Viral Video: ನೆಲಕ್ಕುರುಳಿದ ಬೆಂಗಳೂರು ಬಳಿಯ ಹುಸ್ಕೂರು ಮದ್ದೂರಮ್ಮ ಜಾತ್ರೆಯ 120 ಅಡಿ ತೇರು

By Sathish Kumar KHFirst Published Apr 6, 2024, 3:12 PM IST
Highlights

ಬೆಂಗಳೂರಿನ ಹೊರ ವಲಯದಲ್ಲಿರುವ ಆನೇಕಲ್ ತಾಲೂಕಿನ ಹುಸ್ಕೂರಿನ ಮದ್ದೂರಮ್ಮ ಜಾತ್ರೆಯಲ್ಲಿ ಸುಮಾರು 120 ಅಡಿ ಎತ್ತರದ ತೇರು ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. 

ಬೆಂಗಳೂರು (ಏ.06): ಸಿಲಿಕಾನ್ ಸಿಟಿ ಬೆಂಗಳೂರಿನ ಹೊರ ವಲಯದಲ್ಲಿರುವ ಆನೇಕಲ್ ತಾಲೂಕಿನ ಹುಸ್ಕೂರಿನ ಮದ್ದೂರಮ್ಮ ಜಾತ್ರೆಯಲ್ಲಿ ಸುಮಾರು 120 ಅಡಿ ಎತ್ತರದ ತೇರು ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಆನೇಕಲ್ ತಾಲೂಕಿನ ಹೀಲಲಿಗೆಯಿಂದ ಹುಸ್ಕೂರಿಗೆ ಸುಮಾರು 70 ಎತ್ತುಗಳು ಹಾಗೂ ಟ್ರ್ಯಾಕ್ಟರ್ ಮೂಲಕ ತೇರನ್ನು ಎಳೆದುಕೊಂಡು ಹೋಗಲಾಗುತ್ತಿತ್ತು. ಆದರೆ, ಹೀಲಲಿಗೆ ಗ್ರಾಮದ ಬಳಿ ವಾಲಿಕೊಂಡು ಬಿದ್ದಿದೆ. ಇನ್ನು ರಥವು ಹೆಚ್ಚು ಎತ್ತರದಲ್ಲಿದ್ದ ಕಾರಣ ನಿಯಂತ್ರಣ ತಪ್ಪಿ ತೇರು ಕುಸಿದು ಬಿದ್ದಿದೆ. ಇನ್ನು ಈ ಘಟನೆ ಇದೇ ಮೊದಲಲ್ಲ, 2018ರಲ್ಲಿಯೂ ಮದ್ದೂರಮ್ಮ ಜಾತ್ರೆಯಲ್ಲಿ ತೇರು ಕುಸಿದು ಬಿದ್ದಿತ್ತು. 

ಬೆಂಗಳೂರು: ಬನ್ನೇರುಘಟ್ಟ ಪಾರ್ಕಲ್ಲಿ ಪ್ರಾಣಿಗಳಿಗೆ ತರಕಾರಿ, ಹಣ್ಣಿನ ಐಸ್‌ಕ್ಯಾಂಡಿ..!

