ಸ್ವ ಅರಿವೇ ಮೋಕ್ಷಕ್ಕೆ ದಾರಿ ಎಂದ ಮಹಾವೀರ

By Suvarna News  |  First Published Apr 14, 2022, 10:39 AM IST

ನೀನೂ ಜೀವಿಸು, ಇತರರನ್ನೂ ಜೀವಿಸಲು ಬಿಡು. ಅಹಿಂಸೆಯೆ ಪರಧರ್ಮ. ವ್ಯಕ್ತಿಯು ಸ್ವಪ್ರಯತ್ನದಿಂದಲೇ ಮೋಕ್ಷವನ್ನು ಪಡೆಯಲು ಸಾಧ್ಯ ಎಂಬ ಮಹಾವೀರರ ಮಾತು ಲಕ್ಷಾಂತರ ಜನರ ಮನಸ್ಸನ್ನು ಗೆದ್ದಿದೆ ಮತ್ತು ಇಂದಿಗೂ ಪ್ರಸ್ತುತವಾಗಿದೆ.


ರಾಜು ಭೂಶೆಟ್ಟಿ, ಹುಬ್ಬಳ್ಳಿ
ಮಹಾವೀರ(Mahavir)ರು ಜೈನಮತದ 24ನೇ ತೀರ್ಥಂಕರರು. ಸಾ.ಶ.ಪೂ 599ರ ಚೈತ್ರ ಶುದ್ಧ ತ್ರಯೋದಶಿ ದಿನ ಬಿಹಾರದ ವೈಶಾಲಿ ರಾಜ್ಯದ ಕುಂಡಲಪುರದಲ್ಲಿ ಜನಿಸಿದರು. ಅವರ ತಂದೆ ರಾಜ ಸಿದ್ಧಾರ್ಥ ಮತ್ತು ತಾಯಿ ರಾಣಿ ತ್ರಿಶಲಾ ದೇವಿ. ಇವರು ಹುಟ್ಟಿದ ದಿನದಿಂದ ಮನೆಯಲ್ಲಿ ಐಶ್ವರ್ಯ ವಿಶೇಷ ರೀತಿಯಲ್ಲಿ ಅಭಿವೃದ್ಧಿಯಾಗತೊಡಗಿದ್ದರಿಂದ ಅವರಿಗೆ ವರ್ಧಮಾನ(Vardhamana) ಎಂದು ನಾಮಕರಣ ಮಾಡಲಾಗಿತ್ತು. ಜ್ಞಾನಪುತ್ರ, ಸನ್ಮತಿ ನಾಯಕ, ಅತಿವೀರ, ನಿರ್ಗಂಥ ಎಂಬ ಹೆಸರುಗಳೂ ಇದ್ದವು.

ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಇವರು ಬಾಲ್ಯದಲ್ಲಿರುವಾಗಲೇ ಪರೋಪಕಾರ ಭಾವ, ಜೀವಿಗಳ ಮೇಲೆ ದಯೆ, ಆಕಾಂಕ್ಷೆಗಳನ್ನು ಮರ್ಯಾದಿತವಾಗಿ ಇಟ್ಟುಕೊಳ್ಳುವುದು ಹೀಗೆ ಹಲವಾರು ನಿಯಮಗಳಲ್ಲಿ ದೃಢ ಸಂಕಲ್ಪವನ್ನು ಹೊಂದಿದವರಾಗಿದ್ದರು. ಅರಮನೆ ಸುಖವನ್ನು ತೊರೆದು ಪ್ರಾಪಂಚಿಕ ಸುಖ, ಭೋಗಗಳನ್ನು ಸಂಪೂರ್ಣವಾಗಿ ತ್ಯಜಿಸಿದರು. ಗೃಹವನ್ನು ತೊರೆದು ವಿರಕ್ತರಾದರು. ಶಾಂತಿಯನ್ನು ಅರಸುತ್ತ ದೇಶ ಪರ್ಯಟನೆ ಮಾಡಿದರು. ಸುಮಾರು 12 ವರ್ಷಗಳವರೆಗೆ ಘೋರ ತಪಸ್ಸನ್ನು ಮಾಡಿದರು. ತನ್ನನ್ನು ತಾನು ಗೆಲ್ಲುವ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದರು ವರ್ಧಮಾನರು. ಮಹಾವೀರ ಎಂದರೆ ನಾಯಕ, ಪರಾಕ್ರಮಿ, ಅಪ್ರತಿಮ ವೀರ, ಜಯಶಾಲಿ ಎಂದರ್ಥ. ತಾವು ಕಂಡುಕೊಂಡ ಶಾಂತಿ ಮಾರ್ಗವನ್ನು ಎಲ್ಲರಿಗೂ ಉಪದೇಶಿಸಿದರು. ಜನಸಾಮಾನ್ಯರಿಗೆ ಅರ್ಥವಾಗುತ್ತಿದ್ದ ಭಾಷೆಯಲ್ಲಿ ಬೋಧಿಸಿದರು. ಜ್ಞಾನವನ್ನು ತೀರ್ಥ ಎಂದೂ ಕರೆಯುತ್ತಾರೆ. ಅದನ್ನು ಎಲ್ಲರಿಗೂ ಹಂಚುತ್ತಾ ಸಾಗಿದ ಮಹಾವೀರರು ತೀರ್ಥಂಕರ ಎನ್ನಿಸಿಕೊಂಡರು.

