ಕೃಷ್ಣ ಭಕ್ತಿ ಎನ್ನುವ ಏಕೈಕ ಸೂತ್ರದಿಂದ ಶ್ರೀ ಚೈತನ್ಯ ಮಹಾಪ್ರಭುಗಳು ಈ ಸಮಾಜವನ್ನು ಬೆಸೆದು ಹಿಂದೂ ಸಮಾಜವನ್ನು ಕಾಪಾಡುವಲ್ಲಿ ಯಶಸ್ವಿಯಾದರು. ಇದರಿಂದ ಅಂದಿನ ಸಮಾಜದಲ್ಲಿದ್ದ ಅಸಮಾನತೆಯನ್ನು ದೂರ ಮಾಡಿ ಎಲ್ಲಾ ಜಾತಿಯ ಜನರ ಜತೆಗೆ ಕುಳಿತು ಶ್ರೀ ರಾಧಾಕೃಷ್ಣರ ಭಜನೆಯನ್ನು ಮಾಡಲು ಸಾಧ್ಯವಾಯಿತು.
ಭಕ್ತಿ ಆಂದೋಲನದ ಮೂಲಕ ಭಾರತೀಯ ಧಾರ್ಮಿಕ ಪರಂಪರೆಗೆ ಜೀವಚೈತನ್ಯ ತುಂಬಿದ ಸಾವಿರಾರು ಮಹಾನ್ ತಪಸ್ವಿಗಳನ್ನು ನಮ್ಮ ಚರಿತ್ರೆಯೊಳಗೆ ಗುರುತಿಸಬಹುದು. ಧರ್ಮಕ್ಕೆ ಆಪತ್ತು ಬಂದಾಗ, ಆ ಸಂಕಟವನ್ನು ನಿವಾರಿಸಲು ಸಾಧು ಸಂತರಿಗೆ ಪ್ರೇರಣೆ ಕೊಟ್ಟನೆಲ ಇದು.
ಜಗತ್ತಿನಲ್ಲಿ ಅನೇಕ ಪ್ರಾಚೀನ ನಾಗರಿಕತೆಗಳು ಕಾಲದ ಪ್ರವಾಹವನ್ನು ಎದುರಿಸಿ ನಿಲ್ಲುವ ಚೈತನ್ಯಶೀಲತೆಯನ್ನು ಕಳೆದುಕೊಂಡ ಕಾರಣಕ್ಕಾಗಿ ಆ ಎಲ್ಲಾ ನಾಗರಿಕತೆಗಳು ಇತಿಹಾಸದ ಪುಟ ಸೇರಿದ ಉದಾಹರಣೆಗಳು ನಮ್ಮಕಣ್ಮುಂದೆಯೇ ಇವೆ. ಆದರೆ ಭಾರತೀಯ ನಾಗರಿಕತೆಯ ವೈಶಿಷ್ಟ್ಯವೇ ಇದರ ಸೃಷ್ಟಿಶೀಲತೆ. ಯಾವುದೇ ಒಂದು ಗತಕ್ಕೆ , ಒಂದು ಪಂಥಕ್ಕೆ, ಒಂದು ಗ್ರಂಥಕ್ಕೆ ಸೀಮಿತವಾಗಿ ಅಂಟಿಕೊಳ್ಳದೆ ಸದಾ ಪರಿವರ್ತನಾಶೀಲ ಗುಣವನ್ನು ಹೊಂದಿದ್ದ ಕಾರಣದಿಂದಲೇ, ಪರಿಷ್ಕಾರ-ಪರಿವರ್ತನೆಗೆ ಒಳಪಡಲು ಸಾಧ್ಯವಾಯಿತು.