ಬೆಂಗಳೂರಿನ ಎಲೆಕ್ಟ್ರಾನಿಕ್‌ ಸಿಟಿಯಿಂದ 5 ಕಿ.ಮೀ. ದೂರದಲ್ಲಿರುವ ಹುಸ್ಕೂರು ಮದ್ದೂರಮ್ಮನ ದೇವಾಲಯವನ್ನು ಚೋಳರ ರಾಜರು ನಿರ್ಮಿಸಿದ್ದಾರೆ ಎಂಬ ಇತಿಹಾಸವಿದೆ.. ಮದ್ದೂರಮ್ಮನ ಜಾತ್ರೆಗೆ ನೂರಾರು ವರ್ಷಗಳ ಇತಿಹಾಸವಿದೆ. ಪ್ರತಿ ವರ್ಷ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಮದ್ದೂರಮ್ಮನ ಜಾತ್ರೆ ನಡೆಯುತ್ತದೆ. ಹುಸ್ಕೂರಿನ ಮದ್ದೂರಮ್ಮ ದೇವಸ್ಥಾನಕ್ಕೆ ಸುತ್ತಲಿನ 10ಕ್ಕೂ ಅಧಿಕ ಗ್ರಾಮಗಳಿಂದ ತೇರನ್ನು ತೆಗೆದುಕೊಂಡು ಬರಲಾಗುತ್ತದೆ. ಇಲ್ಲಿನ ಗ್ರಾಮೀಣ ಭಾಗದ ಜನರು ನಾಮುಂದು, ತಾಮುಂದು ಎಂಬಂತೆ ಅತಿ ಎತ್ತರದ ತೇರುಗಳನ್ನು ನಿರ್ಮಿಸಿಕೊಂಡು ಬಂದು ಮದ್ದೂರಮ್ಮನಿಗೆ ಅರ್ಪಣೆ ಮಾಡುತ್ತಿದ್ದರು. ಆದರೆ, ಈ ವರ್ಷ ಹೀಲಲಿಗೆಯಿಂದ ಎತ್ತುಗಳು ಹಾಗೂ ಟ್ರ್ಯಾಕ್ಟರ್‌ಗಳ ಮೂಲಕ ಎಳೆದುಕೊಂಡು ಹೋಗುತ್ತಿದ್ದ 120 ಅಡಿ ಎತ್ತರದ ತೇರು ನೋಡ ನೋಡುತ್ತಿದ್ದಂತೆ ವಾಲಿಕೊಂಡು ಕುಸಿದು ಬಿದ್ದಿದೆ.

ಮದ್ದೂರಮ್ಮನ ತೇರನ್ನು ಇಲ್ಲಿನ ಸ್ಥಳೀಯರು ಕುರ್ಜು ಎಂತಲೂ ಕರೆಯುತ್ತಾರೆ. ಹೀಲಲಿಗೆ ಗ್ರಾಮದಿಂದ ಹುಸ್ಕೂರು ಮದ್ದೂರಮ್ಮ ದೇವಸ್ಥಾನಕ್ಕೆ ಎಳೆದುಕೊಂಡು ಹೋಗುವಾಗ ಈ ಘಟನೆ ಸಂಭವಿಸಿದೆ. ತೇರನ್ನು ಎಳೆದುಕೊಂಡು ಮುಂದೆ ಸಾಗುತ್ತಿದ್ದಂತೆ ತಲೆಯ ಭಾಗ ಅಲ್ಲಾಡಿದ್ದು, ಇದು ನಿಯಂತ್ರಣಕ್ಕೆ ಬಾರದೇ ಸೀದಾ ಎಡಭಾಗಕ್ಕೆ ವಾಲಿಕೊಂಡು ನೆಲಕ್ಕೆ ಉರುಳಿದೆ. ಇನ್ನು ತೇರು ವಾಲಿಕೊಂಡು ಬೀಳುವುದನ್ನು ಎಚ್ಚೆತ್ತುಕೊಂಡ ಜನರು ಅಲ್ಲಿಂದ ಎಲ್ಲರೂ ಓಡಿ ಹೋಗಿದ್ದಾರೆ. ಆದ್ದರಿಂದ ಅಲ್ಲಿದ್ದ ಜನರಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಹುಸ್ಕೂರಿನ ಮದ್ದೂರಮ್ಮ ದೇವಸ್ಥಾನದ ಮೂಲ ದೇವರು ಮಂಡ್ಯ ಜಿಲ್ಲೆಯ ಮದ್ದೂರಿನ ಮದ್ದೂರಮ್ಮ ಎಂದು ಹೇಳಲಾಗುತ್ತಿದೆ. ಹುಸ್ಕೂರಿನ ಭಕ್ತರೊಬ್ಬರಿಗೆ ಮೆಚ್ಚಿ ದೇವರೇ ಬಂದು ನೆಲೆಸಿದ್ದಾಳೆ ಎಂದು ಭಕ್ತರು ಹೇಳುತ್ತಾರೆ. ಇನ್ನು ಚೋಳರ ಕಾಲದಲ್ಲಿ ಇಲ್ಲಿ ದೇವಸ್ಥಾನ ನಿರ್ಮಾಣ ಮಾಡಲಾಗಿತ್ತು. ದೇವಾಲಯ ತೀವ್ರ ಹಳೆಯದಾದ್ದರಿಂದ ಸುತ್ತಲಿನ ಗ್ರಾಮಸ್ಥರೆಲ್ಲರೂ ಸೇರಿ ದೇವಸ್ಥಾನ ಜೀರ್ಣೋದ್ಧಾರ ತ್ತು ಹೊಸ ಗೋಪುರಗಳನ್ನು ಕೂಡ ನಿರ್ಮಾಣ ಮಾಡಿದ್ದರು. ಇನ್ನು ಹುಸ್ಕೂರಿನ ಮದ್ದೂರಮ್ಮ ದೇವಿಯ ಜಾತ್ರೆಯು 5 ದಿನಗಳು ನಡೆಯುತ್ತಿದ್ದು, ಸುತ್ತಲಿನ ಗ್ರಾಮಗಳಾದ, ಕೊಡತಿ, ಹಾರೋಹಳ್ಳಿ, ಸಿಂಗೇನ ಅಗ್ರಹಾರ, ದೊಡ್ಡ ನಾಗಮಂಗಲ ಹಾಗೂ ಮುತ್ತನಲ್ಲೂರು ಸೇರಿದಂತೆ ವಿವಿಧ ಗ್ರಾಮಗಳಿಂದ ರಥವನ್ನು ನಿರ್ಮಿಸಿಕೊಂಡು ಜಾತ್ರೆಗೆ ಕೊಂಡೊಯ್ದು ಪೂಜೆ ಮಾಡಲಾಗುತ್ತಿತ್ತು.

