ಚಿಕ್ಕಮಗಳೂರಲ್ಲಿ ನವರಾತ್ರಿ ಸಂಭ್ರಮ: ಗೊಂಬೆಗಳ ಮೂಲಕ ಪುರಾಣ, ಪುಣ್ಯಕಥೆ ಮೆಲುಕು ಹಾಕುವ ಕಾರ್ಯ

By Girish Goudar  |  First Published Oct 18, 2023, 9:58 PM IST

ಚಿಕ್ಕಮಗಳೂರು ನಗರದ ಕೋಟೆಯ ಅಗ್ರಹಾರ ವೃತ್ತದ ಬಳಿ ಇರುವ ಪುರೋಹಿತ ಅಶ್ವಥ್ಥನಾರಾಯಣಾಚಾರ್ಯ, ವಸಂತಾಚಾರ್ಯ ಜೋಶಿ ಅವರ ಮನೆಯಲ್ಲಿ ಪ್ರತಿಷ್ಠಾಪಿಸಿರುವ ಸಾಂಪ್ರದಾಯಿಕ ಪಟ್ಟದ ಗೊಂಬೆಗಳು ಮೈಸೂರು ರಾಜ ಪರಂಪರೆಯ ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ವೈಭವವನ್ನು ಅನಾವರಣಗೊಳಿಸಿವೆ. 


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು

ಚಿಕ್ಕಮಗಳೂರು(ಅ.18): ಆಟಿಕೆ ವಸ್ತುಗಳು ಮಕ್ಕಳಿಗೆ ಎಂದೆಂದೂ ಅಚ್ಚುಮೆಚ್ಚು. ಗೊಂಬೆಗಳೆಂದರೆ ಪಂಚ ಪ್ರಾಣ ಬಿಡುವ ಪುಟಾಣಿಗಳಿಗೆ ಇದು ಸುಗ್ಗಿಕಾಲ. ನವರಾತ್ರಿ ಸಂಭ್ರಮ ಎಲ್ಲೆಲ್ಲೂ ಗೊಂಬೆಗಳ ಕಲರವ. ಸಾಂಪ್ರದಾಯಿಕ ಕುಟುಂಬಗಳಲ್ಲಿ ಗೊಂಬೆ ಕೂರಿಸುವುದು ಇಂದಿಗೂ ನಡೆದು ಬಂದಿದೆ. ದಸರಾ ರಜೆ ಕಳೆಯುಲು ಮಕ್ಕಳಿಗೆ ಇದು ಸಂತೋಷದ ದಿನಗಳು ಜೊತೆಗೆ ಪುರಾಣ ಪುಣ್ಯ ಕಥೆಗಳು ಮೆಲುಕು ಹಾಕಲು ಆಧುನಿಕತೆಯ ತಳಕು ಮೂಡಿಸಲು ಗೊಂಬೆ ಕೂರಿಸಿದ ಮನೆಗಳಲ್ಲಿ ವಿಶೇಷ ಆತಿಥ್ಯ. ಕಾಫಿನಾಡಿನಲ್ಲಿ ಮಕ್ಕಳಿಗೆ ಗೊಂಬೆಗಳ ಮೂಲಕ ಪುರಾಣ, ಪುಣ್ಯಕಥೆಗಳನ್ನು ಮೆಲುಕು ಹಾಕುವ ಕಾರ್ಯವನ್ನು ಮಾಡಲಾಗುತ್ತಿದೆ.

Tap to resize

Latest Videos

undefined

ಸಾಂಪ್ರದಾಯಿಕ ವೈಭವವನ್ನು ಅನಾವರಣ : 