ಆತ್ಮೋದ್ಧಾರದ ದಾರಿ ಶುದ್ಧ ಭಕ್ತಿ
ಈ ಪರಂಪರೆಯೊಳಗಿನಿಂದಲೇ ಅಂತಹ ಚೈತನ್ಯವುಳ್ಳ ಅನೇಕರು ಹುಟ್ಟಿಬಂದ ಕಾರಣದಿಂದ ಜಡಗೊಳ್ಳಬಹುದಾಗಿದ್ದ, ಜಡಗೊಂಡು ನಾಶವಾಗಿ ಹೋಗಬಹುದಾಗಿದ್ದ ಪರಂಪರೆಗೆ ಪುನಶ್ಚೇತನವನ್ನು ನೀಡಿದರು. ಭಾರತದ ಮೂಲೆ ಮೂಲೆಗಳಲ್ಲಿ ಇಂತಹ ಗುಣವುಳ್ಳ ಸಾಧಕರು ಕ್ರೀಯಾಶೀಲರಾಗಿದ್ದ ಕಾರಣದಿಂದಲೇ ಹೊರಗಿನ ಮತ್ತು ಒಳಗಿನ ಎಲ್ಲಾ ಸವಾಲುಗಳನ್ನೂ ಶಕ್ತವಾಗಿಯೇ ಎದುರಿಸಲು ಸಾಧ್ಯವಾಯಿತು. ಅದರಲ್ಲೂ ಮೊಘಲ್ ಕಾಲದ, ಬ್ರಿಟಿಷ್ ಕಾಲದ ದಾಳಿಯ ಪರಿಣಾಮ ಎಷ್ಟುತೀವ್ರವಾಗಿತ್ತೆಂದರೆ, ಆ ಹೊಡೆತಕ್ಕೆ ಎಂತಹ ಶಕ್ತವಾದ ನಾಗರಿಕತೆಗಳಾದರೂ ಸಂಪೂರ್ಣವಾಗಿ ನಾಶವಾಗಬೇಕಾಗಿತ್ತು. ಆಕ್ರಮಣಗಳ ಮೇಲೆ ಆಕ್ರಮಣಗಳು ನಡೆಯುತ್ತಲೇ ಇದ್ದವು. ಇಲ್ಲಿನ ಧರ್ಮದ, ಪರಂಪರೆಯ ಎಲ್ಲಾ ಶ್ರದ್ಧಾ ಕೇಂದ್ರಗಳೂ ಭಂಜನೆಗೊಳಗಾಗುತ್ತಿತ್ತು.
ಜನರು ತಮ್ಮ ನಂಬಿಕೆ ರೂಢಿಗಳನ್ನು ಉಳಿಸಿಕೊಳ್ಳುವುದೇ ಬಹು ಸವಾಲಿನ ಸಂಗತಿಯಾಗಿತ್ತು. ಇಂತಹ ಸಂದರ್ಭದಲ್ಲಿ ಸಹಜವಾಗಿಯೇ ದುರ್ಬಲಗೊಳ್ಳಬಹುದಾಗಿದ್ದ ಸಮಾಜವನ್ನುಎತ್ತಿಹಿಡಿದು ಸಮಾಜದ ಸ್ಥೈರ್ಯವನ್ನು ಕಾಪಾಡುವುದು ಬಹುದೊಡ್ಡ ಜವಾಬ್ದಾರಿಯಾಗಿತ್ತು. ಆ ಕಾಲಘಟ್ಟದಲ್ಲಿ ಜನರನ್ನು ಭಕ್ತಿಯ ಪಥದಲ್ಲಿ ಮುನ್ನಡೆಸಿದ, ಅವರನ್ನು ಜಾಗೃತಗೊಳಿಸಿದ ಕೀರ್ತಿಗೆ ಪಾತ್ರರಾಗುವ ಅನೇಕ ಮಹನಿಯರ ಸಾಲಿನಲ್ಲಿ ಶ್ರೀ ಚೈತನ್ಯ ಮಹಾಪ್ರಭುಗಳು ಅಗ್ರಗಣ್ಯರು. ಆತ್ಮೋದ್ಧಾರದ ಸರಳ ದಾರಿ ಶುದ್ಧ ಭಕ್ತಿ ಎನ್ನುವುದನ್ನು ತೋರಿಸಿಕೊಟ್ಟರು. ಅವರ ಅನುಯಾಯಿಗಳು ಚೈತನ್ಯರಲ್ಲೇ ರಾಧಾಕೃಷ್ಣರ ಅವತಾರವನ್ನು ಕಂಡರು. ಹರಿನಾಮ ಸುಧೆ ಹರಿಸುವ ಸಂಕೀರ್ತನೆಗಾಗಿಯೇ ಬದುಕು ಮುಡಿಪಾಯಿತು.
