Bhagavad Geeta: ಒಳ್ಳೆಯವರ ಜೊತೆ ಒಳ್ಳೆಯವನಾಗು ಆದ್ರೆ ಕೆಟ್ಟವನ ಜೊತೆ…? ಭಗವದ್ಗೀತೆ ಹೇಳೋದೇನು?

By Suvarna NewsFirst Published Jun 13, 2023, 3:23 PM IST
Highlights

ಜೀವನದಲ್ಲಿ ನಾವು ಮಾಡುವ ಪ್ರತಿಯೊಂದು ಕೆಲಸ ಕೂಡ ಮಹತ್ವ ಪಡೆಯುತ್ತದೆ. ಪುಣ್ಯ – ಪಾಪಗಳಿಗೆ ಇದು ಕಾರಣವಾಗುತ್ತದೆ. ನೀವೊಬ್ಬ ಒಳ್ಳೆಯ ವ್ಯಕ್ತಿಯಾಗ್ಬೇಕು, ಯಶಸ್ಸು ನಿಮ್ಮದಾಗ್ಬೇಕು ಎಂದಾದ್ರೆ ಭಗವದ್ಗೀತೆಯಲ್ಲಿ ಹೇಳಿದ ಮಾತುಗಳನ್ನು ಪಾಲಿಸಬೇಕು.  
 

ಹಿಂದೂಗಳ ಪವಿತ್ರ ಗ್ರಂಥವಾದ ಭಗವದ್ಗೀತೆ, ಕುರುಕ್ಷೇತ್ರ ಯುದ್ಧದ ಸಮಯದಲ್ಲಿ ಕೃಷ್ಣ ಅರ್ಜುನನಿಗೆ ಮಾಡಿದ ಉಪದೇಶ ಇದಾಗಿದೆ. ಜೀವನದ ಮೂಲಭೂತ ಸತ್ಯಗಳನ್ನು, ಅರಿವನ್ನು, ಕ್ಷತ್ರಿಯ ಧರ್ಮವನ್ನು ಸಾರುವ ಭಗವದ್ಗೀತೆ ಏಳು ನೂರು ಶ್ಲೋಕಗಳನ್ನು ಹೊಂದಿದೆ. ಗೀತೆಯಲ್ಲಿ ಕೃಷ್ಣ ಹೇಳಿರುವ ಜ್ಞಾನ, ತಿಳುವಳಿಕೆ, ಧೈರ್ಯ ಎಲ್ಲವೂ ಜೀವನಕ್ಕೆ ಬಹಳ ಮುಖ್ಯವಾಗಿದೆ. ಇದನ್ನು ಸರಿಯಾದ ರೀತಿಯಲ್ಲಿ ಅನುಸರಿಸುವವರು ಜೀವನದಲ್ಲಿ ಸರ್ವಶ್ರೇಷ್ಠರಾಗುತ್ತಾರೆ.

ಭಗವದ್ಗೀತೆ (Bhagavad Gita) ಬದುಕುವ ದಾರಿಯನ್ನು ಕಲಿಸಿಕೊಡುತ್ತದೆ. ಗೀತೆಯಲ್ಲಿನ ಶ್ಲೋಕಗಳನ್ನು ತಿಳಿದು ಜೀವನದಲ್ಲಿ ಅದನ್ನು ಅಳವಡಿಸಿಕೊಳ್ಳುವವರು ಯಶಸ್ಸಿನ ಮಾರ್ಗದಲ್ಲಿ ಮುನ್ನಡೆಯುತ್ತಾರೆ. ಜೀವನವನ್ನು ಸರಿಯಾದ ರೀತಿಯಲ್ಲಿ ಹೇಗೆ ನಡೆಸಬೇಕೆನ್ನುವುದನ್ನು ಹೇಳಿಕೊಡುವ ಏಕೈಕ ಗ್ರಂಥ ಭಗವದ್ಗೀತೆಯಾಗಿದೆ. ಗೀತೆಯು ಜೀವನದಲ್ಲಿ ಧರ್ಮ, ಕರ್ಮ ಹಾಗೂ ಪ್ರೇಮದ ಪಾಠವನ್ನು ಜನರಿಗೆ ಹೇಳಿಕೊಡುತ್ತೆ. ಭಗವದ್ಗೀತೆಯ ಅಂತಹ ಕೆಲವು ಅತ್ಯಮೂಲ್ಯ ಉಪದೇಶಗಳು ಇಲ್ಲಿವೆ.

