ಮನಿಷಾ ಕೊಯಿರಾಲಾ ಸಾವಿನ ಭಯ ಮೆಟ್ಟಿ ನಿಂತ ಕಥೆ

By Web Desk  |  First Published Jan 29, 2019, 4:12 PM IST

ಅಂಡಾಶಯ ಕ್ಯಾನ್ಸರ್‌ಗೆ ತುತ್ತಾಗಿದ್ದ ಬಾಲಿವುಡ್ ನಟಿ ಮನಿಷಾ ಕೊಯಿರಾಲಾ ಸಾಕಷ್ಟು ಚಿಕಿತ್ಸೆ ಬಳಿಕ ಈಗ ಚೇತರಿಸಿಕೊಂಡಿದ್ದಾರೆ. ಅವರ ಲೈಫ್ ಸ್ಟೈಲ್ ಬದಲಾಗಿದೆ. ಕ್ಯಾನ್ಸರ್ ಎಂಬ ಮಹಾಮಾರಿಯನ್ನು ಎದುರಿಸಿದ್ದು ಹೇಗೆ? ಹೇಗಿತ್ತು ಅವರ ಜರ್ನಿ ಇಲ್ಲಿದೆ ನೋಡಿ. 


ಬೆಂಗಳೂರು (ಜ.28): ಅಂಡಾಶಯ ಕ್ಯಾನ್ಸರ್‌ಗೆ ತುತ್ತಾಗಿದ್ದ ಬಾಲಿವುಡ್ ನಟಿ ಮನಿಷಾ ಕೊಯಿರಾಲಾ ಸಾಕಷ್ಟು ಚಿಕಿತ್ಸೆ ಬಳಿಕ ಈಗ ಚೇತರಿಸಿಕೊಂಡಿದ್ದಾರೆ. ಅವರ ಲೈಫ್ ಸ್ಟೈಲ್ ಬದಲಾಗಿದೆ. ಕ್ಯಾನ್ಸರ್ ಎಂಬ ಮಹಾಮಾರಿಯನ್ನು ಎದುರಿಸಿದ್ದು ಹೇಗೆ? ಹೇಗಿತ್ತು ಅವರ ಜರ್ನಿ ಇಲ್ಲಿದೆ ನೋಡಿ.  

ನಿನಗೆ ಕ್ಯಾನ್ಸರ್‌ ಅಂದರು ಡಾಕ್ಟರ್‌

Tap to resize

Latest Videos

ಹೊಟ್ಟೆಬೆಳೆಯುತ್ತಿತ್ತು. ಆಗಾಗ ಕಾಯಿಲೆ ಬೀಳುತ್ತಿದ್ದೆ. ಸುಸ್ತಾಗುತ್ತಿತ್ತು. ವಯಸ್ಸಾಗುತ್ತಿರುವುದೇ ಕಾರಣ ಅಂದುಕೊಂಡಿದ್ದೆ. ಜೀವನಶೈಲಿಯೂ ನೆಪವಿರಬಹುದು ಅನ್ನಿಸತೊಡಗಿತ್ತು. ಒಂದು ದಿನ ತಡೆಯಲಿಕ್ಕಾಗದೇ ಡಾಕ್ಟರ ಬಳಿ ಹೋಗೋಣ ಅಂದೆ. ಡಾಕ್ಟರು ಪರೀಕ್ಷೆ ಮಾಡಿದ ನಂತರ ಅಂಡಾಶಯದ ಕ್ಯಾನ್ಸರ್‌ ಅಂದರು. ಜೀವನದ ಮೊದಲ ಷಾಕ್‌ ಆದು.

ಮುಗಿಯದ ರಾತ್ರಿಯ ನೆನಪು

ನಿನಗೆ ಕ್ಯಾನ್ಸರ್‌ ಅಂತ ಡಾಕ್ಟರು ಹೇಳಿದ ರಾತ್ರಿ ನನ್ನ ಜೀವನದ ಅತ್ಯಂತ ಸುದೀರ್ಘ ಇರುಳು. ಅತ್ಯಂತ ಏಕಾಂತದ ರಾತ್ರಿ. ಅದರಲ್ಲೂ ನನ್ನದು ಕೊನೆಯ ಹಂತದ ಕ್ಯಾನ್ಸರ್‌ ಅಂದಿದ್ದರು. ಮಲಗಿದ್ದೆ. ಕತ್ತಲಿತ್ತು. ರಾತ್ರಿ ಮುಗಿಯುವುದೇ ಇಲ್ಲ ಅನ್ನಿಸಿತ್ತು. ಇಡೀ ಜಗತ್ತಿನಲ್ಲಿ ನಾನೊಬ್ಬಳೇ ಇದ್ದೇನೆ ಅನ್ನಿಸುತ್ತಿತ್ತು.

