ಮಹಾಭಾರತದಲ್ಲಿ ಬರುವ ದುರ್ಯೋದನನ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಖಳನಾಯಕ, ದುಷ್ಟ ಎಂದೇ ಗುರುತಿಸಿಕೊಂಡಿರುವ ಈ ದುರ್ಯೋದನನನ್ನೂ ಪೂಜೆ ಮಾಡ್ತಾರೆ ಅಂದ್ರೆ ನೀವು ನಂಬ್ಲೇಬೇಕು. ಆ ದೇವಸ್ಥಾನ ಎಲ್ಲಿದೆ, ಅದ್ರ ವಿಶೇಷತೆ ಏನು ಎಂಬ ವಿವರ ಇಲ್ಲಿದೆ.
ಮಹಾಭಾರತದಲ್ಲಿ ಖಳನಾಯಕ ಯಾರು ಅಂತ ಕೇಳಿದ್ರೆ ಎಲ್ಲರ ಬಾಯಿಂದ ಬರುವ ಒಂದೇ ಉತ್ತರ ದುರ್ಯೋದನ. ಅವನ ಅಧರ್ಮ ಹಾಗೂ ದುರಂಕಾರವನ್ನು ಜನರು ಹೇಳ್ತಾರೆ. ಆತನಿಂದ್ಲೇ ಪಾಂಡವರಿಗೆ ಅನ್ಯಾಯವಾಯ್ತು, ಕುರುಕ್ಷೇತ್ರ ಯುದ್ಧ ನಡೆಯಿತು. ದುರ್ಯೋದನ ದುಷ್ಟನಾಗಿದ್ದ. ಪಾಂಡವರಿಗೆ ಮೋಸ ಮಾಡಿದ್ರೆ, ಅತ್ತಿಗೆಗೆ ಅವಮಾನ ಮಾಡಿದ. ಕ್ರೂರ ಕೆಲಸ ಮಾಡುವ, ಸಂಸ್ಕಾರವಿಲ್ಲದ, ಸ್ವಾರ್ಥ ವ್ಯಕ್ತಿತ್ವ ಹೊಂದಿದ್ದ ವ್ಯಕ್ತಿ ಆತ. ರಾಮಾಯಣದಲ್ಲಿ ರಾವಣ ಹೇಗೋ ಮಹಾಭಾರತದಲ್ಲಿ ದುರ್ಯೋದನ. ಇವರಿಬ್ಬರು ಎಷ್ಟೇ ಒಳ್ಳೆ ಮನಸ್ಥಿತಿ ಹೊಂದಿದ್ದರೂ ಅವರ ದುಷ್ಟ ಕೆಲಸದಿಂದಾಗಿ ಅವರ ಆ ಒಳ್ಳೆ ಸ್ವಭಾವ ಹೊರಗೆ ಬರಲಿಲ್ಲ. ಕನಿಕರವಿಲ್ಲದ, ಅಹಂಕಾರಿ ದುರ್ಯೋದನನನ್ನು ಯಾರು ಪೂಜೆ ಮಾಡ್ತಾರೆ ಅಂತ ನೀವು ಕೇಳ್ಬಹುದು. ಅವನಿಗೂ ಒಂದು ದೇವಾಲಯ ಇರಲು ಸಾಧ್ಯವೇ ಇಲ್ಲ ಅಂತ ನೀವು ಭಾವಿಸಿರಬಹುದು. ಆದ್ರೆ ನಿಮ್ಮ ನಂಬಿಕೆ ಸುಳ್ಳು. ದುರ್ಯೋದನನಿಗೂ ಗುಡಿಯಿದೆ. ಅವನನ್ನೂ ಪೂಜಿಸುವ ಜಾಗವೊಂದಿದೆ. ಆತನ ಖುಷಿಯಾಗಿ ಭಕ್ತರು ಕಾಣಿಕೆ ಹಾಕ್ತಾರೆ. ವಿಶಾಲವಾದ ಜಾಗದಲ್ಲಿ ದುರ್ಯೋದನ ನೆಲೆ ನಿಂತಿದ್ದಾನೆ. ಇಲ್ಲಿನ ಮತ್ತೊಂದು ವಿಶೇಷ ಅಂದ್ರೆ, ಈಗ್ಲೂ ದುರ್ಯೋದನನ ಹೆಸರಿನಲ್ಲಿಯೇ ಸರ್ಕಾರಕ್ಕೆ ತೆರಿಗೆ ಪಾವತಿಸಲಾಗ್ತಿರೋದು.
