ಯಾರೊಂದಿಗೆ ನೀ ನಡೆಯಬೇಕು, ಯಾರೊಂದಿಗೆ ನೀ ಬಾಳಬೇಕು ಎಂಬುದು ನಿನ್ನನ್ನು ಸೃಷ್ಟಿಸಿದ ಆ ದೇವರ ಶಾಸನ! ಪಾಲಿಗೆ ಬಂದ ಅನುಬಂಧಗಳನ್ನು ನಂಬಿ ಆನಂದದಿಂದ ಬದುಕುವುದೇ ಜೀವನ. ಇದು ಸಮಾಜದ ವಾಸ್ತವ. ಹಾಗೆಯೇ ‘ಕವಚ’ ಚಿತ್ರದ ಅಂತಿಮ ತಿರುಳು ಕೂಡ. ಚಿತ್ರದ ಕೊನೆಯ ಸನ್ನಿವೇಶ ಆ ಮಾತನ್ನು ಮತ್ತಷ್ಟು ಸಾಕ್ಷೀಕರಿಸುತ್ತದೆ. ಹೊಸ ಬದುಕು ಅರಸಿ ಅವರು ಸಾಗುತ್ತಾರೆ, ಚಿತ್ರ ಮುಗಿಯುತ್ತದೆ. ಪ್ರೇಕ್ಷಕನಲ್ಲಿ ಭಾವುಕತೆ ತುಂಬುತ್ತದೆ!
ಕಮರ್ಷಿಯಲ್ ಚಿತ್ರವೊಂದು ಹೊಡಿ, ಬಡಿ, ಕಡಿ ಎನ್ನುವ ಯಾವುದೇ ಸಿದ್ಧಸೂತ್ರಗಳಿಲ್ಲದೆ ಮನುಷ್ಯ ಸಂಬಂಧಗಳ ಭಾವುಕತೆಯಲ್ಲೂ ಪ್ರೇಕ್ಷಕನಲ್ಲಿ ಕಂಪನ ಹುಟ್ಟಿಸಬಲ್ಲದು ಎನ್ನುವುದಕ್ಕೆ ಈ ಚಿತ್ರ ಸಾಕ್ಷಿ. ಕವಚ ಈ ಕಾರಣದಿಂದ ಪ್ರೇಕ್ಷಕರ ಮನ ತಣಿಸುವ, ಕಾಡಿಸುವ, ಭಾವುಕತೆಗೆ ಒಳಗಾಗುವಂತೆ ಮಾಡುವಂತಹ ಪ್ರಯೋಗಾತ್ಮಕ ಸಿನಿಮಾ. ಮಲಯಾಳಂನಲ್ಲಿ ಬಂದ ‘ಒಪ್ಪಂ’ ಚಿತ್ರದ ರಿಮೇಕ್ ಇದು. ರಿಮೇಕ್ ಒಂದು ರೀತಿ ಸುಲಭ, ಮತ್ತೊಂದು ಬಗೆಯಲ್ಲಿ ಕಷ್ಟ. ಅವೆರಡರ ನಡುವಿನ ಕತ್ತಿ ಅಲುಗಿನ ಮೇಲೆ ನಿರ್ದೇಶಕರು ಈ ಚಿತ್ರ ನಿರ್ದೇಶಿಸಿದ್ದಾರೆ. ಇಲ್ಲಿನ ನೇಟಿವಿಟಿಗೆ ತಕ್ಕಂತೆ ಅಚ್ಚುಕಟ್ಟಾಗಿ ನಿರೂಪಿಸಿರುವುದು ವಿಶೇಷ.
ಇದೊಂದು ಕ್ರೈಮ್ ಥ್ರಿಲ್ಲರ್ ಕತೆ. ನ್ಯಾಯದ ವಿರುದ್ಧವಾದ ಒಂದು ತೀರ್ಪು, ಇದರಿಂದ ಎದುರಾಗುವ ಭೀಕರ ದುರಂತ. ಅನ್ಯಾಯಕ್ಕೊಳಗಾದ ವ್ಯಕ್ತಿ ಎಸಗುವ ಸೇಡಿನ ಸರಣಿ ಕೊಲೆಗಳು, ನ್ಯಾಯ ನೀಡಬೇಕಾದ ಸ್ಥಾನದಲ್ಲಿ ಕೂತು ತಪ್ಪು ತೀರ್ಪು ನೀಡಿದವನ ಪಾಪ ನಿವೇದನೆ, ಕಣ್ಣಿಲ್ಲದಿದ್ದರೂ ಮೈಯೆಲ್ಲಾ ಕಣ್ಣಾಗಿಸಿಕೊಂಡು ತನ್ನ ಸುತ್ತಲಿನವರನ್ನು ಕಾಯುವ ಕಥಾ ನಾಯಕ ಜಯರಾಮ್(ಶಿವರಾಜ್ ಕುಮಾರ್), ಬಾಂಧವ್ಯಕ್ಕಿಂತ ಸ್ವಾರ್ಥ ಮುಖ್ಯ ಎಂದು ಹೊರಡುವ ಮನೆಮಂದಿ, ಕಣ್ಣು ಕಾಣದ ಜಯರಾಮ್‌ಗೆ ಕಾವಲಾಗಿ ನಿಲ್ಲುವ ನಂಬಿಕಸ್ಥರು, ಒತ್ತಡದಿಂದ ಪಾರಾಗಲು ಕೊಲೆ ಪ್ರಕರಣಗಳನ್ನು ಕುರುಡ ಜಯರಾಮ್ ತಲೆಗೆ ಕಟ್ಟಲು ಹುನ್ನಾರ ನಡೆಸುವ ಪೊಲೀಸರು... ಇವೆಲ್ಲವುಗಳ ಫ್ಯಾಮಿಲಿ, ಸೆಂಟಿಮೆಂಟ್, ಥ್ರಿಲ್ಲಿಂಗ್ ಅಂಶಗಳ ಒಟ್ಟು ಕತೆಯೇ ಕವಚ.
