ಇದು ಫ್ಯಾಂಟಸಿ ಚಿತ್ರವಾ? ಕ್ರೈಮ್ ಕತೆನಾ? ಪೌರಾಣಿಕ ಸಿನಿಮಾ? ಥ್ರಿಲ್ಲರ್, ಸಸ್ಪೆನ್ಸಾ?
ಆರ್ ಕೇಶವಮೂರ್ತಿ
- ಸಿನಿಮಾ ಶುರುವಾಗಿ ಮೂರು ನಿಮಿಷಕ್ಕೇ ಇಂಥ ಪ್ರಶ್ನೆಗಳನ್ನು ಪ್ರೇಕ್ಷಕನ ಮುಂದಿಟ್ಟು ನಿರ್ದೇಶಕ ಎಸ್ಕೇಪ್ ಆಗುತ್ತಾರೆ. ಆದರೆ, ನೋಡುಗನಿಗೆ ಮಾತ್ರ ಇದು ಯಾವ ರೀತಿ ಸಿನಿಮಾ ಎನ್ನುವ ಕನ್ಫ್ಯೂಸ್‌ನಲ್ಲೇ ಅರ್ಧ ನೋಡಿ ಮುಗಿಸಿ, ವಿರಾಮದ ನಂತರ ಏನಾದರು ಇರಬಹುದೆಂದು ಎದುರು ನೋಡುತ್ತಾನೆ. ಈ ಕಾಯುವಿಕೆಗೆ ಫಲ ಸಿಗುತ್ತದೆಯೇ ಎಂಬುದನ್ನು ಇಲ್ಲಿ ಹೇಳುವುದ ಕಷ್ಟ. ಆದರೆ, ‘ಅನುಷ್ಕ’ ಹೆಸರಿನಷ್ಟುಸಿನಿಮಾ ಸರಳವಾಗಿಲ್ಲ ಎಂಬುದು ಮಾತ್ರ ಸತ್ಯ. ಇದ್ದಕ್ಕಿದಂತೆ ದೆವ್ವ ಬರುತ್ತದೆ. ಆ ದೆವ್ವಕ್ಕೊಂದು ಫ್ಲ್ಯಾಷ್ ಬ್ಯಾಕ್ ಹೇಳುವಷ್ಟರಲ್ಲಿ ಇನ್ನ್ಯಾರೋ ಕೊಲೆಯಾಗುತ್ತಾರೆ. ಆ ಕೊಲೆಗೆ ಕಾರಣ ಏನು ಎಂದು ಯೋಚಿಸುತ್ತಿದ್ದಾಗಲೇ ಮಾನವನ ಅಸ್ಥಿಪಂಜರಗಳ ಸ್ಕಾ್ಯಂಡಲ್ ಬಯಲಾಗುತ್ತದೆ, ಸತ್ತವಳು, ಬದುಕಿರುವವಳು ಒಂದೇ ರೀತಿ ಇದ್ದಾರಳಲ್ಲ ಎಂದುಕೊಳ್ಳುವಾಗಲೇ ಯಾವುದೋ ಸಂಸ್ಥಾನದ ರಾಣಿಯ ದರ್ಶನವಾಗುತ್ತದೆ, ಇದರ ಜತೆಗೆ ಆತ್ಮಗಳು ತುಂಬಿರುವ ಬಂಗಲೆ ಎದುರಾಗುತ್ತದೆ. ಈ ಅರಮನೆ ಯಾರದ್ದು ಎನ್ನುವಾಗ... ಹೀಗೆ ನಿರ್ದೇಶಕರಿಗಿಂತ ಮೊದಲೇ ಪ್ರೇಕ್ಷಕ ಕತೆಯನ್ನು ಅಂದಾಜು ಮಾಡುತ್ತ ಹೋಗುತ್ತಾನೆ.
