ಇದು ಬರೀ ಸಿನಿಮಾ ಕತೆಯಲ್ಲ, ಉತ್ತರ ಕರ್ನಾಟಕದ ಹುಡುಗ ಜೋನಾಥನ್ ಎಂಬಾತನ ನಿಜ ಜೀವನದ ರೋಚಕ ಕತೆ. ತೊಂಬತ್ತರ ದಶಕದಲ್ಲಿ ನಡೆದಿದ್ದ ಸತ್ಯಘಟನೆ ಅದು. ಕರ್ನಾಟಕ ಪೊಲೀಸರಿಗೆ ದೊಡ್ಡ ಸವಾಲು ಆಗಿ ಪರಿಣಿಮಿಸಿದ್ದ ಪ್ರಕರಣವೂ ಹೌದು. ಕೊನೆಗೂ ಅದು ಲವ್ ಕುಮಾರ್ ಎನ್ನುವ ದಕ್ಷ ಪೊಲೀಸ್ ಅಧಿಕಾರಿಯ ಸಾಹಸದಿಂದ ಹಲವು ರೋಚಕ ತಿರುವುಗಳಲ್ಲಿ ಸುಖಾಂತ್ಯ ಕಂಡಿದ್ದು ಇತಿಹಾಸ. ಅದನ್ನೇ ಈಗ ಸಿನಿಮ್ಯಾಟಿಕ್ ರೂಪಕ್ಕೆ ಒಗ್ಗಿಸಿ ತೆರೆಗೆ ತಂದಿದ್ದಾರೆ ನಿರ್ದೇಶಕ ರಘುರಾಮ್.
ದೇಶಾದ್ರಿ ಹೊಸ್ಮನೆ
ಐದು ವರ್ಷ ಇದ್ದಾಗ ರೈಲು ಹತ್ತಿ ನಾಪತ್ತೆಯಾದವನು ಬೆಂಗಳೂರಿಗೆ ಬಂದು ಶಾರದಾ ಅನಾಥಶ್ರಮ ಸೇರಿದ್ದ. ಅಲ್ಲಿಂದ ಮಕ್ಕಳಿಲ್ಲದ ಓರ್ವ ದಂಪತಿಗೆ ದತ್ತು ಪುತ್ರನಾಗಿ ಪರದೇಶ ಪಾಲಾದ. ಅಲ್ಲಿಯೇ ಬೆಳೆದು ದೊಡ್ಡವನಾದ. ಹೈಟೆಕ್ ಸಿಟಿಯೊಂದರಲ್ಲಿ ಆತ ದೊಡ್ಡ ಉದ್ಯಮಿಯಾದ. ಆತನಿಗೆ ಅಲ್ಲಿ ನೆಮ್ಮದಿ ಇಲ್ಲ. ತಾನು ಎಲ್ಲಿಂದಲೋ ಬಂದವನು, ಹಳ್ಳಿ , ರೈಲ್ವೆ ಸ್ಟೇಷನ್, ಗಂಟೆ ಶಬ್ದ, ಹನುಮಪ್ಪನ ಗುಡಿ, ಹತ್ತಿ ಹೊಲ, ಶಾಲೆಗೆ ಹೋಗುವಂತೆ ಮುದ್ದು ಮಾಡುತ್ತಿದ್ದ ಅಮ್ಮ...ಆಗಾಗ ಆತನ ಸ್ಮೃತಿ ಪಟಲ ಕದಡಿ, ಕಂಗಲಾಗುತ್ತದೆ...ಆ ಸಮಸ್ಯೆಗೆ ಪರಿಹಾರ ಹುಡುಕುತ್ತಾ ಬೆಂಗಳೂರಿಗೆ ಬರುತ್ತಾನೆ. ಆತನ ಹೆಸರು ನಿಶ್ಚಯ್. ಆತ ಈ ಚಿತ್ರದ ಕಥಾ ನಾಯಕ . ನಿಜ ಜೀವನದಲ್ಲಿ ಆತ ಜೋನಾಥನ್.