ಬೆಳಕಾದ ಆಂದೋಲನ
ಸಾವಿರಾರು ಜನದಾರ್ಶನಿಕರು ಜನ್ಮ ಪಡೆದ ಈ ನೆಲದಲ್ಲಿ ಶ್ರೀ ಚೈತನ್ಯ ಮಹಾಪ್ರಭುಗಳು ಭಕ್ತಿಯ ಪಥವನ್ನು ಹಿಡಿದು ಸಮಾಜವನ್ನು ಆ ಪಥದಲ್ಲಿ ಮುನ್ನಡೆಸಿದ ಮಹಾನ್ ದಾರ್ಶನಿಕರು. ಬಂಗಾಳದ ನೆಲದಲ್ಲಿ ಭಕ್ತಿ ಪರಂಪರೆಯ ಮೂಲಕ ಜನ ಮಾನಸವನ್ನು ಜಾಗೃತಗೊಳಿಸಿ, ಅವರನ್ನು ಆಧ್ಯಾತ್ಮಿಕ ಪಥದಲ್ಲಿ ಮುನ್ನಡೆಸಿದರು. 15ನೇ ಶತಮಾನದಲ್ಲಿ ಭಾರತಾದ್ಯಂತ ಭಕ್ತಿ ಚಳವಳಿ ಒಂದು ಹೊಸ ಬೆಳಕಾಗಿ ಜನರನ್ನು ಉದ್ಧರಿಸಿತು. ಬಂಗಾಳದ ನೆಲದಲ್ಲಿ ಶ್ರೀ ಚೈತನ್ಯ ಮಹಾಪ್ರಭುಗಳು ಬಿತ್ತಿದ ಭಕ್ತಿಯ ಆಂದೋಲನ ಮುಂದೆ ಭಾರತಕ್ಕೆ ಬೆಳಕಾಯಿತು.
ನವದ್ವೀಪದಿಂದ ಆರಂಭಗೊಂಡ ಸಾಮೂಹಿಕ ನಾಮ ಸಂಕೀರ್ತನೆಯ ಬೆಳಕು ಲೋಕವನ್ನೆಲ್ಲಾ ಪಸರಿಸಿತು. ಹಿಂದೂ ಸಮಾಜದಲ್ಲಿ ಕಾಲಾನಂತರದಲ್ಲಿ ರೂಢಿಯಾಗಿ ಬೆಳೆದು ಬಂದಿದ್ದ ಜಾತಿ ಪದ್ಧತಿ, ಜಾತಿಗಳ ನಡವಿನ ತಾರತಮ್ಯಗಳ ಕಾರಣದಿಂದ ಜನರು ಪರಸ್ಪರ ಭೇದ ಮರೆತು ಸಮೀಪ ಸೇರುವುದಕ್ಕೂ ಸಾಧ್ಯವಾಗದಂತಾಗಿತ್ತು. ಮೇಲು ಕೀಳು, ಸ್ಪೃಶ್ಯಅಸ್ಪೃಶ್ಯರೆನ್ನುವ ತರತಮದಿಂದ ಇಡೀ ಹಿಂದೂ ಸಮಾಜವು ದುರ್ಬಲಗೊಳ್ಳುವ ಸ್ಥಿತಿಯಲ್ಲಿತ್ತು. ಇಂತಹ ಸಂದರ್ಭದಲ್ಲಿ ಸರ್ವ ಸಮತೆಯ ಭಕ್ತಿ ಮಂತ್ರವನ್ನು ಬೋಧಿಸಿದವರು ಶ್ರೀ ಚೈತನ್ಯ ಮಹಾಪ್ರಭುಗಳು.
