Ugadi 2022: ಯುಗಾದಿ ದಿನದಂದು ಚಾಮರಾಜನಗರದಲ್ಲಿ ಹೊನ್ನೇರು ಸಂಭ್ರಮ

Published : Apr 02, 2022, 08:20 PM IST
Ugadi 2022: ಯುಗಾದಿ ದಿನದಂದು ಚಾಮರಾಜನಗರದಲ್ಲಿ ಹೊನ್ನೇರು ಸಂಭ್ರಮ

ಸಾರಾಂಶ

ನಾಗರೀಕತೆ ಬೆಳೆದಂತೆ ಗ್ರಾಮೀಣ ಪ್ರದೇಶಗಳಲ್ಲಿನ  ಅದೆಷ್ಟೋ ಸಂಪ್ರದಾಯಗಳು ಕಣ್ಮರೆಯಾಗಿವೆ.ಅದರಲ್ಲೂ ದೇಶಕ್ಕೆ ಅನ್ನ ನೀಡುವ ರೈತರು ನಡೆಸುವ ರಾಶಿಪೂಜೆ, ಭೂಮಿ  ಪೂಜೆ, ಯುಗಾದಿ ದಿನದಂದು ಕಟ್ಟುವ ಹೊನ್ನೇರಿನಂತಹ ಪದ್ದತಿಗಳು ನಶಿಸಿ ಹೋಗಿವೆ.

ವರದಿ: ಪುಟ್ಟರಾಜು. ಆರ್.ಸಿ. ಏಷಿಯಾನೆಟ್ ಸುವರ್ಣ ನ್ಯೂಸ್, ‌ಚಾಮರಾಜನಗರ

ಚಾಮರಾಜನಗರ (ಏ.02): ನಾಗರೀಕತೆ ಬೆಳೆದಂತೆ ಗ್ರಾಮೀಣ ಪ್ರದೇಶಗಳಲ್ಲಿನ  ಅದೆಷ್ಟೋ ಸಂಪ್ರದಾಯಗಳು ಕಣ್ಮರೆಯಾಗಿವೆ.ಅದರಲ್ಲೂ ದೇಶಕ್ಕೆ ಅನ್ನ ನೀಡುವ ರೈತರು (Farmers) ನಡೆಸುವ ರಾಶಿಪೂಜೆ, ಭೂಮಿ  ಪೂಜೆ, ಯುಗಾದಿ (Ugadi) ದಿನದಂದು ಕಟ್ಟುವ ಹೊನ್ನೇರಿನಂತಹ ಪದ್ದತಿಗಳು ನಶಿಸಿ ಹೋಗಿವೆ. ಆದರೆ ಚಾಮರಾಜನಗರ (Chamarajanagar) ಜಿಲ್ಲೆಯ ಹಲವಾರು ಹಳ್ಳಿಗಳಲ್ಲಿ ಯುಗಾದಿ ಹಬ್ಬವನ್ನ ಹೊಸ ವರ್ಷದ ಜೊತೆಗೆ ಕೃಷಿ ಚಟುವಟಿಕೆಯ ಮೊದಲ ಹೆಜ್ಜೆ ಎಂದೇ ಭಾವಿಸಿ ಹೊನ್ನೇರು ಕಟ್ಟುವ  ಆಚರಣೆ ಇಂದಿಗೂ ನಡೆಯುತ್ತಿದೆ..

