ರಾಜ್ಯದ ರಾಜಕೀಯ ಸ್ಥಿತ್ಯಂತರಗಳಲ್ಲಿ ಮಹತ್ವದ ಪಾತ್ರ ವಹಿಸುವ ಕಾಡ ಸಿದ್ಧೇಶ್ವರ ಮಠದ ವಿಶೇಷತೆಯೇನು? ಐತಿಹ್ಯವೇನು?
ರಾಜ್ಯದ 16ನೇ ವಿಧಾನಸಭಾ ಉಪಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಗಂಗಾಧರ ಅಜ್ಜನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಡಿಕೆಶಿ ಏನೇ ಕೆಲಸದಲ್ಲಿ ಮುಂದುವರಿಯುವ ಮುನ್ನ ಅಜ್ಜಯ್ಯನ ಆಶೀರ್ವಾ ಪಡೆಯುತ್ತಾರೆ. ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕಿನ ನೊಣವಿನಕೆರೆ ಸೋಮೆಕಟ್ಟೆ ಕಾಡಸಿದ್ಧೇಶ್ವರ ಮಠಕ್ಕೆ ಭೇಟಿ ನೀಡಿಯೇ ಮುಂದಿನ ಕಾರ್ಯಕ್ಕೆ ಕೈ ಹಾಕುತ್ತಾರೆ. ನಂಬಿದ ಅಜ್ಜಯ್ಯ ಯಾವತ್ತೂ ಕೈ ಬಿಟ್ಟಿಲ್ಲ ಎಂದೇ ಹೇಳುತ್ತಾರೆ.
ಏನು ಈ ಮಠದ ವಿಶೇಷ?
ರಾಜ್ಯದ ರಾಜಕೀಯ ಸ್ಥಿತ್ಯಂತರಗಳಲ್ಲಿ ಮಹತ್ವದ ಪಾತ್ರ ವಹಿಸುವ ಕಾಡ ಸಿದ್ಧೇಶ್ವರ ಮಠಕ್ಕೆ 500 ವರ್ಷಗಳ ಇತಿಹಾಸವಿದೆ. ಇಲ್ಲಿ ಸಾಕ್ಷಾತ್ ಶಿವನೇ ನೆಲೆಸಿ ಅಭಯ ನೀಡುತ್ತಾನೆ ಅನ್ನುವ ನಂಬಿಕೆ ಭಕ್ತಾದಿಗಳದು. ಇದು ಕಾಡ ಸಿದ್ದೇಶ್ವರ ಎಂಬ ಯತಿಗಳ ನೆಲೆವೀಡು. ಇವರು ಈಶ್ವರನ ಪ್ರತಿರೂಪದ ಎಂಬ ನಂಬಿಕೆಯೂ ಇದೆ. ಇದುವರೆಗೂ ಇಲ್ಲಿನ ಗುರುಪರಂಪರೆಯಲ್ಲಿ 19 ಜನ ಸ್ವಾಮಿಗಳು ಆಗಿ ಹೋಗಿದ್ದಾರೆ.
