ಬನ್ನೂರು ಕೆ.ರಾಜು
ಭಾರತೀಯ ಸಂಸ್ಕೃತಿಯ ಬೇರಿನಲ್ಲಿಯೇ ಇವೆ ಹಬ್ಬ ಹರಿದಿನಗಳು, ಜಾತ್ರೆ- ಉತ್ಸವಗಳು. ಇಂಥ ಹಬ್ಬಗಳಲ್ಲಿ ಶಾಲಿವಾಹನಶಕೆ ಮಾಘ ಮಾಸ ಅಥವಾ ವಿಕ್ರಮ ಸಂವತ್ಸರದ ಫಾಲ್ಗುಣ ಮಾಸದ ಕೃಷ್ಣಪಕ್ಷ ಚತುರ್ದಶಿ ದಿನದಂದು ಬರುವ ಶಿವನ ಆರಾಧನೆಯ ಮಹಾಶಿವರಾತ್ರಿ ಅತ್ಯಂತ ವಿಶೇಷವಾದ ಹಬ್ಬವಾಗಿದೆ.
ಮಾಘ ಕೃಷ್ಣ ಚತುರ್ದಶ್ಯಾಂ ಆದಿದೇವೋ ಮಹಾನಿಶಿ ।
ಶಿವಲಿಂಗತಯೋದ್ಭೂತಃ ಕೋಟಿಸೂರ್ಯ ಸಮಪ್ರಭ ।।
ತತ್ಕಾಲ ವ್ಯಾಪಿನೀಗ್ರಾಹ್ಯಾ ಶಿವರಾತ್ರಿವ್ರತೇತಿಥೀಃ ।
ಮಹಾಶಿವರಾತ್ರಿಗೆ ಸಂಬಂಧಿಸಿದಂತೆ ಬಹಳಷ್ಟು ಪುರಾಣ ಕಥೆಗಳುಂಟು. ಒಂದು ಕಥೆಯ ಪ್ರಕಾರ ಶಿವ-ಪಾರ್ವತಿಯರು ವಿವಾಹವಾದ ಶುಭದಿನವೇ ಮಹಾಶಿವರಾತ್ರಿ. ಮತ್ತೊಂದು ಕಥೆಯ ಪ್ರಕಾರ ಶಿವನು ತಾಂಡವನೃತ್ಯ ಮಾಡಿದ ದಿನವೇ ಮಹಾಶಿವರಾತ್ರಿ. ಇನ್ನೊಂದು ಕಥೆಯ ಪ್ರಕಾರ ಪ್ರಳಯದಿಂದ ಇಡೀ ಪ್ರಪಂಚವೇ ನಾಶವಾಗುತ್ತಿದ್ದಾಗ ಪಾರ್ವತಿಯು ಅಂತರಿಕ್ಷದಲ್ಲಿ ಜೀವಕಣಗಳನ್ನು ಉಳಿಸುವುದಕ್ಕಾಗಿ ಶಿವನಲ್ಲಿ ಮೊರೆ ಹೊಕ್ಕು ಅಹೋರಾತ್ರಿ ಪ್ರಾರ್ಥಿಸಿದಳಂತೆ. ಹೀಗೆ ಪಾರ್ವತಿಯು ಶಿವನಲ್ಲಿ ಪ್ರಾರ್ಥಿಸಿದ ಆ ರಾತ್ರಿಯೇ ಮಹಾಶಿವರಾತ್ರಿ. ಇದು ಶಿವನಿಗೆ ಅತ್ಯಂತ ಪ್ರೀತಿ ಪಾತ್ರವಾದ ದಿನವಂತೆ. ಮಗದೊಂದು ಕಥೆಯ ಪ್ರಕಾರ ಶಿವನು ತ್ರಿಲೋಕ ಸಂಚಾರಿ ಮತ್ತು ಬ್ರಹ್ಮಸ್ವರೂಪಿ ಎಂದು ಜಗತ್ತಿಗೆ ತೋರಿಸಲು ಪ್ರಪ್ರಥಮವಾಗಿ ಭೂಮಿಯಿಂದ ಆಕಾಶದೆತ್ತರಕೆ ಲಿಂಗರೂಪದಲ್ಲಿ ಜ್ಯೋತಿಯಾಗಿ ನಿಂತಂತಹ ಮಹಾದಿನವೇ ಮಹಾ ಶಿವರಾತ್ರಿ.