ಕವಿ ವಾಣಿಯಂತೆ ಯುಗಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಇದ್ದ ಅದೆಷ್ಟೋ ಸಂಪ್ರದಾಯಗಳು ಇಂದು ಕಣ್ಮರೆಯಾಗಿವೆ. ಅದರಲ್ಲೂ ದೇಶಕ್ಕೆ ಅನ್ನ ನೀಡುವ ರೈತರ ಬಹಳಷ್ಟು ಸಂಪ್ರದಾಯ, ಆಚರಣೆ ಕಣ್ಮರೆಯಾಗಿವೆ. ಯುಗಾದಿ ಬಂತೆಂದರೆ ರೈತರ ಕೃಷಿ ಚಟುವಟಿಕೆಗಳಿಗೆ ಜೀವ ಬಂತು ಎಂದೇ ಬಿಂಬಿತವಾಗಿದೆ. ಹೀಗಾಗಿಯೇ ಚಾಮರಾಜನಗರ ಜಿಲ್ಲೆಯ ಹಂಗಳ ಹೆಬ್ಬಸೂರು, ಜ್ಯೋತಿಗೌಡನಪುರ, ಹೊನ್ನೂರು, ಮೊದಲಾದ ಗ್ರಾಮಗಳಲ್ಲಿ ಹೊನ್ನೇರು ಕಟ್ಟುವ ಸಂಪ್ರದಾಯ ಇಂದಿಗೂ ನಡೆದುಕೊಂಡು ಬರುತ್ತಿದೆ. ಗ್ರಾಮೀಣ ಭಾಗದಲ್ಲಿ ಹೆಂಗಳೆಯರು ಸಿಹಿ ಊಟ ತಯಾರಿಸಿ ಪೂಜೆಗೆ ಅಣಿಯಾಗುತ್ತಾರೆ. ಪುರುಷರು ಹೊನ್ನೇರು ಕಟ್ಟುತ್ತಾರೆ.

ಹೊನ್ನೇರಿನ ವಿಶೇಷತೆ ಎಂದರೆ ಸೂರ್ಯೋದಯಕ್ಕೂ ಮುನ್ನ ರೈತರು ತಮ್ಮ ಎತ್ತು  ಗಾಡಿಗಳನ್ನು ಸ್ವಚ್ಚಗೊಳಿಸುತ್ತಾರೆ. ಬಳಿಕ ಬಣ್ಣಬಣ್ಣದ ಹೂಗಳಿಂದ  ಶೃಂಗರಿಸಿ, ಬಾಳೆ, ಹೊಂಬಾಳೆಗಳಿಮದ ಅಲಂಕರಿಸಿ ಪೂಜೆ ಸಲ್ಲಿಸುತ್ತಾರೆ. ಬಳಿಕ ಶೃಂಗರಿಸಿದ ಎತ್ತಿನ ಗಾಡಿಗಳಲ್ಲಿ ಸಾಂಕೇತಿಕವಾಗಿ ಒಂದಿಷ್ಟು ಗೊಬ್ಬರ ತುಂಬಿ  ಬಳಿಕ ನೊಗ ಹೂಡಿದ ಎತ್ತುಗಳು ಹಾಗು ಎತ್ತಿನ ಗಾಡಿಗಳನ್ನು ಮಂಗಳ ವಾದ್ಯಗಳೊಂದಿಗೆ  ಮೆರವಣಿಗೆ ನಡೆಸಲಾಗುತ್ತದೆ ಮೆರವಣಿಗೆ ಸಾಗುತ್ತಿದ್ದಾಗ ಮುತ್ತೈದೆಯರು ಹೊನ್ನೇರಿಗೆ ಪೂಜೆ ಸಲ್ಲಿಸುತ್ತಾರೆ. ಅನಂತರ ರೈತರು ತಮ್ಮ ಜಮೀನುಗಳಲ್ಲಿ ಗೊಬ್ಬರ ಸುರಿದು, ಸಾಂಕೇತಿಕವಾಗಿ ಉಳುಮೆ ಮಾಡಿ ಕೃಷಿ ಚಟುವಟಿಕೆ ಆರಂಭಕ್ಕೆ ಮುನ್ನುಡಿ ಬರೆಯುತ್ತಾರೆ. ಯುಗಾದಿ ದಿನದಂದು ಗ್ರಾಮೀಣ ಭಾಗದಲ್ಲಿ ಆಚರಿಸುವ ಹೊನ್ನೇರಿನ ಸಂಪ್ರದಾಯ ವಿಶಿಷ್ಟ ಹಾಗೂ ಅರ್ಥಪೂರ್ಣವಾಗಿರುತ್ತದೆ. ಸಂಪ್ರದಾಯದ ಹೆಸರಿನಲ್ಲಿ ರೈತರು ತಮ್ಮ ಕೃಷಿ ಚಟುವಟಿಕೆಗೆ ಮುನ್ನುಡಿ ಬರೆಯುತ್ತಾನೆ.

