ಮಹಾ ಕುಂಭ ಮೇಳದಲ್ಲಿ ತೆರೆದುಕೊಳ್ಳುತ್ತಿದೆ ಮಹಿಳಾ ನಾಗಾ ಸಾಧುಗಳ ನಿಗೂಢ ಪ್ರಪಂಚ!

By Bhavani Bhat  |  First Published Jan 14, 2025, 8:14 AM IST

ಪ್ರಯಾಗ್‌ರಾಜ್‌ನ ಮಹಾ ಕುಂಭ ಮೇಳದಲ್ಲಿ ಈಗ ನಾಗಾ ಸಾಧುಗಳು- ನಾಗಾ ಸಾಧ್ವಿಗಳದೇ ಹವಾ. ಲೌಕಿಕ ಬಂಧನಗಳನ್ನು ತ್ಯಜಿಸಿ ಆಧ್ಯಾತ್ಮಕ್ಕೆ ತಮ್ಮನ್ನು ಅರ್ಪಿಸಿಕೊಳ್ಳುವ ಸ್ತ್ರೀ ನಾಗಾ ಸಾಧುಗಳ ಕಠಿಣ ಜೀವನ, ದೀಕ್ಷಾ ವಿಧಾನಗಳು ಮತ್ತು ಕುಂಭಮೇಳದಲ್ಲಿ ಅವರ ಪಾತ್ರದ ಬಗ್ಗೆ ವಿವರ ಇಲ್ಲಿದೆ. 



ನಾಗಾ ಸಾಧುಗಳಲ್ಲಿ ಕೇವಲ ಪುರುಷರು ಮಾತ್ರ ಇರುವುದಲ್ಲ. ಸ್ತ್ರೀ ನಾಗಾ ಸಾಧುಗಳು ಅಥವಾ ತಪಸ್ವಿ ಮಹಿಳೆಯರೂ ಇದ್ದಾರೆ. ಅವರು ಆಧ್ಯಾತ್ಮಿಕ ಅನ್ವೇಷಣೆಗಾಗಿ ತಮ್ಮ ಲೌಕಿಕ ಜೀವನವನ್ನು ಸಂಪೂರ್ಣವಾಗಿ ತ್ಯಜಿಸುತ್ತಾರೆ. ಪುರುಷ ನಾಗಾ ಸಾಧುಗಳಂತೆ ಸ್ತ್ರೀ ನಾಗಾ ಸಾಧುಗಳು ಕುಟುಂಬ ಮತ್ತು ಭೌತಿಕ ಆಸ್ತಿಗಳ ಜೊತೆಗೆ ತಮ್ಮ ಎಲ್ಲಾ ಬಾಂಧವ್ಯಗಳನ್ನು ಕಡಿದು, ತಪಸ್ಸಿನ ಜೀವನವನ್ನು ಸ್ವೀಕರಿಸುತ್ತಾರೆ. ಅವರು ತಮ್ಮ ಹಿಂದಿನ ಜೀವನದಿಂದ ಎಲ್ಲವನ್ನೂ ಬಿಟ್ಟು ಆಧ್ಯಾತ್ಮಿಕ ಮಾರ್ಗಕ್ಕೆ ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಳ್ಳುತ್ತಾರೆ.

ನಾಗಾ ಸಾಧ್ವಿಗಳಿಗೆ ನೀಡುವ ದೀಕ್ಷಾ ಪ್ರಕ್ರಿಯೆಯೂ ಪುರುಷರಿಗೆ ನೀಡುವುದರಷ್ಟೇ ಕಠಿಣವಾಗಿದೆ. ಅವರು ತಮ್ಮ ಗುರುಗಳಿಗೆ ಅಚಲವಾದ ಬದ್ಧತೆಯನ್ನು ಪ್ರದರ್ಶಿಸಬೇಕು. ಗುರು ಆಕೆಯನ್ನು ಒಪ್ಪಿಕೊಳ್ಳುವ ಮೊದಲು ತೀವ್ರವಾದ ಆಧ್ಯಾತ್ಮಿಕ ಪರೀಕ್ಷೆಗಳು ಮತ್ತು ತರಬೇತಿಗಳಿಗೆ ಒಳಗಾಗಬೇಕು. ಇವರು ಸಾಮಾನ್ಯವಾಗಿ ವಿರಕ್ತ ಹಿನ್ನೆಲೆಯಿಂದ ಬಂದವರು. ಇವರು ಮುಂದೆ ಸಂಸಾರ, ದಾಂಪತ್ಯದ ಕಡೆಗೆ ಹೊರಳುವಂತಿಲ್ಲ. ಹಾಗೆ ಹೋದರೆ ಅವರು ನಾಗಾ ಪಂಥದಿಂದ ತ್ಯಾಜ್ಯರಾಗುತ್ತಾರೆ.

