ಮಳೆ ನಡುಗಿಸಿತು. ಭೂಮಿ ಕುಸಿದು ಬದುಕು ಬದಲಾಯಿತು. ಹಾಗಂತ ಕೊಡಗಿನ ಹೆಣ್ಮಕ್ಕಳು ಸುಮ್ಮನೆ ಕೂರಲಿಲ್ಲ. ಪ್ರಾಜೆಕ್ಟ್ ಕೂರ್ಗ್ ಯೋಜನೆಯಲ್ಲಿ ಒಂದಾದರು. ಕಷ್ಟ ಮರೆತು ಕೆಲಸ ಮಾಡಿದರು. ಕೊಡಗು ಫ್ಲೇವರ್ಸ್ ಎಂಬ ಹೆಸರಿನಲ್ಲಿ ಮಸಾಲೆ ಪದಾರ್ಥಗಳ ಉತ್ಪನ್ನ ತಯಾರಿಸಿದರು. ಆ ಮೂಲಕ ತಾವು ಯಾವುದಕ್ಕೂ ಸೋಲುವುದಿಲ್ಲ ಎಂದು ತೋರಿಸಿಕೊಟ್ಟಿದ್ದಾರೆ. ಅವರ ಕೈ ಹಿಡಿಯುವುದು ನಮ್ಮ ಜವಾಬ್ದಾರಿ.
ಮಳೆದ ಆಗಸ್ಟ್ ತಿಂಗಳಲ್ಲಿ ಮಂಜಿನ ನಗರಿ ಕೊಡಗು ಜಿಲ್ಲೆ ಪ್ರಕೃತಿ ವಿಕೋಪಕ್ಕೆ ತುತ್ತಾಗಿತ್ತು. ಇದರಿಂದ ಮನೆ, ಮಠ ಕಳೆದುಕೊಂಡಿದ್ದ ಹಲವು ಸಂತ್ರಸ್ತರಲ್ಲಿ ಕಾಲೂರು ಗ್ರಾಮವೂ ಒಂದು. ಇಲ್ಲಿನ ಮಹಿಳೆಯರು ಈಗ ಸ್ವಾವಲಂಬಿ ಜೀವನ ನಡೆಸಲು ಮುಂದಾಗಿದ್ದು, ಅದರ ಕಡೆ ದಾಪುಗಾಲು ಇಡುತ್ತಾ ಎಲ್ಲರಿಗೂ ಮಾದರಿಯಾಗಿದ್ದಾರೆ. ಮಹಿಳೆಯರೇ ಸೇರಿ ನಡೆಸುತ್ತಿರುವ ಈ ಅಭೂತಪೂರ್ವ ಕಾರ್ಯದಿಂದ ಉತ್ತಮ ರೀತಿಯಲ್ಲಿ ಆದಾಯ ಗಳಿಸುತ್ತಿದ್ದಾರೆ.
ಮಡಿಕೇರಿ ತಾಲೂಕಿನ ಕಾಲೂರು ಗ್ರಾಮದಲ್ಲಿ ಪ್ರಾಜೆಕ್ಟ್ ಕೂರ್ಗ್ ಮತ್ತು ಭಾರತೀಯ ವಿದ್ಯಾಭವನ ಸಹಯೋಗದಲ್ಲಿ ಸಂತ್ರಸ್ತ ಮಹಿಳೆಯರು ಯಶಸ್ವಿ ಕೌಶಲಾಭಿವೃದ್ಧಿ ಯೋಜನೆಯಲ್ಲಿ ತಯಾರಿಸಿದ ನಾನಾ ಮಸಾಲೆ ಪದಾರ್ಥಗಳ ‘ಕೂರ್ಗ್ ಫ್ಲೇವರ್ಸ್’ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ.