Chamarajanagar: ಪಡ್ನಾ-ಲಿಖ್ನಾ ಅಭಿಯಾನದಲ್ಲಿ ಭಾರೀ ಗೋಲ್‌ಮಾಲ್

ಬದುಕಿನ ಪಾಠ ಹೇಳುವ ಬೇವು ಬೆಲ್ಲ: ಸಂಕ್ರಾಂತಿ ಎಂದರೆ ಎಳ್ಳು ಬೆಲ್ಲ (Jaggery) ಸೇವಿಸುವ ಹಾಗೆ ಯುಗಾದಿ ಎಂದರೆ ಬೇವು (Neem) ಬೆಲ್ಲ ಸೇವಿಸುವ ಆಚರಣೆ ರೂಢಿಯಲ್ಲಿದೆ. ಯುಗಾದಿ ಹಬ್ಬದಂದು ಬೇವು ಬೆಲ್ಲ ಸೇವಿಸುವ ಆಚರಣೆ ಬಹಳ ಹಿಂದಿನಿಂದಲೂ ರೂಢಿಯಲ್ಲಿದೆ. ಬೇವು ಬೆಲ್ಲ ಎಂದರೆ ಸಿಹಿ ಕಹಿಗಳೆರಡನ್ನೂ ಸಮಾನವಾಗಿ ಸ್ವೀಕರಿಸಬೇಕೆಂಬುದಕ್ಕೆ ರೂಪಕ ಎಂಬ ಸಾಮಾನ್ಯ ಮಾತು ಎಲ್ಲರಿಗೂ ತಿಳಿದಿದೆ. 

ಆದರೆ, ಈ ಬೇವು ಬೆಲ್ಲ ತಯಾರಿಸಲು ಆರು ಆಹಾರ ಪದಾರ್ಥಗಳನ್ನು ಬಳಸಲಾಗುತ್ತದೆ. ಅವೆಲ್ಲವೂ ನಮ್ಮ ಜೀವನದ ಆರು ಭಾವನೆಗಳನ್ನು ಪ್ರತಿನಿಧಿಸುತ್ತವೆ ಎಂಬ ವಿಷಯ ನಿಮಗೆ ಗೊತ್ತೇ?  ಹೌದು, ಯುಗಾದಿ ಎಂದರೆ ಹೊಸ ವರ್ಷವನ್ನು ಸ್ವಾಗತಿಸುವ ಹಬ್ಬ. ಹೊಸ ವರ್ಷವು ಸುಖ, ಸಂತೋಷ, ಸಮೃದ್ಧಿ (Prosperity)ಯನ್ನು ತರಲೆಂದು ಆಶಿಸುವ ಹಬ್ಬ. ಇಂಥ ಯುಗಾದಿಯ ದಿನ ಬೇವು ಬೆಲ್ಲ ಏಕೆ ಸೇವಿಸಬೇಕು, ಬೇವು ಬೆಲ್ಲ ತಯಾರಿಸುವ ವಿಧಾನವೇನು? ಈ ಬೇವು ಬೆಲ್ಲದ ಪ್ರಾಮುಖ್ಯತೆ ಏನು ಎಲ್ಲವನ್ನೂ ವಿವರವಾಗಿ ನೋಡೋಣ.

