ಆಯಸ್ಸು ದೇಹಕ್ಕೇ ಹೊರತು ಆತ್ಮಕ್ಕಲ್ಲ ಎಂಬ ಸತ್ಯ ಅರಿತಿದ್ದ ಶ್ರೀಗಳು..!

By Suvarna News  |  First Published Jan 4, 2023, 12:49 PM IST

ಇಚ್ಛಾಮರಣಿ ಸಿದ್ದೇಶ್ವರ ಶ್ರೀ ದೇಹತ್ಯಾಗ, ದೈವ ನಿರ್ಣಯಕ್ಕೆ ವಿರುದ್ಧವಲ್ಲವೇ ? ಅನ್ನ- ನೀರು ತ್ಯಜಿಸಿ, ದೇಹ ಬಿಡುವುದೂ ಆತ್ಮಹತ್ಯೆ ಸಮಾನವಲ್ಲವೇ ? ಎಂಬ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ ಖ್ಯಾತ ಜ್ಯೋತಿಷಿ, ಧಾರ್ಮಿಕ ಚಿಂತಕ ದೈವಜ್ಞ ಹರೀಶ್​ ಕಶ್ಯಪ.


ಹರೀಶ್ ಕಶ್ಯಪ, ಧಾರ್ಮಿಕ ಚಿಂತಕ

ಶತಮಾನದ ಸಂತ, ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿ, ಇಹಲೋಕ ತ್ಯಜಿಸಿ ಜನಮಾನಸದಲ್ಲಿ ಲೀನರಾಗಿದ್ದಾರೆ. ಸಿದ್ದೇಶ್ವರರ ಮರಣದ ಬಳಿಕ ಹಲವರಲ್ಲಿ, ಹಲವು ರೀತಿಯ ಜಿಜ್ಞಾಸೆಗಳು, ಪ್ರಶ್ನೆಗಳು ಮೂಡುತ್ತಿವೆ. ಶ್ರೀಗಳ ದೇಹತ್ಯಾಗದ ಬಗ್ಗೆ ಹಲವರು ನನ್ನ ಬಳಿ ಪ್ರಶ್ನೆ ಮಾಡಿದರು. ಅದೆಲ್ಲದ್ದಕ್ಕೂ ಉತ್ತರ ನೀಡುವ ಪ್ರಯತ್ನ ಮಾಡಿದ್ದೇನೆ. 
ಸಿದ್ದೇಶ್ವರ ಸ್ವಾಮಿಗಳು ಇಚ್ಛಾಮರಣಿ. ಸ್ವಇಚ್ಛೆಯಿಂದ ದೇಹತ್ಯಾಗ ಮಾಡಿದವರು. ಅವರಿಗೆ ಇನ್ನೂ ಪರಮಾಯುಷ್ಯ ಇತ್ತು! ಹೌದು , ಸಿದ್ಧರಿಗೆ ಜ್ಞಾನಯೋಗಿಗಳಿಗೆ ದೀರ್ಘಾಯುಷ್ಯವಿದ್ದರೂ ತಾವು ಸ್ವಇಚ್ಛೆಯಿಂದ ಪ್ರಾಣಬಿಡುವರು. ಹಾಗಾಗಿಯೇ ಅವರು ಸಿದ್ಧ ಪುರುಷರು ಎನಿಸುವರು. 
‘ತನಗೆ ಇನ್ನು ಸಾಕು’ ಎನಿಸಿದಾಗ ಉಳಿದ ಆಯುಷ್ಯವನ್ನು ಯೋಗಿಗಳು ಪೂರೈಸುವುದಿಲ್ಲ. ಆಯಸ್ಸು ದೇಹಕ್ಕೆ ಹೊರತು ಆತ್ಮಕ್ಕಲ್ಲ ಎಂಬ ನಿತ್ಯ ಸತ್ಯ ಅರಿತವರು ಸಿದ್ದೇಶ್ವರ ಶ್ರೀಗಳು.

