ಬೆಳಕಿನ ಹಬ್ಬವಾದ ದೀಪಾವಳಿಯನ್ನು ನಾಡಿನಾದ್ಯಂತ ಜನರು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಉತ್ತರಕನ್ನಡ ಜಿಲ್ಲೆಯಲ್ಲಿ ದೀಪಾವಳಿ ವಿಶೇಷವಾಗಿ ಆಚರಿಸಲಾಗುತ್ತಿದ್ದು, ಇಂದಿನಿಂದಲೇ ಬಲಿ ಚಕ್ರವರ್ತಿಯ ಮೂರ್ತಿಯನ್ನಿಟ್ಟು ಆರಾಧಿಸುವುದು ಇಲ್ಲಿನ ವಿಶೇಷ.
ವರದಿ: ಭರತ ರಾಜ್ ಕಲ್ಲಡ್ಕ
ಉತ್ತರ ಕನ್ನಡ (ನ.12): ಬೆಳಕಿನ ಹಬ್ಬವಾದ ದೀಪಾವಳಿಯನ್ನು ನಾಡಿನಾದ್ಯಂತ ಜನರು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಉತ್ತರಕನ್ನಡ ಜಿಲ್ಲೆಯಲ್ಲಿ ದೀಪಾವಳಿ ವಿಶೇಷವಾಗಿ ಆಚರಿಸಲಾಗುತ್ತಿದ್ದು, ಇಂದಿನಿಂದಲೇ ಬಲಿ ಚಕ್ರವರ್ತಿಯ ಮೂರ್ತಿಯನ್ನಿಟ್ಟು ಆರಾಧಿಸುವುದು ಇಲ್ಲಿನ ವಿಶೇಷ.
undefined
ಇಂದು ನರಕ ಚತುರ್ದಶಿ(Naraka chaturdashi) ಯಾದರೆ ಹಿಂದಿನ ದಿನವೇ ಬಾವಿಗೆ ಪೂಜೆ ಸಲ್ಲಿಸಿ ಅದರಿಂದ ನೀರು ಸೇದು ಐದು ವಿಶೇಷ ಕಟ್ಟಿಗೆಗಳ ತುಂಡುಗಳನ್ನು ಹಾಕಿದ ಮಣ್ಣಿನ ಮಡಿಕೆಗಳಿಗೆ ಈ ನೀರನ್ನು ಹಾಕಲಾಗುತ್ತದೆ. ಬಳಿಕ ನೀರು ತುಂಬಿದ ಮಣ್ಣಿನ ಮಡಿಕೆಗಳನ್ನು ದೇವರ ಕೋಣೆಯೊಳಗಿಟ್ಟು ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಇದರ ಜತೆ ಸ್ನಾನದ ಹಂಡೆಗೆ ಹೂವಿನ ಮಾಲೆ ಕಟ್ಟಿ, ಅದರೊಳಗೆ ನಾಣ್ಯವನ್ನು ಹಾಕಿ ಬಿಡಲಾಗುತ್ತದೆ.
ದೇವರ ಕೋಣೆಯೊಳಗೆ ಇರಿಸಿದ್ದ ಮಡಿಕೆಗಳ ನೀರನ್ನು ಇಂದು ಬೆಳಗ್ಗೆ ಪ್ರಾತಃ ಕಾಲವೇ ಹಂಡೆಗೆ ಹಾಕಿ, ಬಳಿಕ ಮೈಕೈಗೆಲ್ಲಾ ಎಣ್ಣೆ ಹಚ್ಚಿ ಅದೇ ಹಂಡೆಯ ನೀರಿನಲ್ಲಿ ಸ್ನಾನ ಮಾಡುವ ಮೂಲಕ ದೇಹ ಶುದ್ಧೀಕರಣ ಮಾಡಿಕೊಳ್ಳಲಾಗುತ್ತದೆ. ಬಳಿಕ ಹೊಸ ಬಟ್ಟೆ ಧರಿಸಿ ಬಳಿಕ ಸಂಭ್ರಮದಿಂದ ದೇವರ ಪೂಜಾ ಕೈಂಕರ್ಯ ನೆರವೇರಿಸಲಾಗುತ್ತದೆ.
