ಮಾಮಾ ಎಂದಾಕ್ಷಣ ನಮಗಿರುವ ಭಾವನೆಯೇ ಬೇರೆ, ನಿಜವಾದ ಅರ್ಥ?

May 11, 2018, 6:25 PM IST

‘ಪ್ರತ್ಯಕ್ಷವಾಗಿ ಕಂಡರೂ, ಪ್ರಾಮಾಣಿಸಿ ನೋಡು’ ಎನ್ನುವ ಮಾತು ಈ ಚಿತ್ರಕ್ಕೆ  ಹೆಚ್ಚು ಅನ್ವಯ. ಯಾಕಂದ್ರೆ,‘ಮಾಮಾ’ ಎಂದಾಕ್ಷಣ ನಮಗಿರುವ ಭಾವನೆಯೇ ಬೇರೆ. ‘ಮಾಮಾ’ ಅಂದ್ರೆ ಲೋಕರೂಢಿಯಾಗಿ ಈಗಿರುವ ಅರ್ಥ ಕೆಟ್ಟದ್ದೇ. ಅಂಥದ್ದೇ ಆರೋಪಕ್ಕೆ ಸಿಲುಕಿದ ಒಬ್ಬ ವ್ಯಕ್ತಿಯ ಸುತ್ತಲ ಚಿತ್ರಣವೇ ‘ಹಲೋ ಮಾಮಾ’ ಚಿತ್ರ. ಆದ್ರೆ, ಈ ಚಿತ್ರ ನಿಜಕ್ಕೂ  ಹೇಳ ಹೊರಟಿದ್ದೇನು ಅನ್ನೋದು ಕ್ಲೖಮ್ಯಾಕ್ಸ್. ಮಾಮಾ ಅಂತಲೇ ತನ್ನ ಬಾಸ್‌ಗೆ ಹಲವು ‘ಕಾಲ್‌ಗರ್ಲ್ಸ್ ಹುಡುಗಿಯರನ್ನು ಕರೆತಂದು ಆತನ ಕತ್ತಲ ಕೋಣೆಗೆ ತಳ್ಳಿದ, ಆ ಕಥಾ ನಾಯಕ ಆರಂಭದಲ್ಲಿ ಖಳನಾಯಕ, ಕೊನೆಯಲ್ಲಿ ಹೀರೋ. ಅದು ಹೇಗೆ ಅನ್ನೋದು ಚಿತ್ರದ ಕಥಾ ಹಂದರ. ಶೀರ್ಶಿಕೆಗೆ ತಕ್ಕಂತೆ ಇದೊಂದು ಹಾಸ್ಯಮಯ ಚಿತ್ರ. ನಟ, ನಿರ್ದೇಶಕ ಮೋಹನ್, ಕತೆ, ಚಿತ್ರಕತೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಅಷ್ಟೇ ಅಲ್ಲ, ತಾವೇ ಸ್ಟೃಸಿದ ಕತೆಯಲ್ಲಿ ಅವರೇ ಹೀರೋ ಅನ್ನೋದು  ಈ ಚಿತ್ರದ ಇನ್ನೊಂದು ವಿಶೇಷ. ಕಥಾ ನಾಯಕ ವಿಜಯ್, ರಿಯಲ್ ಎಸ್ಟೇಟ್ ಕಂಪನಿಯೊಂದರಲ್ಲಿ  ಪಿಆರ್‌ಒ. ಮನೆ ನೋಡಲು ಬರುವ ಗ್ರಾಹಕರಿಗೆ ಸೂಕ್ತ ಮಾಹಿತಿ ನೀಡುವುದು ಆತನ ಕೆಲಸ. ಆದ್ರೆ, ಆತನ ಬಾಸ್‌ಗೆ ಕಾಲ್‌ಗರ್ಲ್ಸ್ ಹುಡುಗಿಯರ ಹುಚ್ಚು. ಅವರನ್ನು ಆತನ ಗೆಸ್ಟ್‌ಹೌಸ್‌ಗೆ ಕರೆತಂದು ಬಿಡುವ ಕೆಲಸ ವಿಜಯ್‌ಗೆ ಸೇರಿದ್ದು.ಅದು ಅವನಿಗೆ ಇಷ್ಟವಿಲ್ಲದ ಕೆಲಸ. ಸಮಾಜದ ದ್ಟೃಷ್ಟಿಯಲ್ಲಿ ತಾನು ಕೆಟ್ಟವನಾಗುವ ಭಯ. ಆದ್ರೆ, ಆ ಮಾಮಾಗಿರಿ ಕೆಲಸವನ್ನು ಆತ ಮಾಡಲೇಬೇಕು. ಅನಿವಾರ್ಯ, ಯಾಕಂದ್ರೆ ಅದು ಸಾಲದ ಬಾಧೆ!