Tap to resize

Latest Videos

ಪಂಚಶೀಲ ತತ್ವ ಬೋಧನೆ(Panchasheela tatva)
ಮಹಾವೀರರು ಮೋಕ್ಷ ಸಾಧನೆಗಾಗಿ ಪಂಚಶೀಲ ತತ್ವಗಳನ್ನು ಮತ್ತು ತ್ರಿರತ್ನಗಳನ್ನು ಬೋಧಿಸಿದರು. ಸತ್ಯ, ಅಹಿಂಸೆ ,ಅಸ್ತೇಯ (ಕಳ್ಳತನ ಮಾಡದಿರುವುದು) ,ಅಪರಿಗ್ರಹ (ಅವಶ್ಯಕತೆಗಿಂತ ಹೆಚ್ಚಿನ ಸಂಪತ್ತನ್ನು ಹೊಂದದಿರುವುದು) ಬ್ರಹ್ಮಚರ್ಯ (ಪಾವಿತ್ರ್ಯತೆ) ಇವುಗಳು ಪಂಚಶೀಲ ತತ್ವಗಳಾಗಿವೆ. ಇನ್ನು ತ್ರಿರತ್ನಗಳ ಕುರಿತು ತಿಳಿಸುವುದಾದರೆ, ಮನುಷ್ಯ ಜೀವನವು ದುಃಖಕ್ಕೆ ಕಾರಣವಾದಂತಹ ಸಂಸಾರ ಚಕ್ರವನ್ನು ಕೊನೆಗಾಣಿಸಬೇಕು. ಇದನ್ನು ಸಾಧಿಸಲು ಸಮ್ಯಕ್‌ ದರ್ಶನ, ಸಮ್ಯಕ್‌ ಜ್ಞಾನ, ಸಮ್ಯಕ್‌ ಚಾರಿತ್ರ್ಯ ಈ ತ್ರಿರತ್ನಗಳನ್ನು ಸತತವಾಗಿ ಅನುಸರಿಸಬೇಕು.