ಸುದೀರ್ಘ ಪ್ರಯಾಣದ ನೆನಪು

ನನ್ನವರೆಲ್ಲ ಮುಂಬಯಿಗೆ ಹೋಗು ಅಂದರು. ಅಲ್ಲಿ ಡಾ. ಅಡ್ವಾಣಿ ಇದ್ದರು. ಕಟ್ಮಂಡುವಿನಿಂದ ಮುಂಬಯಿಗೆ ವಿಮಾನ ಪ್ರಯಾಣ. ಸಾಮಾನ್ಯವಾಗಿ ಅದು ಸುಮಾರು ಎರಡು ಗಂಟೆಯ ಹಾದಿ. ಆವತ್ತು ಮಾತ್ರ ಅದು ಮುಗಿಯುತ್ತಲೇ ಇಲ್ಲ, ಈ ಜೀವನದಲ್ಲಿ ಮುಗಿಯುವುದಿಲ್ಲ ಅನ್ನಿಸಿಬಿಟ್ಟಿತ್ತು. ವಿಮಾನದಲ್ಲಿ ಇರುವ ಎಲ್ಲರಿಗೂ ನನ್ನ ಕ್ಯಾನ್ಸರ್‌ ಬಗ್ಗೆ ಗೊತ್ತಾಗಿದೆ. ಎಲ್ಲರೂ ನನ್ನನ್ನೇ ನೋಡುತ್ತಿದ್ದಾರೆ ಅಂತಲೂ ಅನ್ನಿಸುತ್ತಿತ್ತು.

ರಿಪೋರ್ಟು ಸುಳ್ಳಾಗುತ್ತದೆ ಅನ್ನುವ ಆಸೆ

ಮುಂಬಯಿಯ ಜಸಲೋಕ್‌ ಆಸ್ಪತ್ರೆ. ಕೆಲವು ಗಂಟೆಗಳ ಕಾಯುವಿಕೆ. ಅಲ್ಲಿನ ವೈದ್ಯರಾದ ಅಡ್ವಾಣಿಯವರು ಬಂದು ಮತ್ತೆ ನನ್ನನ್ನು ಡಯಾಗ್ನಾಸಿಸ್‌ ಮಾಡುವಂತೆ ಹೇಳಿದರು. ಈ ಮೊದಲು ಬಂದ ವರದಿ ಸುಳ್ಳಾಗಿರಬಹುದು. ಅದಕ್ಕೇ ಮತ್ತೆ ಮಾಡಲು ಹೇಳುತ್ತಿದ್ದಾರೆ ಅಂತ ತುಂಬ ಅನ್ನಿಸುತ್ತಿತ್ತು. ನಮ್ಮ ಅನಾರೋಗ್ಯದ ವರದಿಗಳೆಲ್ಲವೂ ತಪ್ಪಾಗಿದ್ದಾವೆ ಅಂತಲೇ ಅನ್ನಿಸುತ್ತಿರುತ್ತದೆ.

ತಮ್ಮನ ಪ್ರೀತಿ ಗೊತ್ತಾಯಿತು

ನಾನು ದೊಡ್ಡಕ್ಕ ಆಗಿದ್ದರಿಂದ ನನ್ನ ತಮ್ಮ ಒಬ್ಬ ಉಂಡಾಡಿ ಎಂದೇ ಭಾವಿಸಿದ್ದೆ. ಅವನು ಜವಾಬ್ದಾರಿಯ ಹುಡುಗ ಅಂತ ಗೊತ್ತಾದದ್ದು ನಾನು ಕಾಯಿಲೆ ಬಿದ್ದಾಗಲೇ. ತುಂಬ ಚೆನ್ಗಾಗಿ ನೋಡಿಕೊಂಡ. ಓಡಾಡಿದ. ಕಾಪಾಡಿದ. ಅವನು ಎಷ್ಟುಶಾಂತವಾಗಿ, ಪ್ರಬುದ್ಧವಾಗಿ ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದ ಅಂತ ನೋಡಿದರೆ ಈಗ ಆಶ್ಚರ್ಯ ಆಗುತ್ತಿದೆ.

