Fact Check: ಮರ ಉಳಿಸಲು ರಸ್ತೆ ಪಥವನ್ನೇ ಬದಲಿಸಿದ ಗುತ್ತಿಗೆದಾರ? ವೈರಲ್‌ ಫೋಟೋ ಸತ್ಯಾಸತ್ಯತೆ ಏನು?

Published : Apr 08, 2022, 03:29 PM ISTUpdated : Oct 19, 2022, 03:19 PM IST
Fact Check: ಮರ ಉಳಿಸಲು ರಸ್ತೆ ಪಥವನ್ನೇ ಬದಲಿಸಿದ ಗುತ್ತಿಗೆದಾರ? ವೈರಲ್‌ ಫೋಟೋ ಸತ್ಯಾಸತ್ಯತೆ ಏನು?

ಸಾರಾಂಶ

ಹೆದ್ದಾರಿಯ ಚಿತ್ರವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದ್ದು, ಫೋಟೋದಲ್ಲಿ, ಹೆದ್ದಾರಿಯ ಮಧ್ಯದಲ್ಲಿ ಮರವಿದ್ದು ಅದರ ಮುಂದೆ ರಸ್ತೆ ಕೊಂಚ ಬಾಗಿದ್ದನ್ನು ಕಾಣಬಹುದಾಗಿದೆ. ಆ ಮರ ಉಳಿಸಿಕೊಳ್ಳಲು ರಸ್ತೆಯ ಪಥವನ್ನೇ ಬದಲಾಯಿಸಲಾಗಿದೆ ಎಂಬೊಂದು ಸುದ್ದಿ ಹರಿದಾಡುತ್ತಿದೆ. ಅಷ್ಟಕ್ಕೂ ಇದರ ಸತ್ಯಾಸತ್ಯತೆ ಏನು? 

Fact Check: ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿನಿತ್ಯ ಸಾವಿರಾರು ವಿಡಿಯೋ, ಫೋಟೋಗಳು ವೈರಲ್‌ ಅಗುತ್ತವೆ. ಈ ವೈರಲ್‌ ಕಂಟೆಂಟ್‌ಗಳ ರಾಶಿಯಲ್ಲಿ ಯಾವುದು ಸತ್ಯ, ಯಾವುದು ಸುಳ್ಳು ಎಂದು ಕಂಡುಹಿಡಿಯುವುದೇ ಒಂದು ದೊಡ್ಡ ಸವಾಲು. ಹೆದ್ದಾರಿಯ ಚಿತ್ರವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಫೋಟೋದಲ್ಲಿ, ಹೆದ್ದಾರಿಯ ಮಧ್ಯದಲ್ಲಿ ಮರವಿದ್ದು ಅದರ ಮುಂದೆ ರಸ್ತೆ ಕೊಂಚ ಬಾಗಿದ್ದನ್ನು ಕಾಣಬಹುದು. ಈ ಚಿತ್ರವನ್ನು ಹಂಚಿಕೊಳ್ಳುವ ಮೂಲಕ, ಅದನ್ನು ನಿರ್ಮಿಸಿದ ಗುತ್ತಿಗೆದಾರರು, ಹೆದ್ದಾರಿಯಲ್ಲಿ ಮರ ಇದ್ದ ಕಾರಣ ಅದನ್ನು ಉಳಿಸಲು ಈ ರಸ್ತೆ ಪಥವನ್ನೇ ಬದಲಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಆದರೆ ಫ್ಯಾಕ್ಟ್‌ಚೆಕ್‌ ತನಿಖೆಯಲ್ಲಿ ವೈರಲ್ ಅಗುತ್ತಿರುವ ಫೋಟೋ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಹರಿಯುತ್ತಿರುವ ಕ್ಲೈಮ್ ನ ಸತ್ಯಾಸತ್ಯತೆ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಪರಿಶೀಲಿಸಿದಾಗ ವೈರಲ್ ಆಗಿರುವ ಚಿತ್ರವನ್ನು ಎಡಿಟ್ ಮಾಡಿ ಸಿದ್ಧಪಡಿಸಲಾಗಿದ್ದು, ಇದು ಫೇಕ್ ಎಂದು ತಿಳಿದುಬಂದಿದೆ. ಈ ವೈರಲ್ ಚಿತ್ರವನ್ನು ಜನರಿಗೆ ಪರಿಸರದ ಬಗ್ಗೆ ಅರಿವು ಮೂಡಿಸುವ ಜಾಹೀರಾತಿನಂತೆ ಮಾಡಲಾಗಿದೆ ಎಂದು ತನಿಖೆಯಿಂದ ತಿಳಿದು ಬಂದಿದೆ. ಫೋಟೋವಿನ ಉದ್ದೇಶ ಒಳ್ಳೆಯದೇ, ಆದರೆ ಜನರು ಅದನ್ನೇ ಸತ್ಯವೆಂದು ಪರಿಗಣಿಸಿ ವೈರಲ್ ಮಾಡಿದ್ದಾರೆ.‌