ಈ ದಿನ ಕೃಷ್ಣ, ವಿಷ್ಣು, ಲಕ್ಷ್ಮೀಯ ಆರಾಧನೆ ಹೆಚ್ಚಿನ ಜನರು ಮಾಡಿದ್ರೆ, ಜಿಲ್ಲೆಯ ಕರಾವಳಿ ಭಾಗದಲ್ಲಿ ಬಲಿ ಚಕ್ರವರ್ತಿಯನ್ನು ವಿಶಿಷ್ಠವಾಗಿ ಆರಾಧನೆ ನಡೆಸಲಾಗುತ್ತದೆ. ಹೆಚ್ಚಾಗಿ ರೈತರು ಹಾಗೂ ಕೃಷಿಕರ ಮನೆಯಲ್ಲಿ ಆಚರಣೆ ಕಾಣಸಿಗುತ್ತದೆ. ಬಲಿ ಚಕ್ರವರ್ತಿ ಭೂಮಿಯ ಒಡೆಯನಾಗಿದ್ದರಿಂದ ದೀಪಾವಳಿಯ ಸಂದರ್ಭ ಜೇಡಿ ಮಣ್ಣು ಅಥವಾ ಶೇಡಿಮಣ್ಣಿನಿಂದ ಬಲಿಚಕ್ರವರ್ತಿಯ ಮೂರ್ತಿ ನಿರ್ಮಾಣ ಮಾಡಿ ಪೂಜೆ ಮಾಡುವ ಮೂಲಕ ಆಚರಿಸಲಾಗುತ್ತದೆ.
ನರಕ ಚತುರ್ದಶಿ ಹಾಗೂ ಬಲಿ ಪಾಡ್ಯಮಿಯ ದಿನದಂದು ಬಲಿ ಚಕ್ರವರ್ತಿಯನ್ನು ವಿಶಿಷ್ಠ ರೀತಿಯಲ್ಲಿ ಪೂಜಿಸಿ ಆರಾಧಿಸಲಾಗುತ್ತದೆ. ತ್ರೇತಾಯುಗದ ಕಾಲದಲ್ಲಿ ವಿಷ್ಣುವಿನ ಅವತಾರವಾದ ವಾಮನನಿಂದ ಬಲಿಯನ್ನು ಪಾತಾಳಕ್ಕೆ ತುಳಿಯಲ್ಪಟ್ಟ ಸಂಕೇತವಾಗಿ ಪ್ರತೀ ಮನೆಯವರು ಇಂದು ಬೆಳಗ್ಗೆ ಹಿಂಡಲ ಕಾಯಿಯನ್ನು ಎಡಗಾಲಿನಿಂದ ತುಳಿಯುತ್ತಾರೆ. ಬಳಿಕ ಆ ಕಾಯಿಯ ಕಹಿ ತಿಂದು ಎಡಕೈನಲ್ಲಿ ಮನೆಯ ಛಾವಣಿ ಮೇಲೆ ಎಸೆಯಲಾಗುತ್ತದೆ. ದೇವರು ದುಷ್ಣಶಕ್ತಿಯನ್ನು ಭೂಮಿಯಿಂದ ಅಳಿಸಿದ ಸಂಕೇತವೆಂದೂ ಇದನ್ನು ಹೇಳಲಾಗುತ್ತದೆ.
ಇನ್ನು ದೀಪಾವಳಿಯ ಬಳಿಕ ಬಲಿ ಮೂರ್ತಿಯನ್ನು ವಿಸರ್ಜನೆ ಮಾಡುವುದು ಕೂಡಾ ವಿಶೇಷವಾಗಿದೆ. ಸಾಮಾನ್ಯವಾಗಿ ಮಣ್ಣಿನ ಮೂರ್ತಿಗಳನ್ನು ನೀರಿನಲ್ಲಿ ವಿಸರ್ಜಿಸಿದರೆ ಬಲಿಯ ಮೂರ್ತಿಯನ್ನು ಆರಾಧನೆಯ ಬಳಿಕ ಹುಲ್ಲಿನ ಬವಣೆಯ ನಡುವೆ ತುರುಕಿಸಿ ಬಿಡಲಾಗುತ್ತದೆ. ಈ ಮೂಲಕ ಬಲಿಯನ್ನು ಕರಾವಳಿ ಭಾಗದಲ್ಲಂತೂ ವಿಶೇಷವಾಗಿ ಆರಾಧಿಸಿ ವಿಸರ್ಜನೆ ಮಾಡಲಾಗುತ್ತದೆ.