ಇನ್ನೂ ಒಂದು ಪುರಾಣ ಕಥೆಯ ಪ್ರಕಾರ ದೇವತೆಗಳು ಮತ್ತು ರಾಕ್ಷಸರು ಅಮೃತಕ್ಕೋಸ್ಕರ ಸಮುದ್ರ ಮಥನ ಮಾಡುವಾಗ ಮೊದಲು ಬಂದ ಹಾಲಾಹಲದಿಂದ ಅರ್ಥಾತ್ ವಿಷದಿಂದ ಸಕಲ ಜೀವರಾಶಿಗಳಿಗೂ ಕಂಟಕವಾಗತೊಡಗುತ್ತದೆ. ಆಗ ತಕ್ಷಣವೇ ಶಿವ ಜಾಗೃತನಾಗಿ ತನ್ನ ಜೀವವನ್ನು ಲೆಕ್ಕಿಸದೆ ಹಾಲಹಲವನ್ನೆಲ್ಲ ಕುಡಿದು ಬಿಡುತ್ತಾನೆ. ಇದನ್ನು ನೋಡಿದ ಶಿವನ ಪತ್ನಿ ಪಾರ್ವತಿಯು ಪತಿಯ ಪ್ರಾಣ ಉಳಿಸಲು ತನ್ನೆರಡೂ ಕೈಗಳಿಂದ ಶಿವನ ಕಂಠವನ್ನು ಹಿಡಿದು ಹಾಲಾಹಲವನ್ನು ಶಿವನ ಗಂಟಲಲ್ಲೇ ಉಳಿಸಿಬಿಡುತ್ತಾಳೆ. ಆಗ ಶಿವನ ಗಂಟಲು ವಿಷದಿಂದ ನೀಲಿ ಗಟ್ಟಿಕೊಳ್ಳುತ್ತದೆ. ವಿಷ ಕುಡಿದ ಕಾರಣಕ್ಕೆ ಶಿವ ಬಹಳ ನಿತ್ರಾಣನಾಗುತ್ತಾನೆ. ಆಗ ಶಿವನ ಶಕ್ತಿಯನ್ನು ಹೆಚ್ಚಿಸಲು ದೇವಾನು ದೇವತೆಗಳೆಲ್ಲ ಇಡೀ ರಾತ್ರಿ ಶಿವನ ಸಮೀಪವಿದ್ದು ಶಿವನನ್ನು ಹಾಡಿ, ಹೊಗಳಿ, ಕೊಂಡಾಡಿ ಬಲ ತುಂಬುತ್ತಾರೆ. ಆ ರಾತ್ರಿ ಪೂರ್ಣ ದೇವತೆಗಳು ಶಿವ ಸನ್ನಿಧಿಯಲ್ಲಿ ಕಳೆದ ಪ್ರತೀಕವೇ ಅದು ಮಹಾ ಶಿವರಾತ್ರಿ ಆಗುತ್ತದೆ.
ಹೀಗೆ ಮಹಾಶಿವರಾತ್ರಿ ಕುರಿತು ಅನೇಕ ಕಥೆಗಳಿದ್ದರೂ ಆಚರಣೆ ಮಾತ್ರ ಒಂದೇ. ಮಹಾ ಶಿವರಾತ್ರಿಯದ್ದು ಐದು ವಿಧ. ಒಂದು ನಿತ್ಯ ಶಿವರಾತ್ರಿ, ಎರಡು ಪಕ್ಷ ಶಿವರಾತ್ರಿ, ಮೂರು ಮಾಸ ಶಿವರಾತ್ರಿ, ನಾಲ್ಕು ಯೋಗ ಶಿವರಾತ್ರಿ, ಐದು ಮಹಾ ಶಿವರಾತ್ರಿ.