ನಿಜ ಘಟನೆಗೆ ತಕ್ಕಂತೆಯೇ ಚಿತ್ರದ ಕತೆ ವಿದೇಶದಿಂದಲೇ ತೆರೆದುಕೊಳ್ಳುತ್ತೆ. ರೋಮ್ ನೆನಪಿಸುವಂತಹ ಆ ದೊಡ್ಡ ಸಿಟಿಯ ಸೌಂದರ್ಯವನ್ನು ಕಣ್ಮನ ಸೆಳೆಯುವಂತೆ ತೆರೆಯಲ್ಲಿ ತೋರಿಸಿ, ಕಣ್ಣು ತಂಪಾಗುವಂತೆ ಮಾಡುವ ನಿರ್ದೇಶಕರು, ಆನಂತರ ಮನ ಮಿಡಿಯುವ ರೋಚಕ ಕತೆಯ ಪ್ರವೇಶಕ್ಕೆ ಮುನ್ನುಡಿ ಬರೆಯುತ್ತಾರೆ. ಸುಖಾಸೀನ ಜೀವನದಲ್ಲೂ ಪ್ರತಿ ವ್ಯಕ್ತಿಯ ಮೂಲ ಬೇರುಗಳು ಹೇಗೆಲ್ಲ ತಲ್ಲಣ ಹುಟ್ಟಿಸುತ್ತವೆ, ತನ್ನೂರು, ತನ್ನವರಿಗಾಗಿ ಹೇಗೆಲ್ ಚಟಪಡಿಸುತ್ತವೆ ಎನ್ನುವುದನ್ನು ಕಥಾ ನಾಯಕ ನಿಶ್ಚಯ್ ಪಾತ್ರದೊಂದಿಗೆ ಮನೋಜ್ಞವಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು. ಇಂತಹ ನೈಜ ಕತೆಗಳಿಗೆ ಸಿನಿಮಾ ಸ್ಪರ್ಷ ನೀಡುವುದು ಬಲು ಕಷ್ಟ. ಆದರೂ, ಮೂಲ ಕತೆಯೊಳಗೆ ಪರಕಾಯ ಪ್ರವೇಶ ಮಾಡಿ, ಅದರ ಭಾವಗಳನ್ನು ಹಸಿ ಹಸಿಯಾಗಿ ತೆರೆಗೆ ತೆರೆದಿಟ್ಟು, ಪ್ರೇಕ್ಷಕರನ್ನು ಭಾವುಕಗೊಳಿಸುವಲ್ಲಿ ನಿರ್ದೇಶಕ ರಘು ರಾಮ್ ಗೆದ್ದಿರುವುದು ವಿಶೇಷ.
ತನ್ನೂರು, ತನ್ನವರನ್ನು ಕಾಣುವ ಕಥಾ ನಾಯಕನ ಉತ್ಕಟ ಹಂಬಲದೊಂದಿಗೆ ಕತೆ ಬೆಂಗಳೂರಿಗೆ ಬಂದು, ಅಲ್ಲಿಂದ ಕರ್ನಾಟಕದ ಊರು, ಕೇರಿ, ಗಲ್ಲಿಗಳ ನಡುವೆ ಕಲ್ಪಿಸಿಕೊಳ್ಳಲಾಗದಂಥಾ ತಿರುವುಗಳೊಂದಿಗೆ ಪಯಣ ಆರಂಭಿಸುತ್ತೆ. ಆ ಯಾನವೇ ರೋಚಕವಾಗಿದೆ.ಅಲ್ಲಿ ತಮಾಷೆಯಿದೆ, ಗಂಭೀರತೆಯಿದೆ, ತಾಯಿ ಹೆಸರಲ್ಲೂ ಹಣದಾಸೆಗೆ ಮೋಸ ಮಾಡುವ ಮನಸುಗಳಿವೆ, ಭವಿಷ್ಯ ಹೇಳುವವನ ಬೂಟಾಟಿಕೆಯ ಮುಖವಾಡವಿದೆ. ಆ ಪಯಣದಲ್ಲಿ ಹೀಗೆಲ್ಲ ಹಲವು ವಾಸ್ತವಗಳನ್ನು ತೆರೆದಿಡುತ್ತಾ ಸಾಗುವ ಈ ಪಯಣ ಬೋರ್ ಆಗದಂತೆ ಮಾಡಲು ಹೃದಯ ತಟ್ಟುವ ಮಾತುಗಳಿವೆ. ತಾಯಿ ಸೆಂಟಿಮೆಂಟ್‌ನ ಹಾಡುಗಳಿವೆ. ಮನ ಸೆಳೆಯುವ ಸುಂದರ ಜಾಗಗಳಿವೆ. ಆ ವಿಚಾರದಲ್ಲಿ ಚಿತ್ರದ ಸಂಬಾಷಣೆ, ಸಂಗೀತ,ಛಾಯಾಗ್ರಹಣ ಚಿತ್ರದ ಓಘಕ್ಕೆ ಸಾಕಷ್ಟುಸಾಥ್ ನೀಡಿವೆ.