ಇಂಥದೊಂದು ಅಪರೂಪದ ಗ್ರಾಮ ದೇಶದಲ್ಲೇ ಬೇರೆಲ್ಲೂ ಸಿಗಲಿಕ್ಕಿಲ್ಲ. ಕರ್ನಾಟಕದ ಈ ಗ್ರಾಮದ ವಿಶೇಷತೆ ಸಾಕಷ್ಟಿದೆ. 3000 ಜನರಿರುವ ಈ ಗ್ರಾಮದಲ್ಲಿ ಯಾರೊಬ್ಬರೂ ಮಂಚದ ಮೇಲೆ ಮಲಗೋಲ್ಲ, ಕೋಳಿ ಕೂಡಾ ಸಾಕೋಲ್ಲ. ಯಾಕಪ್ಪಾ ಹೀಗೆ ಅಂದ್ರಾ?
ಮನೆಯಲ್ಲಿ ಯಾರಾದರೂ ನಿದ್ರೆ ಮಾಡುತ್ತಿದ್ದಾಗ, ಯಾರೂ ಅವರನ್ನು ಎಬ್ಬಿಸುವ ಗೋಜಿಗೆ ಹೋಗುವುದಿಲ್ಲ. ಚೆನ್ನಾಗಿ ನಿದ್ದೆ ಮಾಡಿಕೊಳ್ಳಲಿ ಎಂದು ಆದಷ್ಟು ಸದ್ದು ಮಾಡದೆ ಕೆಲಸ ಮಾಡಿಕೊಳ್ಳುತ್ತೇವೆ. ಪೂರ್ತಿ ನಿದ್ದೆಯಾದ ಮೇಲೆ ಅವರಾಗಿಯೇ ಏಳುತ್ತಾರೆ ಎಂದು ಭಾವಿಸುತ್ತೇವೆ. ಆದರೆ, ಇದನ್ನೇ ದೇವರ ವಿಚಾರದಲ್ಲಿ ನಾವೆಂದಾದರೂ ಅಂದುಕೊಂಡಿದ್ದೇವೆಯೇ?
ಇಲ್ಲವಲ್ಲ? ಆದರೆ, ಈ ಗ್ರಾಮದ ಜನತೆ ತಮ್ಮ ದೇವರ ಮೇಲೆ ಇಂಥದೇ ಪ್ರೀತಿ ಹೊಂದಿದ್ದಾರೆ. ತಮ್ಮೂರಿನ ದೇವತೆಗೆ ನಿದ್ರೆ ಎಂದರೆ ತುಂಬಾ ಇಷ್ಟವೆಂದು ತಿಳಿದಿದ್ದರಿಂದ ಅವರ ನಿದ್ರೆಗೆ ತೊಂದರೆಯಾಗಬಾರದೆಂದು ಸಾಕಷ್ಟು ನಿಯಮಗಳನ್ನು ಅನುಸರಿಸುತ್ತಾರೆ. ಅದರಲ್ಲೊಂದು ಕೋಳಿ ಸಾಕದಿರುವುದು.
undefined
ಸಾಮಾನ್ಯವಾಗಿ ಹುಂಜ/ಕೋಳಿ ಬೆಳ್ಳಂಬೆಳಗ್ಗೆ ಕೂಗಿ ಎಲ್ಲರನ್ನೂ ಎಚ್ಚರಿಸುತ್ತವೆ. ಅವನ್ನು ಹಳ್ಳಿಗರ ಅಲಾರಾಂ ಕ್ಲಾಕ್ ಎಂದೇ ಭಾವಿಸಲಾಗುತ್ತದೆ. ಅವು ಹಾಗೆ ಕೂದಿದರೆ ತಮ್ಮೂರಿನ ದೇವರಿಗೆ ಎಚ್ಚರಾಗುತ್ತದೆಂದು ಇಲ್ಲಿ ಯಾರೂ ಕೋಳಿ ಸಾಕುವ ಗೋಜಿಗೇ ಹೋಗೋದಿಲ್ಲ. ಎಲ್ಲಪ್ಪಾ ಇಂಥ ಹಳ್ಳಿ ಇದೆ ಅಂದ್ರಾ?
