Siddeshwara Swamiji: ‘ಬೇಕು’ ಎಂಬುದನ್ನೇ ಮರೆತು ‘ಬೇಡ’ ಎನ್ನುತ್ತಲೇ ಬದುಕಿದ ಸಂತ..!

By Shobha MC  |  First Published Jan 3, 2023, 9:47 AM IST

ನಿರ್ಮೋಹಿಯ ನಿರ್ಗಮನ..!
ಬೇಕು ಎಂಬ ವ್ಯಸನದಿಂದ ಮಾರು ದೂರವಿದ್ದ ಸಂತ
ವಿಜಯಪುರ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಶ್ರೀಗಳು


ಶೋಭಾ ಎಂ.ಸಿ, ಔಟ್‌ಪುಟ್ ಹೆಡ್, ಏಷ್ಯಾನೆಟ್ ಸುವರ್ಣ ನ್ಯೂಸ್

ಆ ಸಂತನ ಜೀವನದಲ್ಲಿ ‘ಬೇಕು’ ಎಂಬ ಪದಕ್ಕೆ ಜಾಗವೇ ಇರಲಿಲ್ಲ. ಬರೋಬ್ಬರಿ 82 ವರ್ಷ ಬದುಕಿದ ಸಿದ್ದೇಶ್ವರರು, ಯಾವುದನ್ನೂ ಬೇಕೆಂದವರಲ್ಲ. ಅವರು ‘ಬೇಕು’ ಎಂದದ್ದಕ್ಕಿಂತ ‘ಬೇಡ’ ಎಂದುಕೊಂಡೇ ಬದುಕಿಬಿಟ್ಟರು. ‘ಬೇಕು’ಗಳಿಲ್ಲದೇ ಕ್ಷಣವೂ ಬದುಕಲಾರದೇ ಚಡಪಡಿಸುವ ಯಕಶ್ಚಿತ ಮನುಷ್ಯ ಜನ್ಮಕ್ಕೆ, ‘ಬೇಡ’ ಎಂಬುದನ್ನು ಅನುಭವಿಸಿ, ಜೀವಿಸಿ ತೋರಿಸಿಕೊಟ್ಟವರು ಸಿದ್ದೇಶ್ವರ ಶ್ರೀಗಳು. ಅವರೊಂದು ಆಧ್ಯಾತ್ಮ, ಅಗಾಧ ಜ್ಞಾನ, ಪಾಂಡಿತ್ಯದ ವಿಶ್ವಕೋಶ. ಅವರ ಈ ವಿಶ್ವಕೋಶದಲ್ಲಿ ‘ಬೇಕು’ ಎಂಬ ಪದವೇ ಇರಲಿಲ್ಲ. ತಮ್ಮ ಗುರು ಮಲ್ಲಿಕಾರ್ಜುನ ಅಪ್ಪರ ಉತ್ತರಾಧಿಕಾರಿ ನೀವೇ ಎಂದಾಗಲೂ, ‘ನಾನು ಸ್ಥಾವರವಾಗಲಾರೆ, ನಾನು ಜಂಗಮನಾಗಿ ಸಂಚರಿಸಬೇಕು, ನನ್ನನ್ನು ಆಶೀರ್ವದಿಸಿ’ ಎಂದು ಹೊರಟು ಬಿಟ್ಟರು. 
ಆಗಲೇ ‘ಬೇಡ’ ಎಂಬ ಶಸ್ತ್ರ ತೊಟ್ಟುಬಿಟ್ಟರು. 
ಮಠ ಮಾನ್ಯಗಳ ಹಂಗು ತೊರೆದು, ಪೀಠ ಕಾವಿಯ ಆಸೆಗೆ ಬೀಳದೆ, ಮಠ, ಮಠಾಧಿಪತಿ ಯಾವ ಸ್ಥಾನವನ್ನೂ ‘ಬೇಡ’ ಎಂದುಬಿಟ್ಟರು. ದೊಡ್ಡ, ದೊಡ್ಡ ಮಠಾಧೀಶರು, ಐಷಾರಾಮಿ ಮಠ ಕಟ್ಟಿಕೊಂಡು, ಖಾವಿ ತೊಟ್ಟು, ಅದ್ಧೂರಿಯಾಗಿ ಪಟ್ಟಾಭಿಷೇಕವಾಗುತ್ತಿದ್ದರೆ, ಇವರು ಕಾವಿಯನ್ನೂ ‘ಬೇಡ’ವೆಂದು ಶುದ್ಧಾನುಶುದ್ಧ ಬಿಳಿ ಪಂಚೆ, ಜುಬ್ಬವನ್ನೇ ಅಪ್ಪಿಕೊಂಡರು. 
ಮಠ ಏಕೆ, ಸ್ವಂತ ಮನೆ ಕಟ್ಟಿಕೊಡುತ್ತೇವೆಂದು ಭಕ್ತರು ಬೇಡಿಕೊಂಡರೂ ಇವರು ‘ಬೇಡ’ ಎಂದು ಬಿಟ್ಟರು. ಇತರೆ ಮಠಾಧೀಶರು ಬೆನ್ಜ್​, ಆಡಿ ಕಾರುಗಳಲ್ಲಿ ಸುತ್ತುತ್ತಿದ್ದರೆ, ನೀವು ಸಾಮಾನ್ಯ ಕಾರನ್ನಾದರೂ ಬಳಸಿ ಎಂದರೆ, ಅದನ್ನೂ ಬೇಡ ಎಂದುಬಿಟ್ಟರು. ಹೀಗೂ ಬದುಕಬಹುದೇ ಎಂದು ಭಕ್ತರು ಮೂಕವಿಸ್ಮಿತರಾದರು. ಮಠದ ಹೆಸರಿನಲ್ಲಿ ಶಾಲೆ, ಕಾಲೇಜು ಕಟ್ಟೋಣ ಎಂದರೆ ಬಿಲ್​ಕುಲ್ ‘ಬೇಡ’ ಎಂದು ಬಿಟ್ಟರು. ಅಕ್ಷರ ದಾಸೋಹಕ್ಕಿಂತ ಜ್ಞಾನ ದಾಸೋಹವೇ ಮುಖ್ಯ ಎಂದು ಪ್ರತಿಪಾದಿಸಿದವರು ಸಿದ್ದೇಶ್ವರರು. 