Latest Videos

ಅದೃಷ್ಟದ ಚಿಹ್ನೆಗಳಿವು: ಈ ಗುರುತಿನ ಮಹಿಳೆಯರು ಲಕ್ಷ್ಮಿದೇವಿಯ ರೂಪ

ಒಳ್ಳೆಯವರೊಂದಿಗೆ ಒಳ್ಳೆಯವರಾಗಿ ಆದರೆ ಕೆಟ್ಟವರೊಂದಿಗೆ ಕೆಟ್ಟವರಾಗಬೇಡಿ:  ಭಗವದ್ಗೀತೆ ಮನುಷ್ಯ ಅಡ್ಡದಾರಿ ಹಿಡಿಯುವುದನ್ನು ತಡೆಯುತ್ತದೆ. ಒಬ್ಬ ವ್ಯಕ್ತಿ ಒಳ್ಳೆಯವರ ಸ್ನೇಹ (Friendship) ಬೆಳೆಸಿ ಒಳ್ಳೆಯವನಾಗಬೇಕು. ಆದರೆ ಕೆಟ್ಟವರ ಜೊತೆಗೂಡಿ ಕೆಟ್ಟವನಾಗಬಾರದು ಎಂದು ಗೀತೆ ಹೇಳುತ್ತದೆ. ಶ್ರೀಕೃಷ್ಣ, ವಜ್ರವನ್ನು ವಜ್ರದಿಂದ ಕತ್ತರಿಸಬಹುದು ಆದರೆ ಮಣ್ಣನ್ನು ಮಣ್ಣಿನಿಂದ ಸ್ವಚ್ಛಗೊಳಿಸುವುದು ಅಸಾಧ್ಯ ಎಂದು ಹೇಳಿದ್ದಾನೆ. ಹಾಗಾಗಿ ನಮ್ಮ ಆಚಾರ ವಿಚಾರಗಳೆರಡೂ ಒಂದೇ ಆಗಿರಬೇಕು ಎನ್ನುವುದು ಗೀತೆಯ ಸಾರವಾಗಿದೆ.

ಈ ಐದು ಗುಣಗಳನ್ನು ಬೆಳೆಸಿಕೊಳ್ಳಿ: ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪ್ರತಿಯೊಬ್ಬರಲ್ಲೂ ಐದು ಮುಖ್ಯ ಗುಣಗಳು ಇರಬೇಕು ಎಂದು ಹೇಳಿದ್ದಾನೆ. ಅದರ ಪ್ರಕಾರ, ಪ್ರತಿಯೊಬ್ಬ ವ್ಯಕ್ತಿ ಶಾಂತಿ, ಸೌಮ್ಯ ಮನೋಭಾವ, ಮೌನ, ಆತ್ಮ ಸಂಯಮ, ಪವಿತ್ರ ಎನ್ನುವ ಐದು ಗುಣಗಳನ್ನು ಬೆಳೆಸಿಕೊಳ್ಳಬೇಕು. ಈ ಐದು ಗುಣಗಳು ಶಿಸ್ತಿನ ಮಾರ್ಗದಲ್ಲಿ ನಡೆಯುವುದನ್ನು ಕಲಿಸಿಕೊಡುತ್ತದೆ.

ಗರ್ಭಪಾತಕ್ಕೆ ಇಸ್ಲಾಂನಲ್ಲಿದೆಯೇ ಒಪ್ಪಿಗೆ? ಧರ್ಮ ಹೇಳುವುದೇನು?

ಒಳ್ಳೆಯ ಕೆಲಸದಿಂದ ಒಳ್ಳೆಯ ಫಲ: ಪ್ರತಿಯೊಬ್ಬ ಮನುಷ್ಯನ ಅದೃಷ್ಟ ಅಥವಾ ದುರಾದೃಷ್ಟಗಳು ಆತನ ಕರ್ಮ ಅಥವಾ ಆತ ಮಾಡಿದ ಒಳ್ಳೆಯ ಹಾಗೂ ಕೆಟ್ಟ ಕೆಲಸಗಳ ಪ್ರತಿಫಲವೇ ಆಗಿದೆ. ನಾವು ಒಳ್ಳೆಯತನದಿಂದ ನಡೆದುಕೊಂಡು ಇನ್ನೊಬ್ಬರಿಗೂ ಒಳ್ಳೆಯದನ್ನು ಬಯಸಿದರೆ ಆಗ ನಮಗೂ ಅದರಿಂದ ಒಳಿತೇ ಆಗುತ್ತದೆ. ಹಾಗಾಗಿ ಇವತ್ತಿನ ನಮ್ಮ ಒಳ್ಳೆಯ ಅಥವಾ ಕೆಟ್ಟ ಕೆಲಸಗಳು ನಮ್ಮ ನಾಳೆಯ ಭವಿಷ್ಯವನ್ನು ನಿರ್ಧರಿಸುತ್ತವೆ.