ದಸರಾ ನಾಡಿನ ಸಂಸ್ಕೃತಿಯ ಪ್ರತಿಬಿಂಬ. ನವರಾತ್ರಿ ಉತ್ಸವದ ಸಂಭ್ರಮ ಎಲ್ಲೆಡೆ ಮನೆ ಮಾಡಿರುತ್ತದೆ.ಶಾಲೆಗೆ ರಜಾದಿನಗಳಾಗಿರುವುದು ಮಕ್ಕಳಲ್ಲಿ ಸಂತಸ ತಂದಿರುತ್ತದೆ. ಇದರ ಸಂಪೂರ್ಣ ಮಜಾ ಪಡೆಯುಲು ಹವಣಿಸುವ ಪುಟಾಣಿಗಳಿಗೆ ಗೊಂಬೆಗಳನ್ನು ನೋಡುವುದೇ ಆಹ್ಲಾದಕರ. ಹೌದು ಚಿಕ್ಕಮಗಳೂರುನಗರದ ಕೋಟೆಯ ಅಗ್ರಹಾರ ವೃತ್ತದ ಬಳಿ ಇರುವ ಪುರೋಹಿತ ಅಶ್ವಥ್ಥನಾರಾಯಣಾಚಾರ್ಯ, ವಸಂತಾಚಾರ್ಯ ಜೋಶಿ ಅವರ ಮನೆಯಲ್ಲಿ ಪ್ರತಿಷ್ಠಾಪಿಸಿರುವ ಸಾಂಪ್ರದಾಯಿಕ ಪಟ್ಟದ ಗೊಂಬೆಗಳು ಮೈಸೂರು ರಾಜ ಪರಂಪರೆಯ ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ವೈಭವವನ್ನು ಅನಾವರಣಗೊಳಿಸಿವೆ. ಯಧುವಂಶಸ್ಥರ ಪರಂಪರೆಯ ಕೆಂಪು ಚಂದನದ ಮರದಲ್ಲಿ ಕೆತ್ತಲಾದ ಪಟ್ಟದ ಗೊಂಬೆಗಳು, ಮೈಸೂರು ಮಹಾರಾಜರ ದಸರಾ ದರ್ಬಾರ್, ಜಂಬೂಸವಾರಿ, ಅರಮನೆ, ಅರಸರ ಸಾಂಪ್ರದಾಯಿಕ ಆಚರಣೆಗಳ ವೈಭವವನ್ನು ಸಾರುತ್ತಿದ್ದರೆ, ಇನ್ನೂ ಕೆಲವು ಗೊಂಬೆಗಳು ವಿವಿಧ ದೇವತೆಗಳ ವಿವಿಧ ಭಂಗಿಗಳನ್ನು ಪ್ರದರ್ಶಿಸುತ್ತಿವೆ. 

ದಸರಾ ಆಯುಧ ಪೂಜೆಗೆ ಅರಿಶಿಣ, ಕುಂಕುಮ ಹಾಗೂ ರಂಗೋಲಿ ನಿಷೇಧಿಸಿದ ಸರ್ಕಾರ!

ಭಗವಾನ್ ಶ್ರೀಕೃಷ್ಣನ ಗೀತೋಪದೇಶದ ಗೊಂಬೆಗಳು : 

ಕಲಿಯುಗದ ಹೆದ್ದೈವ ಪದ್ಮಾವತಿ ಹಾಗೂ ಶ್ರೀನಿವಾಸನ ವಿವಾಹದ ವೈಭವವನ್ನು ಸಾರುವ ಶ್ರೀನಿವಾಸ ಕಲ್ಯಾಣದ ಗೊಂಬೆಗಳು ನೋಡುಗರ ಗಮನ ಸೆಳೆಯುತ್ತಿವೆ. ವರನ ದಿಬ್ಬಣವನ್ನು ಎದುರುಗೊಳ್ಳುವುದು, ವರಪೂಜೆ, ಮಾಂಗಲ್ಯಧಾರಣೆ, ಲಾಜಾಹೋಮ, ಸಪ್ತಪದಿ ತುಳಿಯು ವುದು ಸೇರಿದಂತೆ ಮದುವೆಯ ವಿವಿಧ ವಿಧಿವಿಧಾನಗಳನ್ನು ಪರಿಚಯಿಸುತ್ತಿವೆ.ತಿರುಮಲ ತಿರುಪತಿಯ ಸಪ್ತಗಿರಿ ಬೆಟ್ಟ, ಅಲ್ಲಿನ ಪ್ರಕೃತಿಯ ಸೌಂದರ್ಯ, ಶ್ರೀವೆಂಕಟೇಶ್ವರ ದೇವಾಲಯದ ಸ್ತಬ್ಧಚಿತ್ರ, ದೇವತೆಗಳು ಮತ್ತು ರಾಕ್ಷಸರ ನಡುವಿನ ಅಮೃತ ಮಥನದ ದೃಶ್ಯಗಳು, ಪ್ರಾಚೀನ ಕಾಲದ ಗುರುಕುಲ ಪದ್ಧತಿಯ ಗೊಂಬೆಗಳು ಗಮನ ಸೆಳೆಯುತ್ತಿವೆ. 