ಮೇಲು-ಕೀಳೆಂಬುದಿಲ್ಲ ಎಂದರು
ಈ ಭಕ್ತಿ ಆಂದೋಲನ ಸಾಮಾಜಿಕ ಸಮಾನತೆಗೆ ನೀಡಿದ ಆದ್ಯತೆಯು ಹಿಂದೂ ಸಮಾಜವನ್ನು ಬೆಸೆಯಲು ಸಹಕಾರಿಯಾುತು. ತತಾಕಥಿತ ಮೇಲು-ಕೀಳು ಭಾವದಿಂದ ಸಮಾಜದ ಬಹುದೊಡ್ಡ ಸಮುದಾಯಗಳು ಭಗವತ್ ಭಕ್ತಿಯ ಅವಕಾಶದಿಂದಲೇ ವಂಚಿತವಾಗಬೇಕಾಗಿದ್ದ ದಿನಗಳಲ್ಲಿ ಶ್ರೀ ಚೈತನ್ಯರು ಹುಟ್ಟುಹಾಕಿದ ಭಕ್ತಿಯ ಚಳವಳಿಯು ಸರ್ವ ಸಮತೆಯ ಸಂದೇಶವನ್ನು ನೀಡುವಲ್ಲಿ ಯಶಸ್ವಿಯಾಯಿತು. ತಮ್ಮನ್ನು ತಾವೇ ಉಚ್ಚ ಜಾತಿಯವರೆಂದುಕೊಂಡವರೊಳಗಿನ ಜಾತಿಯ ಅಹಂಕಾರವನ್ನೂ, ಕೆಳಜಾತಿಯವರೆಂದುಕೊಂಡವರ ಕೀಳರಿಮೆಯನ್ನೂ ತೊಡೆದು ಹಾಕುತ್ತಾ, ಯಾರನ್ನು ಭಕ್ತಿಯ ಪಥದಿಂದ ವಂಚಿತರನ್ನಾಗಿಸಲಾಗಿತ್ತೋ ಅಂತಹವರ ಜತೆ ಸೇರಿ ಕೃಷ್ಣನಾಮವನ್ನು ಸ್ಮರಿಸುವಂತೆ ಮಾಡಿದ ಮಹಾನತೆಯನ್ನು ಸಾಧಿಸಿದವರು ಶ್ರೀ ಚೈತನ್ಯರು ಎಂದಾಗ ಅವರ ಕಾರ್ಯದ ಮಹತ್ವ ಅರಿವಾಗುತ್ತದೆ. ಸಾಮಾಜಿಕ ವಿಷಮತೆಗೆ ಸಂಘರ್ಷದಿಂದ ಪರಿಹಾರ ಸಾಧ್ಯವಾಗದು ಎನ್ನುವುದನ್ನು ಅರಿತೇ ಮೌನವಾದ ಒಂದು ಪರಿವರ್ತನೆಯ ಕಾರ್ಯಕ್ಕೆ ಅವರು ನಾಂದಿ ಹಾಡಿದ್ದರು. ಭಕ್ತಿಗೆ ಭೇದಲ್ಲ ಎನ್ನುವುದನ್ನು ಪ್ರಾಯೋಗಿಕ ರೂಪದಲ್ಲಿ ಸಾಧಿಸಿ ತೋರಿಸಿದರು.