ಒಂದು ತಂಬಿಗೆ ಶುದ್ಧವಾದ ನೀರು, ಒಂದಷ್ಟು ಬಿಲ್ವಪತ್ರೆ ಸಾಕು ಶಿವಪೂಜೆಗೆ. ಉಪವಾಸ ಮತ್ತು ಜಾಗರಣೆ ಇದ್ದರಾಯಿತು, ಶಿವಸಂತೃಪ್ತ. ಇಲ್ಲಿ ಮೂರ್ತಿ ರೂಪದ ಶಿವನಿಗಿಂತ ಲಿಂಗರೂಪಿ ಶಿವನಿಗೇ ಹೆಚ್ಚು ಪ್ರಾಶಸ್ತ್ಯ. ಶಿವಲಿಂಗ ಎಂಬುದು ಅವ್ಯಕ್ತ ತತ್ವಗಳ ಸಂಕೇತ. ಸಾಕಾರದಿಂದ ನಿರಾಕಾರದತ್ತ ಸಾಗಲು ಸಾಧನವೇ ಈ ಶಿವಲಿಂಗ. ‘ಸರ್ವಂ ಶಿವಲಿಂಗಮಯಂ’ ಇದನ್ನೇ ನಾವು ಬ್ರಹ್ಮಾಂಡವೆನ್ನುವುದು. ಶಿವಲಿಂಗದಲ್ಲಿ ಎರಡು ವಿಧ. ಒಂದು ಸ್ವಯಂ ಭೂಲಿಂಗ. ಮತ್ತೊಂದು ಮಾನವ ನಿರ್ಮಿತ ಲಿಂಗ. ಸ್ವಯಂ ಭೂಲಿಂಗ ಪ್ರಕೃತಿಯಲ್ಲಿ ಸಹಜವಾಗಿ ಕಾಣಿಸಿಕೊಳ್ಳುತ್ತದೆ. ಉದಾಹರಣೆಗೆ ಅಮರನಾಥ ಗುಹೆಯಲ್ಲಿರುವ ಹಿಮಲಿಂಗ. ಇನ್ನು ಮಾನವ ನಿರ್ಮಿತ ಬಗೆ ಬಗೆಯ ಶಿವಲಿಂಗಗಳು. ತಮಿಳುನಾಡಿನ ಚಿದಂಬರದಲ್ಲಿ ಗಾಳಿಯ ರೂಪದಲ್ಲೂ ಶಿವಲಿಂಗವನ್ನು ಕಾಣಲಾಗುತ್ತದೆ. ಪ್ರಕೃತಿಯೇ ಪರಮೇಶ್ವರನಾಗಿರುವ ಇಂಥ ಅದಮ್ಯ ಚೇತನ ಶಿವನನ್ನು ಬಸವಣ್ಣನವರು ಇಷ್ಟಲಿಂಗ ರೂಪದಲ್ಲಿ ಕಾಣುವ ಬಗೆಯಿದು-
ಜಗದಗಲ, ಮುಗಿಲಗಲ, ಮಿಗೆಯಗಲ ನಿಮ್ಮಗಲ
ಪಾತಾಳದಿಂದಿತ್ತಣ ನಿಮ್ಮ ಸಿರಿಚರಣ
ಬ್ರಹ್ಮಾಂಡದಿಂದತ್ತಣ ನಿಮ್ಮ ಸಿರಿಮುಕುಟ
ಅಗಮ್ಯ, ಅಗೋಚರ, ಅಪ್ರಮಾಣ ಲಿಂಗವೇ
ನೀವೆನ್ನ ಕರಸ್ಥಲಕ್ಕೆ ಬಂದು ನೆಲಸಿ ಕುಲಕಾಡಿರಯ್ಯಾ - ಕೂಡಲಸಂಗಮದೇವ
ವೈಚಾರಿಕ ಪ್ರಜ್ಞೆಯಿಂದ ಮಹಾ ಶಿವನನ್ನು ಮತ್ತು ಮಹಾ ಶಿವರಾತ್ರಿಯನ್ನು ನೋಡಿದಲ್ಲಿ ಭಕ್ತಿಯ ಪರಾಕಾಷ್ಠೆಯ ಪರದೆಯೊಳಗೇ ಉಳಿದುಬಿಟ್ಟಿರುವ ಮಹಾಶಿವನ ಮಹಾ ವೈಚಾರಿಕ ಪ್ರಭೆಯ ದರ್ಶನವಾಗುತ್ತದೆ.