Sri siddeshwar swamiji: ನಿನ್ನೆ ಅನ್ನ, ನೀರು ತ್ಯಜಿಸಿದ್ದ ಶ್ರೀಗಳು; ಜಿಲ್ಲಾಸ್ಪತ್ರೆಗೆ ತೆರಳಲು ನಿರಾಕರಿಸಿದ್ದರು
 

Tap to resize

Latest Videos

ವಿದೇಶದಲ್ಲಿರುವ ಭಕ್ತರ ಪ್ರೀತಿಯ ಆಹ್ವಾನವನ್ನೂ ಬೇಡ ಎಂದು ಬಿಟ್ಟರು. ಊರೂರು ತಿರುಗಿದರು, ಜ್ಞಾನವನ್ನು ಹಂಚಿದರು. ‘ಬೇಡ’ ಎನ್ನುವದರಲ್ಲಿರುವ ಸುಖವನ್ನು ಅನುಭವಿಸಿಯೇ ತೋರಿಸಿಕೊಟ್ಟರು. ರಾಜಕಾರಣಿಗಳು, ಮಂತ್ರಿಗಳ ಸಖ್ಯವನ್ನೂ ನಯವಾಗಿಯೇ ಬೇಡ ಎನ್ನುತ್ತಾ, ದೂರ ಇಟ್ಟುಬಿಟ್ಟರು. ಟಿವಿ, ಪತ್ರಿಕೆಗಳು ಸಂದರ್ಶನಕ್ಕೆ ಮುಗಿಬಿದ್ದರೂ, ‘ನನ್ನ ಪ್ರವಚನ ಕೇಳು, ಆನಂತರವೂ ಪ್ರಶ್ನೆ ಇದ್ದರೆ ಬಾ’ ಎನ್ನುತ್ತಾ ‘ಬೇಡ’ ಎಂಬ ಅಸ್ತ್ರ ಬಳಸುತ್ತಿದ್ದರು. 

ಸಂಘ- ಸಂಸ್ಥೆಗಳು, ರಾಜ್ಯ ಸರ್ಕಾರದ ಪ್ರತಿಷ್ಠಿತ ಪ್ರಶಸ್ತಿಗಳು, ಗೌರವ ಡಾಕ್ಟರೇಟ್​ಗಳು, ಅಷ್ಟೇ ಏಕೆ, ಕೇಂದ್ರ ಸರ್ಕಾರವೇ ಪದ್ಮಶ್ರೀ ಕೊಟ್ಟರೂ, ನನಗೇಕೆ ಇದೆಲ್ಲ ಎಂದು ನಕ್ಕು ಬೇಡ ಎಂದುಬಿಟ್ಟರು.