ಛಲಗಾತಿ ಮಹಿಳೆಯರು : ಆ 21ದಿನಗಳಲ್ಲಿ ಮಸಾಲೆ ಪದಾರ್ಥಗಳನ್ನು ಅತ್ಯುತ್ತಮ ಗುಣಮಟ್ಟದಿಂದ ತಯಾರಿಸುವುದನ್ನು ಕಲಿತ ಕಾಲೂರಿನ ಮಹಿಳೆಯರನ್ನು ಸಂತ್ರಸ್ತ ಮಹಿಳೆಯರೆಂದು ಕರೆಯುವ ಬದಲಿಗೆ ಛಲಗಾತಿ ಮಹಿಳೆಯರು ಎಂದೇ ಕರೆಯಬಹುದು. ಮಸಾಲೆ ಪದಾರ್ಥ, ಹೊಲಿಗೆ ತರಬೇತಿಯಲ್ಲಿ ಕಾಲೂರು ಗ್ರಾಮದ ಸುಮಾರು 63ಮಂದಿ ಮಹಿಳೆಯರು ಸಕ್ರಿಯರಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕಾಲೂರಿನ ಶಾಲೆಯ ಪುಟ್ಟ ಮೈದಾನವನ್ನೇ ಪುಣ್ಯ ಭೂಮಿಯಾಗಿಸಿ ಹಪ್ಪಳ ಒಣಗಿಸಿ, ಮಸಾಲೆ ಪದಾರ್ಥಗಳನ್ನು ತಯಾರಿಸಿ ಮಾರುಕಟ್ಟೆಗೆ ಅದನ್ನು ನೀಡುತ್ತಿದ್ದಾರೆ.
ಕಾಫಿ ಬಿಟ್ಟು ಬೇರೇನೂ ತಿಳಿದಿರಲಿಲ್ಲ: ಕಾಲೂರು ಗ್ರಾಮಸ್ಥರಿಗೆ ಕೃಷಿ ಹೊರತುಪಡಿಸಿದರೆ ಇತರೆ ಕಸಬು ಗೊತ್ತಿರಲಿಲ್ಲ. ಪ್ರಕೃತಿ ವಿಕೋಪದಿಂದ ಕಾಫಿ ತೋಟ, ಭತ್ತದ ಗದ್ದೆಯೂ ನಾಶವಾಗಿ, ಇಲ್ಲಿನ ಅಯ್ಯಪ್ಪ ಹಾಗೂ ಭಗವತಿ ದೇವಾಲಯಗಳಿ ಭಾರೀ ಪ್ರಮಾಣದಲ್ಲಿ ಹಾನಿಯಾಗಿತ್ತು. ಈ ಸಂದರ್ಭದಲ್ಲೂ ತಮ್ಮ ಊರನ್ನು ಬಿಡಲು ತಯಾರಿರದ ಇವರು, ಭಾರತೀಯ ವಿದ್ಯಾಭವನದ ಪ್ರಾಜೆಕ್ಟ್ ಕೂರ್ಗ್ ತಂಡ ಇವರಿಗೆ ಹೊಲಿಗೆ ತರಬೇತಿ ಹಾಗೂ ಮಸಾಲೆ ತಯಾರಿಕೆ ಬಗ್ಗೆ ತಜ್ಞರಿಂದ ತರಬೇತಿ ನೀಡಲಾಯಿತು. ತರಬೇತಿ ಪಡೆದ ಸಂತ್ರಸ್ತ ಮಹಿಳೆಯರು ಇಂದು ಸ್ವಾವಲಂಭಿ ಬದುಕು ಕಟ್ಟಿಕೊಳ್ಳುವಂತೆ ಮಾಡಿದೆ.
20 ಸೆಂಟ್ ಜಾಗ ದಾನ: ಕಾಲೂರು ಗ್ರಾಮದ ಸಂತ್ರಸ್ತ ಮಹಿಳೆಯರ ಆಹಾರ ಪದಾರ್ಥ ತಯಾರಿಕಾ ಘಟಕಕ್ಕೆ ಕಾಲೂರು ಗ್ರಾಮದ ಕಾರೇರ ಕುಟುಂಬಸ್ಥರು ತಮ್ಮ ಕುಟುಂಬಕ್ಕೆ ಸೇರಿದ 20 ಸೆಂಟ್ ಜಾಗವನ್ನು ನೀಡಲು ಮುಂದಾಗಿದ್ದಾರೆ.