ಮಹಾ ಶಿವರಾತ್ರಿ ಮಹಾ ಯೋಗಿಗಳ ದಿನ. ವಶೀ ಆದವನು ಯಾರೋ ಅವನೇ ಶಿವ. ವಶೀ ಅಂದರೆ ತನ್ನೆಲ್ಲ ಇಂದ್ರಿಯಗಳನ್ನು ತನ್ನ ವಶದಲ್ಲಿಟ್ಟುಕೊಂಡಿರುವವನು. ಮನುಷ್ಯರೊಳಗೆ ಸುಪ್ತವಾಗಿ ಅಡಗಿರುವ ಮಹಾ ಚೇತನವನ್ನು ವರುಷಕ್ಕೊಮ್ಮೆ ಜಾಗೃತಿಗೊಳಿಸುವುದಕ್ಕಾಗಿ ತನ್ನೊಳಗಿರುವ ಪ್ರೌಢ ಪ್ರಜ್ಞೆಯನ್ನು ವರುಷಕ್ಕೊಮ್ಮೆಯಾದರೂ ಅನುಭವಿಸಬೇಕೆಂಬುದು ಮಹಾ ಶಿವರಾತ್ರಿಯ ಮಹದಾಶಯ. ಶಿವನೆಂಬುದು ನಮ್ಮೊಳಗಿನ ಅದಮ್ಯ ಚೇತನ. ಅನನ್ಯ ಚೈತನ್ಯ. ಅದಕ್ಕೇನೆ ಶಿವನಿಲ್ಲದ ಸೌಂದರ್ಯವೇ ಶವಮುಖದ ಕಣ್ಣೋ... ಎಂದರು ನಮ್ಮ ಮಹಾಕವಿ ಕುವೆಂಪು.
ತ್ರಿಮೂರ್ತಿಗಳಲ್ಲೊಬ್ಬನಾದ ಶಿವನ ಕೆಲಸ ವಿನಾಶ. ಇದನ್ನು ಧನಾತ್ಮಕವಾಗಿ ಯೋಚಿಸಿ ನೋಡಿದರೆ ಶಿವ ನಾಶ ಮಾಡುವುದು ನಾನು ಎಂಬ ‘ಅಹಂ’ ಮತ್ತು ನಮ್ಮವರೆಂಬ ಕ್ಷಣಿಕ ‘ವ್ಯಾಮೋಹ’ಗಳನ್ನು ಎಂಬ ಸತ್ಯ ಗೋಚರಿಸುತ್ತದೆ. ಪ್ರತಿಯೊಂದಕ್ಕೂ ಅಂತ್ಯವೆಂಬುದಿದೆ. ಅದಾದಾಗಲೇ ಹೊಸ ಸೃಷ್ಟಿ ಸಾಧ್ಯವಾಗುವುದು. ಇದನ್ನರಿತೇ ಇರಬಹುದು ನಮ್ಮ ವರಕವಿ ಬೇಂದ್ರೆ ಅವರು ತಮ್ಮ ಶ್ರಾವಣದ ರುದ್ರರೂಪದಲ್ಲಿ ‘ಕುಣಿದಾವ ಗಾಳಿ ಭೈರವನ ರೂಪ ತಾಳಿ ...’ ಎಂದು ಹಾಡಿರುವುದು. ಹಾಗೆಯೇ ಕವಿ ಸೇಡಿಯಾಪು ಕೃಷ್ಠಭಟ್ಟ ಅವರು ಶಿವನಿರುವ ಬಗೆಯನ್ನು ಹೇಳುವ ಪರಿಯಿದು-
‘ಈಶ್ವರನಿರುವನೋ? ಗೊತ್ತಿಲ್ಲ!
ನಶ್ವರ ಜಗವಿದು ಗೊತ್ತಲ್ಲ?
ಈಶ್ವರ ನಿಷ್ಟೆಯೆ ಭಯಹರವೆಂಬುದು;
ದಿನದಿನಕನುಭವವಹುದಲ್ಲಾ?
ಹಾಗಾದರೆ ಶಿವನಿರುವನಿರುವನಿದ;
ನಂಬುನಂಬು ಸಂಶಯ ಸಲ್ಲ ...’