ಅಸ್ಪೃಶ್ಯತೆ ವಿರುದ್ಧ ಹೋರಾಟ
ಚೈತನ್ಯರ ಕಾಲಘಟ್ಟದಲ್ಲಿ ಈ ಸಮಾಜ ಎರಡು ಗಂಭೀರವಾದ ಸವಾಲುಗಳನ್ನು ಎದುರಿಸಬೇಕಾಗಿತ್ತು. ಒಂದೆಡೆ ಪರಕೀಯ ಮತೀಯ ಆಕ್ರಮಣದಿಂದ ಹಿಂದೂ ಸಮಾಜ ದುರ್ಬಲವಾಗುತ್ತಿದ್ದರೆ, ಇನ್ನೊಂದೆಡೆ ಆಂತರಿಕವಾಗಿ ಸಮಾಜಕ್ಕೆ ಶಾಪವಾಗಿ ಪರಿಣಮಿಸಿದ್ದ ಅಸಮಾನತೆಯ ಸವಾಲನ್ನೂಎದುರಿಸಬೇಕಾಗಿತ್ತು. ಕೃಷ್ಣ ಭಕ್ತಿಎನ್ನುವ ಏಕೈಕ ಸೂತ್ರದಿಂದ ಶ್ರೀ ಚೈತನ್ಯ ಮಹಾಪ್ರಭುಗಳು ಈ ಸಮಾಜವನ್ನು ಬೆಸೆದು ಈ ಎರಡೂ ಸವಾಲುಗಳಿಂದ ಹಿಂದೂ ಸಮಾಜವನ್ನು ಕಾಪಾಡುವಲ್ಲಿ ಯಶಸ್ವಿಯಾದರು. ಅವರು ತೋರಿದ ಭಕ್ತಿ ಪಥದಲ್ಲಿ ಸಮಾಜದ ಎಲ್ಲಾ ವರ್ಗದ ಜನರೂ ಸೇರಿಕೊಂಡರು. ಲೋಕವಿರೋಧಿಯೂ, ಈಶ್ವರ ವಿರೋಧಿಯೂ ಆಗಿದ್ದ ಭೇದಗಳನ್ನು ದೂರ ಮಾಡುವಲ್ಲಿ ಅವರು ಬಿತ್ತಿದ ಭಕ್ತಿಯ ಸಾಮೂಹಿಕ ಪ್ರಕಟೀಕರಣದ ಸಂಕೀರ್ತನೆಯ ಮಾದರಿ ಯಶಸ್ವಿಯಾಯಿತು.
ಕೃಷ್ಣ ಭಕ್ತಿಗೆ ಶರಣಾದ ಮನಸ್ಸುಗಳು ಜಾತಿ ಬೇಧವನ್ನು ಸಹಜವಾಗಿಯೇ ದೂರ ಮಾಡಿದರು. ಇದರ ಜತೆಗೆ ಭಗವಂತನ ಪೂಜೆಗೆ ಅತ್ಯಂತ ಸರಳವಾದ ದಾರಿಯನ್ನು ತೋರಿಸಿದರು. ಅಂದಿನ ಸಮಾಜದಲ್ಲಿದ್ದ ಅಸಮಾನತೆಯನ್ನು ದೂರ ಮಾಡಿ ಎಲ್ಲಾ ಜಾತಿಯ ಜನರ ಜತೆಗೆ ಕುಳಿತು ಶ್ರೀ ರಾಧಾಕೃಷ್ಣರ ಭಜನೆಯನ್ನು ಮಾಡಲು ಸಾಧ್ಯವಾಯಿತು. ಚೈತನ್ಯರ ಈ ಆಂದೋಲನ ಈ ಸಮಾಜಕ್ಕೆ ಒಂದು ಸ್ಪಷ್ಟವಾದ ದಿಕ್ಕನ್ನು ತೋರಿತು. ಕೃಷ್ಣನ ಭಜನೆಯನ್ನು ಮಾಡಲು ಎಲ್ಲರೂ ಅರ್ಹರೇ ಎನ್ನುವುದನ್ನು ಸಾಮೂಹಿಕ ಸಂಕೀರ್ತನೆಗಳ ಮೂಲಕ ಮಾಡಿ ತೋರಿಸಿದರು. ಎಲ್ಲಾ ಜಾತಿಯ ಜನರೂ ಶ್ರೀ ಚೈತನ್ಯರ ಜತೆಗೆ ಸೇರಿಕೊಂಡರು.
