ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಅರ್ಲವಾಡ (ಮುಂಡಕಿ) ಗ್ರಾಮದಲ್ಲಿ ಕದಂಬರ ಕಾಲದ ಸೂರ್ಯನಾರಾಯಣ ದೇವಾಲಯವಿದೆ.
ದೇವಾನು ದೇವತೆಗಳಲ್ಲಿಯೇ ವಿಶೇಷವಾಗಿರುವ ಸೂರ್ಯದೇವನ ದೇವಸ್ಥಾನಗಳು ಕಂಡುಬರುವುದು ತುಂಬಾ ವಿರಳ. ಅಂಥದ್ದರಲ್ಲಿ ಕರ್ನಾಟಕದಲ್ಲಿಯೇ ಸುಪ್ರಸಿದ್ಧವಾದ ಸೂರ್ಯನ ದೇವಾಲಯ ಕಂಡುಬರುವುದು ಉತ್ತರ ಕನ್ನಡ(North Karnataka) ಜಿಲ್ಲೆಯ ಹಳಿಯಾಳ ತಾಲೂಕಿನ ಅರ್ಲವಾಡ (ಮುಂಡಕಿ) ಗ್ರಾಮದಲ್ಲಿ.
ಇಲ್ಲಿರುವ ಸೂರ್ಯನಾರಾಯಣ ದೇವಾಲಯ(Soorya Temple)ವು ತನ್ನ ಸೂಕ್ಷ್ಮ ಕೆತ್ತನೆಯು ಅಂದಿನ ಕಾಲದ ವಾಸ್ತುಶಿಲ್ಪದ ಬಗ್ಗೆ ಇಂದಿಗೂ ಗತವೈಭವವನ್ನು ಸಾರುವಂತೆ ತೋರುತ್ತದೆ. ಇಲ್ಲಿನ ಸುತ್ತಲಿನ ಪ್ರದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ವಿಗ್ರಹಗಳು, ಶಿಲ್ಪಕಲೆಗಳು, ವೀರಗಲ್ಲುಗಳು ದೊರೆತಿದ್ದು, ನೋಡುಗರ ಕಣ್ಮನ ಸೆಳೆಯುವಂತಿವೆ. ಆದರೆ, ಪುರಾತತ್ವ ಇಲಾಖೆಯಿಂದ ಅವುಗಳನ್ನು ರಕ್ಷಿಸಬೇಕಾದ ಕಾರ್ಯ ಮಾತ್ರ ನಡೆಯುತ್ತಿಲ್ಲ.
undefined
ದೇವಸ್ಥಾನದ ವಿಶೇಷವೇನು?
ಅಳ್ನಾವರ ಪಟ್ಟಣವು ಗೋವೆ ಕದಂಬರ ಉಪರಾಜಧಾನಿ ಆಗಿರುವ ಸಂದರ್ಭದಲ್ಲಿ ಇಲ್ಲಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಹಲವಾರು ದೇವಾಲಯಗಳು ನಿರ್ಮಾಣವಾಗಿವೆ. ಈ ದೇವಾಲಯವು ಪೂರ್ವಾಭಿಮುಖವಾಗಿದ್ದು, ಬೆಳಗಿನ ಜಾವದ ಮೊದಲ ಸೂರ್ಯ ಕಿರಣವು ಇಲ್ಲಿನ ಸೂರ್ಯನಾರಾಯಣನ ಪಾದಕ್ಕೆ ಸ್ಪರ್ಶವಾಗುತ್ತದೆ. ಈ ವಿಗ್ರಹವು ವಿಷ್ಣುವಿನ ಅವತಾರದಲ್ಲಿದ್ದರೂ ಕೆಳಭಾಗದಲ್ಲಿ ಈಶ್ವರ ಲಿಂಗದ ಜಗಲಿಯನ್ನು ಹೊಂದಿದೆ.
ಭಕ್ತರ ಪ್ರಶ್ನೆಗಳಿಗೆ ಸ್ಥಳದಲ್ಲೇ ಉತ್ತರಿಸುತ್ತೆ ಹಾಲು ರಾಮೇಶ್ವರ ದೇವಾಲಯದ ಚಮತ್ಕಾರಿ ಕೊಳ!
ಆದರೆ ಸೂರ್ಯನು ಸಪ್ತಾಶ್ವವನ್ನು ಏರುತ್ತಿರುವ ಚಿತ್ರವು ಮೂರ್ತಿಯಲ್ಲಿ ಕಂಡುಬರುತ್ತದೆ. ಇದರಿಂದ ಬಹುಶಃ ಈ ದೇವಾಲಯವು ಗೋವೆ ಕದಂಬರು ಅಥವಾ ಕಲ್ಯಾಣದ ಚಾಲುಕ್ಯರ ಕಾಲದ್ದು ಎಂದು ಹೇಳಬಹುದು. ಹೆಚ್ಚಿನದಾಗಿ ವಿಷ್ಣು(Lord Vishnu) ಮತ್ತು ಶಿವ(Lord Shiva)ನ ಆರಾಧನಾ ವಿಗ್ರಹಗಳು ಒಂದೆಡೆ ಕಂಡುಬರುವುದು ಕಡಿಮೆಯಾದರೂ ಇಲ್ಲಿರುವ ಮೂರ್ತಿಯು ವಿಶೇಷವಾಗಿದೆ.