ಬೆಂಗಳೂರು: ಮೆಟ್ರೋಗೆ ವರ್ಷಾಂತ್ಯಕ್ಕೆ ಹೆಚ್ಚುವರಿ ರೈಲು ಸೇರ್ಪಡೆ

ಇನ್ನು ಗ್ರಾಮಗಳಲ್ಲಿ ನಿರ್ಮಿಸುವ ಕುರ್ಜುಗಳು (ತೇರು) ಸುಮಾರು 100 ಅಡಿಗಿಂತ ಎತ್ತವನ್ನು ಹೊಂದಿರುತ್ತಿದ್ದವು. ಕೆಲವೊಂದು ಬಾರಿ 150ರಿಂದ 200 ಅಡಿವರೆಗೆ ಹೋಗಿದೆ ಎಂದು ಹೇಳಲಾಗುತ್ತದೆ. ಈ ರಂಥವನ್ನು ನಿರ್ಮಾಣ ಮಾಡಲು ತಿಂಗಳುಗಟ್ಟಲೇ ಸಮಯ ಹಿಡಿಯುತ್ತದೆ. ಇನ್ನು ಕುರ್ಜುಗಳನ್ನು ಮರದ ಅಟ್ಟಣಿಗೆಯಿಂದ ನಿರ್ಮಿಸಲಾಗುತ್ತದೆ. ರಥಗಳಿಗೆ ಬಣ್ಣ ಬಣ್ಣದ ಬಟ್ಟೆಗಳನ್ನು ಹೊದಿಕೆಯನ್ನಾಗಿ ಮಾಡಲಾಗುತ್ತದೆ. ಇನ್ನು ಯಾವ ಗ್ರಾಮಸ್ಥರು ಎಷ್ಟು ಎತ್ತರವಾಗಿ ತೇರು ನಿರ್ಮಿಸಿಕೊಂಡು ಬರುತ್ತಾರೆ ಎಂಬುದು ಒಂದು ಸ್ಪರ್ಧೆಯಾಗಿತ್ತು. ಈ ಹಿನ್ನೆಲೆಯಲ್ಲಿ ಸುತ್ತಲಿನ ಗ್ರಾಮಸ್ಥರು ತಮ್ಮ ಪ್ರತಿಷ್ಠೆ ತೋರಿಸಿಕೊಳ್ಳಲು ದೊಡ್ಡದಾದ ಕುರ್ಜುಗಳನ್ನು ನಿರ್ಮಿಸುತ್ತಿದ್ದಾರೆ.

click me!