ಕಾಲೂರಿನಲ್ಲಿ ಕೇವಲ 21 ದಿನಗಳ ಅಲ್ಪಾವಧಿಯಲ್ಲಿ ಸಂತ್ರಸ್ಥ ಮಹಿಳೆಯರು 11 ರೀತಿಯ ಮಸಾಲೆ ಪದಾರ್ಥ ತಯಾರಿಸುವ ಮೂಲಕ ಆಹಾರ ತಯಾರಿಕಾ ರಂಗದಲ್ಲಿಯೇ ಹೊಸದೊಂದು ಚಮತ್ಕಾರ ತೋರಿದ್ದಾರೆ. ಮುಂದಿನ ದಿನಗಳಲ್ಲಿ ಕಾಲೂರು ಮಹಿಳೆಯರು ತಯಾರಿಸಿದ ಕೂರ್ಗ್ ಫ್ಲೇವರ್ಸ್ ಮಸಾಲೆ ಪದಾರ್ಥಗಳನ್ನು ಆಧುನಿಕ ಮಾರುಕಟ್ಟೆ ಜಾಲದಲ್ಲಿ ದೇಶ ವಿದೇಶಗಳಿಗೂ ತಲುಪಿಸುವ ಸಾಧ್ಯತೆ ಇದೆ. - ಬಾಲಾಜಿ ಕಶ್ಯಪ್ ಪ್ರಾಜೆಕ್ಟ್ ಕೂರ್ಗ್ ಸಂಚಾಲಕ
ಪ್ರಾಜೆಕ್ಟ್ ಕೂರ್ಗ್‌ನಿಂದ ಭತ್ಯೆ: ಮಸಾಲೆ ತಯಾರಿಕೆಯಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರಿಗೆ ಆರು ತಿಂಗಳ ವರೆಗೆ 2 ಸಾವಿರ ರುಪಾಯಿ ಭತ್ಯೆ ನೀಡಲು ಪ್ರಾಜೆಕ್ಟ್ ಕೂರ್ಗ್ ಮುಂದಾಗಿದೆ. ಇವರು ತಯಾರಿಸುವ ಪದಾರ್ಥಗಳನ್ನು ವೆಬ್‌ಸೈಟ್‌ನಲ್ಲಿ ಮಾರಾಟ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಮಡಿಕೇರಿಯ ಎಲ್ಲಾ ಮಳಿಗೆಗಳಲ್ಲಿ ಈ ಉತ್ಪನ್ನಗಳು ಮಾರಾಟವಾಗುತ್ತಿದೆ. ಮುಂದಿನ ದಿನಗಳಲ್ಲಿ ಮೊಬೈಲ್ ಸೇಲ್ಸ್ ವ್ಯಾನ್‌ಗಳಲ್ಲಿ ಮಾರಾಟ ಮಾಡಲು ಸಿದ್ಧತೆ ಮಾಡಲಾಗುತ್ತಿದೆ.