 ಚಿತ್ರದ ಮೊದಲ ಭಾಗ ‘ಮಾಮಾಗಿರಿ’ಯ ಸುತ್ತಲ ಕತೆ. ಬಹುತೇಕ ಅದು ಹಾಸ್ಯದ ಪ್ರಯಾಸ. ಮೋಹನ್ ಮತ್ತವರು ಸ್ನೇಹಿತರು ಹಾಗೂ  ಕೆಂಪೇಗೌಡ ನಡುವಿನ ಸಂಭಾಷಣೆ ಬಹುತೇಕ ದ್ವಂದ್ವರ್ಥದಲ್ಲೇ ಅನುಭವಿಸುತ್ತವೆ. ಆ ಮೂಲಕ ಒಂದಷ್ಟು  ತ್ರಾಸ, ಪ್ರಾಸದಲ್ಲಿ ಕತೆ ಅರ್ಧಕ್ಕೆ ಬಂದು ನಿಲ್ಲುತ್ತದೆ. ಅಲ್ಲಿಂದ ಕತೆಗೆ ಟ್ವಿಸ್ಟ್. ದ್ವಿತೀಯಾ ಅರ್ಧಕ್ಕೆ ವಿಜಯ್ ಹಾಗೂ ನಯನಾ ನಡುವಿನ ಪ್ರೇಮ ಸಲ್ಲಾಪ ಒಂದು ಕಡೆಯಾದರೆ, ಮತ್ತೊಂದೆಡೆ ಆತನ ಬಾಸ್ ಮಕರಂದ ಮತ್ತವನ ಹೆಂಡತಿ ನಡುವಿನ ಸರಸ ಕೋರ್ಟ್ ಕಟ ಕಟೆಗೆ ಹತ್ತುವ ಮೂಲಕ ಕತೆ, ಕ್ಲೖಮ್ಯಾಕ್ಸ್‌ಗೆ ಬಂದು ನಿಲ್ಲುತ್ತದೆ. ಆಗಲೇ ನಿಜವಾದ ಮಾಮಾಗಿರಿಯ ಅನಾವರಣಗೊಳ್ಳುತ್ತೆ. ಏನೋ ಅಂದುಕೊಂಡ ಮನಸ್ಸು ಭಾವುಕತೆಗೆ ಸಿಲುಕುತ್ತದೆ. ಸಮಾಜದಲ್ಲಿ ಇಂತಹವರು ಇದ್ದಾರೆಯೇ ಎನ್ನುವ ಪ್ರಶ್ನೆಗೆ ಬಾಸ್ ಮಕರಂದ ಕಾರಣಾನಾಗುತ್ತಾನೆ. ‘ಪ್ರತ್ಯಕ್ಷ ವಾಗಿ ಕಂಡರೂ, ಪ್ರಾಮಾಣಿಸಿ ನೋಡು’ ಎನ್ನುವ  ನೀತಿ ಕತೆ ಹೇಳಲು ‘ಮಾಮಾ’ ಕೆಲಸ ಮಾಡುವ ಮೋಹನ್, ಅದಕ್ಕೊಂದಷ್ಟು ಮಸಾಲೆ ಹಾಕಿ ರಂಜಿಸಲು ಯತ್ನಿಸಿದ್ದಾರೆ.
ಸಿಂಪಲ್ ಕತೆಯೊಂದನ್ನು ಹಾಸ್ಯದ ದಾಟಿಯಲ್ಲಿ ಹೇಳುವ ನಿರ್ದೇಶಕನ ಪ್ರಯತ್ನ ಫಲಿಸಿದೆ. ಅದರೆ ನಿರೂಪಣೆಯ ನಿಧಾನಗತಿ ಬೋರ್ ತರಿಸುತ್ತದೆ. ಮೋಹನ್, ಅರವಿಂದ್ ರಾವ್, ಕೆಂಪೇಗೌಡ, ಸಾಂಪ್ರತ, ಭೂಮಿಕಾ, ಸೌಜನ್ಯ ಹಾಗೂ ಪೃಥ್ವಿ ಬನವಾಸಿ ನಿರ್ವಹಸಿರುವ ಅಷ್ಟು ಪಾತ್ರಗಳಿಗೂ ಆದ್ಯತೆ ಸಿಕ್ಕಿದೆ. ಬಹುತೇಕ ಖಳನಾಯಕನಾಗಿಯೇ  ಕಾಣಿಸಿಕೊಳ್ಳುವ ಅರವಿಂದ್ ಇಲ್ಲಿ ಒಂದೊಳ್ಳೆ ಪಾತ್ರ ಪೋಷಣೆ ಮಾಡಿದ್ದಾರೆ. ಆರಂಭದಲ್ಲಿ ಖಳನಾಯಕನಂತೆ ಕಂಡರೂ, ಕ್ಲೖಮ್ಯಾಕ್ಸ್ ನಲ್ಲಿ ಅವರೇ ಕತೆಯ ನಿಜವಾದ ಹೀರೋ. ಅವರ ಪಾತ್ರ ನಿರ್ವಹಣೆ ಅಚ್ಚುಕಟ್ಟಾಗಿದೆ. ಕಥಾ ನಾಯಕ ವಿಜಯ್ ಪಾತ್ರದಲ್ಲಿ ಮೋಹನ್ ಅಭಿನಯ ಲವಲವಿಕೆಯಿಂ ಕೂಡಿದೆ. ಕಡಿಮೆ ಅವಧಿಯಲ್ಲಿ ಬಂದು ಹೋಗುವ ಯತಿರಾಜ್, ಹಾವಭಾವದ ಮೂಲಕ ಕೊನೆ ತನಕ ನೆನಪಲ್ಲುಳಿಯುತ್ತಾರೆ. ಹಾಗೆ ನೋಡಿದ್ರೆ, ಚಿತ್ರದಲ್ಲಿ  ಸಿನಿ ಪಾತ್ರಗಳಿಗೆ ಯಾರಿಂದಲೂ ನ್ಯಾಯ ಸಿಕ್ಕಿಲ್ಲ. ಎಲ್ಲರೂ ಗ್ಲಾಮರ್ ಗೊಂಬೆಳಾಗಿ ಕಾಣಿಸಿಕೊಂಡಿದ್ದಾರೆ. ಇಲ್ಲಿ ಕತೆಗೆ ಸಿಕ್ಕ ಪ್ರಾಮುಖ್ಯತೆ , ಚಿತ್ರೀಕರಣದ ಲೋಕೇಷನ್‌ಗೆ ಸಿಕ್ಕಿಲ್ಲ.  ನೋಡಿದ್ದೇ ನೋಡುವ ದೇವಸ್ಥಾನ, ಪಾರ್ಕ್, ಮನೆಯಲ್ಲಿ ವಿಶೇಷತೆ ಇಲ್ಲ. ಸಂಗೀತವೂ ಅಷ್ಟೇ.  ಹಾಸ್ಯ ಪ್ರಧಾನ ಚಿತ್ರ ಎನ್ನುವುದಷ್ಟೆ ವಿಶೇಷ.