ಶಿವನಿಗೆ ಹತ್ತು ಸಾವಿರ ಹೆಸರುಗಳಿವೆ ಎಂಬುದು ವ್ಯಾಸೋಕ್ತಿ. ಆಶ್ಚರ್ಯ ಪಡುವಷ್ಟರ ಮಟ್ಟಿಗೆ ಈ ಎಲ್ಲಾ ಹೆಸರುಗಳೂ ಶಿವನಿಗೆ ಅನ್ವರ್ಥವಾಗಿದ್ದು ಒಂದೊಂದು ಹೆಸರನ್ನೂ ಪೌರಾಣಿಕದ ಪೊರೆ ಕಳಚಿ, ದೈವತ್ವದ ಕಲ್ಪನೆಗಳನ್ನು ಒತ್ತಟ್ಟಿಗಿಟ್ಟು ವೈಚಾರಿಕ ದೃಷ್ಟಿಯಿಂದ ಮಾತ್ರ ನೋಡಿದಾಗ ಶಿವನ ತಾಂತ್ರಿಕ, ಜೈವಿಕ, ವೈಜ್ಞಾನಿಕ, ವೈಚಾರಿಕ, ಶೈಕ್ಷಣಿಕ, ವೈದ್ಯಕೀಯದ ಅದ್ಭುತ ಲೋಕವೇ ನಮ್ಮ ಕಣ್ಮುಂದೆ ತೆರೆದುಕೊಳ್ಳುತ್ತದೆ. ಅರ್ಧಾಂಗಿಗಾಗಿ ತನ್ನ ದೇಹದ ಅರ್ಧ ಭಾಗವನ್ನು ತ್ಯಾಗ ಮಾಡಿ ಅರ್ಧನಾರೀಶ್ವರನಾದ ಶಿವ ನಿಜವಾದ ಸ್ತ್ರೀ ಸಮಾನತೆಯ ಪ್ರತಿಪಾದಕ. ಶಿವ ಲಯದ ಪ್ರತೀಕವಾದರೆ ಪಾರ್ವತಿ ಸೃಷ್ಟಿಯ ಪ್ರತೀಕ. ಶಿವತಾಂಡವ ಮತ್ತು ಪಾರ್ವತಿಯ ಲಾಸ್ಯಗಳ ಮಿಶ್ರಣವೇ ಸೃಷ್ಟಿ-ಲಯಗಳು.
ಶಿವನೊಬ್ಬ ಪರಿಣಿತ ನೃತ್ಯಪಟು. ಶಿವನ ನಟರಾಜ ರೂಪವೇ ಇದಕ್ಕೆ ಪ್ರತ್ಯಕ್ಷ ಸಾಕ್ಷಿ. ಶಿವನ ನಟರಾಜ ರೂಪದ ನಾಟ್ಯ, ಜಾಗೃತಿ ಮತ್ತು ಕ್ರಿಯಾಶೀಲತೆ ಹಾಗೂ ಕಲಾಭಿವ್ಯಕ್ತಿಯ ಪ್ರತೀಕ.
‘ನೃತ್ಯವೋ ಬಹ್ಮನಟರಾಜನದು ಜಗವೆಲ್ಲ
ಪ್ರತ್ಯೇಕ ಜೀವದೆಶೆಯ ವನಂಗ ಭಂಗಿ
ಸತ್ಯ ಸತ್ತ್ವಜ್ವಾಲೆ, ವಿಶ್ವಮಾಯಾಲೀಲೆ
ಪ್ರತ್ಯಗಾತ್ಮನು ನೀನು ಮಂಕುತಿಮ್ಮ’
ಶಿವ ನಟರಾಜನ ನಾಟ್ಯದ ಬಗ್ಗೆ ಹೀಗೆ ಹೇಳಿರುವ ದಾರ್ಶನಿಕ ಕವಿ ಡಿವಿಜಿಯವರ ನಾಲ್ಕು ಸಾಲಿನ ಈ ಮುಕ್ತಕದಲ್ಲೇ ಕಾಣಬಹುದು. ದಿವ್ಯ ಶಕ್ತಿಯೇ ಶಿವ. ವ್ಯಕ್ತಿತ್ವ ವಿಕಸನಗೊಳಿಸುವ ಶಿವ ಸ್ವರೂಪದಲ್ಲಿರುವ ಈ ಎಲ್ಲಾ ದಿವ್ಯ ಶಕ್ತಿಗಳೂ ಸದ್ವಿನಿಯೋಗವಾದಲ್ಲಿ ಅದೇ ನಿಜವಾದ ಶಿವಪೂಜೆ.