ಮೂಲ ಕತೆಗೆ ನಿರ್ದೇಶಕರು ಹೀಗೆಲ್ಲ ಸಿನಿಮ್ಯಾಟಿಕ್ ಟಚ್ ನೀಡಿದ್ದು ತೆರೆ ಮೇಲೆ ಕಾಣುತ್ತದೆ. ಇವೆಲ್ಲದರ ಜತೆಗೆ ಇಲ್ಲಿ ಪ್ರಧಾನವಾಗಿ ಕಾಡಿಸುವುದು ತಾಯಿ-ಮಗನ ಸೆಂಟಿಮೆಂಟ್, ತನ್ನವರು ಹಾಗೂ ತನ್ನೂರಿನ್ನು ಕಾಣುವ ಕಥಾ ನಾಯಕನ ತುಡಿತ. ಪ್ರೇಕ್ಷಕ ಚಿತ್ರ ನೋಡುತ್ತಿದ್ದೇವೆ ಎನ್ನುವ ಬದಲಿಗೆ ಇವೆಲ್ಲ ಕತೆಯ ಭಾವಗಳಲ್ಲಿ ಕಳೆದು ಹೋಗುವಂತೆ ಮಾಡುವುದು ಚಿತ್ರದ ಪ್ಲಸ್ ಪಾಯಿಂಟ್.
ಮಿಸ್ಸಿಂಗ್ ಬಾಯ್ ಬೆನ್ನು ತಟ್ಟಿದ ಕಿಚ್ಚ, ನಾನಿ!
ಕಲಾವಿದರ ಅಭಿನಯನಕ್ಕೆ ಬಂದರೆ, ಮಿಸ್ಸಿಂಗ್ ಬಾಯ್ ನಿಶ್ಚಯ್ ಆಗಿ ಗುರುನಂದನ್, ಇನ್ಸಸ್ಪೆಕ್ಟರ್ ಲವ್ ಕುಮಾರ್ ಆಗಿ ರಂಗಾಯಣ ರಘು, ನಿಶ್ಚಯ್ ತಾಯಿ ಶಾಂತವ್ವ ಆಗಿ ಭಾಗೀರಥಿ ಬಾಯಿ ಕದಂ ಚಿತ್ರದ ಹೈಲೈಟ್ಸ್. ಕಥಾ ನಾಯಕ ಗುರುನಂದನ್. ಅವರಿಗೆ ದೊಡ್ಡ ಜನಪ್ರಿಯತೆ ತಂದು ಕೊಡಬಲ್ಲ ಪಾತ್ರವಿದು. ಹಲವು ಬಗೆಯ ಶೇಡ್‌ಗಳಲ್ಲಿ ತುಂಬಾ ಆಪ್ತವಾಗಿದೆ ಅವರ ನಟನೆ. ಸೆಂಟಿಮೆಂಟ್ ದೃಶ್ಯಗಳಲ್ಲಿ ಪ್ರೇಕ್ಷಕರ ಹಾರ್ಟ್ ಟಚ್ ಮಾಡುತ್ತಾರೆ. ಹಾಸ್ಯದಲ್ಲೇ ಕಳೆದುಹೋಗುತ್ತಿದ್ದ ರಂಗಾಯಣ ರಘು ಅವರಿಗೆ ಚಿತ್ರದಲ್ಲಿನ ಲವ್ ಕುಮಾರ್ ಪಾತ್ರ, ಅವರೊಳಗಿನ ನಟನೆಯ ಇನ್ನೊಂದು ಮುಖ ತೋರಿಸಿದೆ. ಗಂಭೀರ ಪಾತ್ರಗಳಿಗೆ ಮರು ಜೀವ ಕೊಟ್ಟಂತೆ ಕಾಣುತ್ತದೆ. ಅವರ ಹಾಗೆ ಟಾಕ್ಸಿ ಚಾಲಕ ಬೋರೇಗೌಡನಾಗಿ ರವಿಶಂಕರ್ ಗೌಡ ಅಭಿನಯ ಚಿತ್ರಕ್ಕೆ ಜೀವ ಕಳೆ ತಂದು ಕೊಟ್ಟಿದೆ. ಕಡೆಯ ಒಂದೆರಡು ದೃಶ್ಯಗಳಲ್ಲಿ ಬರುವ ನಿಶ್ಚಯ್ ತಾಯಿಯಾಗಿ ಕಾಣಿಸಿಕೊಳ್ಳುವ ಭಾಗೀರಥಿ ಬಾಯಿ ಕದಂ, ನೋಡುಗನ ಕಣ್ಣಲ್ಲಿ ನೀರುಕ್ಕುವ ಹಾಗೆ ನಟಿಸಿದ್ದಾರೆ.