ಇಚ್ಛಾಮರಣ ಅಷ್ಟು ಸುಲಭವೇ ? ದೇಹತ್ಯಾಗ ದೈವ ನಿರ್ಣಯಕ್ಕೆ ವಿರುದ್ಧವಲ್ಲವೇ ? ಅನ್ನ- ನೀರು ತ್ಯಜಿಸಿ, ದೇಹ ಬಿಡುವುದೂ ಆತ್ಮಹತ್ಯೆ ಸಮಾನವಲ್ಲವೇ ? ಎಂಬ ಪ್ರಶ್ನೆಗಳು ಸಹಜ. ಆಸೆ, ಆಮಿಷ, ನಿರಾಸೆ, ಹತಾಶೆ, ಹಿಂಸೆಯಿಂದ ತಾನೇ ಜೀವ ಕೊನೆಗೊಳಿಸಿಕೊಳ್ಳುವುದು ಆತ್ಮಹತ್ಯೆ ಎನ್ನಿಸುತ್ತದೆ. ಇದು ಕಾನೂನು ಪ್ರಕಾರವೂ ಅಪರಾಧ , ಕರ್ಮಸೂತ್ರ, ಧರ್ಮದ ಪ್ರಕಾರವೂ ಅಪರಾಧವಾಗುತ್ತೆ.

Tap to resize

Latest Videos

ಆದರೆ, ‘ಬೇಕು’, ‘ಬೇಡ’ಗಳ ಎಲ್ಲೆಗಳ ಮೀರಿ ಪರಮ ಸಾತ್ವಿಕ ಜೀವನವನ್ನೇ ಸವೆಸಿ, ಪರಮಾತ್ಮನ ಅನುರಾಗದಲ್ಲೇ ಆಯುಷ್ಯ ಕಳೆದ ಆನಂದ, ಅವಧೂತ ಶ್ರೀ ಸಿದ್ದೇಶ್ವರರಂಥ ಅಪರೂಪದ ಯೋಗಿಗಳಿಗೆ  ‘ಇನ್ನು ಸಾಕು’ ಎನಿಸುವುದು ಆತ್ಮದ ಸ್ವಾತಂತ್ರ್ಯ. ದೇಹವು ಅವರಿಗೆ ಬಂಧಕ ಪಾಪಕರ್ಮದ್ದು ಆಗಿರುವುದಿಲ್ಲ. ಇನ್ನು ಈ ದೇಹದಿಂದ ಸಾಧಿಸುವುದೇನೂ ಉಳಿದಿಲ್ಲ ಎಂಬ ಪೂರ್ಣತೆ, ಪಕ್ವತೆ ಗಳಿಸಿದವರೇ ಜ್ಞಾನಯೋಗಿಗಳು. 

Siddeshwara Swamiji: ‘ಬೇಕು’ ಎಂಬುದನ್ನೇ ಮರೆತು ‘ಬೇಡ’ ಎನ್ನುತ್ತಲೇ ಬದುಕಿದ ಸಂತ..!
 

ಶ್ರೀಭಗವದ್ಗೀತೆಯ 8ನೇ ಅಧ್ಯಾಯದಲ್ಲಿ ಸಿದ್ಧಯೋಗಿಗಳ ದೇಹತ್ಯಾಗದ ಬಗ್ಗೆ ವಿವರಣೆ ಇದೆ. ಅಕ್ಷರ ಬ್ರಹ್ಮಯೋಗದಲ್ಲಿ ಸವಿಸ್ತಾರವಾಗಿ ನಿರ್ದೇಶಿಸಲಾಗಿದೆ. 10ನೇ ಶ್ಲೋಕಃ, ‘ಪ್ರಯಾಣಕಾಲೇ ಮನಸಾ ಅಚಲೇನ ಭಕ್ತ್ಯಾಯುಕ್ತೋ ಯೋಗಬಲೇನ! ಭ್ರುವೋರ್ಮಧ್ಯೇ ಪ್ರಾಣಮಾವೇಶ್ಯ ಸಮ್ಯಕ ಸ ತಂ ಪುರುಷಮುಪೈತಿ ದಿವ್ಯಂ’ ಎಂದು ವಿವರಿಸಲಾಗಿದೆ. 
ಆಂತರ್ಯವೆಲ್ಲ ಪರಮಾತ್ಮನ ಭಕ್ತಿಯಿಂದ ತುಂಬಿದ್ದು, ಜ್ಞಾನಯೋಗದ ನಿಷ್ಠೆಯಲ್ಲೇ ತಮ್ಮ ಪ್ರಾಣಗಳ  ಒಟ್ಟು ಮಾಡುತ್ತಾ, ದೇಹವನ್ನು  ಬಿಟ್ಟು ದಿವ್ಯಚೇತನವು ಪರಮಾತ್ಮನ ಸೇರುವುದು. ಇದು ಯೋಗಕಾಯ ನಿರ್ವಾಣ  ಮಾರ್ಗ.
 
