ಎರಡು ಯಶಸ್ವಿ ಚಿತ್ರಗಳನ್ನು ಕೊಟ್ಟನಿರ್ದೇಶಕ ಚೇತನ್ ಕುಮಾರ್, ಮೂರನೇ ಚಿತ್ರಕ್ಕೆ ಇನ್ನೇನು ಶೂಟಿಂಗ್ ಮುಗಿಸಿದ್ದಾರೆ. ಅಂದುಕೊಂಡಂತೆ ಆಗಸ್ಟ್‌ನಲ್ಲಿ ತೆರೆಗೆ ತರುವ ಸಿದ್ಧತೆಯಲ್ಲಿರುವ ಚೇತನ್, ‘ಭರಾಟೆ’ಯ ಮಾತುಗಳು ಇಲ್ಲಿವೆ.
ಆರ್ ಕೇಶವಮೂರ್ತಿ
ಎರಡು ಯಶಸ್ವಿ ಚಿತ್ರಗಳ ನಂತರ ಮೂರನೆಯದು ಗೆಲ್ಲಲೇಬೇಕೆಂಬ ಒತ್ತಡ ಉಂಟಾ?
undefined
ಮೂರಲ್ಲ, ಇನ್ನೂ ನೂರು ಸಿನಿಮಾ ಮಾಡಿದರೂ ಪ್ರತಿ ಚಿತ್ರವೂ ಗೆಲ್ಲಲೇಬೇಕು ಎನ್ನುವ ಭಾವನೆ ಇದ್ದೇ ಇರುತ್ತದೆ. ಹಾಗಂತ ಅದು ಒತ್ತಡ ಅಲ್ಲ. ನನ್ನ ನಂಬಿ ದುಡ್ಡು ಹಾಕಿದ ನಿರ್ಮಾಪಕ, ನನ್ನ ಕತೆ ನಂಬಿದ ನಾಯಕ, ದುಡ್ಡು ಕೊಡುವ ಜತೆಗೆ ಸಮಯ ಹೊಂದಿಸಿಕೊಂಡು ಬರುವ ಪ್ರೇಕ್ಷಕರ ನಿರೀಕ್ಷೆಗಳು ನಿರ್ದೇಶಕ ಹೆಗಲಮೇಲಿರುತ್ತವೆ. ಹೀಗಾಗಿ ಸಿನಿಮಾ ಗೆಲ್ಲಬೇಕು. ಅದು ಒಬ್ಬ ನಿರ್ದೇಶಕನ ಜವಾಬ್ದಾರಿಯುತ ಕನಸು ಮತ್ತು ಗುರಿ ಕೂಡ.
‘ಭರಾಟೆ’ ಗೆಲ್ಲಿಸುವ ಅಂಥ ಅಂಶಗಳೇನು?
ಇದೊಂದು ಪಕ್ಕಾ ಕೌಟುಂಬಿಕ ಕತೆ. ಶ್ರೀಮುರಳಿಯೊಳಗೆ ಒಬ್ಬ ಚಂದ್ರಚಕೋರನೂ ಇದ್ದಾನೆ. ಆತ ಮನೆ ಮಗ. ಅಣ್ಣ, ತಮ್ಮ, ಗೆಳೆಯ, ಅದ್ಭುತ ಪ್ರೇಮಿ ಇವೆಲ್ಲವೂ ‘ಭರಾಟೆ’ಯಲ್ಲಿದೆ. ಅಂದರೆ ಆಗ ‘ಚಂದ್ರಚಕೋರಿ’ಯನ್ನು ಹೇಗೆ ಕುಟುಂಬ ಸಮೇತರಾಗಿ ಬಂದು ನೋಡಿದರೂ ಹಾಗೆ ‘ಭರಾಟೆ’ಯನ್ನೂ ಈ ಕಾಲದ ‘ಚಂದ್ರಚಕೋರಿ’ ಅಂದುಕೊಳ್ಳಬಹುದು. ಕತೆಯ ವಿಚಾರದಲ್ಲಿ ಅಲ್ಲ. ಉಗ್ರಂ, ರಥಾವರ, ಮಫ್ತಿ ಚಿತ್ರಗಳ ಹ್ಯಾಂಗೋವರ್‌ನಿಂದ ಆಚೆ ತರುವ ಕತೆ ಇಲ್ಲಿದೆ.
ಶ್ರೀಮುರಳಿ ಅವರ ಪಾತ್ರ ಹೇಗಿರುತ್ತದೆ? ಅವರ ಜತೆಗಿನ ಸಿನಿಮಾ ಮಾಡಿದ ಅನುಭವ ಹೇಗಿತ್ತು?