ಸಮ್ಯಕ್‌ ಎಂದರೆ ಪರಮಶ್ರೇಷ್ಠ ಎಂದರ್ಥ. ಸದಾಕಾಲ ಒಳ್ಳೆಯದನ್ನೇ ನೋಡು, ಅದರಿಂದಾಗಿ ಒಳ್ಳೆಯ ಜ್ಞಾನ ಸಂಚಯವಾಗುತ್ತದೆ. ಒಳ್ಳೆಯ ಜ್ಞಾನ ನಿನ್ನ ಒಳ್ಳೆಯ ನಡತೆಗೆ ಕಾರಣವಾಗುತ್ತದೆ ಎಂಬ ಅಂದಿನ ಮಾತುಗಳು ಇಂದಿನ ಕಾಲಘಟ್ಟದಲ್ಲಿಯೂ ಮತ್ತೆ ಮತ್ತೆ ಚಿಂತನೆಗೆ ಒಳಪಡಿಸುತ್ತವೆ. ಇವರು ಜನರಿಗೆ ಸತ್ಯ, ಅಹಿಂಸೆ, ಪ್ರಾಮಾಣಿಕತೆ, ಪರಿಶುದ್ಧತೆಗಳಿಂದ ಕೂಡಿದ ಸರಿಯಾದ ನಂಬಿಕೆ ಬೆಳೆಸಿಕೊಳ್ಳಲು ತಿಳಿಯಪಡಿಸಿದರು. ಅಹಿಂಸೆಯೇ ಪರಮಧರ್ಮ, ಹಿಂಸೆಯನ್ನು ಮಾಡಬಾರದು. ಮಾನವ ಮತ್ತೊಬ್ಬ ಮಾನವನನ್ನಾಗಲಿ, ಪ್ರಾಣಿ ಪಕ್ಷಿಗಳನ್ನಾಗಲಿ, ಇತರ ಸಣ್ಣ ಕೀಟಗಳನ್ನಾಗಲಿ ಹಿಂಸಿಸಬಾರದು.

Mahavir Jayanti ಯಾವಾಗ? ಹಬ್ಬದ ವೈಶಿಷ್ಟ್ಯತೆ ಏನು?

ಪ್ರತಿಯೊಬ್ಬ ವ್ಯಕ್ತಿಯೂ ಸ್ವಪ್ರಯತ್ನದಿಂದ ಮೋಕ್ಷ(Salvation)ವನ್ನು ಸಾಧಿಸಿಕೊಳ್ಳಬೇಕು. ಮೋಕ್ಷ ಪಡೆಯುವುದನ್ನು ನಿರ್ವಾಣ ಹೊಂದುವುದು ಎನ್ನಲಾಗಿದೆ. ನಿರ್ವಾಣ ಹೊಂದುವುದು ಅರ್ಥಾತ್‌ ಮುಕ್ತಿ ಪಡೆಯುವಿಕೆಯನ್ನು ತ್ಯಾಗ ಅಥವಾ ಸಂಯಮ, ಸಲ್ಲೇಖನ ಮತ್ತು ವಿರಕ್ತತತೆಯಿಂದ ಸಾಧಿಸಬಹುದು. ಸಲ್ಲೇಖನ ವೃತ ಎಂದರೆ ದೇಹವನ್ನು ದಂಡಿಸುವುದರ ಮೂಲಕ ಸಾವನ್ನಪ್ಪುವುದು ಈ ಮೂಲಕ ನಿರ್ವಾಣ ಹೊಂದುವುದು. ಅನೇಕಾಂತವಾದ- ಭಗವಾನ್‌ ಮಹಾವೀರರಿಂದ ಪರಿಚಯಿಸಲ್ಪಟ್ಟವೈಜ್ಞಾನಿಕ ಪದ್ಧತಿ. ಸಮಸ್ಯೆಯ ಒಂದು ಮುಖವನ್ನಷ್ಟೇ ನೋಡುವುದರಿಂದ ಉಪಯೋಗವಿಲ್ಲ, ಬದಲಿಗೆ ಸಮಸ್ಯೆಯ ಸಮಗ್ರ ಚಿಂತನೆಯನ್ನು ಮಾಡಬೇಕೆಂದು ತಿಳಿಸಿದರು. ಇವೇ ಮೊದಲಾದವುಗಳು ಮಹಾವೀರರು ಪ್ರಚಾರ ಮಾಡಿದ ಜೈನ ಮತದ ಪ್ರಮುಖ ಉಪದೇಶಗಳಾಗಿವೆ. ಅಹಿಂಸೆಯು ಜೈನ ಮತದ ಪ್ರಮುಖ ತಳಹದಿಯಾಗಿದೆ. ಅಂದು ಮಹಾವೀರರು ಮಾನವ ಕೋಟಿಯ ಉದ್ಧಾರಕ್ಕೆ ಕೊಟ್ಟಸಂದೇಶಗಳು ಇಂದಿಗೂ ಪ್ರಸ್ತುತ.