‘ಇನ್ನು ಸಾಕು’ ಎಂಬ ನಿಲುವು ಬಂದ ಮೇಲೆ, ಜೀವಾತ್ಮವು ದೇಹದಲ್ಲಿ ಇರುವುದನ್ನು ಸಹಿಸುವುದಿಲ್ಲ. ಆದರೆ, ಅವಸರ  ಮಾಡುವುದಿಲ್ಲ..! ಒಂದೇ ಸಮನೆ ಪ್ರಭುವನ್ನು  ಸ್ಮರಿಸುತ್ತ ಈ ಜೀವಾತ್ಮನು ನಿನ್ನವನೇ ದೇವಃ, ಸ್ವೀಕರಿಸು ಎಂದು ಸ್ಮರಿಸುತ್ತಲೇ ಮೊರೆಯಿಡುತ್ತ ಇರುತ್ತಾರೆ. ಸಾಮಾನ್ಯ ಜನರಿಗೆ  ಇದೆಲ್ಲ ಯಾವ ಅವಸ್ಥೆ ಎಂದು ಅರ್ಥವಾಗೋದು ಕಲ್ಪನೆಗೆ ಮೀರಿದ್ದು.
ಯೋಗಿಗಳು, ಹಂತ ಹಂತವಾಗಿ ಅನ್ನ ಬಿಡುತ್ತಾರೆ. ಕೆಲ ದಿನಗಳ ಬಳಿಕ ನೀರನ್ನೂ ತ್ಯಜಿಸುತ್ತಾರೆ. ಮತ್ತೂ ಕೆಲ ಸಮಯದ  ನಂತರ ಅಲ್ಪವೇ ದ್ರವ (ಬೇಯಿಸದೇ ಇರುವ) ಸೇವನೆ, ಕೊನೆ ಹಂತದಲ್ಲಿ  ‘ವಾತಾಶನ’ ಅಂದರೆ ಉಸಿರಾಡುವ ವಾಯುವನ್ನೇ ಸೇವಿಸುತ್ತಾ, ಅಷ್ಟರಲ್ಲೇ ಒರಗಿಬಿಡುವರು. 

Siddeshwara Sri Quotes: 'ಅಕ್ಷರ ಕಲಿತವ ಭ್ರಷ್ಟನಾಗಬಹುದು, ಸಂಸ್ಕಾರವಂತ ಭ್ರಷ್ಟನಾಗಲಾರ'

ಅಂತರಂಗ ಮಾತ್ರ ಪೂರ್ತಿ ಜಾಗೃತಿಯಲ್ಲೇ ಇರುತ್ತದೆ. ಇದೇ ಆತ್ಮಯೋಗಿತ್ವ. ಯಾವಾಗ ಇಂಥ ಚರಮಾವಸ್ಥೆಗೆ ಏರುವರೋ, ದೇಹಕ್ಕೆ ಯಾವ ಪೋಷಣೆಯೂ  ಇಲ್ಲವಾಗುವುದೋ, ವೈರಾಗ್ಯದಿಂದ  ದೇಹವೆಲ್ಲ ಕಾಷ್ಠ , ಹಳೆಯ  ಮರದ ಕೊರಟಿನಂತೆ ಆಗುವುದು. ಸ್ಪಂದನೆ ಬಿಡುವುದು ಯೋಗಿ ಚೇತನವು  ಪರಮಾತ್ಮನ ಸೇರುವುದು, ಬಂಧನದಿಂದ ಬಿಡುಗಡೆ, ಅಜ್ಞಾನದಿಂದ ಅರಿವಿನೆಡೆಗೆ ಈ ಯಾತ್ರೆಯು ದಿವ್ಯವೂ, ಭವ್ಯವೂ ಆಗಿ ಲೋಕ ಬೆಳಗುವುದು. ಸಿದ್ದೇಶ್ವರ ಯೋಗಿವರ್ಯರ  ಇಂಥ ನಿರ್ವಾಣ ಕಾಲದಲ್ಲಿ ನಾವೂ ಇದ್ದೆವು, ನೋಡುತ್ತಲಿದ್ದೆವು ಎಂಬುದೇ ಬಹುದೊಡ್ಡ ಪುಣ್ಯ.