ವೈರಲ್ ಪೋಸ್ಟ್‌ನಲ್ಲೇನಿದೆ?: ವೈರಲ್ ಚಿತ್ರವನ್ನು ಫೇಸ್‌ಬುಕ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ. "ಮರವನ್ನು ಉಳಿಸಲು ರಸ್ತೆಯನ್ನು ತಿರುಚಿದ ಈ ಗುತ್ತಿಗೆದಾರನಿಗೆ ಸಲಾಮ್" ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ.

ಫೇಸ್‌ಬುಕ್‌ ಹಾಗೂ ಟ್ವೀಟರ್‌ನಲ್ಲಿ ಹಲವು ಬಳಕೆದಾರರು ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಚಿತ್ರವನ್ನು ಹಂಚಿಕೊಂಡಿದ್ದಾರೆ. ಇಂಥಹ ಪೋಸ್ಟ್ ಗಳನ್ನು ನೀವು ಇಲ್ಲಿ ಮತ್ತು ಇಲ್ಲಿ ನೋಡಬಹುದು. 

Fact Check (Claim Review): ವೈರಲ್ ಚಿತ್ರದ ಸತ್ಯಾಸತ್ಯತೆ ತಿಳಿಯಲು, ಗೂಗಲ್ ರಿವರ್ಸ್ ಇಮೇಜ್ (Google Reverse Image) ಮೂಲಕ ಚಿತ್ರವನ್ನು ಹುಡುಕಿದಾಗ ದಕ್ಷಿಣ ಕೊರಿಯಾದ ಬ್ಲಾಗ್‌ನಲ್ಲಿ ವೈರಲ್ ಚಿತ್ರವನ್ನು ಕಂಡುಕೊಂಡಿದ್ದೇವೆ. ಬ್ಲಾಗ್‌ನಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ಈ ಚಿತ್ರವನ್ನು ದಕ್ಷಿಣ ಕೊರಿಯಾದ ಡಿಸೈನರ್ ಜೆಸಿಯೊಕ್ ಯಿ (Jeseok Yi ) ಎಡಿಟ್‌ ಮಾಡಿದ್ದಾರೆ.

Jeseok Yi ಅವರ ಸಾಮಾಜಿಕ ಮಾಧ್ಯಮ ಖಾತೆಗಳನ್ನ ಪರಿಶೀಲಿಸಿದಾಗ ಮಾರ್ಚ್ 8, 2021 ರಂದು Jeseok Yi ಅವರ ಫೇಸ್‌ಬುಕ್ ಪುಟದಲ್ಲಿ ಅಪ್‌ಲೋಡ್ ಮಾಡಲಾದ ವೈರಲ್ ಚಿತ್ರ ನಮಗೆ ಲಭ್ಯವಾಗುತ್ತದೆ. ಶೀರ್ಷಿಕೆಯ ಪ್ರಕಾರ, ಈ ಚಿತ್ರವನ್ನು ಜನರಿಗೆ ಪರಿಸರದ ಬಗ್ಗೆ ಅರಿವು ಮೂಡಿಸುವ ಜಾಹೀರಾತಿನಂತೆ ತಯಾರಿಸಲಾಗಿದೆ. 