Tap to resize

Latest Videos

ನಾಗಾ ಸಾಧ್ವಿಗಳು ಆಂತರಿಕವಾಗಿ ಹೆಚ್ಚಿನ ಸಾಧನೆ ಮಾಡುತ್ತಾರೆ. ಯಾಕೆಂದರೆ ಪುರುಷರಿಗಿಂತ ಇವರ ಹಾರ್ಮೋನುಗಳು ದೇಹದಲ್ಲಿ ಈ ಕಠಿಣ ವ್ರತಗಳ ಸಂದರ್ಭದಲ್ಲಿ ಯದ್ವಾತದ್ವಾ ವರ್ತಿಸುತ್ತವೆ. ಜೊತೆಗೆ, ಇವರು ಆಕರ್ಷಕವಾಗಿದ್ದರೆ, ಇತರ ಪುರುಷರ ಅಥವಾ ನಾಗಾ ಸಾಧುಗಳ ವೇಷದಲ್ಲಿರುವ ದುರುಳರ ಕಣ್ಣು ಕೂಡ ಇವರ ಮೇಲೆ ಬಿದ್ದು ಅನಾಹುತ ಆಗುವ ಸಾಧ್ಯತೆಗಳಿರುತ್ತವೆ. ಆದರೆ ಪರಿಪಕ್ವ ನಾಗಾ ಸಾಧ್ವಿಗಳು ತಮ್ಮ ಕಠೋರವಾದ ದೃಷ್ಟಿ ಮಾತ್ರದಿಂದಲೇ ದುಷ್ಟರನ್ನು ಹಿಮ್ಮೆಟ್ಟಿಸಬಲ್ಲರು. 

ನಾಗಾ ಸಾಧ್ವಿಗಳು ದೀಕ್ಷೆಗೆ ಮುನ್ನ ಆರರಿಂದ ಹನ್ನೆರಡು ವರ್ಷಗಳ ಕಾಲ ಕಟ್ಟುನಿಟ್ಟಾದ ಬ್ರಹ್ಮಚರ್ಯವನ್ನು ಪಾಲಿಸಬೇಕಾಗುತ್ತದೆ. ತಮ್ಮ ಸಾಧನೆ ಅಥವಾ ತೀವ್ರವಾದ ತಪಸ್ಸಿನ ಸಮಯದಲ್ಲಿ ಅವರು ಸಾಮಾನ್ಯವಾಗಿ ಗುಹೆಗಳು, ಕಾಡುಗಳು ಅಥವಾ ಪರ್ವತಗಳಂತಹ ಪ್ರತ್ಯೇಕ ಸ್ಥಳಗಳಲ್ಲಿ ವಾಸಿಸುತ್ತಾರೆ. ನಂತರ ಇವರು ಅಖಾಡಗಳು ಅಥವಾ ಸನ್ಯಾಸಿಗಳಿರುವ ಆಶ್ರಮಗಳಲ್ಲಿ ವಾಸಿಸುತ್ತಾರೆ. ಅಲ್ಲಿ ಅವರು ಕಟ್ಟುನಿಟ್ಟಾದ ಆಚರಣೆಗಳನ್ನು ಅನುಸರಿಸುತ್ತಾರೆ. 

ಪುರುಷ ನಾಗಾ ಸಾಧುಗಳು ಮೈಮೇಲೆ ಒಂದೆಳೆ ಬಟ್ಟೆಯಿಲ್ಲದೆ ಓಡಾಡಬಲ್ಲರು. ಆದರೆ ಸಾಧ್ವಿಗಳು ಹಾಗೆ ಮಾಡಲಾರರು. ಯಾಕೆಂದರೆ ಸಮಾಜ ಅವರನ್ನು ಹಾಗೆ ಒಪ್ಪಿಕೊಳ್ಳಲಾರದು. ಬದಲಾಗಿ ಅವರು "ಗಂಟಿ" ಎಂದು ಕರೆಯಲ್ಪಡುವ ಕುಂಕುಮ ಬಣ್ಣದ ಬಟ್ಟೆಯನ್ನು ಧರಿಸುತ್ತಾರೆ. ಅವರು ತಲೆಕೂದಲು ಕತ್ತರಿಸುವುದಿಲ್ಲ, ಜಟೆ ಬಿಡುತ್ತಾರೆ. ಅವರ ಹಣೆಯ ಮೇಲಿನ ವಿಶಿಷ್ಟ ತಿಲಕದಿಂದ ಗುರುತಿಸಲ್ಪಡುತ್ತಾರೆ.

ತಮ್ಮ ಸನ್ಯಾಸ ಸ್ವೀಕಾರದ ಆಚರಣೆಯ ಭಾಗವಾಗಿ ಇವರು ತಮ್ಮದೇ ಆದ 'ಪಿಂಡದಾನ'ವನ್ನು ಮಾಡುತ್ತಾರೆ. ಸಾಮಾನ್ಯವಾಗಿ ಇದು ಮರಣದ ನಂತರ ನಡೆಸಲಾಗುವ ಸಾಂಪ್ರದಾಯಿಕ ಆಚರಣೆ. ಇದು ಅವರ ಹಿಂದಿನ ಜೀವನದ ಅಂತ್ಯ ಮತ್ತು ಸನ್ಯಾಸಿಗಳಾಗಿ ಅವರ ಪುನರ್ಜನ್ಮವನ್ನು ಸಂಕೇತಿಸುತ್ತದೆ. ನಾಗಾ ಸಾಧ್ವಿಗಳು ನಾಗಾ ಸಮುದಾಯದಲ್ಲಿ ಗೌರವಾನ್ವಿತ ಸ್ಥಾನ ಹೊಂದಿರುತ್ತಾರೆ. ಅವರನ್ನು "ಮಾತಾ" (ತಾಯಿ) ಎಂದು ಸಂಬೋಧಿಸಲಾಗುತ್ತದೆ. 