ಇನ್ನು, ಸಿದ್ದೇಶ್ವರ ಸ್ವಾಮಿಗಳ ಅಂತಿಮ ದರ್ಶನಕ್ಕೆ ಸೇರಿದ ಜನಸಾಗರ ಅದು ಗಗನವೆಲ್ಲ ಬೆರಗಾಗುವಂಥದು! ಸರ್ಕಾರದ ಆಡಳಿತ ವ್ಯವಸ್ಥೆ, ಯಾವುದೋ ರಿಮೋಟ್ ಕಂಟ್ರೋಲ್ ನಂತೆ ತನ್ನಿಂತಾನೇ ಪುಟಿದು ನಿಲ್ಲುತ್ತದೆ. ಇಡೀ ವಿಜಯಪುರವೇ ದಾಸೋಹದ ಮೂಲಕ ಜ್ಞಾನಯೋಗಿಯ ಅಂತಿಮ ಯಾತ್ರೆಗೆ ಹೆಗಲು ಕೊಟ್ಟು ನಿಲ್ಲುತ್ತದೆ.

ಓರ್ವ ಸಂತನ ದರ್ಶನಕ್ಕಾಗಿ ಸಾಗರವಾಗುವುದಿದೆಯಲ್ಲ, ಜನರಲ್ಲಿ ಹುದುಗಿಹ ಆತ್ಮ ಅಧ್ಯಾತ್ಮಪರವಾದದ್ದು. ಯಾರು ಈ ಹುದುಗಿಹ ಚೈತನ್ಯವನ್ನು ಪ್ರೇರಿಸುವರೋ, ಅದನ್ನು, ಸ್ವಾರ್ಥವೂ  ಮುಟ್ಟಲಾರದು. ಸಂತ ಯಾವುದನ್ನು ಮುಟ್ಟಬಲ್ಲನೋ ಅದನ್ನು, ಅನ್ಯವಾವುದೂ ಮುಟ್ಟಲಾರದು.
ಇಂಥದ್ದು ಜೀವನದಲ್ಲಿ ಒಮ್ಮೆ ತಾನೇ ಆಗುವಂಥದು. ಆ ಸಂತನ ಇರುವಿನ ಮಾತ್ರದಿಂದ ಆಗುವುದು. ಸಂತನ ಉಪಸ್ಥಿತಿಯಲ್ಲಿ ತಾನೇ ಆಗುತ್ತದೆ.
ಶುದ್ಧಿಗಾಗಿ ಸಾಗುವುದು ಜನರ ಪ್ರಯತ್ನ. ಸ್ನಾನ ಮಾಡಿಸುವುದು ಸಂತನ ಲೀಲೆಯಿಂದ ಆಗುತ್ತದೆ. ಈ ಲೀಲೆಯಲ್ಲಿ ಮಿಂದವರು ಧನ್ಯರು.
ಆಸೆ, ಮೋಹ, ಸ್ವಾರ್ಥ, ಹಗೆತನದ ಮನಶುದ್ಧಿಯಾಗಿ, ಮನಪರಿವರ್ತನೆ ಕಡೆಗೆ ಸಾಗುವುದೇ ಆಧ್ಯಾತ್ಮ.
ಈ ಅಂತರ್ಶುದ್ಧಿಯನ್ನು ಕಾಪಿಟ್ಟುಕೊಳ್ಳುವ ಹೊಣೆ ಸದಾ ಇದೇ ಜನರ ಮೇಲಿರುತ್ತೆ. ಬೇರ್ಪಡಿಸುವರು ಸದಾ ಎಲ್ಲೆಡೆ ತುಂಬಿರುತ್ತಾರೆ.
ಒಂದಾಗುವುದು, ಒಂದಾಗಿರುವುದು ವರ್ತಮಾನ ಭವಿಷ್ಯಗಳ ಕ್ರಿಯಾತ್ಮಕ ಬೆಸುಗೆಯಾಗಿದೆ.
ಈ ಕ್ರಿಯೆಯಲ್ಲಿ ಕೂಡಿಸುವ ಸಂತ -ಮಹಾತ್ಮರ ಹೊನ್ನೆರಳು ಸದಾ ನಮಗಿರಲಿ.

click me!