ಒಂದು ದೊಡ್ಡ ಕುಟುಂಬ. ಸಂಬಂಧಗಳಿಗೆ ಬೆಲೆ ಕೊಡುವ ಮನೆತನ. ಅಂಥ ಮನೆಯ ಜವಾಬ್ದಾರಿ ಹುಡುಗನ ಪಾತ್ರದಲ್ಲಿ ಶ್ರೀಮುರಳಿ ಕಾಣಿಸಿಕೊಳ್ಳುತ್ತಾರೆ. ಫ್ಯಾಮಿಲಿ ಕತೆ ಜತೆಗೆ ಒಂದು ಸಾಮಾಜಿಕ ಸಂದೇಶವನ್ನು ಈ ಪಾತ್ರದ ಮೂಲಕ ಹೇಳಿದ್ದೇವೆ. ಅದು ಈಗಿನ ಪ್ರೇಕ್ಷಕರಿಗೆ ತುಂಬಾ ಆಪ್ತವಾಗಿ ಮುಟ್ಟುತ್ತದೆಂಬ ನಂಬಿಕೆ ಇದೆ. ಶ್ರೀಮುರಳಿ ಡೈರೆಕ್ಟರ್ ಆರ್ಟಿಸ್ಟ್. ಒಮ್ಮೆ ಕತೆ ಒಕೆ ಮಾಡಿದರೆ ಅದಕ್ಕೆ ಎಷ್ಟುಶ್ರಮ ಬೇಕು ಅಷ್ಟನ್ನು ಹಾಕುವ ನಟ.
ಹತ್ತು ಸಿಂಹಗಳ ಬೋನಲ್ಲಿ ಶ್ರೀ ಮುರಳಿ ಕಾದಾಟ!
ಈ ಚಿತ್ರದ ಕತೆ ಹುಟ್ಟಿಕೊಂಡಿದ್ದು ಹೇಗೆ?
ನಾನು ಯಾರಿಗೆ ಕತೆ ಮಾಡಬೇಕು ಎಂದಾಗ ಶ್ರೀಮುರಳಿ ಕಣ್ಣ ಮುಂದೆ ಬಂದರು. ಅವರಿಗೆ ನನ್ನಲ್ಲಿರುವ ಕತೆಯನ್ನು ಹೇಗೆ ಬ್ಲೆಂಡ್ ಮಾಡಬೇಕು ಎಂದುಕೊಂಡಾಗ ‘ಚಂದ್ರಚಕೋರಿ’ ನೆನಪಿಗೆ ಬಂತು. ಜತೆಗೆ ಒಂದು ವರ್ಗದ ಮಾಸ್ ಇಮೇಜ್‌ನಿಂದ ಶ್ರೀಮುರಳಿಯನ್ನು ಆಚೆ ತರಬೇಕು ಎಂದುಕೊಂಡಾಗ ಒಂದು ಕಲರ್‌ಫುಲ್ಲಾದ ಕೌಟುಂಬಿಕ ಕತೆ ನನ್ನಲ್ಲಿ ಸಿದ್ಧವಾಯಿತು.
ನಿಮ್ಮ ಪ್ರಕಾರ ಕತೆಗಾಗಿ ಹೀರೋನಾ, ಹೀರೋಗಾಗಿ ಕತೆನಾ?
ಕತೆ ಮಾಡಿಕೊಂಡು ನಾಯಕನನ್ನು ಹುಡುಕೋದು ಈಗ ಅಸಾಧ್ಯ. ಹೀರೋ ಇಮೇಜ್‌ಗೆ ನಿರ್ದೇಶಕನ ಕತೆ ಹೊಂದಾಣಿಕೆ ಆಗಬೇಕು. ನಾನೊಂದು ಕತೆ ಮಾಡಿಕೊಂಡಿದ್ದೇನೆ. ಅದನ್ನೇ ಹೀರೋ ಮೂಲಕ ಹೇಳುತ್ತೇವೆ ಅಂದರೆ ಆಗಲ್ಲ. ಕತೆ ಮತ್ತು ಹೀರೋ ಇಮೇಜ್ ಕಂಬೈಡ್ ಆಗಬೇಕು. ಯಾಕೆಂದರೆ ಈಗ ನಾಯಕ ಮತ್ತು ನಿರ್ದೇಶಕನ ಸ್ಥಾನ-ಮಾನಗಳು ಬದಲಾಗಿವೆ.
ಯಾವ ರೀತಿ ಬದಲಾಗಿದೆ?