ಭಕ್ತಿ ಜಾತಿ ಮಾನದಂಡವಲ್ಲ
ಸಮಾಜವನ್ನು ಆವರಿಸಿದ್ದ ವಿಸ್ಮೃತಿಯಿಂದ ಪಾರುಮಾಡಿ ಈ ಸಮಾಜಕ್ಕೆ ಅದರ ನಿಜ ರೂಪದ ದರ್ಶನವನ್ನು ಮಾಡಲು ಅನುಕೂಲವಾಯಿತು. ಸಂಕೀರ್ತನೆ ಸಮಾಜವನ್ನು ಬೆಸೆಯಿತು. ಹರಿಬೋಲ್ ಹರಿಬೋಲ್ ಮಂತ್ರ ಮತ ಭೇದವಿಲ್ಲದೆ ಎಲ್ಲರ ಬಾಳಿಂದಲೂ ಪ್ರತಿಧ್ವನಿಸಿತು. ಕೀರ್ತನಾ ಪರಂಪರೆಯ ಮೂಲಕ ಸಮಾಜವನ್ನು ಸಮೀಪಕ್ಕೆ ತರುವಂತೆ ಮಾಡಿತು. ಸರಳವಾಗಿ ಪ್ರತಿಯೊಬ್ಬರೂ ರೂಢಿಸಿಕೊಳ್ಳಬಹುದಾದ ಭಕ್ತಿ ಮಾದರಿಯು ಕರ್ಮಠ ಕಟ್ಟುಪಾಡುಗಳಿಂದ ಸಮಾಜವನ್ನು ಬಿಡುಗಡೆಗೊಳಿಸಿತು.
ಇದು ಕೇವಲ ಸಾಮಾಜಿಕ ಸಮಾನತೆಯ ಆಂದೋಲನವಲ್ಲ, ಇದೊಂದು ಆಧ್ಯಾತ್ಮಿಕ ಸಮಾನತೆಯನ್ನು ಸಾಧಿಸಲು ಹೊರಟಒಂದು ಮಹತ್ವದ ಪ್ರಕ್ರಿಯೆ. ಕ್ರಾಂತಿಕಾರಿಯ ಯಾವುದೇ ಮಾತುಗಳನ್ನು ಚೈತನ್ಯರು ವ್ಯಕ್ತಪಡಿಸಲಿಲ್ಲ, ಆದರೆ ತಮ್ಮ ಕಾರ್ಯದ ಮೂಲಕ ಒಂದು ಅತಿದೊಡ್ಡ ಕ್ರಾಂತಿಯನ್ನೇ ಮಾಡಿದರು. ರಾಧಾಕೃಷ್ಣರನ್ನು ಪ್ರೇಮದ ಸಂಕೇತವಾಗಿ ಮುಂದಿಟ್ಟು ಜನ ಸಾಮಾನ್ಯರೂ ಈ ಪ್ರೇಮ ಮೂರ್ತಿಗಳ ನಾಮ ಸ್ಮರಣೆಯ ಮೂಲಕ ಸಾಧಿಸಲು ಹೊರಟ ಕ್ರಿಯೆ ಅತ್ಯುನ್ನತವಾದುದು. ಸುಮಾರು 5 ಶತಮಾನಗಳ ಹಿಂದೆಯೇ ಭಗವಂತನ ಭಕ್ತಿಗೆ ಜಾತಿ ಆಧಾರವೂ ಅಲ್ಲ, ಮಾನದಂಡವೂ ಅಲ್ಲಎನ್ನುವ ಪ್ರಜ್ಞಾಪೂರ್ವಕ ಚಿಂತನೆಯ ಮೂಲಕ ಭಗವಂತನ ಎದುರು ಎಲ್ಲರೂ ಸರ್ವ ಸಮಾನರು ಎನ್ನುವ ದರ್ಶನವನ್ನು ಬೆಳೆಸಿದರು.
- ಡಾ.ರೋಣಾಕ್ಷ ಶಿರ್ಲಾಲು, ಕಲಬುರಗಿ