ಅಷ್ಟೇ ಏಕೆ, ಜೀವನದ ಸಂಧ್ಯಾಕಾಲದಲ್ಲಿ ಮೂರು ಹೊತ್ತಿನ ಊಟ ಬೇಡ ಎಂದರು. ಹಾಸಿಗೆ ಹಿಡಿದರು. ಖ್ಯಾತ ವೈದ್ಯರೇ ಚಿಕಿತ್ಸೆ ನೀಡುತ್ತೀವಿ ಎಂದರೂ ಇವರು ಬೇಡ ಎಂದರು. ಸಾವಿನ ಬಾಗಿಲಲ್ಲಿ ಮಲಗಿದ್ದರೂ ಔಷಧಿ, ಮಾತ್ರೆ.. ಏನೇನೂ ಬೇಡ ಎನ್ನುತ್ತಾ ತಣ್ಣಗೆ ಮಲಗಿಬಿಟ್ಟರು. 

ದೊಡ್ಡ, ದೊಡ್ಡ ಮಠಾಧೀಶರು, ‘ಬೇಕು’ಗಳ ಮೋಹದ ಬಲೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದರೆ, ಈ ಸಂತರು, ಸಾವಿನ ಬಳಿಕವೂ, ತನಗಾವ ವಿಧಿವಿಧಾನವೂ ಬೇಡ ಎಂದು ಬಿಟ್ಟರಲ್ಲಾ..?
ಸಂಪ್ರದಾಯಗಳು ಬೇಡ, ದೇಹವನ್ನು ಭೂಮಿಯಲ್ಲಿರಿಸುವುದು ಬೇಡ ಎಂದರು, ಸ್ಮಾರಕ ನಿರ್ಮಿಸುವುದು ಬೇಡ ಎಂದರು. ಎಲ್ಲವನ್ನೂ ಮೊದಲೇ ನಿರ್ಧರಿಸಿ, ತಮ್ಮಿಚ್ಚೆಯಂತೆಯೇ ‘ಬೇಡ’ದ ಲೋಕವನ್ನು ಬಿಟ್ಟು ನಿರ್ಮೋಹಿ ನಿಗರ್ಮಿಸಿಬಿಟ್ಟರು.
ತಮ್ಮ ಜ್ಞಾನಯೋಗಾಶ್ರಮದಲ್ಲಿ ಸಿದ್ದೇಶ್ವರರು ಒಮ್ಮೆಯೂ ಹಾರ, ತುರಾಯಿಗಳನ್ನು ಕೊರಳಿಗೇರಿಸಿಕೊಂಡವರಲ್ಲ. 

Sri Siddeshwar swamiji: ಪ್ರವಚನದಿಂದ ಸನ್ಮಾರ್ಗ ತೋರಿದ ಮಹಾ ಸಂತ
 

ಈಗ ನೋಡಿ, ಜೀವ ತೊರೆದು ಮಲಗಿದ ನಿರ್ಮೋಹಿಯ ದೇಹದ ಮೇಲಿರುವುದು ಹಾರ, ತುರಾಯಿಗಳಲ್ಲ, ಭವ್ಯ ಭಾರತದ ರಾಷ್ಟ್ರಧ್ವಜ..! ಇವರೇ ಅಲ್ಲವೇ ನಿಜಶರಣರು..!

ಸಿದ್ದೇಶ್ವರರು ವಿಲ್​ನಲ್ಲಿ ಬರೆದಿದ್ದು..!
‘ಸತ್ಯವೂ ಇಲ್ಲ, ಅಸತ್ಯವೂ ಇಲ್ಲ.
ಸಹಜವೂ ಇಲ್ಲ, ಅಸಹಜವೂ ಇಲ್ಲ
ನಾನೂ ಇಲ್ಲ, ನೀನೂ ಇಲ್ಲ
ಇಲ್ಲ, ಇಲ್ಲ ಎಂಬುದು ತಾನಿಲ್ಲ
ಗುಹೇಶ್ವರನೆಂಬುದು ತಾ ಬಯಲು’

ಬದುಕು ಮುಗಿಯುತ್ತದೆ 
ದೀಪ ಆರಿದಂತೆ 
ತೆರೆ ಅಡಗಿದಂತೆ 
ಮೇಘ ಕರಗಿದಂತೆ 
ಉಳಿಯುವುದು ಬರಿ ಬಯಲು
ಮಹಾಮೌನ
ಶೂನ್ಯಸತ್ಯ ....

click me!