ಶಿವರಾಜ್ ಕುಮಾರ್ ಅಂದ್ರೆ ಅಪ್ಪಟ ಕಲಾವಿದ. ಮಾಸ್ ಗೂ ಸೈ, ಕ್ಲಾಸ್‌ಗೂ ಸೈ. ಇದೇ ಮೊದಲು ರಿಮೇಕ್ ಚಿತ್ರ ಜತೆಗೆ ಅಂಧನ ಪಾತ್ರಕ್ಕೆ ಅವರು ಬಣ್ಣ ಹಚ್ಚಿದ್ದಕ್ಕೆ ಸಾಕಷ್ಟು ಕುತೂಹಲವಿತ್ತು. ಮಾಸ್ ಹೀರೋ ಎನ್ನುವ ಇಮೇಜ್ ಪಕ್ಕಕ್ಕೆ ಇಟ್ಟು ಪ್ರಯೋಗಾತ್ಮಕ ಪಾತ್ರದಲ್ಲಿ ಅಮೋಘವಾಗಿ ಅಭಿನಯಿಸಿದ್ದಾರೆ. ತಣ್ಣಗಿದ್ದರೂ ಕುಳಿತಲ್ಲೇ ರೊಚ್ಚಿಗೆಬ್ಬಿಸುವ ಡೈಲಾಗ್ಸ್, ಮೈ ಜುಮ್ಮೆನ್ನಿಸುವ ಫೈಟ್ಸ್‌ಗೆ ಶೀಳ್ಳೆ, ಕೇಕೆಗಳು ಮುಗಿಲು ಮುಟ್ಟುತ್ತವೆ. ವಿಲನ್ ಆಗಿ ವಸಿಷ್ಠ ಸಿಂಹ, ಪೊಲೀಸ್ ಅಧಿಕಾರಿಗಳಾಗಿ ರವಿಕಾಳೆ, ಇಶಾ ಕೊಪ್ಪಿಕರ್, ರಾಜೇಶ್ ನಟರಂಗ, ಕೃಷ್ಣ ಅವರದ್ದು ಖಡಕ್ ಅಭಿನಯ. ಮುಗ್ಧ ಹುಡುಗಿಯ ಡಿ ಗ್ಲಾಮ್ ಪಾತ್ರದಲ್ಲಿ ಕೃತಿಕಾ ಜಯಕುಮಾರ್ ಇಷ್ಟವಾಗುತ್ತಾರೆ. ಅಪ್ಪ-ಮಗಳ ಸಂಬಂಧದ ಹಾಡಿನಲ್ಲಿ ಬೇಬಿ ಮೀನಾಕ್ಷಿ ಮನ ಕಲುಕುವಂತೆ ಮಾಡುತ್ತಾಳೆ.
ನಾಗೇಂದ್ರ ಪ್ರಸಾದ್ ರಚನೆಯ ಆ ಹಾಡಿಗೆ ಕಲ್ಲು ಹೃದಯವನ್ನು ಕರಗಿಸುವ ಶಕ್ತಿಯಿದೆ. . ಉಳಿದ ಹಾಡುಗಳು ನೋಡುಗನ ಮನಸ್ಸಿನ ಮೂಲೆ ತಟ್ಟುತ್ತವೆ. ಹಿನ್ನೆಲೆ ಸಂಗೀತದ ಏರುಪೇರು ಸಂಭಾಷಣೆಗೆ ಕೊಂಚ ಅಡ್ಡಿ ಆಗಿದೆ. ವಾಸು ನಿರ್ದೇಶನ ಕ್ಷಣಕ್ಷಣಕ್ಕೂ ರೋಚಕ ತಿರುವುಗಳೊಂದಿಗೆ ಸಾಗುತ್ತದೆ. ಅಷ್ಟೇ, ರೋಚಕತೆಯಲ್ಲಿ ಕೊನೆಯಾಗುತ್ತದೆ. ತುಸು ಕ್ರೌರ್ಯ ಹೆಚ್ಚೆನ್ನಿಸಿದ್ದರೂ, ಕ್ಲೈಮ್ಯಾಕ್ಸ್ ಅದೆಲ್ಲವನ್ನು ಮನ್ನಿಸಿ ಬಿಡುತ್ತದೆ. ‘ಐಯಾಮ್ ಬ್ಲೈಂಡ್, ಆದ್ರೆ ವೀಕ್
ಅಲ್ಲ, ನನಗಾಗುವ ನೋವು ಸಹಿಸುತ್ತೇನೆ, ಆದ್ರೆ ನನ್ನವರಿಗೆ ನೋವಾದ್ರೆ ಸಹಿಸುವುದಿಲ್ಲ ಎನ್ನುವಂತಹ ಪಾರ್ಚ್ ಟಚಿಂಗ್ ಡೈಲಾಗ್ ಜತೆಗೆ ಕ್ರೌರ್ಯ ತುಂಬಿಕೊಂಡ ತಂದೆಯೊಬ್ಬ, ಕಣ್ಣೆದುರೆ ಇರುವ ಮಗಳನ್ನು ನೋಡದೆ ಹೋಗಿದ್ದು ನೋಡುಗನ ಕಣ್ಣಲ್ಲಿ ತೀವ್ರವಾಗಿ ಕಾಡುತ್ತದೆ.