ಇದಿರೋದು ಯಾದಗಿರಿ ಜಿಲ್ಲೆಯಲ್ಲಿ. ಊರು ಮೈಲಾಪುರ. 'ಹಳ್ಳಿಯ ಸೀದಾ ಸಾದಾ ಹೈದ ಮೈಲಾಪುರ ಮೈಲಾರಿ' ಹಾಡು ನೆನ್ಪಾಯ್ತಲ್ವಾ? ಹ್ಮ್, ಇದೇ ಆ ಊರು. ಬೆಂಗಳೂರಿನಿಂದ ಸುಮಾರು 520 ಕಿಮೀ ಮತ್ತು ಯಾದಗಿರಿ ಜಿಲ್ಲಾ ಕೇಂದ್ರದಿಂದ ಸುಮಾರು 20 ಕಿಮೀ ದೂರದಲ್ಲಿರುವ ಈ ಗ್ರಾಮವು ಸುಮಾರು 3000 ಜನಸಂಖ್ಯೆಯನ್ನು ಹೊಂದಿದೆ.
ಮೈಲಾಪುರದ ಜನರು ದೇವರಲ್ಲಿ ಆಳವಾದ ನಂಬಿಕೆಯನ್ನು ಹೊಂದಿದ್ದಾರೆ. ಅವರು ಶತಮಾನಗಳಿಂದ ಪ್ರಚಲಿತದಲ್ಲಿರುವ ನಂಬಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಗ್ರಾಮೀಣ ಸಂಪ್ರದಾಯಗಳು ಮತ್ತು ನಂಬಿಕೆಗಳು ಇಲ್ಲಿ ಪೀಳಿಗೆಯಿಂದ ಪೀಳಿಗೆಗೆ ರವಾನೆಯಾಗಿವೆ. ಹಾಗಾಗಿಯೇ ಮೈಲಾರಿಲಿಂಗಯ್ಯ ಮಲ್ಲಯ್ಯನವರ ಪುಣ್ಯಕ್ಷೇತ್ರವಿರುವ ಈ ಗ್ರಾಮದಲ್ಲಿ ದೇವರಿಗೆ ನಿದ್ರೆ ಮೇಲೆ ಅಪಾರ ಪ್ರೀತಿ. ನಿದ್ರೆಗೆ ಭಂಗವಾದರೆ ಆತ ಸಹಿಸೋಲ್ಲ ಎಂಬ ನಂಬಿಕೆ ಇದೆ. ಹಾಗಾಗಿ, ದೇವರ ನಿದ್ದೆಗೆ ಭಂಗವಾಗುತ್ತೆಂದು ಯಾರೂ ಕೋಳಿ ಸಾಕುವುದಿಲ್ಲ.
ಹತ್ತಿ, ತೊಗರಿ, ಮೆಣಸಿನಕಾಯಿ ಮತ್ತು ಕಬ್ಬನ್ನು ಮುಖ್ಯವಾಗಿ ಬೆಳೆಯುವ ಈ ಗ್ರಾಮವು ಮತ್ತೊಂದು ವಿಶೇಷತೆಗೆ ಹೆಸರುವಾಸಿಯಾಗಿದೆ. ಅದೆಂದರೆ ಇಲ್ಲಿ ಯಾರೂ ಮಂಚದ ಮೇಲೆ ಮಲಗೋದಿಲ್ಲ.
ಮಂಚದ ಮೇಲೆ ಮಲಗೋಲ್ಲ!
ಮಲ್ಲಯ್ಯ ಅವರ ಪತ್ನಿ ತುರಂಗದೇವಿ ಮಂಚದ ಮೇಲೆ ಕುಳಿತುಕೊಳ್ಳುತ್ತಾರೆ ಮತ್ತು ಅವರು ಭಕ್ತರ ಮೇಲೆ ವರಗಳ ಮಳೆ ಸುರಿಸುತ್ತಾರೆ ಎಂಬ ನಂಬಿಕೆ ಇದೆ. ಆದ್ದರಿಂದ ತುರಂಗದೇವಿಯನ್ನು ಗೌರವಿಸಲು, ಎಲ್ಲಾ ಅಂಗವಿಕಲರು, ನವಜಾತ ಶಿಶುಗಳನ್ನು ಹೊಂದಿರುವ ತಾಯಂದಿರು ಸೇರಿದಂತೆ ಊರಿನ ಪ್ರತಿಯೊಬ್ಬರೂ, ದೇವಿಯ ಕೋಪವನ್ನು ತಪ್ಪಿಸಲು ನೆಲದ ಮೇಲೆ ಮಲಗಲು ಬಯಸುತ್ತಾರೆ.