ಮಗನಿಗಾಗಿ ಹಂಬಲಿಸಿದ್ದ ನಿಜ ತಾಯಿಯ ನೋವನ್ನು ಆ ಪಾತ್ರಕ್ಕೆ ಕಲಾವಿದೆ ಎನ್ನುವುದಕ್ಕಿಂತ ನಿಜ ತಾಯಿಯಾಗಿ ಧಾರೆ ಎರೆದಂತಿದೆ ಭಾಗೀರಥಿ ಅವರ ನಟನೆ. ಉಳಿದಂತೆ ನಾಯಕಿ ಅರ್ಚನಾ ಜಯ ಕೃಷ್ಣನ್, ಸುಮಿತ್ರಾಮ್ಮ, ಜೈ ಜಗದೀಶ್, ವಿಜಯಲಕ್ಷ್ಮೇ ಸಿಂಗ್ ಸೇರಿದಂತೆ ಅಲ್ಲಿನ ಪಾತ್ರಗಳಿಗೆ ಬಣ್ಣ ಹಚ್ಚಿರುವವರೆಲ್ಲ ಶ್ರದ್ಧೆಯಿಂದ ನಟಿಸಿದ್ದಾರೆ. ಪೊಲೀಸ್ ಇಲಾಖೆಯೊಳಗೂ ಮಾನವೀಯತೆಯೆಂಬುದನ್ನು ಲವ್ ಕುಮಾರ್ ಪಾತ್ರದೊಂದಿಗೆ ನೋಡುಗರಿಗೆ ತಟ್ಟುವ ಹಾಗೆ ಚಿತ್ರವು ಅನಾವರಣಗೊಳಿಸುತ್ತೆ. ಹಾಗೆಯೇ ಆಸ್ತಿ, ಅಂತಸ್ತು, ಐಷಾರಾಮಿ ಜೀವನದ ನಡುವೆಯೂ ಒರ್ವ ವ್ಯಕ್ತಿಯ ತಾಯಿ ಬೇರುಗಳಿಗೆ ಎಷ್ಟೆಲ್ಲ ಮಹತ್ವವಿದೆ. ತಾಯಿ ಅಂದ್ರೇನು, ನಾನಾ ಕಾರಣಕ್ಕೆ ನಾಪತ್ತೆ ಆಗುವ ಮಕ್ಕಳ ಬದುಕಿನ ಸುತ್ತ ಏನೆಲ್ಲ ಬಾಹುಗಳಿರುತ್ತವೆ, ಅವರ ಕನಸುಗಳು ಹೇಗೆಲ್ಲ ಕಮರಿ ಹೋಗುವ ಸಾಧ್ಯತೆಗಳಿರುತ್ತವೆ ಎನ್ನುವುದನ್ನು ಚಿತ್ರ ಕಣ್ಣಿಗೆ ಕಟ್ಟಿದಂತೆ ತಂದು ನಿಲ್ಲಿಸುತ್ತದೆ. ಮೇಕಿಂಗ್‌ನಲ್ಲಿ ಒಂದಷ್ಟುಕೊರತೆಗಳನ್ನು ಮಾಪಿ ಮಾಡುವುದಾದರೆ ನಿಮ್ಮೊಳಗೂ ತಲ್ಲಣ ಹುಟ್ಟಿಸುವ ಕತೆಯಿದು.
ಚಿತ್ರ: ಮಿಸ್ಸಿಂಗ್ ಬಾಯ್
ತಾರಾಗಣ: ಗುರುನಂದನ್, ಅರ್ಚನಾ ಜಯಕೃಷ್ಣನ್, ರಂಗಾಯಣ ರಘು, ರವಿಶಂಕರ ಗೌಡ, ಭಾಗೀರಥಿ ಬಾಯಿ ಕದಂ, ಶೋಭ ರಾಜ್, ಜೈ ಜಗದೀಶ್, ವಿಜಯಲಕ್ಷ್ಮೇ ಸಿಂಗ್
ನಿರ್ದೇಶನ: ರಘುರಾಮ್
ಛಾಯಾಗ್ರಹಣ: ಜೆ.ಎಸ್.ವಾಲಿ
ಸಂಗೀತ: ಹರಿಕೃಷ್ಣ
ರೇಟಿಂಗ್ 4