ಈ ಹಿಂದೆ ನಿರ್ದೇಶಕ ಮಾಡಿಕೊಂಡ ಕತೆಗೆ ಹೀರೋ ಬಂದು ನಟಿಸಿ ಹೋಗುತ್ತಿದ್ದರು. ಆ ಸಿನಿಮಾ ಮುಗಿದ ಮೇಲೆ ಹೀರೋ ಮತ್ತೊಂದು ಚಿತ್ರದಲ್ಲಿ ಬ್ಯುಸಿಯಾಗಿರುತ್ತಿದ್ದರು. ಆದರೆ, ಈಗ ನಿರ್ದೇಶಕ ಒಂದು ಚಿತ್ರಕ್ಕೆ ಒಂದು ವರ್ಷ ಸಮಯ ಕೊಡುತ್ತಾನೆ ಎಂದರೆ ನಾಯಕ ಕೂಡ ಒಂದು ವರ್ಷ ಸುಮ್ಮನೆ ಕೂರುತ್ತಾನೆ. ತಮ್ಮ ಇಡೀ ಕೆರಿಯರ್ ಆ ಚಿತ್ರಕ್ಕೆ ಕೊಟ್ಟಿರುತ್ತಾರೆ. ಹೀಗಾಗಿ ಹೀರೋ ಕೂಡ ನಿರ್ದೇಶಕನ ಜತೆ ಭಾಗಿ ಆಗುತ್ತಾನೆ. ನಿರ್ದೇಶಕ ಹೇಳಿದ್ದೇ ಆಗಬೇಕು ಅಂತೇನೂ ಇಲ್ಲ. ಹೀರೋ ಬಯಸಿದ್ದೂ ಆಗಬೇಕು. ಯಾಕೆಂದರೆ ಅದು ಅವರ ಮಾರುಕಟ್ಟೆ, ಅಭಿಮಾನಿ ವರ್ಗ, ಕೆರಿಯರ್ ಪ್ರಶ್ನೆ ಕೂಡ ಇರುತ್ತದೆ.
ಹಾಗಿದ್ದರೆ ನಿರ್ದೇಶಕನ ಈಗಿನ ನಿಜವಾದ ಸವಾಲುಗಳೇನು?
ತಾನು ಯಾರಿಗೆ ಸಿನಿಮಾ ಮಾಡಬೇಕು ಎನ್ನುವುದು. ಹೀರೋಗಾ, ಪ್ರೇಕ್ಷಕರಿಗಾ ಅಥವಾ ನಿರ್ದೇಶಕನ ಅಭಿರುಚಿಗಾ ಎಂಬುದು ಇಲ್ಲಿ ಮುಖ್ಯ. ಆದರೆ, ಯಾರನ್ನೂ ನಾವು ಸಂಪೂರ್ಣವಾಗಿ ತೃಪ್ತಿಪಡಿಸಲಾಗದು. ಅಲ್ಲದೆ ಕತೆಗಾಗಿ ಸಿನಿಮಾ ಮಾಡಬೇಕಾ ಅಥವಾ ಮಾರುಕಟ್ಟೆಗಾಗಿ ಸಿನಿಮಾ ಮಾಡಬೇಕಾ ಎನ್ನುವುದು ಕೂಡ ಪ್ರಶ್ನೆ. ಯಾಕೆಂದರೆ ಕಟೆಂಟ್‌ಗೆ ಫೋಕಸ್ ಮಾಡಿ ರೂಪಿಸಿದ್ದ ಸಿನಿಮಾಗಳಿಗೆ ಓಪನಿಂಗ್ ಸಿಗಲ್ಲ. ಅದೇ ಹೀರೋ, ಕಮರ್ಷಿಯಲ್ ನೆರಳಿನಲ್ಲಿ ಮಾಡಿದರೆ ಜನ ಥಿಯೇಟರ್‌ಗೆ ಬರುತ್ತಾರೆ. ಹಾಗಿದ್ದರೆ ನಾವು ಯಾವ ರೀತಿ ಸಿನಿಮಾ ಮಾಡಬೇಕಿದೆ ಎನ್ನುವುದು ಕೊನೆ ವರೆಗೂ ಉಳಿಯುವ ಪ್ರಶ್ನೆ ಮತ್ತು ಸವಾಲು.
ಈ ಸವಾಲು ನಿರ್ದೇಶಕನಿಂದ ಮೀರಲು ಆಗಲ್ವೇ?