ಇಂದ್ರಿಯ ನಿಗ್ರಹ
ಮನುಷ್ಯನು ಹೊರಗಿನ ವೈರಿಗಳಿಗಿಂತ ಒಳಗಿನ (ಆಂತರಿಕ) ವೈರಿಗಳನ್ನು ಗೆಲ್ಲುವುದು ಬಹು ಮುಖ್ಯ ಎಂದು ಪ್ರತಿಪಾದಿಸುತ್ತಾರೆ. ಅದಕ್ಕಾಗಿ ಇಂದ್ರಿಯ ನಿಗ್ರಹ ಮಾಡುವುದು ಅತಿ ಅಗತ್ಯ. ಸ್ವಾರ್ಥ, ಆಸೆ, ಆಮಿಷಗಳಿಗೆ ದಾಸನಾದ ಮನುಷ್ಯನಿಂದಾಗುವ ಅನ್ಯಾಯ, ಅನೀತಿಗಳಿಗೆ ಮಿತಿ ಎಂಬುದೇ ಇಲ್ಲ. ಅವು ಹೆಚ್ಚುತ್ತಾ ಹೋದಂತೆ ಮನುಷ್ಯ ಸುಖಿಯಾಗುವುದರ ಬದಲು ಸದಾ ಅತೃಪ್ತನಾಗಿ ಬದುಕನ್ನು ನಡೆಸುತ್ತಾನೆ. ಅಂದರೆ ಮನುಷ್ಯ ತನ್ನ ಆಸೆ, ಆಕಾಂಕ್ಷೆಗಳನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳುವುದರಿಂದ ಸಹಜವಾದ ನೆಮ್ಮದಿಯನ್ನು ತನ್ನದಾಗಿಸಿಕೊಳ್ಳಬಲ್ಲ. ಆ ನೆಮ್ಮದಿಯೇ ಅವನನ್ನು ಧರ್ಮ ಮಾರ್ಗದಲ್ಲಿ ಮುಂದುವರೆಯುವಂತೆ ಮಾಡುವುದು. ಆದರೆ ಇಂದು ಮನುಷ್ಯನಿಗೆ ಸಕಲ ಸೌಕರ್ಯ, ಸಂಪತ್ತುಗಳಿದ್ದರೂ ಕೂಡ ನೆಮ್ಮದಿಯೆಂಬುದು ಅತ್ಯಂತ ದುಬಾರಿಯಾದ ವಸ್ತುವಾಗುತ್ತಿರುವುದು ಮಾತ್ರ ತುಂಬಾ ನೋವಿನ ಸಂಗತಿಯಾಗಿದೆ. ತನ್ನಲ್ಲಿರುವುದನ್ನು ಬಿಟ್ಟು ಬೇರೆಯವರಿಗಿರುವ ವಸ್ತು, ಆಸ್ತಿ, ಅಂತಸ್ತು, ಸೌಕರ್ಯಗಳೊಂದಿಗೆ ಹೋಲಿಸಿಕೊಂಡು ತನ್ನ ಮನಃಶಾಂತಿಯನ್ನು ಕಳೆದುಕೊಳ್ಳುತ್ತಿದ್ದಾನೆ. ಇನ್ನೂ ಬೇಕು ಇನ್ನೂ ಬೇಕು ಎಂದು ಸಂಪತ್ತಿನ ಸಂಗ್ರಹದಲ್ಲಿ ತೊಡಗಿಕೊಂಡು ಮಾನವೀಯ ಸಂಬಂಧಗಳನ್ನು, ತನ್ನ ಆರೋಗ್ಯ ಕೂಡ ಮನುಷ್ಯ ಕಳೆದುಕೊಳ್ಳುತ್ತಿದ್ದಾನೆ. ಅತೃಪ್ತಿ, ಅಸಂತೋಷಗಳಿಗೆ ಮೂಲಕಾರಣವಾದ ಆಸ್ತಿಯನ್ನು ಸಂಪೂರ್ಣವಾಗಿ ತೊರೆಯುವುದು. ಈ ಎಲ್ಲ ಅಂಶಗಳನ್ನು ಗಮನಿಸಿದಾಗ ಮಹಾವೀರರು ಬೋಧಿಸಿದ ತತ್ವಗಳನ್ನು ಅಳವಡಿಸಿಕೊಂಡು ಇದ್ದುದರಲ್ಲಿಯೇ ತೃಪ್ತಿ ಪಟ್ಟುಕೊಂಡು ಸಂತೃಪ್ತಿಯ ಜೀವನವನ್ನು ನಮ್ಮದಾಗಿಸಿಕೊಳ್ಳುವುದು ಇಂದಿನ ಸಂದರ್ಭದಲ್ಲಂತೂ ಅತೀ ಅಗತ್ಯವಾಗಿದೆ.