ದುರ್ಯೋದನ (Duryodhana) ನ ದೇವಸ್ಥಾನ (Temple) : ದುರ್ಯೋದನನ ದೇವಸ್ಥಾನವಿರೋದು ಕೇರಳದ ಕೊಲ್ಲಂ ಜಿಲ್ಲೆಯಲ್ಲಿ. ವಿಶಾಲವಾಗಿರೋ ಈ ದೇವಾಲಯದಲ್ಲಿ ದುರ್ಯೋದನನ ವಿಗ್ರಹವಿಲ್ಲ. ಅದ್ರ ಬದಲು ಆತನ ಆಯುಧ ಗದೆ (mace) ಯಿದೆ. ದುರ್ಯೋದನ ಗದೆ ಕಾಳಕದಲ್ಲಿ ನಿಪುಣನಾಗಿದ್ದ. ಹಾಗಾಗಿಯೇ ಆತನ ಗದೆಯನ್ನು ಇಲ್ಲಿ ಪೂಜಿಸಲಾಗುತ್ತದೆ. ದುರ್ಯೋದನನನ್ನು ಇಲ್ಲಿನ ಜನರು ಅಪೂಪ ಅಂದ್ರೆ ಅಜ್ಜ ಎಂದು ಕರೆಯುತ್ತಾರೆ.
undefined
ದುರ್ಯೋದನನ ದೇವಸ್ಥಾನ ತಲೆ ಎತ್ತಿದ ಕಥೆ : ಈ ದೇವಸ್ಥಾನಕ್ಕೊಂದು ಕಥೆ ಇದೆ. ದುರ್ಯೋದನ ಒಂದು ಬಾರಿ ಈ ಸ್ಥಳದಿಂದ ಹಾದು ಹೋಗುತ್ತಿದ್ದ. ಆ ಸಮಯದಲ್ಲಿ ಆತನಿಗೆ ವಿಪರೀತ ಬಾಯಾರಿಕೆ ಆಗಿತ್ತು. ಆಗ ಒಬ್ಬ ಬಡ ದಲಿತ ಮಹಿಳೆ ಆತನ ಕಣ್ಣಿಗೆ ಬೀಳುತ್ತಾಳೆ. ಆಕೆಯ ಬಳಿ ದುರ್ಯೋದನ ನೀರು ಕೇಳುತ್ತಾನೆ. ಮಹಿಳೆ ಬಳಿ ನೀರಿರಲಿಲ್ಲ. ಆಕೆ ಬಳಿ ಸೇಂದಿಯಿತ್ತು. ಅವಳು ದಲಿತ ಮಹಿಳೆ ಆಗಿರುವ ಕಾರಣ ಅದನ್ನು ದುರ್ಯೋದನನಿಗೆ ನೀಡಲು ಭಯಪಟ್ಟಳು. ಆದ್ರೆ ದುರ್ಯೋದನ ಆಕೆಯಿಂದ ಸೇಂದಿ ಕುಡಿದಿದ್ದಲ್ಲದೆ ಆಶೀರ್ವಾದ ಮಾಡಿದನು. ಆಕೆಗೆ ಈ ಗ್ರಾಮದ ಭೂಮಿಯನ್ನು ದಾನವಾಗಿ ನೀಡಿದನು. ಮಹಿಳೆಗೆ ರಕ್ಷಣೆ ನೀಡುವ ಭರವಸೆ ನೀಡಿದನು. ಆ ನಂತ್ರ ಈ ಗ್ರಾಮದಲ್ಲಿ ದುರ್ಯೋದನನ ದೇವಸ್ಥಾನ ನಿರ್ಮಾಣವಾಯಿತು. ದುರ್ಯೋದನನನ್ನು ರಕ್ಷಕ ಎಂದು ಇಲ್ಲಿನವರು ನಂಬುತ್ತಾರೆ. ಕರುಣಾಮಯಿ ಎಂದು ಆತನ ಪೂಜೆ ಮಾಡುತ್ತಾರೆ. ಇಲ್ಲಿಗೆ ಬರುವ ಭಕ್ತರು ಸೇಂದಿಯನ್ನು ದುರ್ಯೋದನನಿಗೆ ಅರ್ಪಿಸುತ್ತಾರೆ. ಇದ್ರಿಂದ ಆತ ಸಂತೋಷಗೊಳ್ಳುತ್ತಾನೆಂಬ ನಂಬಿಕೆ ಸ್ಥಳೀಯರಿಗಿದೆ.
ದುರ್ಯೋದನನ ಹೆಸರಿನಲ್ಲಿ ತೆರಿಗೆ : ತೆರಿಗೆ ಪಾವತಿ ಮಾಡುವವರ ಹೆಸರಿನಲ್ಲಿ ದುರ್ಯೋದನನ ಹೆಸರಿದೆ. ಪ್ರತಿ ವರ್ಷ, ದುರ್ಯೋದನನ ಹೆಸರಿನಲ್ಲಿ ಸರ್ಕಾರಕ್ಕೆ ತೆರಿಗೆ ಪಾವತಿ ಮಾಡಲಾಗುತ್ತದೆ. ದುರ್ಯೋದನನ ಈ ದೇವಸ್ಥಾನಕ್ಕೆ ಪೊರುವಾಜಿ ಪೆರುವಿರುತಿ ಮಲನಾಡ ಎಂದು ಹೆಸರಿದೆ. ಜನರ ಇದನ್ನು ಮಲೆನಾಡ ದೇವಸ್ಥಾನ ಎಂದು ಕರೆಯುತ್ತಾರೆ.
ದುರ್ಯೋದನನ ಈ ಭೂಮಿ ಒಟ್ಟೂ 15 ಎಕರೆಯಲ್ಲಿದೆ. ಎಂಟು ಎಕರೆಯಲ್ಲಿ ಭತ್ತ ಬೆಳೆಯುತ್ತಿದ್ದರೆ ಉಳಿದ ಭೂಮಿ ಅರಣ್ಯವಾಗಿದೆ. ವಾಸ್ತವವಾಗಿ ಭೂಮಿ ರಿಜಿಸ್ಟ್ರೇಶನ್ ಮಾಡುವ ಸಮಯದಲ್ಲಿ ದುರ್ಯೋದನನ ಹೆಸರಿನಲ್ಲಿಯೇ ನೋಂದಣಿ ನಡೆದಿತ್ತು. ಹಾಗಾಗಿಯೇ ಈಗ್ಲೂ ಜಮೀನಿನ ತೆರಿಗೆಯನ್ನು ದುರ್ಯೋದನನ ಹೆಸರಿನಲ್ಲಿಯೇ ಪಾವತಿ ಮಾಡಲಾಗುತ್ತಿದೆ. ಕೇರಳದ ಹೊರತಾಗಿ ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಜಖೋರ್‌ನಲ್ಲಿ ದುರ್ಯೋಧನನ ದೇವಾಲಯವಿದೆ. ಇದನ್ನು ಸೌರ್ ಗ್ರಾಮದ ಜನರು ನಿರ್ಮಿಸಿದ್ದಾರೆ.