ಶಿವನ ಆರಾಧನಾ ಸ್ಥಳಗಳಲ್ಲಿ ಅತ್ಯಂತ ಪ್ರಸಿದ್ಧವಾದ ವಿಶ್ವವಿಖ್ಯಾತ ಶಿವಲಿಂಗ ಸ್ಥಳಗಳೆಂದರೆ ಮಹಿಮಾನ್ವಿತ ದ್ವಾದಶ ಜ್ಯೋತಿರ್ಲಿಂಗಗಳು, ಅವುಗಳೆಂದರೆ (೧) ಸೌರಾಷ್ಟ್ರದ (ಗುಜರಾತ್) ಸೋಮನಾಥೇಶ್ವರ (೨) ಶ್ರೀಶೈಲದ (ಆಂಧ್ರಪ್ರದೇಶ) ಮಲ್ಲಿಕಾರ್ಜುನ (೩) ಉಜ್ಜಯಿನಿಯ (ಮಧ್ಯಪ್ರದೇಶ) ಮಹಾಕಾಲೇಶ್ವರ (೪) ಓಂಕಾರದ (ಮಧ್ಯಪ್ರದೇಶ) ಮಮಲೇಶ್ವರ (೫) ಪರಳಿಯ (ಬಿಹಾರ) ವೈದ್ಯನಾಥೇಶ್ವರ (೬) ಡಾಕಿಣ್ಯದ (ರಾಜಮಹೇಂದ್ರಿ) ಭೀಮೇಶ್ವರ (೭) ರಾಮೇಶ್ವರದ (ತಮಿಳುನಾಡು) ರಾಮೇಶ್ವರ (೮) ಧರುತವನದ (ಗುಜರಾತ್) ನಾಗೇಶ್ವರ (೯) ವಾರಣಾಸಿಯ (ಕಾಶಿ) ವಿಶ್ವನಾಥ (೧೦) ಗೌತಮಿ ತಟದ (ನಾಸಿಕ್) ತ್ರ್ಯಂಬಕೇಶ್ವರ (೧೧) ಹಿಮಾಲಯದ ಕೇದಾರನಾಥ (೧೨) ಔರಂಗಾಬಾದ್ ಬಳಿಯ ಗ್ರೀಷ್ಣೇಶ್ವರ. ಮಹಾಶಿವರಾತ್ರಿಯಂದು ಈ ಮಹಿಮಾನ್ವಿತ ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದನ್ನಾದರೂ ಸಂದರ್ಶಿಸಬೇಕೆಂಬುದು ಹಲವರ ನಂಬಿಕೆ.
ನಂಜನಗೂಡಿನ ನಂಜುಂಡೇಶ್ವರ, ಧರ್ಮಸ್ಥಳದ ಮಂಜುನಾಥೇಶ್ವರ, ಯಡಿಯೂರಿನ ಸಿದ್ದಲಿಂಗೇಶ್ವರ, ಕೋಲಾರದ ಕೋಟಿಲಿಂಗೇಶ್ವರ, ಶಿವಗಂಗೆಯ ಗವಿಗಂಗಾಧರೇಶ್ವರ, ಗೋಕರ್ಣದ ಮರುಡೇಶ್ವರ, ಮಲೆ ಮಹದೇಶ್ವರ ಬೆಟ್ಟದ ಮಹದೇಶ್ವರ, ಚುಂಚನಗಿರಿಯ ಕಾಲಭೈರವೇಶ್ವರ, ಕೃಷ್ಣರಾಜನಗರದ ಅರ್ಕೇಶ್ವರ, ತಿರುಮಕೂಡಲು ನರಸೀಪುರದ ಅಗಸ್ತ್ಯೇಶ್ವರ, ತಲಕಾಡಿನ ಪಂಚಲಿಂಗೇಶ್ವರ, ಮುಂತಾದವು ಕರ್ನಾಟಕದ ಪ್ರಮುಖ ಶಿವಕ್ಷೇತ್ರಗಳು. ಶಿವರಾತ್ರಿ ಹಬ್ಬಕ್ಕೆ ಜಾಗರಣೆಯೇ ಹೆಗ್ಗುರುತು.