ನೊಳಂಬ ರಾಜರು ಬೃಹತ್ ಕೆರೆಯೊಂದನ್ನು ಇಲ್ಲಿ ನಿರ್ವಿುಸಿದ ಕಾರಣಕ್ಕೆ ಈ ಗ್ರಾಮಕ್ಕೆ ನೊಳಂಬಕೆರೆ, ನೊಣವಿನಕೆರೆ ಎಂದೆಲ್ಲ ಹೆಸರು ಬಂದಿದೆ. ಇಲ್ಲಿ ಕಾಡಸಿದ್ಧೇಶ್ವರರ ನೂತನ ಶಿಲಾಮಠ 2018ರಲ್ಲಿ ನಿರ್ಮಾಣವಾಗಿದೆ. ಜಗದ್ಗುರುಗಳಾದ ರೇವಣಸಿದ್ಧೇಶ್ವರರು, ಎಡೆಯೂರು ಸಿದ್ಧಲಿಂಗೇಶ್ವರ, ಗೋಸಲ ಚನ್ನಬಸವೇಶ್ವರ, ಹಂದನಕೆರೆ ಗಿರಿಸಿದ್ಧೇಶ್ವರ, ಜೇನುಕಲ್ ಸಿದ್ಧೇಶ್ವರ ಹೀಗೆ ಹಲವು ಸತ್ಪುರಷರನ್ನು ಕಂಡ ತುಮಕೂರಿನ ಮತ್ತೊಂದು ಗರಿಮೆ ಶ್ರೀಕಾಡಸಿದ್ಧೇಶ್ವರ ಸ್ವಾಮಿಗಳು. ಕರಿಬಸವಸ್ವಾಮಿಗಳು ನೊಣವಿನಕೆರೆಯ ಅಡವಿಯಲ್ಲಿ ಕುಳಿತು ತಪಸ್ಸು ಮಾಡಿದ್ದರಿಂದ ಕಾಡಸಿದ್ಧೇಶ್ವರ, ಅಡವಿಸಿದ್ಧೇಶ್ವರ ಎಂದೆಲ್ಲ ಜನರಿಂದ ಕರೆಯಲ್ಪಟ್ಟರು.
ಹೆಜ್ಜೆ ಹೆಜ್ಜೆಗೂ ಜ್ಯೋತಿಷಿ ಸಲಹೆ ಕೇಳೋ ಡಿಕೆಶಿ ಶನಿವಾರವೇಕೆ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ?
ಒಮ್ಮೆ ಕಾಡ ಸಿದ್ಧೇಶ್ವರರು ತಪಸ್ಸು ಮಾಡುವಾಗ ಬೇಟೆಗಾಗಿ ಕಾಡಿಗೆ ಬಂದ ಚಿಕ್ಕನಾಯಕನಹಳ್ಳಿ ಪಾಳೇಗಾರ ಮುದಿಯಪ್ಪನಾಯಕ ಶ್ರೀಗಳನ್ನು ಯಾವುದೋ ಮೃಗವೆಂದು ಭಾವಿಸಿ ಬಾಣ ಬಿಟ್ಟ. ಬಾಣ ಬೇಧಿಸಿಕೊಂಡು ಹೋದರೂ ಶ್ರೀಗಳು ವಿಚಲಿತರಾಗಲಿಲ್ಲ. ತಪಸ್ವಿಗೆ ಬಾಣ ಬಿಟ್ಟೆನೆಂದು ತೀವ್ರ ಪಶ್ಚಾತ್ತಾಪ ಅನುಭವಿಸಿದ ಮುದಿಯಪ್ಪನಾಯಕ, ಪಶ್ಚಾತ್ತಾಪದಿಂದ ಶ್ರೀಗಳ ಕಾಲಿಗೆರಗಿದ್ದಲ್ಲದೆ, ಪರಿಹಾರಾರ್ಥವಾಗಿ ಮಠ ಕಟ್ಟಿಸಿಕೊಟ್ಟ. ಹೀಗೆ ಸೋಮೆಕಟ್ಟೆ ಕಾಡಸಿದ್ಧೇಶ್ವರ ಪರಂಪರೆ ಆರಂಭವಾಯಿತು.
ಸಧ್ಯ ಗ್ರಾಮೀಣ ಪ್ರದೇಶದಲ್ಲಿ ಆಂಗ್ಲಮಾಧ್ಯಮ ಶಾಲೆ, ಆಯುರ್ವೆದ ಆಸ್ಪತ್ರೆ, ಪ್ಯಾರಾಮೆಡಿಕಲ್ ಕಾಲೇಜು, ನಿತ್ಯದಾಸೋಹ ಕೇಂದ್ರ, ಗೋಶಾಲೆ – ಹೀಗೆ ಹಲವು ಸಾಮಾಜಿಕ ಕಾರ್ಯಗಳ ಮೂಲಕ ಶ್ರೀಮಠ ಹೆಸರು ಪಡೆದಿದೆ.