ಹೀರೋ ಅನ್ನೋದು ಬೋರ್‌ವೆಲ್ ಇದ್ದಂತೆ. ಚಿತ್ರಕಥೆ ಅನ್ನೋದು ಆ ಬೋರ್ ಹಾಕುವ ಜಾಗ ಇದ್ದಂತೆ. ನಿರ್ದೇಶಕ ಅನ್ನೋನು ಆ ಜಾಗವನ್ನು ಗುರುತಿಸಿದವನು. ಬೋರ್ ಹಾಕಿದ ಮೇಲೂ ನೀರು ಬರುತ್ತೋ ಇಲ್ವೋ ಗೊತ್ತಿಲ್ಲ. ಹೀಗಾಗಿ ಸಂಪೂರ್ಣವಾಗಿ ಗೆಲ್ಲುತ್ತೇವೋ ಇಲ್ವೋ ಗೊತ್ತಿಲ್ಲ. ಆದರೆ, ನಿರ್ದೇಶಕ ಒಬ್ಬ ಸೇಲ್ಸ್‌ಮ್ಯಾನ್ ಆಗಬೇಕು. ಅಂದರೆ ಒಂದು ಕಡೆ ನಾವು ಹೋಟೆಲ್ ಮಾಡಲು ಹೊರಟಾಗ ಇಲ್ಲಿ ವೆಜ್ ಅಥವಾ ನಾನ್‌ವೆಜ್ ಹೋಟೆಲ್ ಮಾಡಬೇಕಾ? ಈ ಹಿಂದೆ ಯಾರಾದರೂ ಹೋಟೆಲ್ ಮಾಡಿ ಕೈ ಸುಟ್ಟುಕೊಂಡಿದ್ದಾರೆಯೇ ಎನ್ನುವುದನ್ನು ಹೇಗೆ ಅಧ್ಯಯನ ಮಾಡಿ ಹೋಟೆಲ್ ಶುರು ಮಾಡುತ್ತೇವೋ ಹಾಗೆ ಅಧ್ಯಯನ ಮಾಡಿಯೇ ಸಿನಿಮಾ ಮಾಡಬೇಕಿದೆ.
ವೈಯಕ್ತಿಕವಾಗಿ ನಿಮಗೆ ಯಾವ ರೀತಿಯ ಚಿತ್ರಗಳು ಇಷ್ಟ?
ಬದ್ಲಾಪುರ್, ಗ್ಯಾಂಗ್ಸ್ ಆಫ್ ವಸೇಪೂರ್ ರೀತಿಯ ಸಿನಿಮಾಗಳು ನನಗೆ ಇಷ್ಟ.
ಚಿತ್ರತಂಡ, ಮೇಕಿಂಗ್ ಹಾಗೂ ಬಿಡುಗಡೆ ಬಗ್ಗೆ ಹೇಳುವುದಾದರೆ?
ಬಹು ದೊಡ್ಡ ತಾರಾಗಣ ಇದೆ. 11 ಮಂದಿ ಖಳನಾಯಕರು ಇದ್ದಾರೆ. ಮೊದಲ ಬಾರಿಗೆ ಮೂವರು ಸೋದರರಾದ ಸಾಯಿಕುಮಾರ್, ಅಯ್ಯಪ್ಪ ಪ್ರಸಾದ್, ರವಿಶಂಕರ್ ಒಟ್ಟಿಗೆ ನಟಿಸುತ್ತಿದ್ದಾರೆ. ದೊಡ್ಡ ಕಲಾವಿದರು ಅಂತ 60ಕ್ಕೂ ಹೆಚ್ಚು ಮಂದಿ ಇದ್ದಾರೆ. 20 ದಿನ ರಾಜಸ್ಥಾನದಲ್ಲಿ ಚಿತ್ರೀಕರಣ ಮಾಡಿದ್ದೇನೆ. ಬೆಂಗಳೂರಿನಲ್ಲಿ ನಾಲ್ಕು ಸೆಟ್‌ಗಳನ್ನು ಹಾಕಿದ್ದೇವೆ. 73 ದಿನ ಶೂಟಿಂಗ್ ಆಗಿದ್ದು, 93 ದಿನಕ್ಕೆ ಒಟ್ಟು ಚಿತ್ರೀಕರಣ ಆಗಲಿದೆ. 6 ಫೈಟ್, 5 ಹಾಡುಗಳು ಇವೆ. ಶ್ರೀಮುರಳಿ ಅವರಿಗೆ ಶ್ರೀಲೀಲಾ ನಾಯಕಿ. ರಚಿತಾ ರಾಮ್ ಒಂದು ವಿಶೇಷವಾದ ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ. ಯಾವುದಕ್ಕೂ ಕಡಿಮೆ ಆಗದಂತೆ ಚಿತ್ರವನ್ನು ರೂಪಿಸಿದ್ದೇವೆ. ಯಾಕೆಂದರೆ ಈಗ ಸಿನಿಮಾ ಟ್ರೆಂಡ್, ಮೇಕಿಂಗ್ ಮೇಲೆ ನಿಂತಿದೆ.