುತ್ತಾರೆ. ಈ ವೇಳೆ ಎರಡೂ ಕಡೆಯವರು ತಮ್ಮ-ತಮ್ಮ ಹೆಚ್ಚುಗಾರಿಕೆಯನ್ನು ಜಾನಪದ ಹಾಡಿನ ಮೂಲಕ ಪ್ರದರ್ಶಿಸುತ್ತಾರೆ.
ಹೆಣ್ಣು- ಗಂಡು ಒಪ್ಪಿಗೆ ಆದ ಮೇಲೆ ದೇವರ ಎದುರು ಇಬ್ಬರಿಗೂ ಮಾಲೆ ಹಾಕಿಸಿ ಮದುವೆ ಮಾಡಲಾಗುತ್ತದೆ. ವಿವಾಹದ ವಿಧಿಯಲ್ಲಿ ಮಂತ್ರಗಳು, ವಿಧಿ ವಿಧಾನಗಳ ಸ್ಥಾನವನ್ನು ಹಾಲಕ್ಕಿ ಒಕ್ಕಲಿಗರ ಜಾನಪದ ಹಾಡು ತುಂಬಿಕೊಂಡಿರುತ್ತದೆ. ಹಿರಿಯ ಮುತ್ತೈದೆಯರು ಈ ಹಾಡನ್ನು ಹಾಡುತ್ತಾ ವಿವಾಹದಲ್ಲಿ ಆಚರಿಸುವ ಎಲ್ಲಾ ಪದ್ಧತಿಯನ್ನು ನಡೆಸಿಕೊಡುವುದು ಇಲ್ಲಿನ ಮುಖ್ಯ ವಿಶೇಷತೆ. ಮದುವೆ ನಂತರ ವಧು-ವರರನ್ನು ಹುಳಸೆಕೇರಿಯ ಗೌಡರ ಮನೆಗೆ ಮೆರವಣಿಗೆಯಲ್ಲಿ ಕರೆ ತರಲಾಗುತ್ತದೆ. ಮದುವೆಯ ಮೆರವಣಿಗೆ ವೇಳೆ ಪಟಾಕಿ, ಡೋಲು- ವಾದ್ಯಗಳ ಸದ್ದು ಎಲ್ಲೆಡೆ ಕೇಳಿ ಬರುತ್ತದೆ.
ಜೋಯಿಡಾ-ಕಾರವಾರ ಹೆದ್ದಾರಿ ಸಂಚಾರಕ್ಕೆ ಮುಕ್ತಗೊಳಿಸಲು ಆಗ್ರಹ
ತಾರಮಕ್ಕಿ ಭಾಗದ ಸಂಪೂರ್ಣ ಕೇರಿಯಂತೂ ಜನ ಜಾತ್ರೆಯಿಂದ ತುಂಬ ತೊಡಗುತ್ತದೆ. ಸಾಂಪ್ರದಾಯಿಕ ಹಾಡಿನೊಂದಿಗೆ ವಾದ್ಯಘೋಷ, ಡಿಜೆ ಹಾಡಿಗೆ ಮಕ್ಕಳು, ಯುವಕರು ಕುಣಿದು ಕುಪ್ಪಳಿಸುತ್ತಾ ನವ ವಧು ವರರನ್ನು ಕರೆದುಕೊಂಡು ಹೋಗುವ ದೃಶ್ಯವಂತೂ ಆಕರ್ಷಕವಾಗಿರುತ್ತದೆ. ಬಳಿಕ ಮುಖ್ಯ ಗೌಡರ ಸಮ್ಮುಖದಲ್ಲಿ ಧಾರೆ ಶಾಸ್ತ್ರ ನಡೆದು ವಧುವರರಿಗೆ ಉಡುಗೊರೆ ನೀಡಲಾಗುತ್ತದೆ. ನಂತರ ಸಿಹಿ, ತಂಪು ಪಾನೀಯ ವಿತರಣೆಯೊಂದಿಗೆ ದಾದುಮ್ಮನ ಮದುವೆ ಸಂಪನ್ನವಾಗುತ್ತದೆ.