ಚಿತ್ರದ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆಯಲು, ಹಲವಾರು ಕೀವರ್ಡ್‌ಗಳ ಮೂಲಕ ಗೂಗಲ್‌ ಸರ್ಚ್‌ ಮಾಡಿದಾಗ ಸಮುದಾಯದ ಸಮಸ್ಯೆಗಳನ್ನು ಚರ್ಚಿಸುವ ವೆಬ್‌ಸೈಟ್ ಸ್ಕೇಪ್ಟಿಕ್ಸ (skeptics)ನಲ್ಲಿ ಈ ಚಿತ್ರವನ್ನು ಕಂಡುಕೊಂಡಿದ್ದೇವೆ. ಇಲ್ಲೂ ಈ ಚಿತ್ರದ ಬಗ್ಗೆ ಕಂಪ್ಯೂಟರ್ ಮೂಲಕ ಎಡಿಟ್ ಮಾಡಿ ಈ ಚಿತ್ರವನ್ನು ಸಿದ್ಧಪಡಿಸಲಾಗಿದೆ ಎಂದು ಹೇಳಿದ್ದಾರೆ. ಗೆಟ್ಟಿ ಇಮೇಜಸ್ ವೆಬ್‌ಸೈಟ್‌ನಲ್ಲಿರುವ ರಸ್ತೆಯ ಚಿತ್ರವನ್ನು ಬಳಸಿ ಎಡಿಟ್ ಮಾಡುವ ಮೂಲಕ ವೈರಲ್ ಚಿತ್ರವನ್ನು ಸಿದ್ಧಪಡಿಸಲಾಗಿದೆ ಎಂದು ಹೇಳಲಾಗಿದೆ. ಗೆಟ್ಟಿಯಲ್ಲಿರುವ ಚಿತ್ರವನ್ನು ಇಲ್ಲಿ ನೋಡಬಹುದು ಹಾಗೂ skeptics ಪೋಸ್ಟನ್ನು ಇಲ್ಲಿ ನೋಡಬಹುದು

ಇನ್ನು ಈ ವೈರಲ್‌ ಚಿತ್ರದ ಬಗ್ಗೆ ಸುವರ್ಣ ನ್ಯೂಸ್.ಕಾಮ್, ಪ್ರಸಿದ್ಧ ಫ್ಯಾಕ್ಟ್ ಜಾಲತಾಣ ವಿಶ್ವಾಸ್ ನ್ಯೂಸ್ ಮೂಲಕ ಈ ಡಿಸೈನರ್  Jeseok Yi ಸಂಪರ್ಕಿಸಿದ್ದು, ಈ ಕ್ಲೈಮ್‌ ಫೇಕ್‌ ಎಂದು ಅವರು ದೃಡಪಡಿಸಿದ್ದಾರೆ. ಅಲ್ಲದೇ ಈ ಚಿತ್ರವನ್ನು ಎಡಿಟ್ ಮಾಡಿ ಸೃಷ್ಟಿಸಲಾಗಿದೆ ಎಂದು ತಿಳಿಸಿದ್ದಾರೆ. ಪರಿಸರದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಈ ಚಿತ್ರವನ್ನು ಜಾಹೀರಾತಿನಂತೆ ಮಾಡಿದ್ದೇನೆ. ವಾಸ್ತವಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ನಮ್ಮ ಜೀವನಕ್ಕೆ ಮರಗಳು ಎಷ್ಟು ಮುಖ್ಯ ಎಂಬುದನ್ನು ಈ ಚಿತ್ರದ ಮೂಲಕ ಜನರಿಗೆ ಹೇಳಲು ಬಯಸುತ್ತೇನೆ. ಎಂದು Jeseok Yi ಹೇಳಿದ್ದಾರೆ. 

ಹೀಗಾಗಿ ಫ್ಯಾಕ್ಟ್‌ ಚೆಕ್‌ನಲ್ಲಿ ಈ ವೈರಲ್ ಪೋಸ್ಟ್ ನಕಲಿ ಎಂದು ತಿಳಿದುಬಂದಿದೆ. ಜನರಲ್ಲಿ ಜಾಗೃತಿ ಮೂಡಿಸಲು ಈ ಚಿತ್ರವನ್ನು ಮಾಡಲಾಗಿದೆ. ಆದರೆ ಜನರು ಅದನ್ನೇ ಸತ್ಯವೆಂದು ಪರಿಗಣಿಸಿ ವೈರಲ್ ಮಾಡಿದ್ದಾರೆ.

PREV
Read more Articles on
click me!

Recommended Stories

ಡೈಪರ್ ಬಳಸಿದರೆ ಮಕ್ಕಳ ಕಿಡ್ನಿ ಹಾಳಾಗುತ್ತಾ, ವೈರಲ್ ಆಗಿರೊ ಸುದ್ದಿಯಲ್ಲಿ ಸತ್ಯವೆಷ್ಟು?
ಯುವ ಜೋಡಿಯ 'ಆ 19 ನಿಮಿಷ'ದ MMS ಲೀಕ್​ ಆಯ್ತು! ಹಲ್​ಚಲ್​ ಸೃಷ್ಟಿಸಿರೋ ವಿಡಿಯೋದ ಅಸಲಿಯತ್ತೇನು?