ಹನುಮಾನ್ ಜಯಂತಿ ಯಾವಾಗ? ಹೀಗಿರಲಿ ಪೂಜೆಯ ವಿಧಿ ವಿಧಾನ

ಜೀವನವೇ ಸಂದೇಶ(Message)
ಗಳಿಸಿದ ಸಂಪತ್ತಿನಲ್ಲಿಯೇ ಸ್ವಲ್ಪ ಪ್ರಮಾಣವನ್ನು ದಾನ, ಧರ್ಮ ಕಾರ್ಯಗಳಿಗೆ ವಿನಿಯೋಗಿಸುವುದು ಕೂಡ ಪುಣ್ಯದ ಕಾರ್ಯ. ಮನುಷ್ಯ ಕೇವಲ ತನ್ನ ಬಗೆಗೆ ಚಿಂತಿಸದೇ ಎಲ್ಲರಿಗೂ ಒಳಿತನ್ನು ಬಯಸುವುದೇ ಮಾನವೀಯತೆ. ಹೀಗಾದಾಗ ತನ್ನಂತೆ ಪರರು ಎಂಬ ಮಾತು ಮನದಟ್ಟಾಗುವುದು. ಸಂದರ್ಭ ಯಾವುದೇ ಇರಲಿ ಪ್ರತಿಕ್ರಿಯಿಸುವ ಮೊದಲು ಅವರ ಸ್ಥಾನದಲ್ಲಿ ನಾವಿದ್ದುಕೊಂಡು ಒಂದು ಕ್ಷಣ ಆಲೋಚಿಸುವುದನ್ನು ಎಂದಿಗೂ ಮರೆಯಬಾರದು. ಆಗ ಮಾತ್ರ ನಮ್ಮ ವರ್ತನೆ ಸರಿಯಾದ ಮಾರ್ಗದಲ್ಲಿರುತ್ತದೆ ಎಂದು ಹೇಳಬಹುದಾಗಿದೆ. ಆದುದರಿಂದ ಪರರನ್ನು ತನ್ನಂತೆ ಕಾಣು, ಸಮಭಾವವನ್ನು ತಾಳು, ಪರಿಗ್ರಹಗಳಿಗೆ ಮಿತಿಯನ್ನು ನಿಗದಿಮಾಡಿಕೊಳ್ಳು ಎಂದು ಮಹಾವೀರರು ಬೋಧಿಸಿರುವುದು ಅತ್ಯಂತ ಸೂಕ್ತವಾಗಿದೆ. ಸುಖ ದುಃಖವನ್ನು ಸಮಭಾವದಿಂದ ಸ್ವೀಕರಿಸಬೇಕು.

ಒಟ್ಟಾರೆಯಾಗಿ ಮಹಾವೀರರ ಜೀವನದ ಆದರ್ಶವನ್ನು ಅವರ ಸಂದೇಶಗಳನ್ನು ಅರಿತುಕೊಂಡು ನಿತ್ಯ ಜೀವನದಲ್ಲಿ ಆಚರಿಸಲು ಪ್ರಯತ್ನಿಸುವುದಾದರೆ, ವಿಶ್ವಪ್ರೇಮ, ವಿಶ್ವ ಮಾನವ, ವಿಶ್ವ ಬಂಧುತ್ವದ ಬಗೆಗಿನ ಮಾತುಗಳು ಕೃತಿ ರೂಪಕ್ಕಿಳಿಯಲು ಸಾಧ್ಯವಾಗುವುದರಲ್ಲಿ ಯಾವ ಅನುಮಾನವೂ ಇರಲಾರದೆಂದು ಹೇಳಬಹುದಾಗಿದೆ.

click me!