ನಾಗಾ ಸಾಧುಗಳು ಮಹಾ ಕುಂಭಮೇಳದೊಂದಿಗೆ ವಿಶೇಷ ಮತ್ತು ಆಳವಾದ ಸಾಂಕೇತಿಕ ಸಂಬಂಧ ಹೊಂದಿದ್ದಾರೆ. ಭಾರತದಲ್ಲಿ ಸರಿಸುಮಾರು 4 ಲಕ್ಷ ನಾಗಾ ಸಾಧುಗಳಿರಬಹುದು. ಮಹಾ ಕುಂಭಮೇಳದಲ್ಲಿ ಅವರಿಗೆ ಮೊದಲ ಸ್ನಾನದ ಹಕ್ಕುಗಳನ್ನು ನೀಡಿ ಗೌರವಿಸಲಾಗುತ್ತದೆ. ಇವರು ಮೊದಲೇ ಬಂದು ಅಖಾಡಗಳಲ್ಲಿ ನೆಲೆಸುತ್ತಾರೆ. ಭವ್ಯವಾದ ಮೆರವಣಿಗೆಯಲ್ಲಿ ಅಲಂಕರಿಸಿದ ರಥಗಳಲ್ಲಿ, ಕುದುರೆಗಳನ್ನು ಏರಿಕೊಂಡು ಸವಾರಿ ಮಾಡುತ್ತ ನದಿಯ ದಂಡೆಗೆ ಬರುತ್ತಾರೆ. ದಾರಿಯಲ್ಲಿ ಇವರು ತಮ್ಮ ಸಮರ ಕೌಶಲ್ಯಗಳನ್ನು ಪ್ರದರ್ಶಿಸುತ್ತಾರೆ. ಪವಿತ್ರ ಮಂತ್ರಗಳನ್ನು ಘೋಷಿಸುತ್ತಾರೆ. ಅವರ ಮೆರವಣಿಗೆ ಒಂದು ರೀತಿಯ ಕೋಲಾಹಲವನ್ನೇ ಸೃಷ್ಟಿಸುತ್ತದೆ. 

ಮಹಾ ಕುಂಭ ಮೇಳದಲ್ಲಿ ಹಿಂದೂ ಹೆಸರಿಟ್ಟುಕೊಂಡ ಸ್ಟೀವ್‌ ಜಾಬ್ಸ್‌ ಪತ್ನಿ!

ನಾಗಾ ಸಾಧುಗಳು, ಸಂತರು, ಬಾಬಾಗಳಿಗೆ ಕುಂಭ ಮೇಳದ ಮೊದಲ ಶಾಹಿ ಸ್ನಾನಕ್ಕೆ ಅವಕಾಶ. ಇವರು ನೀರಿಗಿಳಿದು ಎದ್ದ ಬಳಿಕವೇ ಇತರರಿಗೆ ಅವಕಾಶ. ಮೊದಲೇ ಅವಸರಿಸಿದರೆ ನಾಗಾ ಸಾಧುಗಳಿಂದ ಬೆತ್ತದ ಏಟು ಖಾತ್ರಿ. 

ನಾಗಾ ಸಾಧ್ವಿಗಳು ತಮ್ಮ ಅಸಾಧಾರಣ ಆಧ್ಯಾತ್ಮಿಕ ಶಕ್ತಿ ಮತ್ತು ಕಠಿಣವಾದ ವ್ರತಗಳಿಗಾಗಿ ಖ್ಯಾತರಾಗಿದ್ದಾರೆ. ಮಹಾ ಕುಂಭಮೇಳದಲ್ಲಿ ಅವರ ಉಪಸ್ಥಿತಿಯನ್ನು ಆಶೀರ್ವಾದವೆಂದು ಪರಿಗಣಿಸಲಾಗುತ್ತದೆ. ಇವರು ಎಲ್ಲರ ಆಧ್ಯಾತ್ಮಿಕ ಬೆಳವಣಿಗೆ ಮತ್ತು ಸ್ವಯಂ-ಸಾಕ್ಷಾತ್ಕಾರದ ಪ್ರಾಮುಖ್ಯತೆಯನ್ನು ನೆನಪಿಸುವವರಂತೆ ಕಾರ್ಯನಿರ್ವಹಿಸುತ್ತಾರೆ. 

ಕುಂಭಮೇಳದಲ್ಲಿ ಮೊದಲ ದಿನವೇ 1.5 ಕೋಟಿ ಪುಣ್ಯಸ್ನಾನ!
 

click me!