ಸಾವಿನ ಭಯ ಹೊರಟು ಹೋಗಿತ್ತು, ಸಾಯಬಾರದು ಅನ್ನಿಸಿತ್ತು

ನನಗೆ ಕ್ರಮೇಣ ಸಾಯುವ ಭಯ ಹೊರಟು ಹೋಗಿತ್ತು. ಆದರೆ ಸಾಯಬಾರದು ಅನ್ನುವ ಛಲ ಇತ್ತು. ಸಾಯುವುದೇ ಆಗಿದ್ದರೆ ಹೋರಾಟ ಮಾಡಿ ಸಾಯೋಣ ಅಂದುಕೊಂಡಿದ್ದೆ. ಜಗತ್ತಿನ ಅತ್ಯುತ್ತಮ ವೈದ್ಯರು ಕೈ ಚೆಲ್ಲಿದ ನಂತರ ಪ್ರಾಣಬಿಡೋದು ಅಂದುಕೊಂಡೆ. ಅಂಥ ವೈದ್ಯರು ನ್ಯೂಯಾರ್ಕಿನ ಕಾರ್ನೆಲ್‌ ಆಸ್ಪತ್ರೆಯ ಡಾಕ್ಟರ್‌ ಕಪೂರ್‌ ಜಗತ್ತಿನ ಶ್ರೇಷ್ಠ ವೈದ್ಯರು ಅಂತ ತಿಳಿಯಿತು. ಅವರ ಹುಡುಕಾಟ ನಡೆಯಿತು. ಅಮ್ಮನ ಬಾಲ್ಯ ಗೆಳೆಯರೊಬ್ಬರು ನ್ಯೂಯಾರ್ಕಿನಲ್ಲಿ ವೈದ್ಯರಾಗಿದ್ದರು. ಅವರ ಮೂಲಕ ಇವರು ಸಿಕ್ಕರು.

ಮುಚ್ಚಿಡಬಾರದು, ಬೆಂಬಲಕ್ಕೆ ನಿಲ್ಲಬೇಕು

ರೋಗಿಯಿಂದ ಕಾಯಿಲೆಯ ವಿವರಗಳನ್ನು ಮುಚ್ಚಿಡಬಾರದು. ಎಲ್ಲವೂ ನಮಗೆ ಗೊತ್ತಿರಬೇಕು. ಆದರೆ ಎಲ್ಲರೂ ಆಮೇಲೆ ಬೆಂಬಲಕ್ಕೆ ನಿಲ್ಲಬೇಕು. ನನಗೇನಾಗಿದೆ ಅಂತ ನನಗೆ ಗೊತ್ತಿಲ್ಲದೇ ಹೋದರೆ ಕಷ್ಟ. ನನ್ನ ನಂಬಿಕೆ, ಆತ್ಮಶಕ್ತಿ, ಛಲ, ಸುತ್ತಲಿನವರ ಪ್ರೀತಿ ನನ್ನನ್ನು ಕಾಪಾಡಿತು. ಹೋರಾಡುವ ಸಮಯ ಬಂದಾಗ ಹೋರಾಡಿಬಿಡಬೇಕು. ಅದೇ ಕೊನೆಯ ಹೋರಾಟ ಅಂತ ಗೊತ್ತಾದಾಗ ಹೋರಾಡಲೇಬೇಕಲ್ಲ.