ಸಂತ್ರಸ್ತರಿಗೆ ಹೊಲಿಗೆ ತರಬೇತಿ: ಕಾಫಿ ತೋಟ ಕಳೆದುಕೊಂಡಿದ್ದ ಇಲ್ಲಿನ ಗ್ರಾಮಸ್ಥರು, ತಮ್ಮ ಕಾಲ ಮೇಲೆ ನಿಲ್ಲಬೇಕೆಂದು ಪ್ರಾಜೆಕ್ಟ್ ಕೂರ್ಗ್ ಸಂಚಾಲ ಕರಾದ ಬಾಲಾಜಿ ಕಾಶ್ಯಪ್ ದಾನಿಗಳಿಂದ ಸಹಕಾರ ಪಡೆದು ಮೊದಲು 26 ಮಂದಿಗೆ ಹೊಲಿಗೆ ತರಬೇತಿ ಪಡೆಯುವಂತೆ ಮಾಡಿದ್ದಾರೆ. ಇದೀಗ 2ನೇ ಘಟಕವೂ ಆರಂಭವಾಗಿದ್ದು, ಒಟ್ಟು 46 ಹೊಲಿಗೆ ಯಂತ್ರಗಳಲ್ಲಿ ಸಂತ್ರಸ್ತ ಮಹಿಳೆಯರಿಗೆ ತರಬೇತಿ ನೀಡಲಾಗುತ್ತಿದೆ. ಕಾಲೂರಿನ 63ಮಹಿಳೆಯರು ಹೊಲಿಗೆ ತರಬೇತಿ, ಮಸಾಲೆ ತಯಾರಿಕೆ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಇದಕ್ಕೆ ಗ್ರಾಮಸ್ಥ ಸಾಹಿತಿ ನಾಗೇಶ್ ಕಾಲೂರು ಬೆನ್ನೆಲುಬಾಗಿ ನಿಂತಿದ್ದಾರೆ.
ತಯಾರಾಗುವ ಪದಾರ್ಥಗಳು: ಕಾಲೂರಿನ ಸಂತ್ರಸ್ತ ಮಹಿಳೆಯರು ಬಿರಿಯಾನಿ ಮಸಾಲೆ, ಪೋರ್ಕ್ ಮಸಾಲೆ, ಹರ್ಬಲ್ ಜ್ಯೂಸ್, ಚಟ್ನಿ ಪುಡಿ, ರಸಂ ಪೌಡರ್, ಹಪ್ಪಳ, ಚಿಕನ್ ಮಿಕ್ಸ್ ಸೇರಿದಂತೆ 11 ಬಗೆಯ ಮಸಾಲೆ ಪದಾರ್ಥಗಳು ಸಿದ್ಧಪಡಿಸುತ್ತಿದ್ದಾರೆ.
ಪ್ರಕೃತಿ ವಿಕೋಪ ನಮ್ಮ ಊರು ತುತ್ತಾಗುತ್ತದೆ ಎಂದು ಕನಸಲ್ಲೂ ಅಂದುಕೊಂಡಿರಲಿಲ್ಲ. ಇದೀಗ ಭಾರತೀಯ ವಿದ್ಯಾಭವನದ ಪ್ರಾಜೆಕ್ಟ್ ಕೂರ್ಗ್ ನೇತೃತ್ವದಲ್ಲಿ ನಾವು ಮಸಾಲೆ ಪದಾರ್ಥ ತಯಾರಿಕೆ ಕಲಿತಿದ್ದೇವೆ. ಇದರಿಂದ ಆಹಾರ ಪಡೆಯುವ ನಿರೀಕ್ಷೆಯಲ್ಲಿದ್ದೇವೆ. ಅಲ್ಲದೆ ಇದಿನ್ನೂ ಆರಂಭವಷ್ಟೆ. ಇದೀಗ ಜನ ಮೆಚ್ಚುಗೆ ಪಡೆದಿರುವ ನಾವು ಮಾಡಿರುವ ಪದಾರ್ಥಗಳು, ಬೇಡಿಕೆಗಳೂ ಹೆಚ್ಚಾಗುತ್ತಿದೆ. ಇನ್ನು ಮುಂದೆ ಬೃಹತ್ ಪ್ರಮಾಣದಲ್ಲಿ ಆಹಾರ ಪದಾರ್ಥತಯಾರಿಸುವ ಕಾರ್ಯ ಆರಂಭವಾಗಲಿದೆ.- ಜಮುನಾ ಸಂತ್ರಸ್ತ ಮಹಿಳೆ