ಚಿತ್ರ: ಅನುಷ್ಕ
ತಾರಾಗಣ: ಅಮೃತ, ರೂಪೇಶ್ ಶೆಟ್ಟಿ, ಸಾಧುಕೋಕಿಲ, ರೂಪ ಶರ್ಮ, ಬಾಲರಾಜ್, ಆದಿಲೋಕೇಶ್
ನಿರ್ದೇಶನ: ದೇವರಾಜ್ ಕುಮಾರ್
ನಿರ್ಮಾಣ: ಎಸ್ ಕೆ ಗಂಗಾಧರ್
ಛಾಯಾಗ್ರಹಣ: ವೀನಸ್ ಮೂರ್ತಿ
ಸಂಗೀತ: ವಿಕ್ರಂ ಸೆಲ್ವ
ಇನ್ನೂ ಸಿನಿಮಾ ನೋಡುತ್ತ ಹೋದರೆ ಚಿತ್ರದ ಹೆಸರಿನ ನಟಿಯೇ ಕಾಣಿಸಿಕೊಂಡ ಒಂದಿಷ್ಟುಸಿನಿಮಾಗಳ ಎಳೆಯನ್ನು ಎತ್ತಿಕೊಂಡಂತೆ ಭಾಸವಾಗುತ್ತದೆ. ಹಾಗಂತ ಆ ಸಿನಿಮಾಗಳಂತೆ ‘ಅನುಷ್ಕ’ ಇಲ್ಲ. ನಿರೂಪಣೆಯನ್ನು ಹೇಗೆ ಮುಂದುವರಿಸಬೇಕು ಎಂದು ಗೊಂದಲಕ್ಕೆ ಬಿದ್ದಾಗಲೆಲ್ಲ ನಿರ್ದೇಶಕರು ಟೈಟಲ್ ಸಾಂಗ್‌ನ ಮೊರೆ ಹೋಗುತ್ತಾರೆ. ಕತೆ ಇಲ್ಲದೆ ದೃಶ್ಯಗಳನ್ನು ಮಾತ್ರ ಜೋಡಿಸಿಕೊಂಡು ಹೋದರೆ ಇಂಥ ಸಿನಿಮಾ ಜನ್ಮತಾಳುತ್ತದೆ. ಆದರೆ, ಒಳ್ಳೆಯ ಸಿನಿಮಾ ಮಾಡುವ ಅವಕಾಶ ಮತ್ತು ಸಾಧ್ಯತೆಗಳು ಇದ್ದಾಗಲೂ ಒಂದು ಕಳಪೆ ಚಿತ್ರವನ್ನು ಅತ್ಯಂತ ಸುಲಭವಾಗಿ ಹೇಗೆ ಮಾಡಬಹುದು ಎನ್ನುವ ಕುತೂಹಲಕ್ಕೆ ‘ಅನುಷ್ಕ’ ಸಿನಿಮಾ ಅತ್ಯುತ್ತಮ ಪಠ್ಯವಾಗಬಲ್ಲದು. ಒಂದು ಸಾಮ್ರಾಜ್ಯದ ರಾಣಿಯಾಗಿರುವ ಅನುಷ್ಕ, ತನ್ನ ರಾಜ್ಯದ ಮೇಲೆ ದರೋಡೆ ಕೋರರು ಮುಗಿಬಿದ್ದಾಗ ಕುದುರೆ ಹತ್ತಿ, ಕತ್ತಿ ಜಳಪಿಸುತ್ತಾಳೆ. ಹಾಗೆ ಕತ್ತಿಯಾಟ ಆಡುವಾಗ ರಾಣಿಯನ್ನು ಮೋಸದಿಂದ ಕೊಲ್ಲುತ್ತಾರೆ. ಆದರೆ, ಆಕೆಯ ಆತ್ಮ ಮಾತ್ರ ಆ ಸಾಮ್ರಾಜ್ಯ ಬಿಟ್ಟು ಹೋಗಲ್ಲ. ಅನುಷ್ಕ ರಾಣಿಯಂತೆ ಕಾಣುವ ಹುಡುಗಿ ಮದುವೆಯಾಗಿ ಹನಿಮೂನ್‌ಗೆ ಬರುತ್ತಾಳೆ. ಹನಿಮೂನ್ ಹೆಸರಿನಲ್ಲಿ ಆಕೆಯ ಗಂಡನೇ ಸಾಯಿಸುತ್ತಾನೆ. ಈ ಇಬ್ಬರು ಒಬ್ಬರೇನಾ? ಸಿನಿಮಾ ನೋಡಿ.
ಸೇಡಿನ ಕಥೆಯ ರೋಚಕ ಎಪಿಸೋಡು ‘ಖನನ’ !
ರಾಣಿಯ ಕತೆ ಬಂದಾಗ ಕಲಾ ನಿರ್ದೇಶಕ, ಕಾಸ್ಟೂ್ಯಮ್ ಡಿಸೈನರ್ ಮರೆಯಾಗುತ್ತಾರೆ. ದೆವ್ವ, ಆತ್ಮಗಳ ಅಬ್ಬರ ತೋರಿಸಲು ಅದೇ ಗೊಂಬೆ, ಅದೇ ಕತ್ತಲು, ಅದೇ ಕುಂಕುಮ, ನಿಂಬೆ ಹಣ್ಣುಗಳ ಮೊರೆ ಹೋಗಿದ್ದು, ಹೊಸದೇನು ಕಾಣಲ್ಲ. ಅನುಷ್ಕ ಪಾತ್ರದಾರಿ ಅಮೃತ, ಜೋರಾಗಿ ಕಿರುಚಿಕೊಳ್ಳುವುದೇ ನಟನೆ ಎಂದುಕೊಂಡಿದ್ದರ ಪರಿಣಾಮ ಹಾರರ್ ಎಫೆಕ್ಟ್ಗಿಂತ ಅವರ ಕೂಗಾಟವೇ ಜೋರಿದೆ. ಪದೇ ಪದೇ ಬರುವ ಟೈಟಲ್ ಸಾಂಗ್‌ನಲ್ಲಿ ಪೋರ್ಸ್ ಇದ್ದರೂ ಆ ಹಾಡು ಯಾಕೆ ಬಂತು ಅನ್ನೋದು ಗೊತ್ತಿಲ್ಲ. ಪಾತ್ರದಾರಿಗಳ ನಟನೆ, ತಾಂತ್ರಿಕತೆಯ ನೈಪುಣ್ಯದ ಬಗ್ಗೆ ಹೇಳುವುದಕ್ಕಿಂತ ನೋಡಿ ಅರಗಿಸಿಕೊಳ್ಳುವುದೇ ಉತ್ತಮ.