ಬದುಕಲು ಪ್ರೇರಣೆ ನೀಡಿ: ಯಾರೂ ಯಾರ ಹಣೆಬರಹವನ್ನೂ ಬರೆಯಲೋ ಅಥವಾ ಬದಲಾಯಿಸಲೋ ಸಾಧ್ಯವಿಲ್ಲ. ಆದರೆ ಅವಕಾಶ ಒದಗಿಬಂದಾಗ ಇನ್ನೊಬ್ಬರಿಗೆ ಬದುಕಲು ಪ್ರೇರಣೆ ನೀಡಬೇಕು ಅವರನ್ನು ಸರಿಯಾದ ದಾರಿಗೆ ತರಲು ಬೇಕಾದ ಮಾರ್ಗದರ್ಶನ ನೀಡುವುದು ತಪ್ಪಲ್ಲ ಎಂದು ಶ್ರೀಕೃಷ್ಣ ಹೇಳುತ್ತಾನೆ.

ಅಹಂಕಾರವನ್ನು ತ್ಯಜಿಸಿ: ಅಹಂಕಾರ ಮನುಷ್ಯನ ದೊಡ್ಡ ಶತ್ರು. ಕೆಲವರು ನಾನು, ನನ್ನದು ಎಲ್ಲವನ್ನೂ ನಾನೇ ಮಾಡಿದ್ದೇನೆ ಎಲ್ಲದಕ್ಕೂ ನಾನೇ ಕಾರಣ ಎನ್ನುವ ಅಹಂ ಭಾವನೆಯನ್ನು ಹೊಂದಿರುತ್ತಾರೆ. ಸಮಾಜದಲ್ಲಿ ಇಂತಹ ಸ್ವಭಾವವನ್ನು ಯಾರೂ ಸಹಿಸುವುದಿಲ್ಲ. ಹಾಗಾಗಿ ಅಂತಹ ಅಹಂಕಾರವನ್ನು ಮೆಟ್ಟಿನಿಂತಾಗ ಮಾತ್ರ ಸುಖವಾದ ಜೀವನವನ್ನು ನಡೆಸುವುದು ಸಾಧ್ಯ. ಇಲ್ಲವಾದಲ್ಲಿ ನಮ್ಮ ಅಹಂಕಾರವೇ ನಮ್ಮ ವಿನಾಶಕ್ಕೆ ದಾರಿಮಾಡಿಕೊಡುತ್ತದೆ. ಹಾಗೆಯೇ ಸಿಟ್ಟು, ಕ್ರೂರತೆ, ಅತಿಯಾಸೆ, ಅಪ್ರಾಮಾಣಿಕತೆ, ಅನೈತಿಕತೆ ಮುಂತಾದವುಗಳು ಕೂಡ ಮನುಷ್ಯನನ್ನು ಅಧಃಪತನಕ್ಕೆ ತಳ್ಳುತ್ತದೆ. ಆದ್ದರಿಂದ ಇವುಗಳ ಬದಲಾಗಿ ಸತ್ಯ, ಅಹಿಂಸೆ, ತಾಳ್ಮೆಗಳನ್ನು ಬೆಳೆಸಿಕೊಳ್ಳಬೇಕು.

ಬಿತ್ತಿದಂತೆ ಬೆಳೆ: ನಾವು ಒಳ್ಳೆಯತನವನ್ನು ಬಿತ್ತಿದರೆ ಅಲ್ಲಿ ಒಳ್ಳೆಯದರ ಹೊರತಾಗಿ ಕೆಟ್ಟತನ ಬೆಳೆಯಲು ಸಾಧ್ಯವಿಲ್ಲ. ಕೆಟ್ಟದ್ದನ್ನು ಬಿತ್ತಿದರೆ ಅದರ ಫಲವನ್ನು ಕೂಡ ನಾವೇ ಅನುಭವಿಸಬೇಕು. ಹಾಗಾಗಿ ನಮ್ಮ ಮುಂದಿನ ಭವಿಷ್ಯ ಹಾಗೂ ಮುಂದಿನ ಪೀಳಿಗೆಯನ್ನು ಉತ್ತಮವಾಗಿ ಮುನ್ನಡೆಸಲು ಹಾಗೂ ಉತ್ತಮ ಫಲಿತಾಂಶಗಳನ್ನು ಪಡೆಯಲು ನಾವು ಒಳ್ಳೆಯ ಬೀಜಗಳನ್ನೇ ಬಿತ್ತುವುದು, ಸದ್ವಿಚಾರಗಳನ್ನು ರೂಢಿಸಿಕೊಳ್ಳುವುದು ಅವಶ್ಯವಾಗಿದೆ.
 

click me!