'ಈ ಪ್ರದೇಶದಲ್ಲಿ ಜೈನ ಮತ್ತು ಶೈವ ಸಂಪ್ರದಾಯ ಪ್ರಧಾನವಾಗಿತ್ತು. ಇಲ್ಲಿರುವ ಸೂರ್ಯನಾರಾಯಣ ಸ್ವಾಮಿ ವಿಗ್ರಹವು ಶೈವ ಮತ್ತು ವೈಷ್ಣವ ಸಂಪ್ರದಾಯವನ್ನು ಹೋಲುವಂತಹ ವಿಗ್ರಹವಾಗಿದ್ದರಿಂದ ವಿಶೇಷವಾದ ಮೂರ್ತಿಯಾಗಿದೆ,' ಎನ್ನುತ್ತಾರೆ ಇತಿಹಾಸ ಪ್ರಾಧ್ಯಾಪಕರಾದ ಡಾ. ಬಸವರಾಜ ಅಕ್ಕಿ.
Virgo Personality traits: ಪರಿಪೂರ್ಣತೆ, ರಚನಾತ್ಮಕತೆ- ಇದು ಕನ್ಯಾ ರಾಶಿಯ ಸ್ವಭಾವ
ದೊರೆತ ವಿಗ್ರಹಗಳು
ಇಲ್ಲಿನ ಹೊಲಗದ್ದೆಗಳಲ್ಲಿ ಉಳುಮೆ ಮಾಡುವಾಗ ವೀರಗಲ್ಲು, ದೇವರ ಪಾದಗಳು, ಹನುಮಂತನ ವಿಗ್ರಹ, ಈಶ್ವರಲಿಂಗ, ಜೈನ ತೀರ್ಥಂಕರರು, ಗಣೇಶ, ಭೈರವಿ ವಿಗ್ರಹ ಮೂರ್ತಿಗಳು ಮತ್ತು ಯಕ್ಷಿಣಿಯರನ್ನು ಹೋಲುವ ಚಿತ್ರದ ಮೂರ್ತಿಗಳು ದೊರೆತಿವೆ. ಈ ಗ್ರಾಮದ ಸುತ್ತಮುತ್ತಲಿನ ಜನರು ಈ ದೇವಾಲಯದ ಭಕ್ತರಾಗಿದ್ದರಿಂದ ಈ ಗ್ರಾಮದಲ್ಲಿ ನಾರಾಯಣನ ಹೆಸರುಳ್ಳವರು ಬಹಳಷ್ಟು ಜನ ಸಿಗುತ್ತಾರೆ. ವರ್ಷದಲ್ಲಿ ಎರಡು ಬಾರಿ ಇಲ್ಲಿ ಜಾತ್ರಾ ಮಹೋತ್ಸವ ಜರುಗುತ್ತಿದ್ದು, ಬೆಳಗಿನ ಜಾವದ ಸೂರ್ಯೊದಯದಿಂದ ಸಂಜೆ ಸೂರ್ಯಾಸ್ತದವರೆಗೆ ಅನ್ನ ಸಂತರ್ಪಣೆಯ ಕಾರ್ಯ ನಡೆಯುವುದು ವಿಶೇಷ.
'ನಮ್ಮ ಗ್ರಾಮದಲ್ಲಿ ಸೂರ್ಯನಾರಾಯಣ ಸ್ವಾಮಿಯ ದೇವಾಲಯವು ಅನಾದಿ ಕಾಲದಿಂದಲೂ ಇದೆ. ಪೂರ್ವಜರು ಇಲ್ಲಿ ಭಕ್ತಿ ಸಮರ್ಪಣೆ ಮಾಡುತ್ತಿದ್ದಾರೆ. ಇಲ್ಲಿ ಹಲವಾರು ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುತ್ತೇವೆ. ಇಲ್ಲಿಗೆ ದೂರದಿಂದ ಭಕ್ತರು ಬಂದು ದರ್ಶನ ಪಡೆಯುತ್ತಾರೆ. ಪ್ರತಿ ವರ್ಷ ಎರಡು ಬಾರಿ ಜಾತ್ರೆ ಮಾಡುತ್ತೇವೆ,' ಎನ್ನುತ್ತಾರೆ ಅರ್ಲವಾಡ ಗ್ರಾಮಸ್ಥ ಪರಶುರಾಮ ಭಂಡಾರಿ.
ದಾರಿ ಯಾವುದಯ್ಯ?
ಅಳ್ನಾವರದವರೆಗೆ ಬಸ್ಸು ಮತ್ತು ರೈಲಿನ ಸಂಚಾರವಿದ್ದು, ಅಳ್ನಾವರದಿಂದ 8 ಕಿಮೀ ದೂರದಲ್ಲಿದೆ. ಹಳಿಯಾಳ(Haliyala) ಮಾರ್ಗವಾಗಿ ಬಂದರೆ ಬಸ್ಸಿನ ವ್ಯವಸ್ಥೆ ಇದ್ದು, ಹಳಿಯಾಳ ಪಟ್ಟಣದಿಂದ 13 ಕಿಮೀ ದೂರದಲ್ಲಿದೆ. ಉತ್ತರ ಕನ್ನಡಕ್ಕೆ ಭೇಟಿ ಕೊಟ್ಟಾಗ ಈ ಸೂರ್ಯ ದೇವಾಲಯಕ್ಕೆ ಮುದ್ದಾಂ ಭೇಟಿ ಕೊಡಿ.
ಬರಹ: ಶಶಿಕುಮಾರ ಪತಂಗೆ
(ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.)