ವಿಚಿತ್ರ ಅನುಭವ

ಒಮ್ಮೆ, ಕ್ಯಾನ್ಸರ್‌ ಅಂತ ಗೊತ್ತಾಗುವುದಕ್ಕೆ ಆರು ತಿಂಗಳ ಮೊದಲು, ಒಂದು ಆಸ್ಪತ್ರೆಯ ಸಾಮೂಹಿಕ ಕಾರ್ಯಕ್ರಮದಲ್ಲಿ ಇಬ್ಬರು ನನ್ನನ್ನೂ ನನ್ನ ಅಮ್ಮನನ್ನೂ ಪರೀಕ್ಷೆ ಮಾಡಿದ್ದರು. ನನ್ನನ್ನು ಪರೀಕ್ಷೆ ಮಾಡಿದ ಒಬ್ಬಾಕೆ, ತೆಳ್ಳಗಿದ್ದಳು. ಬುಡಕಟ್ಟು ಜನಾಂಗದವರ ಹಾಗೆ ಕಂಡಿದ್ದರು. ವೈದ್ಯಕೀಯ ವಿದ್ಯಾರ್ಥಿಯಾಗಿದ್ದಳೆಂದು ಕಾಣುತ್ತದೆ. ನೀನು ನಿನ್ನ ಅಂಡಾಶಯದ ಮೇಲೆ ಸಿಟ್ಟು ಮಾಡಿಕೊಂಡಿದ್ದಿ. ಅದು ಕೆಂಪಾಗಿದೆ ಅಂದಿದ್ದಳು. ಹಾಗೆಂದರೇನು ಅಂತ ನನಗೆ ಗೊತ್ತಿರಲಿಲ್ಲ. ಮನೆಗೆ ಬಂದಿದ್ದೆ. ಕ್ಯಾನ್ಸರ್‌ ಅಂತ ಗೊತ್ತಾದ ಮೇಲೆ ಅವರನ್ನು ಹುಡುಕಿದೆ. ಅವರು ಕೊನೆಗೂ ಸಿಕ್ಕರು. ಈಗೇನೂ ಮಾಡಕ್ಕಾಗಲ್ಲ, ಇಲ್ಲಿಂದಲೇ ಪ್ರಾರ್ಥಿಸುತ್ತೇವೆ ಅಂದರು.

ಕಷ್ಟಪಡಬೇಕು, ಶ್ರದ್ಧೆ ಇರಬೇಕು

‘ಸೌದಾಘರ್‌’, ‘ಬಾಂಬೆ’ ಚಿತ್ರದ ನಂತರ ‘1942, ಎ ಲವ್‌ ಸ್ಟೋರಿ’ ಚಿತ್ರದಲ್ಲಿ ನಟಿಸಲು ಅವಕಾಶ ಬಂತು. ವಿಧು ವಿನೋದ್‌ ಚೋಪ್ರಾ ಮೊದಲ ದಿನವೇ ನನ್ನನ್ನು ನಿರಾಕರಿಸಿದರು. ನಾನು ಸ್ಕ್ರೀನ್‌ ಟೆಸ್ಟಲ್ಲಿ ಫೇಲ್‌ ಆಗಿದ್ದೆ. ನನಗೆ ನಂಬಲಿಕ್ಕಾಗಲಿಲ್ಲ. ದಯವಿಟ್ಟು ನನಗೆ ಮತ್ತೊಂದು ಅವಕಾಶ ಕೊಡಿ ಅಂತ ಕೇಳಿಕೊಂಡೆ. 24 ಗಂಟೆ ಕೊಡುತ್ತೇನೆ ಅಂದರು. ಆ 24 ಗಂಟೆ ನಾನು ಅವರು ಕೊಟ್ಟದೃಶ್ಯಗಳನ್ನು ಮತ್ತೆ ಮತ್ತೆ ಓದಿದೆ. ರಿಹರ್ಸಲ್‌ ಮಾಡಿದೆ. ನಮ್ಮಮ್ಮ ನನಗೆ ಹುಚ್ಚು ಹಿಡಿದಿದೆ ಅಂದುಕೊಂಡರು. ಆ ಸಿನಿಮಾ ಸಿಗದೇ ಇದ್ದರೆ ಹೋಗಲಿ ಎಂದು ಬೈದರು. ಮಾರನೇ ದಿನ ಹೋದಾಗ ನಾನು ಪಾಸ್‌ ಆಗಿದ್ದೆ. ನಿನ್ನೆ ಝೀರೋ ಇದ್ದೆ. ಇವತ್ತು ನೂರಕ್ಕೆ ನೂರು ಅಂಕ ಕೊಟ್ಟಿದ್ದೇನೆ ಅಂದರು. ಒಂದು ದಿನ ಶ್ರಮ ಮತ್ತು ಧ್ಯಾನ ಪ್ರತಿಫಲ ನೀಡಿತ್ತು.

- ಜೋಗಿ 

click me!