ಶ್ರೀಕೃಷ್ಣ ಗೋವರ್ಧನ ಗಿರಿಯನ್ನು ತನ್ನ ಬೆರಳಿನಲ್ಲಿ ಎತ್ತಿ ಹಿಡಿದು ಗೋಪಾಲಕರು ಮತ್ತು ಗೋವುಗಳನ್ನು ರಕ್ಷಿಸುವ ದೃಶ್ಯ, ಕೈಲಾಸ ಪರ್ವತದಲ್ಲಿ ಬ್ರಹ್ಮ, ವಿಷ್ಣು, ನಂದಿ, ಭೃಂಗಿ, ಶಿವಗಣಗಳ ಋಷಿಮುನಿಗಳ ನಡುವೆ ಶಿವ ಪಾರ್ವತಿಯರ ಒಡ್ಡೋಲಗದ ದೃಶ್ಯ ಕಣ್ಮನ ಸೆಳೆಯುತ್ತಿವೆ.ಭಗವಾನ್ ಶ್ರೀಕೃಷ್ಣನ ಗೀತೋಪದೇಶದ ಗೊಂಬೆಗಳು, ಮಹಾವಿಷ್ಟುವಿನ ದಶವತಾರದ ಗೊಂಬೆಗಳು, ಕೃಷಿ ಚಟುವಟಿಕೆ, ಸಂತೆಯ ದೃಶ್ಯ, ಭಾರತೀಯ ಹಬ್ಬ ಹರಿದಿನಗಳ ಆಚರಣೆ ಗಳನ್ನು ಸಂಪ್ರದಾಯಗಳನ್ನು ತೆರೆದಿಡುವ ನೂರಾರು ಗೊಂಬೆಗಳು ನಾಡಿನ ಸಂಸ್ಕೃತಿಯನ್ನು ಬಿಂಬಿಸುತ್ತಿವೆ. ಹಬ್ಬ ಪ್ರಾರಂಭಕ್ಕೂ ಎರಡು ದಿನಗಳ ಮುಂಚೆ ಗೊಂಬೆಗಳನ್ನು ಕೂರಿಸಲಾಗುತ್ತದೆ. ಇನ್ನು ಬಳುವಳಿಯಾಗಿ ಬಂದ ಪಟ್ಟದ ಗೊಂಬೆಗಳಿಗೆ ವಿಶೇಷ ಅಲಂಕಾರ ಮಾಡಲಾಗುತ್ತದೆ ಲಕ್ಷಾಂತರ ರೂಪಾಯಿ ವ್ಯಯಿಸಿ ಈ ಕುಟುಂಬ ಗೊಂಬೆಗಳನ್ನು ಕೂರಿಸಿಕೊಂಡು ಬರುತ್ತಿದೆ. ಪ್ರತಿನಿತ್ಯ ಗೊಂಬೆಗಳನ್ನು ನೋಡಲು ಬರುವವರಿಗೆ ಗೊಂಬೆ ಬಾಗಿಣ, ವಿವಿಧ ಸಿಹಿ ತಿನಿಸುಗಳನ್ನು ನೀಡಲಾಗುತ್ತದೆ. ಕಳೆದ 12-13 ವರ್ಷಗಳಿಂದಲೂ ಗೊಂಬೆಗಳನ್ನು ಕೂರಿಸಿಕೊಂಡು ಬರುತ್ತಿರುವ ಈ ಕುಟುಂಬ ಈ ಸಂಪ್ರದಾಯವನ್ನು ಮುಂದುವರೆಸಿಕೊಂಡು ಹೋಗುವ ಗುರಿಹೊಂದಿದೆ. 

ಒಟ್ಟಿನಲ್ಲಿ ಆಧುನಿಕತೆಯ ಹೆಸರಲ್ಲಿ ಹುಟ್ಟುಹಬ್ಬ ಆಚರಣೆಯ ಭರಾಟೆಯಲ್ಲಿ ನಶಿಸುತ್ತಿರುವ ಸಂಪ್ರದಾಯವನ್ನು ಉಳಿಸುವ ಕೆಲಸವನ್ನು ಈ ಕುಟುಂಬ ಮಾಡುತ್ತಿದೆ. ಇವರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗ್ತಿದೆ.

click me!