ಬೇವು ಬೆಲ್ಲ ತಯಾರಿ: ಬೇವು, ಬೆಲ್ಲ, ಹಸಿ ಮಾವಿನಕಾಯಿ, ಉಪ್ಪು, ಮೆಣಸಿನ ಕಾಳು ಹಾಗೂ ಹುಣಸೆ ಹುಳಿ ರಸ ಸೇರಿಸಿ ಪೇಸ್ಟ್ ತಯಾರಿಸಲಾಗುತ್ತದೆ. ಈ ಪದಾರ್ಥಗಳೇ ಏಕೆ? ಇವುಗಳ ಬಳಕೆಯ ಮಹತ್ವವೇನು?  ಈ ಆರು ಪದಾರ್ಥಗಳು ಮಾನವ ಜೀವನದ ಪ್ರಮುಖ ಆರು ಭಾವನೆಗಳನ್ನು ಸೂಚಿಸುತ್ತವೆ. ಮಾನವನ ನೆಮ್ಮದಿಯ ಜೀವನಕ್ಕೆ ಬೇಕಾದ ಮಾರ್ಗದರ್ಶನ ಮಾಡುತ್ತದೆ. ನೀವೇ ಯೋಚಿಸಿ ಈ ಆರೂ ಪದಾರ್ಥಗಳೂ ಆರು ವಿವಿಧ ರುಚಿಯನ್ನು ಹೊಂದಿವೆ. ಒಂದೊಂದು ರುಚಿಯೂ ಜೀವನದ ಒಂದೊಂದು ರೀತಿಯ ಏರಿಳಿತಗಳನ್ನು ಸೂಚಿಸುತ್ತದೆ. 

Chamarajanagara ಉರುಕಾತೇಶ್ವರಿ ಜಾತ್ರೆಯಲ್ಲಿ ಮೈ ಮೇಲೆ ಕೆಂಡ ಸುರಿದುಕೊಳ್ಳುವ ಆಚರಣೆ

ಇದರಲ್ಲಿ ಯಾವೊಂದೇ ರುಚಿಯನ್ನೂ ಅತಿಯಾಗಿ ಸೇವಿಸುವುದು ಯಾರಿಂದಲೂ ಸಾಧ್ಯವಿಲ್ಲ. ಕೇವಲ ಸಿಹಿಯೊಂದನ್ನೇ ಸೇವಿಸುತ್ತೇವೆಂದರೆ ಮುಖ ಕಟ್ಟುತ್ತದೆ. ಕಹಿಯೊಂದನ್ನೇ ತಿನ್ನುವುದು ಸಾಧ್ಯವೇ ಇಲ್ಲ. ಇನ್ನು ಹುಳಿಯಾಗಲೀ, ಖಾರವಾಗಲೀ, ಒಗರು, ಉಪ್ಪು ಯಾವುದೇ ಇರಲಿ- ಒಂದನ್ನೇ ಸೇವಿಸಿದರೆ ವಾಂತಿಯಾಗುತ್ತದಷ್ಟೇ. ಆದರೆ ಈ ಎಲ್ಲ ರುಚಿಗಳೂ ಹದವಾಗಿ ಮಿಳಿತವಾದಾಗ ನಾಲಿಗೆ ಚಪ್ಪರಿಸುವಂಥ ರುಚಿ ಸಿಗುತ್ತದೆ. ಹೀಗೆ ಜೀವನದಲ್ಲಿ ಕೂಡಾ ಕಷ್ಟ, ಸುಖ, ನೋವು, ನಲಿವು ಎಲ್ಲವೂ ಮಿಳಿತವಾಗಿದ್ದಾಗಷ್ಟೇ ಜೀವನ ಸೊಗಸು ಎಂಬ ಪಾಠ ಹೇಳುತ್ತವೆ. 

PREV
Read more Articles on
click me!

Recommended Stories

2026 ರಲ್ಲಿ ಈ 4 ರಾಶಿ ಜೀವನದಲ್ಲಿ ಪ್ರಮುಖ ಬದಲಾವಣೆ
ಜೆನ್‌ ಜೀ ಮನಗೆದ್ದ ಭಗವದ್ಗೀತೆ: ಏನಿದರ ಗುಟ್ಟು?